ಡಿಸಿ ಆಗಿದ್ದ ಕನ್ನಡದ ಆಸ್ತಿ ಮಾಸ್ತಿಯವರ ಘಟನೆ ಕೇಳಿ… ಎಲ್ಲ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾದರಿಯಾಗಬಹುದಾದ ನಡೆ

ಜಿಲ್ಲಾಧಿಕಾರಿ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನಹಿತ ಕಾರ್ಯವೊಂದು ಅವರಿಗೇ ಕಾಣಸಿಕ್ಕಿದ ಪ್ರಸಂಗ:

ಮಾಸ್ತಿಯವರು ಧರ್ಮಸ್ಥಳದ ಲಕ್ಷ ದೀಪೋತ್ಸವದ ಸರ್ವ ಧರ್ಮ ಸಮ್ಮೇಳನ ದಲ್ಲಿ ಅಧ್ಯಕ್ಷತೆ ವಹಿಸಲು ಚಾರ್ಮಾಡಿ ಘಾಟಿಯ ಮೂಲಕ ಜಿ.ಪಿ. ರಾಜರತ್ನಂ ಅವರ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು.

ಅವರಿಗೆ ಬಾಯಾರಿಕೆಯಾಯಿತು. ರಸ್ತೆ ಸಮೀಪದ ಹಳ್ಳಿಯಲ್ಲಿ ಒಬ್ಬ ಬಾವಿಯಿಂದ ನೀರು ಸೇದುತ್ತಿರವುದನ್ನು ಕಂಡರು. ಗಾಡಿ ನಿಲ್ಲಿಸಿ ನೀರು ಸೇದುವ ಬಾವಿಯ ಬಳಿ ಮಾಸ್ತಿಯವರು ಹೋದರು. ನೀರು ಸೇದುತ್ತಿದ್ದವನಲ್ಲಿ ಕುಡಿಯಲು ನೀರು ಕೇಳಿದರು. ಆ ರೈತ ಬಾವಿಯಿಂದ ನೀರು ಸೇದಿದ. ಆ ನೀರನ್ನು ಮಾಸ್ತಿಯವರಿಗೆ ಕುಡಿಯಲು ಕೊಡುವ ಬದಲು ಅಲ್ಲಿಯೇ ಪಕ್ಕದಲ್ಲಿದ್ದ ನೀರಿನ ತೊಟ್ಟಿಗೆ ಸುರಿದ. ಆ ರೈತ ಮತ್ತೊಂದು‌ ಕೊಡಪಾನ ನೀರು ಸೇದಿ “ಬನ್ನಿ ಸ್ವಾಮಿ, ನೀರು ಕುಡಿಯರಿ” ಎಂದ.

ಮಾಸ್ತಿಯವರು ಬೊಗಸೆಯಲ್ಲಿ ನೀರು ಕುಡಿದರು. ಕೊಡಪಾನದಲ್ಲಿ‌ ಉಳಿದ ನೀರನ್ನು ಆತ ಮತ್ತೆ ಆ ತೊಟ್ಟಿಗೆ ಹಾಕಿದ. ಮಾಸ್ತಿಯವರು ಅವನಿಗೆ ಹಣ ಕೊಡಲು ಮುಂದಾದರು. ಆದರೆ ಆತ ನಿರಾಕರಿಸಿದ. “ಅಲ್ಲ ಸ್ವಾಮಿ, ನಾವು ಕುಡಿಯೋ ನೀರಿಗೆ ದುಡ್ಡಿಸ್ಕಂಡ್ರೆ ಆ ದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡ್ದಂಗೆ” ಎಂದ. ಅದಕ್ಕೆ ಮಾಸ್ತಿ ಅವರು “ಯಾರಪ್ಪ ಆ ದೇವ್ರಂಥ ವ್ಯಕ್ತಿ” ಎಂದು ಕೇಳಿದರು.

“ಹಿಂದೆ ಬರಗಾಲ ಬಂದಿತ್ತು. ಆಗ ಕುಡಿಯಲು ನೀರಿರಲಿಲ್ಲ. ನಮ್ಮ ಚಿಕ್ಕಮಂಗಳೂರಲ್ಲಿ ಒಬ್ರು ಡಿಸಿ ಇದ್ರು. ಊರ್ಗೆ ಬರ್ಗಾಲ ಬಂದೈತೆ, ಒಂದು ಬಾವಿ ತೋಡ್ಸಿ ಕೊಡಿ ಸಾಮಿ ಅಂತ ಕೇಳ್ದ್ವು, ಅದಕ್ಕೆ ನೋಡ್ರೀ ನೀವು ಮನುಷ್ಯರು, ಬಾಯೈತೆ, ನೀವು ಮಾತಾಡ್ತೀರ, ಈಗ ಬಾವಿ ಬೇಕಂತ ಕೇಳ್ತೀರ, ಬಾವಿ ತೆಗೆಸಿ ಕೊಡ್ತೇನೆ. ಆದ್ರೆ ಪಕ್ಕದಲ್ಲಿ ತೊಟ್ಟಿ ಮಾಡಿ. ನೀವು ನಿಮಗೆ ಒಂದು ಕೊಡಪಾನ ನೀರು ತಗೊಂಡರೆ ಆ ತೊಟ್ಟಿಗೊಂದು ಕೊಡಪಾನ ನೀರು ಹಾಕಿ, ಯಾಕೆಂದರೆ ದನಕರು, ಪ್ರಾಣಿಪಕ್ಷಿಗಳಿಗೆ ಮಾತಾಡೋಕೆ ಬರೋಲ್ಲ, ಅವಕ್ಕೂ ಬರ್ಗಾಲವೇ ಅಲ್ಲವಾ ? ಅವಕ್ಕೂ ನೀರು ಬೇಕಲ್ವಾ ? ಈ ಕಂಡೀಸನ್ ಹಾಕಿ ಬಾವಿ ತೆಗೆಸಿ ಕೊಟ್ಟವ್ರೇ ಬುದ್ದಿ, ಅವರು ಮೂರು ನಾಮ ಹಾಕ್ಕೋಳ್ಳೋರು ಬುದ್ದೀ, ವಯಸ್ಸಾಗಿತ್ತು, ಮೂಡ್ಲ ದಿಕ್ಕಿನವ್ರು” ಎಂದು ರೈತ ಮಾತು ನಿಲ್ಲಿಸಿದ.

ಈ ರೈತ ಹೇಳುತ್ತಿರುವುದು ತನ್ನನ್ನೇ ಎಂದು ಮಾಸ್ತಿಯವರಿಗೆ ಅರ್ಥ ಆಗಿತ್ತು. ಆ ಸಮಯದಲ್ಲಿ ಚಿಕ್ಕಮಗಳೂರಿನ ಡಿಸಿ ಆಗಿ ನಿವೃತ್ತಿ ಹೊಂದಿದ್ದರು. ಮಾಸ್ತಿಯವರಿಗೆ ಆ ರೈತನ ಮುಗ್ದತೆ, ಪ್ರಾಮಾಣಿಕತೆ ತುಂಬಾ ಸಂತೋಷ ನೀಡಿತು. ಆ ಡಿಸಿ ತಾನೇ ಎಂದು ರೈತನಿಗೆ ಹೇಳಲಿಲ್ಲ. ನಡೆದ‌ ಘಟನೆಯನ್ನು ಜೊತೆಯಲ್ಲಿ ಬಂದಿದ್ದ ಜಿಪಿ ರಾಜರತ್ನಂ ಅವರಲ್ಲಿ ಹೇಳಿದಾಗ “ನೀವು ಆ ವ್ಯಕ್ತಿಗೆ ಹೇಳಿದ್ದರೆ ಅವನು ಇನ್ನಷ್ಟು ಖುಷಿ ಪಡುತ್ತಿದ್ದ” ಎಂದರು.

ನಾನು ಆ ಹುದ್ದೆಗೆ ಸಂಬಳ ಪಡೆಯುತ್ತಿದ್ದೆ, ನಾನೇನು ಧರ್ಮಾರ್ಥ ಮಾಡಲಿಲ್ಲ, ಸರ್ಕಾರದ ಹಣದಿಂದ ಮಾಡಿಸಿದೆ ಹೊರತು ನನ್ನ ಕಿಸೆಯ ಹಣದಿಂದಲ್ಲ, ಆ ರೈತನ ಮುಗ್ದತೆ, ಪ್ರಾಮಾಣಿಕತೆಯ ಮುಂದೆ ನನ್ನ ಕೆಲಸ ಏನೇನೂ ಅಲ್ಲ, ಜೊತೆಗೆ ನಾನೇ ಆ ಡಿಸಿ ಎಂದು ಹೇಳಿದರೆ ಆ ರೈತನಿಗೆ ತಳಮಳವೂ ಶುರುವಾಗುತ್ತಿತ್ತು. ಎಂದು ಮಾಸ್ತಿಯವರು ಹೇಳಿದರು,ನಾನು ಎಂಬುದು ನಾನಲ್ಲ, ಈ ಮನುಷ್ಯ ಜನ್ಮವೂ ನನದಲ್ಲ ಎನ್ನುವ ರೀತಿಯಲ್ಲಿ ಬಾಳಿದ, ಬದುಕು ಅಂದರೆ ಹೀಗೆ ಎಂದು ಬಾಳಿ ತೋರಿಸಿದ ಜ್ಞಾನ ಪೀಠ ಪ್ರಶಸ್ತಿ ವಿಜೇತ ನಮ್ಮ ಮಾಸ್ತಿ ಕನ್ನಡದ ಆಸ್ತಿ.

Leave a Reply

Your email address will not be published. Required fields are marked *