ಗಿಡಮೂಲಿಕೆ ಉತ್ರಾಣಿ

ದೀಪಾವಳಿ ಹಬ್ಬದ ಸಮಯದಲ್ಲಿ ಸಗಣಿ, ಸುಣ್ಣ, ಕೆಮ್ಮಣ್ಣಿನಲ್ಲಿ ಪಾಂಡವ-ಕೌರವರನ್ನು ಮಾಡಿ, ಅದಕ್ಕೆ ಉತ್ರಾಣಿ ಕಡ್ಡಿಗಳನ್ನು ಸಿಕ್ಕಿಸಿ ಮನೆಯ ಮುಂಬಾಗಿಲಿನಲ್ಲಿ ಇಡಲಾಗುತ್ತದೆ(ಕಾರಣ ಗೊತ್ತಿಲ್ಲ).
ಅನಾದಿ ಕಾಲದಿಂದಲೂ ನಮ್ಮ ಪೂರ್ವಿಕರು ಮನೆಮದ್ದಾಗಿ ಹೆಚ್ಚಾಗಿ ಬಳಸುತ್ತಾ ಬಂದಿರುವ ಗಿಡ ಉತ್ರಾಣಿಯನ್ನು ಖರಮಂಜರಿ, ಕಡ್ಡಿಗೊಡ, ಲತ್ ಜೀರಾ, ಅಘತ, ನಾರವಿ, ಅಪಾಮಾರ್ಗ ಎಂದೂ ಕರೆಯಲಾಗುತ್ತದೆ. ಉತ್ರಾಣಿಯ ಎಲ್ಲಾ ಭಾಗಗಳು ವೈದ್ಯಕೀಯ ಉಪಯೋಗಕ್ಕೆ ಬರುತ್ತವೆ.

ರಕ್ತ ಪ್ರಮೇಹ, ಶ್ವೇತಪ್ರದರ, ರಕ್ತ ಪ್ರದರ, ಪಾಂಡು ರೋಗ, ಮೊಳೆ ಮೂಲವ್ಯಾಧಿ, ರಕ್ತ ಮೂಲವ್ಯಾಧಿ, ಸನ್ನಿ, ಅತಿಸಾರ, ತದ್ದು, ಇಸುಬು ಮುಂತಾದ ಅಸಾಧಾರಣ ರೋಗಗಳಿಗೆ ಉತ್ರಾಣಿಯಲ್ಲಿ ಉತ್ತರವಿದೆ.

ಹಾಗೆ ಈ ಗಿಡದಲ್ಲಿ ವಿಷನಾಶಕ ಗುಣಗಳಿರುವುದರಿಂದ ಜರಿ, ಜೇನು, ಚೇಳು, ನಾಯಿ ಕಡಿದಾಗ ಗಾಯವನ್ನು ಸ್ವಚ್ಛವಾಗಿ ತೊಳೆದು ಎಲೆಗಳ ರಸ ಹಚ್ಚಬೇಕು. ಬೇರು ಮತ್ತು ಶ್ರೀಗಂಧ ತೇಯ್ದು ಜೇನುತುಪ್ಪ ಸೇರಿಸಿ ತಿಂದರೆ ವಿಷ ಪರಿಹಾರ ಆಗುತ್ತದೆ.

ಬಿಳಿ ಉತ್ರಾಣಿಯಲ್ಲಿ ಉಷ್ಣವೀರ್ಯ, ಪಾಚಕ, ಕಫ ನಿವಾರಣೆ ಗುಣಗಳು ಇರುವುದರಿಂದ ಇದನ್ನು ವಮನಕಾರಿ, ಮೂಲವ್ಯಾಧಿ, ಉರಿಮೂತ್ರ, ಭೇದಿ, ಉದರರೋಗ, ನವೆ, ದದ್ದು, ಗಂತಿ, ವ್ರಣ ಸಮಸ್ಯೆಗಳಲ್ಲಿ ಉಪಯೋಗಿಸುತ್ತಾರೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕಿವುಡುತನ ಬಾರದಂತೆ ಸಹಾಯ ಮಾಡುತ್ತದೆ.
ಕೆಂಪು ಉತ್ರಾಣಿಯಲ್ಲಿ ಕಫ ವಾತನಾಶಕ ಗುಣಗಳಿರುವುದರಿಂದ ಬೇರಿನ ಭಸ್ಮದಿಂದ ನೆಗಡಿ ಕೆಮ್ಮು ಕಡಿಮೆ ಆಗುತ್ತದೆ, ಹುಣ್ಣುಗಳನ್ನು ಕಡಿಮೆ ಮಾಡಿ ಹೃದಯದ ತೊಂದರೆಗಳನ್ನು ದೂರವಿಟ್ಟು, ಅಸ್ತಮಾ, ಹೊಟ್ಟೆ ಉಬ್ಬರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದನ್ನು ತಲೆಗೆ ಲೇಪಿಸಿಕೊಂಡರೆ ಹುಣ್ಣು, ಗಾಯ, ನವೆ, ಸಿಬ್ಬು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.

ಉತ್ರಾಣಿ ಗಿಡದ ಬೇರನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಗಂಧದಂತೆ ತೇಯ್ದು ಹಾಲುಣಿಸುವ ತಾಯಂದಿರ ಸ್ತನಗಳಿಗೆ ಹಚ್ಚಿಕೊಂಡರೆ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ ಮತ್ತು ಮಗುವಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯೌಷಧವಾಗಿದೆ. ಉತ್ತರಾಣಿಯ ಭಸ್ಮ, ಉಪ್ಪು ಹಾಗೂ ಸಾಸಿವೆ ಎಣ್ಣೆಯ ಲೇಹ್ಯದಿಂದ ಅಥವಾ ಉತ್ರಾಣಿ ಬೇರಿನಿಂದ ಹಲ್ಲುಗಳನ್ನು ಚೆನ್ನಾಗಿ ಉಜ್ಜಿದರೆ ಹಲ್ಲುಗಳ ತೊಂದರೆಯು ಇರುವುದಿಲ್ಲ ಅಲ್ಲದೆ ಹಲ್ಲುಗಳು ಬಿಳಿಯಾಗಿ ಶುಭ್ರವಾಗಿ ಮತ್ತು ಗಟ್ಟಿಯಾಗುತ್ತವೆ. ಹಾಗೂ ಬಾಯಿಯ ದುರ್ವಾಸನೆಯನ್ನು ಸಹ ಕಡಿಮೆ ಮಾಡುತ್ತದೆ.

ಉತ್ತರಾಣಿ ಎಲೆಗಳನ್ನು ಚೆನ್ನಾಗಿ ಅರೆದು ಅದಕ್ಕೆ ಸ್ವಲ್ಪ ಅರಿಶಿನ, ಶ್ರೀಗಂಧದ ಚೂರ್ಣ  ಮತ್ತು ಮೊಸರನ್ನು ಹಾಕಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆದುಕೊಂಡರೆ ಮುಖವು ಕಾಂತಿಯುತವಾಗಿ ಮೃದುವಾಗಿ ಆಗಿ ಮೊಡವೆಗಳು ಗುಳ್ಳೆಗಳು ಮತ್ತು ಕಪ್ಪು ಕಲೆಗಳು ಹೋಗುತ್ತವೆ.

ಕೆಂಪು ಉತ್ತರಾಣಿ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿದರೆ ಗಾಯವಾದ ದೇಹದ ಭಾಗದಿಂದ ರಕ್ತ ಸೋರುವುದು ನಿಲ್ಲುತ್ತದೆ.

ಇದನ್ನು ಪಶುರೋಗದ ಚಿಕಿತ್ಸೆಯಲ್ಲೂ ವ್ಯಾಪಕವಾಗಿ ಬಳಸಲಾಗುತ್ತದೆ. ನಿದ್ರಾಹೀನತೆ ದೂರವಾಗುತ್ತದೆ. ಖಾಲಿಹೊಟ್ಟೆಗೆ ಉತ್ರಾಣಿ ರಸ ಮತ್ತು ಬೆಲ್ಲ ಸೇವಿಸುವುದು ರಕ್ತಹೀನತೆಗೆ ಒಳ್ಳೆಯ ಮದ್ದಾಗಿದೆ. ಉತ್ತರಾಣಿಯ ಭಸ್ಮವನ್ನು ಬಟ್ಟೆ ತೊಳೆಯಲು ಮಾರ್ಜಕವಾಗಿಯೂ ಬಳಸಬಹುದು.

ಆದರೆ ಗರ್ಭಿಣಿ ಹೆಂಗಸರು ಇದರಿಂದ ದೂರವಿರುವುದು ಒಳ್ಳೆಯದು. ಗಿಡದ ಹತ್ತಿರ ಹೋಗುವುದೂ ಅಪಾಯ. ಉತ್ರಾಣಿಯ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

ಜಾಗ್ರತೆಯಾಗಿ, ನಾಟೀವೈದ್ಯರ ಸೂಕ್ತ ನಿರ್ದೇಶನದಂತೆ ಬಳಸಬೇಕು.

ಮಮತಾ ನಾಗರಾಜ್
ಪಾರಂಪರಿಕ ವೈದ್ಯೆ, ದಾವಣಗೆರೆ.

Leave a Reply

Your email address will not be published. Required fields are marked *