ಗಿಡಮೂಲಿಕೆ ಬಿಲ್ವಪತ್ರೆ

ಬಿಲ್ವಪತ್ರೆಯನ್ನು ಭಾರತೀಯ ಹಿಂದೂ ಸಂಸ್ಕ್ರತಿಯಲ್ಲಿ ಪವಿತ್ರ ಮರ ಎಂದೇ ಹೇಳಲಾಗುತ್ತದೆ. ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಇದು ಪೂಜನೀಯವಾಗಲು ಕಾರಣವೇನೆಂದರೆ ಇದರ ಮರದ ಪ್ರತಿಯೊಂದು ಭಾಗವೂ ಎಂದರೆ ಬೇರು, ತೊಗಟೆ, ಪತ್ರೆ, ಕಾಯಿ, ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯ ಎಲೆಗಳ ಕಷಾಯ, ತೊಗಟೆ, ಬೇರುಗಳ ಕಷಾಯ ಮತ್ತು ಹಣ್ಣಿನ ತಿರುಳನ್ನು ಬಳಸುವುದರಿಂದ ಅನೇಕ ರೋಗಗಳನ್ನು ಹೋಗಲಾಡಿಸಬಹುದು.

ಬಿಲ್ವಪತ್ರೆಯ ಎಲೆಗಳನ್ನು ನೀರಿನಲ್ಲಿ ಅರೆದು ಆ ಮಿಶ್ರಣವನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ದೃಷ್ಟಿ ವೃದ್ಧಿಯಾಗುತ್ತದೆ. ಬಿಲ್ವಪತ್ರೆಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಅದರಿಂದ ಕಣ್ಣನ್ನು ತೊಳೆಯುವುದರಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಗಳು ಶಮನವಾಗುವುವು.

ಬಿಲ್ವಪತ್ರೆ ಎಲೆಯ ಎಣ್ಣೆಯನ್ನು ಕಿವುಡುತನ ನಿವಾರಣೆಗೆ ಬಳಸಲಾಗುತ್ತದೆ. ಬೇವಿನ ಮರದ ಚಕ್ಕೆ ಮತ್ತು ಬಿಲ್ವಪತ್ರೆಯ ಮರದ ಚಕ್ಕೆ ಎರಡನ್ನೂ ಸಮ ಪ್ರಮಾಣದಲ್ಲಿ ಜಜ್ಜಿ, ಕಷಾಯ ಮಾಡಿ ಹಾಲಿನೊಂದಿಗೆ ಕುಡಿದರೆ ಹುಳಿ ತೇಗು, ಪಿತ್ತ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಕಡಿಮೆಯಾಗುತ್ತವೆ. ದೇಹದ ದುರ್ಗಂಧವನ್ನು ನಿವಾರಿಸಲು ಬಿಲ್ವಪತ್ರೆಯ ಎಲೆಯ ರಸವನ್ನು ಪ್ರತಿ ದಿನ ಮೈಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಬಿಟ್ಟು ಸ್ನಾನ ಮಾಡಬೇಕು ಹಾಗೂ ಇದರಿಂದ ಚರ್ಮದ ಕಜ್ಜಿ, ತುರಿಕೆಗಳು ಸಹ ಕಡಿಮೆಯಾಗುತ್ತವೆ. ಕೂದಲು ಉದುರುವುದು, ತಲೆಯಲ್ಲಿನ ಹೊಟ್ಟು, ಕೂದಲಿನಲ್ಲಿ ಸೀಳುವಿಕೆ ಮತ್ತು ಕೂದಲು ಬೆಳೆಯದೆ ಇರುವುದು, ತುರಿಕೆ ಮುಂತಾದ ಸಮಸ್ಯೆಗಳನ್ನು ಬಿಲ್ವಪತ್ರೆಯು ನಿವಾರಿಸುತ್ತದೆ. ಬಿಲ್ವಪತ್ರೆ ಕಾಯಿಯನ್ನು ನುಣುಪಾಗಿ ಅರೆದು ತಲೆಯ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು. ಕೂದಲು ಆರೋಗ್ಯ ಯುತವಾಗಿ ಸೊಂಪಾಗಿ ಬೆಳೆಯುತ್ತವೆ.

ದೇಹದ ಮೇಲೆ ಕುರುಗಳು ಎದ್ದಾಗ ಅತೀವ ನೋವುಂಟಾಗಿ, ತುಂಬಾ ಕಿರಿ ಕಿರಿ ಉಂಟಾಗುತ್ತದೆ. ಬಿಲ್ವಪತ್ರೆಯ ಮರದ ಬೇರನ್ನು ನಿಂಬೆ ರಸದಲ್ಲಿ ತೇಯ್ದು ಕುರುಗಳಿಗೆ ಹಚ್ಚುವುದರಿಂದ ಕ್ರಮೇಣವಾಗಿ ಕುರುಗಳ ಸಮಸ್ಯೆ ಕಡಿಮೆಯಾಗುತ್ತದೆ. ಬಿಲ್ವ ಪತ್ರೆಯ ಮರದ ಬೇರನ್ನು ಒಣಗಿಸಿ, ತೇಯ್ದು, ಹಣೆಗೆ ಹಚ್ಚುವುದರಿಂದ ತಲೆನೋವು ಸಹ ಕಡಿಮೆಯಾಗುತ್ತದೆ ಮತ್ತು ಇದರಿಂದ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ.

ವರ್ಷದಲ್ಲಿ ಒಂದೆರಡು ಬಾರಿ ಒಂದು ವಾರದವರೆಗೆ ಬಿಲ್ವಪತ್ರೆಯ ರಸವನ್ನು 2 ರಿಂದ 3 ಚಮಚ ಸೇವಿಸಿದರೆ ನಿಶ್ಯಕ್ತಿ ದೂರವಾಗುತ್ತದೆ. ಬಿಲ್ವಪತ್ರೆ ಕಷಾಯ ಸೇವನೆಯಿಂದ ಮಾನಸಿಕ ಒತ್ತಡ, ಮಾನಸಿಕ ಉದ್ವೇಗವು ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.

ಬಾಯಿಯಲ್ಲಿ ಹುಣ್ಣಾದಾಗ ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ 2 ಬಾರಿ ಸೇವಿಸುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ. ಬಿಲ್ವಪತ್ರೆಯ ಹಣ್ಣಿನ ತೊಗಟೆಯನ್ನು ಅರೆದು, ಜೇನು ತುಪ್ಪದಲ್ಲಿ ಸೇವಿಸುವುದರಿಂದ ವಾಂತಿ ಮತ್ತು ವಾಕರಿಕೆ ಬರುವುದು ಕಡಿಮೆಯಾಗುತ್ತದೆ.

ಹೃದಯ ಬಡಿತದ ಸಮಸ್ಯೆ, ರಕ್ತದೊತ್ತಡ ಸಮಸ್ಯೆ ಇರುವವರು ಬಿಲ್ವಪತ್ರೆಯ ಬೇರಿನ ತೊಗಟೆಯ ಕಷಾಯ ಮಾಡಿಕೊಂಡು ದಿನಕ್ಕೆ 2-3 ಬಾರಿ ಕುಡಿಯಬೇಕು.

ಬಿಲ್ವಪತ್ರೆಯ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ. ಆದ್ದರಿಂದ ಪ್ರತಿದಿನ ಬಿಲ್ವಪತ್ರೆಯ ಹಣ್ಣಿನ ಸಿಹಿ ಪಾನಕವನ್ನು ಮಾಡಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಮಲಬದ್ಧತೆಯು ದೂರವಾಗುವುದಲ್ಲದೆ ಬೊಜ್ಜೂ ಸಹ ಕರಗುತ್ತದೆ. ಮೂಲವ್ಯಾಧಿ, ಗ್ಯಾಸ್ಟ್ರಿಕ್, ಕ್ಷಯರೋಗಕ್ಕೂ ಸಹ ಬಿಲ್ವಪತ್ರೆ ಮದ್ದಾಗಿದೆ.

ಆದ್ದರಿಂದ ಇಷ್ಟೊಂದು ಔಷಧೀಯ ಗುಣಗಳಿರುವ ಬಿಲ್ವಪತ್ರೆಯನ್ನು ಪೂಜೆಗಷ್ಟೇ ಅಲ್ಲ ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಲೂ ಉಪಯೋಗಿಸಿ.

ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ,
ದಾವಣಗೆರೆ.

Leave a Reply

Your email address will not be published. Required fields are marked *