ಗಿಡಮೂಲಿಕೆ ಅತ್ತಿ

ಹಿಂದೂಗಳು ಭಕ್ತಿಯಿಂದ ಪೂಜಿಸುವ

ಔದುಂಬರ ವೃಕ್ಷ ಎಂದು ಗುರುತಿಸಲ್ಪಡುವ ಈ ಮರದಲ್ಲಿ ತ್ರಿಮೂರ್ತಿಗಳ ಅಂಶವಾದ ದತ್ತಾತ್ರೇಯ ದೇವತೆ ವಾಸಿಸುತ್ತಾನೆಂದು ಪುರಾಣಗಳು ಹೇಳುತ್ತವೆ.

“ಅತ್ತಿ ಹಣ್ಣು ನೋಡಲು ಬಲು ಕೆಂಪು, ಒಳಗೆ ನೋಡಿದರೆ ಹುಳ”… ಜನಪದ ಹಾಡಿನ ಸಾಲು ಹೀಗಿದೆ. ಹಾಗಂತ ಅದನ್ನು ತಿನ್ನದೇ ಇರಬಾರದು. ಏಕೆಂದರೆ ಅದು ಮನಸ್ಸಿಗೂ, ದೇಹಕ್ಕೂ ಆರಾಮ ನೀಡುವ ಹಣ್ಣಾಗಿದೆ. ಇದು ಅಂಜೂರ ಹಣ್ಣಲ್ಲ. ಜೆಲ್ಲಿಯಂತಹ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಹಣ್ಣುಗಳಿಗೆ ಮಧ್ಯ ಭಾಗದಲ್ಲಿ ಬೀಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳು ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು 2-3 ಹೋಳು ಮಾಡಿ ಕಡು ಬಿಸಿಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳೆಯದು. ಪ್ರತಿಶತ 90ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿ ಡ್ರೈಫ್ರುಟ್ ಅಗಿ ಉಪಯೋಗಿಸುತ್ತಾರೆ. ಇವುಗಳಲ್ಲಿ ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ಮೆಗ್ನೀಷಿಯಂ ಅಂಶವಿದೆ. ಮದ್ಯಪಾನ, ಸಕ್ಕರೆ ಕಾಯಿಲೆ, ಕರುಳಿನಲ್ಲಿ ಆಹಾರಗಳ ಹೀರುವಿಕೆಯಲ್ಲಿ ವ್ಯತ್ಯಾಸ, ಮೂತ್ರಜನಕಾಂಗದ ತೊಂದರೆ ನಿವಾರಣೆಗೆ ಉತ್ತಮ.

ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ. ಹೊಟ್ಟೆಯಲ್ಲಿ ಗಡಗಡ ಶಬ್ದ, ನೋವು ಮತ್ತು ನೀರಿನಂತೆ ಬೇಧಿಯಾಗುತ್ತಿದ್ದರೆ(ಬಟ್ಟಿ ಬೀಳುವುದು)ಅತ್ತಿಮರದ ಬುಡದ ಹಾಲನ್ನು ಹೊಕ್ಕಳಿನ ಸುತ್ತ ಲೇಪಿಸಬೇಕು ಮತ್ತು ಗುಂಡಾದ ಮಡಿಕೆಯ ಚೂರನ್ನು ಹೊಕ್ಕಳಿನ ಮೇಲೆ ಇಡಬೇಕು. ಅಂಟಾಗಿರುವ ಹಾಲಿನಲ್ಲಿ ಈ ಬಿಲ್ಲೆ ಚೆನ್ನಾಗಿ ಅಂಟಿಕೊಳ್ಳುವುದು. ಇದರ ಸುತ್ತ ಬುಡದಲ್ಲಿರುವ ನಯವಾದ ಮಣ್ಣನ್ನು ಸವರಿ ಬಟ್ಟೆ ಕಟ್ಟಬೇಕು. ವಿಪರೀತ ಬೇಧಿಯಾಗುತ್ತಿದ್ದರೆ

ಅತ್ತಿಯ ಹಾಲನ್ನು ಸಕ್ಕರೆಯೊಂದಿಗೆ ಸೇವಿಸಬೇಕು. ಬಹುಮೂತ್ರದ ತೊಂದರೆ ಇರುವವರಿಗೆ ಬಾಯಾರಿಕೆಯೂ ವಿಪರೀತವಾಗಿರುತ್ತದೆ. ಅಂತಹವರು ಅತ್ತಿ ಹಣ್ಣುಗಳ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು. ದೇಹದ ಮೇಲೆ ಬಾವುಗಳಾಗಿದ್ದಲ್ಲಿ ಅತ್ತಿ ಎಲೆಗಳ ರಸವನ್ನು ಹಿಂಡಿ ಯಾವುದಾದರೂ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ ಬಾವುಗಳ ಮೇಲೆ ಇಟ್ಟು ಕಟ್ಟಬೇಕು. ಕೀವು ಸೋರುತ್ತಿರುವ ಭಾಗಗಳಿಗೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುತ್ತದೆ.
ಅತ್ತಿಮರದ ಹಾಲನ್ನು ಮಡಕೆ ಚೂರಿನಲ್ಲಿ ಶೇಖರಿಸಿ ಗಂಡಮಾಲೆಗೆ(ಕೆನ್ನೆ ಬೀಗು) ಲೇಪಿಸಬೇಕು ಅಥವಾ ಅತ್ತಿ ಮರದ ಬೇರನ್ನು ನೀರಿನಲ್ಲಿ ತೇದು ಸ್ವಲ್ಪ ಹಿಂಗು ಮತ್ತು ಹರಳೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಲೇಪಿಸಬೇಕು.
ಅತ್ತಿ ಮರದ ತೊಗಟೆಯ ಕಷಾಯವನ್ನು ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಬಹುದು. ಅತ್ತಿ ಹಣ್ಣನ್ನು ಜೇನುತುಪ್ಪ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಸೇವಿಸುವುದರಿಂದ ಕಾಮಾಲೆ, ಪಿತ್ತಪ್ರಕೋಪ, ಮನೋರೋಗ, ಗರ್ಭಪಾತ, ಶ್ವೇತಪದರ, ಗೆನೋರಿಯಾ, ಮೂಗಿನಲ್ಲಿ ರಕ್ತಸ್ರಾವ ಮೊದಲಾದವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಹಣ್ಣನ್ನು ಸೇವಿಸುವುದರಿಂದ ಗೂರಲು, ನರಗಳ ದೌರ್ಬಲ್ಯ ಕಡಿಮೆಯಾಗಿ ಉತ್ತೇಜನ ತುಂಬುತ್ತದೆ. ಅತ್ತಿಯ ಎಳಸಾದ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಜಗಿಯುವುದರಿಂದ ಬಾಯಿಯೊಳಗಿನ ಹುಣ್ಣುಗಳು ಮಾಯವಾಗುತ್ತವೆ. ಅಷ್ಟೇ ಅಲ್ಲದೆ ಬಾಯಿಯ ದುರ್ಗಂಧ ತಡೆಗೂ ಸಾಧ್ಯವಾಗುತ್ತದೆ.

ಮೂಲವ್ಯಾಧಿ ರೋಗಗಳಿಗೂ ರಾಮಬಾಣ. ಎಲೆಯ ರಸವನ್ನು ಗೋಧಿ ಹಿಟ್ಟಿನೊಂದಿಗೆ ಕಲೆಸಿ ಕುರದ ಜಾಗಕ್ಕೆ ಲೇಪಿಸುವುದರಿಂದ ಕುರ ಹಣ್ಣಾಗಿ ಒಡೆಯುತ್ತದೆ. ಆಗತಾನೆ ಕಿತ್ತ ಎಲೆಗಳನ್ನು ಅರೆದು ರಸವನ್ನು ಲೇಪಿಸುವುದರಿಂದ ವೃಣಗಳು ವಾಸಿಯಾಗುತ್ತವೆ. ಎಲೆಗಳ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಪಿತ್ತವಿಕಾರವನ್ನು ತಡೆಗಟ್ಟಬಹುದು. ಎಲೆಗಳ ಮೇಲೆ ಕಂಡು ಬರುವ ಗಂಟುಗಳನ್ನು ತೆಗೆದು ಅವುಗಳನ್ನು ಹಾಲಿನಲ್ಲಿ ಹಾಕಿ ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಸಿಡುಬು ಕಲೆಗಳಿಂದಾದ ಗುಳಿ ಮಾಯವಾಗುತ್ತವೆ. ಬೇರಿನ ರಸವನ್ನು ತೆಗೆದು ದಿನಕ್ಕೆ ಒಂದೆರಡು ಚಮಚದಷ್ಟು ಸೇವಿಸುತ್ತಾ ಬಂದರೆ ಆರೋಗ್ಯ ವೃದ್ಧಿಯಾಗುತ್ತದೆ.

ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ತಿನ್ನಿಸುತ್ತಾರೆ. ಹರವಾಗಿ ಬೆಳೆಯುವುದರಿಂದ ಇದು ಒಳ್ಳೆಯ ನೆರಳನ್ನು ಕೊಡುತ್ತದೆ. ಇದರ ಕಟ್ಟಿಗೆಯಿಂದ ಪೆಟ್ಟಿಗೆ, ಹಲಗೆ, ಚಕ್ಕಡಿಗಳ ಹಲ್ಲು ಇತ್ಯಾದಿ ಮರಮುಟ್ಟುಗಳನ್ನು ತಯಾರಿಸುತ್ತಾರೆ. ಅರಗಿನ ಹುಳುವನ್ನು ಕೂಡ ಈ ಮರದ ಎಲೆಗಳ ಮೇಲೆ ಸಾಕುವರು.

ಔಷಧಿಯ ಗುಣಗಳಿಂದ ತುಂಬಿರುವ ಅತ್ತಿಯನ್ನು ಯಾರೂ ಬೆಳೆಸುವುದಿಲ್ಲ. ತಾನಾಗೇ ಬೆಳೆಯುತ್ತದೆ. ಯಾವುದೇ ಗೊಬ್ಬರವಿಲ್ಲದೇ ಬೆಳೆಯುವ ಮರವಾದ್ದರಿಂದ ರಸ್ತೆ ಬದಿಯಲ್ಲಿ ಗುಡ್ಡಗಳಲ್ಲಿ ಬೆಳೆಸಿದರೆ ಎಲ್ಲರೂ ಉಪಯೋಗ ಪಡೆದುಕೊಳ್ಳಬಹುದು. ಪೂಜೆ ಮಾಡಲಿ, ಆದರೆ ಜೊತೆಗೆ ಅದನ್ನು ಸರಿಯಾಗಿ ಬಳಕೆ ಮಾಡಬೇಕು.

ಮಮತಾ ನಾಗರಾಜ್, ಪಾರಂಪರಿಕ ವೈದ್ಯೆ, ದಾವಣಗೆರೆ

Leave a Reply

Your email address will not be published. Required fields are marked *