ಗಿಡಮೂಲಿಕೆ ಹುಣಸೆ

ಭಾರತದ ಪ್ರತೀ ಅಡುಗೆ ಮನೆಯಲ್ಲೂ ಇದ್ದೇ ಇರುವ ಹುಣಸೆ ಹಣ್ಣು ರುಚಿಯಲ್ಲಿ ಹುಳಿಯಾದರೂ, ಆರೋಗ್ಯಕ್ಕೆ ಬಲು ಸಿಹಿಯಾದ ಔಷಧೀಯ ಗುಣವುಳ್ಳದ್ದಾಗಿದೆ. ಹುಣಿಸೆಯ ಹಣ್ಣು ಮಾತ್ರವಲ್ಲ ಚಿಗುರು ಎಲೆಗಳು, ಬೀಜಗಳು, ತೊಗಟೆ, ಬೇರು ಎಲ್ಲವೂ ಉಪಯುಕ್ತ ಭಾಗಗಳಾಗಿವೆ. ಹುಣಸೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು , ವಿಟಮಿನ್ ಎ, ಬಿ ಮತ್ತು ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮ್ಯಾಂಗನೀಸ್ ಮತ್ತು ಫೈಬರ್ ನಂತಹ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಇವು ಕಾಮಾಲೆ, ಕಣ್ಣಿನ ಸಮಸ್ಯೆ, ನೆಗಡಿಯನ್ನು ದೂರ ಮಾಡುತ್ತವೆ. ಹುಣಸೆಯು ದೇಹವನ್ನು ತಂಪಾಗಿಸುತ್ತದೆ. ಹುಣಸೆಯು ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಅನ್ನು ಕಡಿಮೆ ಮಾಡುವುದು ಮತ್ತು ಉತ್ತಮ ಕೊಲೆಸ್ಟ್ರಾಲ್ (ಎಚ್ಡಿಎಲ್) ಅಂಶವನ್ನು ಹೆಚ್ಚಿಸುತ್ತದೆ. ಹೀಗಾಗಿ ಬೊಜ್ಜು ಕರಗಿ ತೂಕ ಇಳಿಸಿಕೊಳ್ಳುವಲ್ಲಿಯೂ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರೊಂದಿಗೆ ಮಲಬದ್ಧತೆ, ಆಮ್ಲೀಯತೆ, ಗ್ಯಾಸ್ಟ್ರಿಕ್, ಅಲ್ಸರ್, ಜಾಂಡೀಸ್, ಉರಿಯೂತ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೂ ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕಣ್ಣುಗಳಿಗೆಹೊಳಪು ಮತ್ತು ಕಾಂತಿ ನೀಡುತ್ತದೆ.

ಪಿತ್ತ, ಮೂಲವ್ಯಾಧಿ, ರಕ್ತ ಮೂಲವ್ಯಾಧಿಗೆ ರಾಮಬಾಣವಾಗಿದೆ. ಅಜೀರ್ಣವಾದರೆ ಹುಣಸೇರಸದ ಜೊತೆ ಒಂದ್ನಾಲ್ಕು ಜೀರಿಗೆ ಕಾಳು ಸೇವಿಸಿದರೆ ಅರಾಮಾಗುತ್ತದೆ. ಅಲ್ಲದೆ ಕರುಳಿನ ಚಲನೆ ಉತ್ತಮಗೊಂಡು ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.

ಇದನ್ನು ಪ್ರಾಚೀನ ಕಾಲದಿಂದಲೂ ನೈಸರ್ಗಿಕ ಚರ್ಮದ ಸ್ಕ್ರಬ್ ಆಗಿ ಬಳಸಲಾಗುತ್ತಿದೆ. ಚರ್ಮದಲ್ಲಿನ ಕೊಳೆ, ಕಲ್ಮಶವನ್ನು ತೆಗೆಯಲು, ತಲೆ ಕೂದಲಿನ ಹೊಟ್ಟು (ಡ್ಯಾಂಡ್ರಫ್) ನಿವಾರಿಸಲು ಹುಣಸೆ ಹುಳಿ ಅತ್ಯುತ್ತಮ ಮನೆಮದ್ದಾಗಿದೆ.

​ಆ್ಯಂಟಿಸೆಪ್ಟಿಕ್‌ನಂತೆ ಕೆಲಸಮಾಡಿ ಗಾಯಗಳು ಒಳಗಿನಿಂದ ಬೇಗ ಮಾಯುವಂತೆ ಮಾಡುತ್ತದೆ. ದೇಹದೊಳಗೆ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ. 

ವರ್ಷಕ್ಕೊಮ್ಮೆಯಾದರೂ ಹುಣಸೆಯ ಚಿಗುರು ಎಲೆಗಳನ್ನು, ಹೂಗಳನ್ನು ಬಸ್ಸಾರು ಮಾಡಲು ಉಪಯೋಗಿಸುವುದು ಒಳ್ಳೆಯದು. ಹುಣಸೆಯನ್ನು ಸಾಂಪ್ರದಾಯಿಕವಾಗಿ ವಿರೇಚಕವಾಗಿ ಬಳಸಲಾಗುತ್ತದೆ. ಹಾಗೆ ನೋಡಿದರೆ ನಿತ್ಯ ಬಹಳ ದುಡ್ಡಿನ ಸೇಬು ಹಣ್ಣು (ಸೇಬು ಮಲಬದ್ಧತೆ ಉಂಟು ಮಾಡುತ್ತದೆ. ಇದು ಇನ್ನಷ್ಟು ರೋಗಗಳಿಗೆ ಕಾರಣವಾಗುತ್ತದೆ) ಸೇವಿಸುವುದಕ್ಕಿಂತ ಕಡಿಮೆ ಖರ್ಚಿನ ಹುಣಸೆ ಹಣ್ಣು ಬಳಸುವುದು ಉತ್ತಮ. ಅಡುಗೆಯೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ಹುಣಸೆ ಬೀಜಗಳು ಕೂಡ ಅಷ್ಟೇ ಆರೋಗ್ಯಕಾರಿಯಾಗಿವೆ. ಮಂಡಿ ನೋವಿಗೆ ಹುಣಸೆ ಬೀಜಗಳ ಪೇಸ್ಟ್ ಹಚ್ಚಬೇಕು. ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಪದೇ ಪದೇ ಗರ್ಭಪಾತವಾಗುವುದನ್ನು ತಪ್ಪಿಸಲು ಬೀಜಗಳಿಂದ ಮನೆಮದ್ದು ಮಾಡಲಾಗುತ್ತದೆ. ಬೀಜಗಳನ್ನು ಹುರಿದು ಮೇಲಿನ ಕಪ್ಪು ಸಿಪ್ಪೆ ತೆಗೆದು ಬಾಯಲ್ಲಿ ಬಹಳ ಹೊತ್ತು ಅಡಿಕೆ ತರಹ ಜಗಿಯುತ್ತಾ ತಿನ್ನಬೇಕು. ಚ್ಯೂಯಿಂಗ್ ಗಂ, ಗುಟ್ಕಾ, ಸಿಗರೇಟ್ ಬದಲಿಗೆ ಆ ಚಟ ಬಿಡಿಸಲು ಹುಣಸೆ ಬೀಜಗಳನ್ನು ಕೊಡಬಹುದು. ಮಕ್ಕಳಿಗೆ, ವಯಸ್ಸಾದವರಿಗೆ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕೊಡಬೇಕು.

ಪಾರಂಪರಿಕ ವೈದ್ಯರು ಹುಣಸೆಯ ಎಲ್ಲಾ ಭಾಗಗಳನ್ನು ತಮ್ಮ ವೈದ್ಯಕೀಯದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಚೇಳಿನ ವಿಷ ತೆಗೆಯಲು, ಕುಷ್ಠ ನಿವಾರಿಸಲು, ವಾತರೋಗ, ಗುಲ್ಮ, ಗಂಟು, ಕಿವಿಶೂಲೆ, ತದ್ದು, ತುರಿಕೆ, ಚರ್ಮ ರೋಗಗಳನ್ನು ನಿವಾರಿಸಲು ಬಳಸುತ್ತಾರೆ. ಎಲೆಗಳ ರಸವನ್ನು ಮದ್ರಾಸ್ ಕಣ್ಣು ವಾಸಿ ಮಾಡಲು, ವೃಣಗಳನ್ನು ತೊಳೆಯಲು, ಹಸಿವು ಕಡಿಮೆ ಮಾಡಲು, ಕೆಮ್ಮು ಕಡಿಮೆ ಮಾಡಲು ಬಳಸುತ್ತಾರೆ. ಚಾಕಲೇಟ್, ಬಿಸ್ಕುಟ್, ಅಂಟು ತಯಾರಿಕೆಯಲ್ಲಿಯೂ ಹುಣಸೆ ಹಣ್ಣನ್ನು ಬಳಸುತ್ತಾರೆ.

ಕೆಲವೊಮ್ಮೆ ಕೆಲವೊಬ್ಬರಿಗೆ ಹುಣಸೆ ಅಲರ್ಜಿ ಆಗಬಹುದು. ಆದರೆ ಅಪಾಯ ಅಂತೂ ಆಗುವುದಿಲ್ಲ. ಸುರಕ್ಷಿತ ಹಣ್ಣು ಎಂದು WHO ಹೇಳಿದೆ. ಹುಣಸೆ ಹಣ್ಣಿನಲ್ಲಿ ರಕ್ತ ತೆಳುವಾಗಿಸುವ ಗುಣವಿದೆ. ಆದ್ದರಿಂದ ರಕ್ತ ತೆಳುವಾಗಿಸುವ ಮಾತ್ರೆ ಸೇವಿಸುತ್ತಿದ್ದರೆ ಅಥವಾ ಯಾವುದಾದರೂ ಆಪರೇಷನ್ ಗಿಂತ ಹದಿನೈದು ದಿನ ಮುಂಚೆ ಹುಣಸೆಯನ್ನು ಬಳಸಬಾರದು.

ಗಂಟಲು ನೋವು ಇರುವವರು, ಗರ್ಭಿಣಿ ಅಥವಾ ಹಾಲುಣಿಸುವ ತಾಯಂದಿರು, ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಔಷಧಿ ಬಳಸುವ ಮಧುಮೇಹಿಗಳು ಹುಣಸೆ ಬಳಸುವ ಮೊದಲು ಡಾಕ್ಟರ್ ಸಲಹೆ ಪಡೆಯುವುದು ಒಳ್ಳೆಯದು.(ಹುಣಸೆಹಣ್ಣು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ. ಆದ್ದರಿಂದ ಗುಳಿಗೆ ಪ್ರಾರಂಭಿಸುವ ಮೊದಲು ಇದನ್ನೇ ಔಷಧವಾಗಿ ಬಳಸಬಹುದು.)

ಆಮ್ಲೀಯ ಅಂಶದಿಂದ ಕೆಲವರ ಹಲ್ಲುಗಳು ಹಾನಿಗೊಳಗಾಗಬಹುದು. ಇವೆಲ್ಲ ಹಸಿ ರಸದಿಂದ ಆಗುತ್ತವೆ. ಕುದಿಸಿದ ರಸವು ಒಳ್ಳೆಯದು.

ಇತ್ತೀಚೆಗೆ ಜನ ಹುಣಸೆ ಕಪ್ಪು ಇರುತ್ತದೆ, ಬಳಸುವುದು ಸಹ ಕಷ್ಟ ಎಂದು ಹುಣಸೆಗೆ ಬದಲಾಗಿ ಟಮ್ಯಟೋ ಉಪಯೋಗಿಸುತ್ತಾರೆ.

ಟೊಮ್ಯಾಟೊ ಹಣ್ಣು ಆಕರ್ಷಕವಾಗಿ ಕಂಡರೂ, ಉಪಯೋಗಿಸಲು ಸುಲಭವಾದರೂ ಅದರ ನಿರಂತರ ಸೇವನೆಯಿಂದ ಕಿಡ್ನಿಯಲ್ಲಿ ಹರಳುಗಳು(ಕಲ್ಲುಗಳು, ಸ್ಟೋನ್ ಫಾರ್ಮೇಶನ್) ಉಂಟಾಗುತ್ತವೆ. ಈಗೀಗ ವಿಭಕ್ತ ಕುಟುಂಬಗಳಿಂದಾಗಿ ಮನೆಯಲ್ಲಿ ಮೂವರು ತಪ್ಪಿದರೆ ನಾಲ್ಕು ಜನ ಇರುತ್ತಾರೆ. ಸ್ವಲ್ಪ ಅಡುಗೆಗೆ ಚೂರು ಹುಣಸೇ ಹುಳಿ ಸಾಕು. ಒಂದು ಚಮಚ ಹುಳಿಗೋಸ್ಕರ ಹುಣಸೇಹಣ್ಣನ್ನು ನೆನೆ ಹಾಕುವರ್ಯಾರು ಎಂದು ಒಂದು ಟೊಮ್ಯಾಟೊ ಹಾಕಿ ಮುಗಿಸುತ್ತಾರೆ. ಇಲ್ಲವೇ ರೆಡಿಮೇಡ್ ಹುಣಸೆರಸ ತರುತ್ತಾರೆ. ಇದಂತೂ ಇನ್ನೂ ತಪ್ಪು. ಅದಕ್ಕೆ ಪ್ರಿಸರ್ವೇಟಿವ್ ಹಾಕಿರುತ್ತಾರೆ. ಹುಣಸೆಹಣ್ಣು ಎಷ್ಟು ವರ್ಷ ಇಟ್ಟರೂ ಕೆಡುವುದಿಲ್ಲ. ಆದರೆ ರಸ ಮಾರನೇ ದಿನಕ್ಕೇ ಕೆಡುತ್ತದೆ. ರೆಡಿಮೇಡ್ ಹುಳಿ ತಿಂದು ಆರೋಗ್ಯ ಹಾಳಾಗಿ ಹುಣಸೆಯಿಂದ ಆರೋಗ್ಯ ಹಾಳಾಯಿತು ಎಂದು ಮುಂದೆ ಹುಣಸೆ ಹಾಕದೆ ಅಡುಗೆ ಮಾಡಿ ಮನೆಯವರೆಲ್ಲರ ಆರೋಗ್ಯ ಏರುಪೇರು ಮಾಡುತ್ತಾರೆ. ಆದ್ದರಿಂದ ಸೋಂಬೇರಿತನ ಬಿಟ್ಟು ನಮ್ಮ ನಿತ್ಯದ ಅಡುಗೆಯಲ್ಲಿ ಹುಣಸೆ ಇರುವಂತೆ ನೋಡಿಕೊಳ್ಳೋಣ.

ಮಮತಾ ನಾಗರಾಜ್, ಪಾರಂಪರಿಕ ವೈದ್ಯೆ, ದಾವಣಗೆರೆ.

Leave a Reply

Your email address will not be published. Required fields are marked *