ಜಸ್ಟಿನ್ ಡಿಸೋಜಾ ಎಂಬ ಕೆಚ್ಚೆದೆಯ ಮಹಿಳೆಯ ಅಪ್ರತಿಮ ಶಿಕ್ಷಣ ಪ್ರೇಮ
ಸಾಮಾನ್ಯ ಮಹಿಳೆಯೊಬ್ಬಳು ಉಕ್ಕಿನ ಮಹಿಳೆಯಾಗಲು ಏನೆಲ್ಲ ಕಷ್ಟಗಳನ್ನು ಅನುಭವಿಸಿರಬೇಕು ಆಕೆ ನಡೆದು ಬಂದ ದಾರಿಯ ಪರಿಚಯ ಇಂದು ನನ್ನ ಸಣ್ಣ ಪ್ರಯತ್ನ .ಇಪ್ಪತ್ತರ ಹರೆಯದಲ್ಲಿ ಕೈಯಲ್ಲಿ ಚಾಕ್ಪೀಸ್ ಒಂದನ್ನು ಹಿಡಿದು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದ್ದರು ಹೆಚ್ಚಿನ ಅನುಭವವೇನೂ ಇಲ್ಲದಿದ್ದರೂ ನೂರಾ ಎಪ್ಪತ್ತೈದು ರೂಪಾಯಿ ಸಂಬಳ ಬೇಕೆಂದು ಗತ್ತಿನಿಂದಲೇ ಕೇಳಿದ್ದರು ಇವರ ಗತ್ತನ್ನು ನೋಡಿ ಈಕೆಯನ್ನು ಪರೀಕ್ಷಿಸಬೇಕೆಂದು ಒಪ್ಪಿ ಕೆಲಸ ಕೊಟ್ಟಿದ್ದರು. ನೂರಾ ಎಪ್ಪತ್ತೈದು ರೂಗೆ ನೀವು ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ ಎಂದು ಒತ್ತಡ ಹೇರಿದರೂ ಮುಲಾಜಿಲ್ಲದೆ ಒಪ್ಪಿದ್ದರು. ಅಂತಹ ದಿಟ್ಟ ಮಹಿಳೆ ಯಾರಿರಬಹುದು ಎಂಬ ಕುತೂಹಲ ಕೆರಳದೆ ಇರಲು ಸಾಧ್ಯವೇ. ಅವರು ಪರದೆಯ ಮೇಲಿನ ನಾಯಕಿ ಅಲ್ಲ .ದೇವನಗರಿಯ ಉಕ್ಕಿನ ಮಹಿಳೆ ಎಂದು ಗುರ್ತಿಸಿಕೊಂಡಿರುವ ಶ್ರೀಮತಿ ಜಸ್ಟಿನ್ ಡಿಸೋಜಾ.
ಸುಮಾರು ವರ್ಷಗಳ ಹಿಂದೆ ನಗರದ ಸಿದ್ದಗಂಗಾ ಶಾಲೆಗೆ ಶಿಕ್ಷ ಕಿಯಾಗಿ ನೇಮಕಗೊಂಡು ಇಂದು ಅದೇ ಶಾಲೆಯ ಸಂಸ್ಥಾಪಕಿ ಯಾಗಿ ಎಂ.ಎಸ್ ಶಿವಣ್ಣನವರ ಬಾಳಸಂಗಾತಿಯಾಗಿ ಮುಂದಾದ ಮೂರು ಮಕ್ಕಳ ತಾಯಿಯಾಗಿ ಬೃಹದಾಕಾರದ ಸಂಸ್ಥೆಯೊಂದನ್ನು ನಡೆಸುತ್ತಿರುವ ದಿಟ್ಟ ಮಹಿಳೆ .ಸ್ತ್ರೀ ಕುಲಕ್ಕೆ ಮಾದರಿಯಾಗಿ ದೇವನಗರಿಗೊಂದು ಹೆಮ್ಮೆಯ ಸಿರಿಯಾಗಿ ಬದುಕುತ್ತಿದ್ದಾರೆ.
ಶಿವಣ್ಣನವರ ಬದುಕನ್ನು ಪ್ರವೇಶಿಸಿದ ನಂತರ ಸಾಕಷ್ಟು ನೋವುಗಳನ್ನುಂಡು ಬದುಕಿನ ದಿಕ್ಕನ್ನು ಬದಲಾಯಿಸಿದ ಶ್ರಮಿಕ ಮಹಿಳೆ ಇವರು .ನೂರಾ ಎಪ್ಪತ್ತೈದು ರೂಪಾಯಿ ಸಂಬಳ ಪಡೆದ ಸಂಸ್ಥೆಯನ್ನು ಇಂದು ಇನ್ನೂರ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಬೆಳೆಸಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಜ್ಞಾನ ದಾಸೋಹ ನಡೆಸಿ ಇದೀಗ ಇಪ್ಪತ್ತ್ ಎಂಟು ವರ್ಷಗಳಿಂದ ಸ್ವಂತ ಕಟ್ಟಡದಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾರೆ ಮೂಲತಃ ಶಿಕ್ಷಕಿಯಾಗಿ ಪರಿಚಯವಾದ ಡಿಸೋಜಾರವರು ನಂತರ ಪತ್ರಕರ್ತೆ ಯಾದರೂ ಒಂದು ಪತ್ರಿಕೆಯ ಆಗು ಹೋಗುಗಳನ್ನು ನಿರ್ವಹಿಸಿದರು. ನಗರದಲ್ಲಿಂದು ಸಿದ್ಧಗಂಗೆಯ ಗುರು ಮಾತೆಯಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀಮತಿ ಜಸ್ಟಿನ್ ಡಿಸೋಜಾ ಅವರ ಬಗ್ಗೆ ನನಗೆ ಅಷ್ಟೇನೂ ತಿಳಿದಿರಲಿಲ್ಲ ಒಮ್ಮೆ ನಗರದ ಜನ ಮಿಡಿತ ಪತ್ರಿಕೆಯ ಕಾರ್ಯಾಲಯಕ್ಕೆ ಹೋಗಿದ್ದೆ ಸಂಪಾದಕರಾದ ಜಿ.ಎಂ.ಆರ್. ಆರಾಧ್ಯ ಅವರ ಟೇಬಲ್ ಮೇಲೆ “ಸಿದ್ಧಗಂಗೆಯ ಸಿರಿ “ಎಂಬ ಪುಸ್ತಕವನ್ನು ನೋಡಿದೆ. ಮುಖಪುಟವೇ ಆ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿತು .ಅದನ್ನು ತೆಗೆದುಕೊಂಡು ಒಂದೆರಡು ಪುಟಗಳನ್ನು ತಿರುವಿ ಹಾಕಿದೆ ಮನಸ್ಸು ಸುಮ್ಮನಿರಲಿಲ್ಲ ಸಂಪಾದಕರ ಅನುಮತಿ ಪಡೆದು ಓದಿ ಹಿಂದಿರುಗಿಸುವುದಾಗಿ ಹೇಳಿ ಆ ಪುಸ್ತಕ ಪಡೆದೆ. ನಂತರ ಬಿಡುವು ಮಾಡಿಕೊಂಡು ಮೂವತ್ತು ಅಧ್ಯಾಯಗಳ ಮುನ್ನೂರು ಪುಟಗಳ ಆ ಸಿದ್ಧಗಂಗೆಯ ಸಿರಿಯನ್ನು ಓದಿ ಮುಗಿಸಿದೆ ಅಬ್ಬಾ ಅದೆಂಥ ರೋಚಕತೆ ಒಂದೊಂದು ಅಧ್ಯಾಯದಲ್ಲೂ ಬದುಕಿನ ಪ್ರತಿ ಹೆಜ್ಜೆಯನ್ನು ತೆರೆದಿಟ್ಟಿದ್ದಾರೆ ನಿಜಕ್ಕೂ ಇವರು ಉಕ್ಕಿನ ಮಹಿಳೆ ಎನ್ನುವುದರಲ್ಲಿ ಎರಡು ಮಾತಿಲ್ಲ .ಅವರ ಬಗ್ಗೆ ತಿಳಿಯಲಿ ಚ್ಛಿಸುವ ಯಾರಾದರೂ ಆ ಸಿದ್ಧಗಂಗೆಯ ಸಿರಿಯನ್ನೊಮ್ಮೆ ಓದಿದರೆ ಸಾಕು .ಸ್ತ್ರೀ ಕುಲಕ್ಕೆ ಸ್ಫೂರ್ತಿಯಾಗಿರುವ ಆ ತಾಯಿಯ ಬಗ್ಗೆ ಮನದಲ್ಲಿ ಗೌರವ ಮೂಡದಿರಲು ಸಾಧ್ಯವೇ ಇಲ್ಲ ಅಂತಹ ದಿಟ್ಟ, ಧೀರ ಮಹಿಳೆಯನ್ನು ವಾಸ್ತವದಲ್ಲಿ ನಾವು ಪಡೆದಿರುವುದು ನಿಜಕ್ಕೂ ನಮ್ಮ ಸೌಭಾಗ್ಯವೇ ಸರಿ .
ಸಿದ್ದಗಂಗಾ ಶಾಲೆ ನಾಡಿನೆಲ್ಲೆಡೆ ತನ್ನ ಕೀರ್ತಿ ಪತಾಕೆ ಹಾರಿಸುತ್ತಿರುವುದು ಆ ತಾಯಿಯ ಶ್ರಮದ ಫಲ .
ಸಾವಿರದ ಒಂಬೈನೂರ ಎಪ್ಪತ್ತೇಳರಲ್ಲಿ ಎಂ.ಎಸ್.ಶಿವಣ್ಣ ನವರ ಬದುಕಲ್ಲಿ ಬೆಳದಿಂಗಳಂತೆ ಪ್ರವೇಶಿಸಿದ ಜಸ್ಟಿನ್ ಡಿಸೋಜಾ ಅವರು ಇಂದು ಅದೇ ಬೆಳಕಲ್ಲಿ ಸಿದ್ಧ ಗಂಗೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ .ಇವರ ಅಸಾಧಾರಣ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ಸಂಸ್ಥೆಗಳು ಹಲವಾರು. ಅವರ ಕಿರೀಟ ವೇರಿದ ಪ್ರಶಸ್ತಿಗಳಲ್ಲಿ ಶಿಕ್ಷಣ ಧುರೀಣೆ ,ಸೋಮೇಶ್ವರ ಸಿರಿ ,ಚಿಣ್ಣರ ರಂಗ ,ಪತ್ರಿಕೋದ್ಯಮ ಸಿರಿ ,ಶ್ರಮಿಕ ಮಹಿಳೆ ,ಉಕ್ಕಿನ ಮಹಿಳೆ ,ದೇವನಗರಿ ಸಿರಿ ,ಹೀಗೆ ಹತ್ತು ಹಲವು .ಇವರ ಈ ಸಾಧನೆಯ ಶಿಖರಕ್ಕೆ ನಗರದ ಜನ ಮಿಡಿತ ಪತ್ರಿಕೆ ಇನ್ನೊಂದು ಗರಿಯನ್ನು ಮೂಡಿಸಲು ಸಿದ್ಧವಾಗಿದೆ .”ಶಿಕ್ಷಣ ಸಿರಿ “ಎಂಬ ಪ್ರಶಸ್ತಿಗೆ ಶ್ರೀಮತಿ ಜಸ್ಟಿನ್ ಡಿಸೋಜಾ ಅವರನ್ನು ಆಯ್ಕೆ ಮಾಡಿ ಅಭಿನಂದಿಸಿದೆ .
ಇವರ ಸಾಹಸಗಾಥೆ ನಾಡಿನೆಲ್ಲೆಡೆ ಇನ್ನಷ್ಟು ಪಸರಿಸಲಿ ಎಂದು ಶುಭ ಕೋರುತ್ತಾ ,ಈ ಒಂದು ‘ಶಿಕ್ಷಣ ಸಿರಿ’ ಪ್ರಶಸ್ತಿಗೆ ಆಯ್ಕೆ ಮಾಡಿದ ಜನ ಮಿಡಿತ ಪತ್ರಿಕೆಯ ಸಂಪಾದಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅನಂತ ಧನ್ಯವಾದಗಳು .
-ಶ್ರೀಮತಿ ಸುನಿತಾಪ್ರಕಾಶ್