ಗಿಡಮೂಲಿಕೆ ಕರಿಬೇವು

ಎಲ್ಲಾ ಕಡೆಯೂ ಯಥೇಚ್ಛವಾಗಿ ಬೆಳೆಯುವ, ಎಲ್ಲರಿಗೂ ತಿಳಿದಿರುವ, ಕೈಗೆಟಕುವ ಬೆಲೆಯಲ್ಲಿ ದೊರಕುವ ಅತ್ಯಮೂಲ್ಯ ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪು ಈ ಕರಿಬೇವು. ಅಡುಗೆಗಳಲ್ಲಿ ಹೇರಳವಾಗಿ ಸುವಾಸನೆಗೆ ಹಾಗೂ ರುಚಿಗೆ ಇದನ್ನು ಬಳಸುತ್ತಾರೆ. ಆದರೆ ಜನ ಇದರ ಮೌಲ್ಯ ಗೊತ್ತಿಲ್ಲದೆ ಪಕ್ಕಕ್ಕೆ ಸರಿಸುತ್ತಾರೆ. ಕರಿಬೇವು ಗಂಧಕಯುಕ್ತ ಎಣ್ಣೆಯ ಅಂಶದಿಂದ “ಘಮ್” ಅಂತ ಪರಿಮಳ ಬೀರುತ್ತದೆ,.,ಕಬ್ಬಿಣ, ಸುಣ್ಣದ ಅಂಶ ಹಾಗೂ ಅಪಾರ “ಎ” ಜೀವಸತ್ವವನ್ನು ಹೊಂದಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ಅಡುಗೆಗಳಲ್ಲಿ, ಪ್ರಮುಖವಾಗಿ ಮಸಾಲೆ ಪದಾರ್ಥಗಳಲ್ಲಿ ಬೇ ಎಲೆಗಳಂತೆಯೇ ಪರಿಮಳದ ವಸ್ತುವಾಗಿ ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ.

ಅತೀ ಅಲ್ಪ ಕಾಲವಷ್ಟೇ ಇವು ತಾಜಾ ಆಗಿರುತ್ತವೆ. ಮತ್ತು ಇವುಗಳು ರೆಫ್ರಿಜರೇಟರ್‌ನಲ್ಲಿಯೂ ಬಹಳ ಕಾಲ ತಾಜಾವಾಗಿರಲಾರವು. ಆದರೆ ಒಣಗಿದರೂ ಇದರ ಔಷಧೀಯ ಗುಣಗಳು ಮಾಸುವುದಿಲ್ಲವಾದ್ದರಿಂದ ಒಣಗಿದ ಎಲೆಗಳನ್ನು ಬಿಸಾಕದೆ ಅಡುಗೆಗಳಲ್ಲಿ ಬಳಸಬೇಕು. ತಾಜಾ ಎಲೆಗಳಿಂದ ಚಂಚಲ ತೈಲವನ್ನು ತೆಗೆಯುತ್ತಾರೆ. ಇದನ್ನು ಕೆಲವು ಬಗೆಯ ಸಾಬೂನುಗಳಿಗೆ ಹಾಕುವ ಸುಗಂಧ ದ್ರವ್ಯಗಳನ್ನು ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಎಲೆಗಳನ್ನು ಆಮಶಂಕೆ, ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರಚು ಗಾಯಗಳಿಗೂ, ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತಹರ ಔಷಧಿಗಳಾಗಿ ಉಪಯೋಗಿಸುತ್ತಾರೆ. ಇದರ ಚೌಬೀನೆ ಗಡುಸಾಗಿ ನಯವಾದ ಎಳೆಗಳ ವಿನ್ಯಾಸವನ್ನು ಹೊಂದಿದೆ. ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಇದನ್ನು ವ್ಯವಸಾಯದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಕರಿಬೇವಿನಲ್ಲಿ ವಿಟಮಿನ್ ಬೀಟಾ – ಕ್ಯಾರೋಟಿನ್ ಮತ್ತು ಕಾರ್ಬಾಝೋಲ್ ಅಲ್ಕಲಾಯ್ಡ್ ಗಳೆಂಬ ಆಂಟಿ – ಆಕ್ಸಿಡೆಂಟ್ ಗಳಿದ್ದು ಮನುಷ್ಯನ ದೇಹದಲ್ಲಿ ಫ್ರೀ ರಾಡಿಕಲ್ ಗಳಿಂದ ಆಕ್ಸಿಡೇಟೀವ್ ಡ್ಯಾಮೇಜ್ ಉಂಟು ಮಾಡುವ ಹಲವಾರು ಕಾಯಿಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಟೈಪ್ – 2 ಮಧುಮೇಹದ ಪ್ರಭಾವವನ್ನು ತಡೆಯುತ್ತದೆ. ಟೈಪ್-2 ಮಧುಮೇಹ ಇದ್ದವರು ನಿಯಮಿತವಾಗಿ ಚಹಾ ಕುಡಿಯಬಹುದು. ಅಷ್ಟೇ ಅಲ್ಲದೆ ಕರಿ ಬೇವಿನ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದೆ. ಸಹಜವಾಗಿಯೇ ನಾರಿನ ಅಂಶ ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಬೇಗನೆ ಮೆಟಬಾಲಿಸಂ ಪ್ರಕ್ರಿಯೆಗೆ ಅವಕಾಶ ಕೊಡದೆ ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ.

ಹಾಗೂ ದೇಹದಲ್ಲಿನ ಇನ್ಸುಲಿನ್ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಆಂಟಿ – ಹೈಪರ್ಗ್ಲೈಸೆಮಿಕ್ ಗುಣವು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಸ್ಥಿರಗೊಳಿಸುತ್ತದೆ ಎಂದು ಸಂಶೋಧನೆಗಳಿಂದ ಕೂಡಾ ಸಾಬೀತಾಗಿದೆ.
ಕರಿಬೇವಿನ ಎಲೆಗಳು ಸಕ್ಕರೆ ಕಾಯಿಲೆ ನಿರೋಧಕವಾಗಿ, ಆಂಟಿ ಆಕ್ಸಿಡೆಂಟ್ ಆಗಿ, ಸೂಕ್ಷ್ಮಾಣು ನಿರೋಧಕವಾಗಿ, ಊತ ನಿರೋಧಕವಾಗಿ, ಹೆಪಟೋಪ್ರೊಟೆಕ್ಟಿವ್ ಆಗಿ, ಆಂಟಿ-ಹೈಪರ್‌ಕೊಲೆಸ್ಟೆರೋಲೆಮಿಕ್ ಆಗಿ ಹಾಗೂ ಇತರ ರೋಗ ಲಕ್ಷಣಗಳಲ್ಲಿ ಉಪಯೋಗಕಾರಿಯಾಗಿದೆ.

ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಮುಚ್ಚಿ ಹೋಗಿರುವ ಕೂದಲಿನ ಕಿರುಚೀಲಗಳು ನೆತ್ತಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಅಂದರೆ ಕೆರೆತ , ತಲೆ ಹೊಟ್ಟು ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಆದರೆ ಕರಿಬೇವಿನ ಸೊಪ್ಪು ಇಂತಹ ಸಮಸ್ಯೆಗಳನ್ನು ಸಲೀಸಾಗಿ ನಿವಾರಣೆ ಮಾಡುತ್ತದೆ. ಸದಾ ನೆತ್ತಿಯನ್ನು ತೇವವಾಗಿಡುವುದಲ್ಲದೆ ನಿರ್ಜೀವ ಕೂದಲಿನ ಕಿರುಚೀಲಗಳನ್ನು ತೆಗೆದುಹಾಕುತ್ತದೆ. ಅಕಾಲಿಕ ಕೂದಲದುರುವಿಕೆಯನ್ನು ತಡೆದು ತಲೆ ಬೋಳಾಗುವುದನ್ನು ತಪ್ಪಿಸುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಅಮೈನೊ ಆಮ್ಲ ಅಂಶಗಳು ಅಗಾಧವಾಗಿದ್ದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತವೆ ಮತ್ತು ಅವುಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತವೆ. ಕರಿಬೇವಿನ ಎಲೆಗಳನ್ನು ಹೇರ್ ಟಾನಿಕ್ (ಕೊಬ್ಬರಿ ಎಣ್ಣೆಯೊಂದಿಗೆ) ರೀತಿ, ಹೇರ್ ಮಾಸ್ಕ್ (ಮೊಸರಿನೊಂದಿಗೆ) ರೀತಿ ಉಪಯೋಗಿಸಬಹುದು. ಯಾವುದೇ ಕಾರಣಕ್ಕೂ ಬೀಜಗಳನ್ನು ಉಪಯೋಗಿಸಬಾರದು. ನಿರಂತರ ಕರಿಬೇವಿನ ಬಳಕೆಯಿಂದ ಕೂದಲ ಬೇರುಗಳು ಬಲಗೊಳ್ಳುತ್ತವೆ ಅಲ್ಲದೆ ಬಾಲನೆರೆ ಸಮಸ್ಯೆ ಸಹ ದೂರವಾಗುತ್ತದೆ.

ರಕ್ತದ ಒತ್ತಡದಿಂದ ಅಥವಾ ಮಧುಮೇಹದಿಂದ ಬಳಲುತ್ತಿರುವವರು ಪ್ರತಿ ದಿನ ನಿರಂತರವಾಗಿ ಕರಿಬೇವಿನ ಸೊಪ್ಪಿನ ಸೇವನೆಗೆ ಮುಂದಾಗುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಕರಿಬೇವಿನ ಎಲೆಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಮಾಹಿತಿ ಪಡೆದುಕೊಳ್ಳಿ. ಏಕೆಂದರೆ ನೀವು ಮೊದಲೇ ತೆಗೆದುಕೊಳ್ಳುತ್ತಿರುವ ಔಷಧಿಗಳ ಜೊತೆಗೆ ಕರಿಬೇವಿನ ಎಲೆಗಳ ಏಕಕಾಲ ಬಳಕೆ ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಜೊತೆಗೆ ರಕ್ತದ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಿ ಬಿಡುತ್ತದೆ.
ಕರಿಬೇವಿನ ಎಲೆಗಳ ಸರಿಯಾದ ಪ್ರಭಾವ ದೇಹಕ್ಕೆ ಆಗಬೇಕಾದರೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ 8 – 10 ಹಚ್ಚ ಹಸಿರಾದ ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನಬೇಕು. ಇಲ್ಲಾಂದರೆ ಕರಿಬೇವಿನ ಎಲೆಗಳ ಜ್ಯೂಸ್ ತಯಾರಿಸಿಕೊಂಡು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅಥವಾ ಒಣ ಪುಡಿಯನ್ನೂ ಬಿಸಿನೀರಿನೊಂದಿಗೆ ಸೇವಿಸಬಹುದು. ಇಷ್ಟೊಂದು ಬಹುಮೂಲ್ಯ ಔಷಧೀಯ ಗುಣಗಳುಳ್ಳ ಕರಿಬೇವನ್ನು ಅಡುಗೆಗಳಲ್ಲಿ ಉಪಯೋಗಿಸಿ, ಸೇವಿಸುವುದನ್ನು ಮರೆಯಬೇಡಿ. ಏಕೆಂದರೆ ಕರಿಬೇವಿನಿಂದ ಅಡುಗೆಯ ಸೌಂದರ್ಯ, ರುಚಿ ಹೆಚ್ಚುವುದರ ಜೊತೆಗೆ ನಿಮ್ಮ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.

ಮಮತಾ ನಾಗರಾಜ್
ಪಾರಂಪರಿಕ ವೈದ್ಯೆ,
ದಾವಣಗೆರೆ.

Leave a Reply

Your email address will not be published. Required fields are marked *