ಗೃಹ ಪ್ರವೇಶದಲ್ಲಿ ಬಂದ ಉಡುಗೊರೆ ಹಣ ನೆರೆ ಸಂತ್ರಸ್ತರಿಗೆ ನೀಡಿದ ಶಿಕ್ಷಕ ದಂಪತಿ

ಹೌದು, ಶಿಕ್ಷಕರೆಂದರೆ ಹೀಗೆ. ಬಡ ವಿದ್ಯಾರ್ಥಿಗಳನ್ನು ಕಂಡರೆ ಮನ ಮರುಗುತ್ತದೆ. ಓದಲು ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ತಮ್ಮ ಪೋಷಕರು ಶಾಲೆಗೆ ಕಳುಹಿಸಲು ನಿರಾಕರಿಸಿದರೆ ಸಹಜವಾಗಿಯೇ ಆಕ್ರೋಶ ಉಕ್ಕಿ ಬರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅವರುಗಳಿಗೆ ಬರೆಯಲು ಉಚಿತ ನೋಟ್ ಪುಸ್ತಕಗಳನ್ನು ಪೆನ್ನು ಹಾಗೂ ಇತರೆ ಶಿಕ್ಷಣ ಸಾಮಗ್ರಿಗಳನ್ನು ಸ್ವತಃ ಜೇಬಿನಿಂದ ಹಣ ಹಾಕಿ ಕೊಡಿಸುವ ಸಾಕಷ್ಟು ಶಿಕ್ಷಕರನ್ನು ನಾನು ಕಂಡಿದ್ದೇನೆ. ಇದೇ ರೀತಿ ಹೆಚ್ಚು ಅಂಕಗಳನ್ನು ಗಳಿಸಿ ಶಾಲೆಗೆ ಹಾಗೂ ತಾವು ಮಾಡಿದ ಪಾಠಕ್ಕೆ ಗೌರವ ತಂದುಕೊಡುವ ವಿದ್ಯಾರ್ಥಿಗಳಿಗೆ ಕೈಯಿಂದ ಹಣ ಹಾಕಿ ಪುರಸ್ಕರಿಸಿದ್ದು ನೋಡಿದ್ದೇನೆ. ಬಹುಶಃ ನನಗಿಂತಲೂ ಎತ್ತರಕ್ಕೆ ನನ್ನ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಹಾರೈಸುವ ಆಶೀರ್ವದಿಸುವ ಏಕೈಕ ಹೃದಯವೆಂದರೆ ಅದು ಶಿಕ್ಷಕರದ್ದು .

ನಾನು ಅತಿಥಿಯಾಗಿ ಪಾಲ್ಗೊಂಡ ಬಹುತೇಕ ಕಾರ್ಯಕ್ರಮಗಳಲ್ಲಿ ಶಿಕ್ಷಕರ ಬಗ್ಗೆ ಒಂದೆರಡು ಮಾತುಗಳನ್ನಾಡದೆ ಎಂದು ನನ್ನ ಮಾತುಗಳನ್ನು ಮುಗಿಸಿಲ್ಲ .ಈಗ ನನ್ನ ಮಸ್ತಕಕ್ಕೆ ಚಿಕ್ಕಬಳ್ಳಾಪುರ ದಂಪತಿಗಳ ವಿಷಯವೂ ಒಂದು ಸರಕಾಯಿತು.
ತಮ್ಮ ಗೃಹಪ್ರವೇಶದಲ್ಲಿ ಉಡುಗೊರೆಯಾಗಿ ಬಂದ ಸರಿಸುಮಾರು 40 ಸಾವಿರ ರೂಗಳನ್ನು ಹಿಂದೆ ಮುಂದೆ ನೋಡದೆ ಎಲ್ಲವನ್ನೂ ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ ಈ ದಂಪತಿಗಳು .
ಉಳ್ಳವರು ಕೊಡುವುದರಲ್ಲಿ ಆಶ್ಚರ್ಯವೇನಿಲ್ಲ ಹಾಗೆಂದು ನಾನು ಅವರ ಕೊಡುಗೆಗಳನ್ನು ಖಂಡಿತ ಟೀಕಿಸುತ್ತಿಲ್ಲ ಅಥವಾ ಮೇಲ್ಕಾಣಿಸಿದ ಶಿಕ್ಷಕ ದಂಪತಿಗಳೊಂದಿಗೆ ಹೋಲಿಸುತ್ತಿಲ್ಲ. ಆದರೆ ಒಂದು ಮನೆ ಕಟ್ಟುವ ಅಥವಾ ಮದುವೆ ಮಾಡುವ ಕಷ್ಟ ಅನುಭವಿಸಿದವರಿಗೇ ಗೊತ್ತು .ಹೀಗಿದ್ದೂ ಶಿಕ್ಷಕ ದಂಪತಿಗಳು ತಮ್ಮ ಗೃಹ ಪ್ರವೇಶದಲ್ಲಿ ಉಡುಗೊರೆಯ ರೂಪದಲ್ಲಿ ಬಂದ ಎಲ್ಲ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ವಸ್ತುಗಳ ರೂಪದಲ್ಲಿ ಬಂದಿರುವ ಉಡುಗೊರೆಗಳ ಬದಲಾಗಿ ಇನ್ನಷ್ಟು ಗಿಫ್ಟ್ ಗಳು ನಗದು ರೂಪದಲ್ಲಿ ಬಂದಿದ್ದರೆ ನಮಗೆ ಸಂತಸವಾಗುತ್ತಿತ್ತು. ಖಂಡಿತ ಎಲ್ಲವನ್ನೂ ನಾವು ಸಂತ್ರಸ್ತರಿಗೆ ನೀಡಲು ತುಂಬು ಮನಸ್ಸಿನಿಂದ ತೀರ್ಮಾನಿಸಿದ್ದೇವು ಎಂದು ಅವರು ಹೇಳಿರುವುದು ಅವರ ಅಂತಃಕರಣಕ್ಕೆ ಸಾಕ್ಷಿಯಾಗಿದೆ.

ಚಿಕ್ಕಬಳ್ಳಾಪುರ ಪಟ್ಟಣದ ಪ್ರಶಾಂತ ನಗರದ ನಿವಾಸಿ ಕಾಲೇಜು ಉಪನ್ಯಾಸಕರಾದ ರಾಮಾಂಜಿನಪ್ಪ ಹಾಗೂ ರೂಪಶ್ರೀ ದಂಪತಿಗಳು ತಮ್ಮ “ಸಾಯಿ ಕನಸು” ನಿಲಯದ ಗೃಹಪ್ರವೇಶದಲ್ಲಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದು ಮಾತ್ರವಲ್ಲದೆ, ಹೊಸ ಮನೆಗೆ ಉಡುಗೊರೆ ಆಗಿ ಬಂದ ಬರೋಬ್ಬರಿ 38 ಸಾವಿರ ರೂಗಳ ಜೊತೆಗೆ 2 ಸಾವಿರ ತಮ್ಮ ಸ್ವಂತ ಹಣ ಸೇರಿಸಿ ಒಟ್ಟು ನಲವತ್ತು ಸಾವಿರಕ್ಕೂ ಅಧಿಕ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿಡಿ ಮಾಡಿ ಕಳುಹಿಸಿಕೊಡುವುದಾಗಿ ತಿಳಿಸಿದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರ ಮಧ್ಯೆ ಅದನ್ನು ಪ್ರಾಯೋಗಿಕವಾಗಿ ಹೀಗೆ ಅನುಷ್ಠಾನಗೊಳಿಸಬಹುದು ಎಂಬುದನ್ನು ಶಿಕ್ಷಕ ದಂಪತಿಗಳಾದ ರಾಮಾಂಜಿನಪ್ಪ ಹಾಗೂ ರೂಪಶ್ರೀ ತೋರಿಸಿಕೊಟ್ಟಿದ್ದಾರೆ .ಅವರುಗಳಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು .

ಜಿ. ಎಂ. ಆರ್. ಆರಾಧ್ಯ

Leave a Reply

Your email address will not be published. Required fields are marked *