ಕೊರೋನಾ ಮತ್ತು ದೂರದರ್ಶನ ವಾಹಿನಿಗಳು

ಮಿತ್ರರೇ, ಟಿವಿ ಹಾಕಿ ನ್ಯೂಸ್ ಚಾನೆಲ್ ಗೆ ತಿರುಗಿಸಿದರೆ ಸಾಕು ಕಣ್ಣಿಗೆ ಬೀಳುವುದು… ಆಸ್ಪತ್ರೆಯ ಮುಂದೆ ಕೊರೋನಾದಿಂದ ಸತ್ತವರ ಮನೆಯವರ ರೋದನ, ಡಾಕ್ಟರನ್ನು ಹಾಗೂ ಆಸ್ಪತ್ರೆಯನ್ನು ಬೈಯುತ್ತಿರುವ ದೃಶ್ಯ, ಬೆಡ್ ಯಾ ವೆಂಟಿಲೇಟರ್ ಸಿಗದೆ ರೋದಿಸುತ್ತಿರುವ ಜನತೆ, ರುದ್ರಭೂಮಿಯ ಮುಂದೆ ಸಾಲುಗಟ್ಟಿ ನಿಂತಿರುವ ಹೆಣಗಳು. ಅಬ್ಬಬ್ಬಾ! ಇದನ್ನೆಲ್ಲ ಪ್ರತಿಕ್ಷಣ ನೋಡುತ್ತಲೇ ಕುಳಿತರೆ… ಎಂತಹ ಆರೋಗ್ಯವಂತನಿಗೂ ಒಂದರೆಕ್ಷಣ ಮೈ ಬೆಚ್ಚಗಾಗಿ ಜ್ವರ ಬಂದಿದೆಯೇನೋ ಅನ್ನಿಸದಿರದು. ಇನ್ನು ಈ ದೃಶ್ಯ ಮಾಧ್ಯಮಗಳ ಪ್ರಭಾವ ಹೇಗಿದೆ ಅಂದರೆ… ಕೊರೋನಾ ಬಂದವರ್ಯಾರೂ ಬದುಕುವುದೇ ಇಲ್ಲ ಅನ್ನುವ ರೇಂಜಿಗೆ ಇದೆ. ಬಹಳಷ್ಟು ವಿದ್ಯಾವಂತರೇ ನನ್ನ ಬಳಿ ಕೇಳಿದ ಪ್ರಶ್ನೆ ಇದು… “ಅಕ್ಕಾ, ಕೊರೋನಾ ಬಂದವರು ಬದುಕುತ್ತಾರಾ?” ಆ ಮಟ್ಟಿಗಿನ ಭಯವನ್ನು ದೃಶ್ಯ ಮಾಧ್ಯಮಗಳು ಜನತೆಯ ಮನದಲ್ಲಿ ಬಿತ್ತಿ ಬಿಟ್ಟಿವೆ. ಹೀಗಾಗಿಯೇ ಬಹಳಷ್ಟು ಜನ ಕೊರೋನಾ ಪರೀಕ್ಷೆಗೆ ಹೋಗಲು ಭಯಪಟ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಬಹಳಷ್ಟು ನ್ಯೂಸ್ ಚಾನಲ್ ನವರು (ಚಂದನವನ್ನು ಹೊರತುಪಡಿಸಿ) ಕೊರೋನಾ ಬಗ್ಗೆ ಜನತೆಯಲ್ಲಿ ಇರುವ ಭಯ ಆತಂಕವನ್ನು ನಿವಾರಿಸುವ ಗೋಜಿಗೆ ಹೋಗಿದ್ದಾರಾ? ಖಂಡಿತ ಇಲ್ಲ! ಇನ್ನಷ್ಟು, ಮತ್ತಷ್ಟು ಭಯವನ್ನು ಬಿತ್ತಿದ್ದಾರೆ, ಸರಕಾರವನ್ನು ಒಂದಷ್ಟು ಬೈದಿದ್ದಾರೆ ಮತ್ತು ಈ ಸಾಂಕ್ರಾಮಿಕ ರೋಗದ ಬಗೆಗಿನ ಊಹಾಪೋಹಗಳಿಗೆ (ಸಸ್ಯಾಹಾರಿಗಳಿಗೆ ಕೊರೋನಾ ಬರುವ ಸಂಭವ ಕಡಿಮೆ; ಬೊಕ್ಕತಲೆಯವರಿಗೆ ಕೊರೋನಾ ಬರುವ ಸಂಭವ ಜಾಸ್ತಿ ಇತ್ಯಾದಿ) ಕುಮ್ಮಕ್ಕು ಕೊಡುವುದು ಬಿಟ್ಟರೆ, ಯಾವುದೇ ಆತಂಕಕ್ಕೂ ತೆರೆ ಎಳೆಯುವ ಪ್ರಯತ್ನವನ್ನು ಮಾಡಿಲ್ಲ. ಪ್ರಸ್ತುತ ಜನರ ಮನದಲ್ಲಿ ಇರುವ ದೊಡ್ಡ ಗೊಂದಲ ಎಂದರೆ… ಕೊರೋನಾ ಬಂದರೆ ಬದುಕುತ್ತಾರಾ?

ಪ್ರಿಯ ಮಿತ್ರರೇ, ಯಾವ ದೃಶ್ಯ ಮಾಧ್ಯಮಗಳೂ ತೋರಿಸದಿರುವ ಎರಡು ಕುಟುಂಬಗಳ ನೈಜ ಕಥೆಯನ್ನು ನಾನಿಲ್ಲಿ ಹೇಳುತ್ತೇನೆ. ಓದಿದ ನಂತರ ನೀವೇ ನಿರ್ಧರಿಸಿ… ಕೊರೋನಾ ಬಂದವರು ಸಾಯುತ್ತಾರ? ಬದುಕುತ್ತಾರ? ಎಂದು.

ಕಳೆದ ತಿಂಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಾರಗೊಂಡನ ಕೊಪ್ಪದ ಗ್ರಾಮದಲ್ಲಿ ಒಂದೇ ಕುಟುಂಬದ 11ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತು. ಸಂಬಂಧಿಕರ ಮುಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಂತರ ಮನೆಯ ಕೆಲವರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದ ಹನ್ನೊಂದೂ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸಂದರ್ಭದಲ್ಲಿ 11ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತು. ಅದರಲ್ಲಿ 92 ವರ್ಷದ ವೃದ್ಧೆಯಿಂದ ಹಿಡಿದು 9 ವರ್ಷದ ಬಾಲಕಿ ಸೇರಿದ್ದರು.

ಈಗ ಆ ಹನ್ನೊಂದೂ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಾರಣ, ಇವರೆಲ್ಲ ತಮ್ಮ ಮನೆಯಲ್ಲಿಯೇ ಐಸೋಲೇಶನ್ ಗೆ ಒಳಪಟ್ಟಿದ್ದಾರೆ. ಈ ಮನೆಯವರೇ ಹೇಳುವಂತೆ “ಯಾವುದೇ ಕಾರಣಕ್ಕೂ ಕೊರೋನಾ ಬಗ್ಗೆ ಭಯ ಬೇಡ, ಆದರೆ ಮುಂಜಾಗ್ರತೆ ಮಾತ್ರ ಅತೀ ಅಗತ್ಯ”.

ತೀರ ಇತ್ತೀಚೆಗೆ ಬಡಗಲಪುರದ ನಾಗೇಂದ್ರ ಎನ್ನುವವರ ಕುಟುಂಬದ 17 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತು. ಇದರಲ್ಲಿ ಹಿರಿಯರು ಹಾಗೂ ಮಕ್ಕಳು ಸೇರಿದ್ದರು. ಕೋವಿಡ್ ದೃಢಪಟ್ಟ ಕೂಡಲೇ… ಕುಟುಂಬದ ಸದಸ್ಯರು ಬಳಿಯ ಸರಕಾರಿ ವೈದ್ಯಾಧಿಕಾರಿ ಡಾಕ್ಟರ್ ಅಲಿಂ ಪಾಷಾ ಅವರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅವರಿಗೆಲ್ಲ ಧೈರ್ಯ ತುಂಬಿದರು. ಅವರ ಮನೆಯನ್ನೇ ಹೋಂ ಐಸೋಲೇಷನ್ ಆಗಿ ಪರಿವರ್ತಿಸಿದರು. ಪ್ರತಿದಿನ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಈಗ ಆ ಎಲ್ಲ 17 ಮಂದಿಯೂ ಆತ್ಮಸ್ಥೈರ್ಯದಿಂದ ಕೊರೋನಾ ವಿರುದ್ಧ ಹೋರಾಡಿ ಸೋಂಕನ್ನು ಮಣಿಸಿ, ಗೆಲುವಿನ ನಗೆ ಬೀರಿದ್ದಾರೆ. ಅವರು ಹೇಳುವುದೂ ಇದನ್ನೇ “ಕೊರೋನಾ ಬಗ್ಗೆ ಭಯ ಬೇಡ. ಆದರೆ ಮುಂಜಾಗ್ರತೆ ಮಾತ್ರ ಅತಿ ಅಗತ್ಯ”.

ಮಿತ್ರರೇ, ಕೊರೋನಾ ಬಂದವರೆಲ್ಲ ಸಾಯುವುದಿಲ್ಲ ಎಂಬುದಕ್ಕೆ ಈ ಎರಡು ಕುಟುಂಬಗಳೇ ಸಾಕ್ಷಿ. ಇಂತಹ ಹಲವಾರು ಕುಟುಂಬಗಳು ಇಂದು ಕೊರೋನಾವನ್ನು ಗೆದ್ದು ಬಂದಿದ್ದಾವೆ! ಖಂಡಿತಾ, ಕೊರೋನಾ ಸಾವನ್ನು ತಂದುಕೊಡುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಕೊರೋನಾ ರೋಗಿಗಳಲ್ಲಿ… ಅಧಿಕ ರಕ್ತದ ಒತ್ತಡ, ಮಧುಮೇಹ, ಅಸ್ತಮಾ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಇದ್ದಾಗ ಮಾತ್ರ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಉಳಿದಂತೆ ಇದು ಸಾಮಾನ್ಯ ಶೀತ – ಜ್ವರದಂತೆ ಬಂದು ಹೋಗುತ್ತದೆ. ಆದರೆ, ಇದರ ಹರಡುವಿಕೆಯ ಪ್ರಮಾಣ ಅತ್ಯಧಿಕವಾಗಿ ಇರುವುದರಿಂದ ರೋಗ ಕಾಣಿಸಿಕೊಂಡ ತಕ್ಷಣ ರೋಗಿಯು ಸಾಮಾಜಿಕ ಜವಾಬ್ದಾರಿಯಿಂದ ತನ್ನ ಮನೆಯ ರೂಮಿನಲ್ಲಿ ಉಳಿಯುವುದು ಸೂಕ್ತ.

ಹೆಚ್ಚಿನ ನ್ಯೂಸ್ ಚಾನಲ್ ಗಳು ಇಂತಹ ಉತ್ತಮ ವಿಚಾರಗಳಿಗೆ (ರಾಜಕಾರಿಣಿಗಳ/ಮಠದ ಸ್ವಾಮಿಗಳ ಲೈಂಗಿಕ ಹಗರಣಗಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಚಾರ ಕೊಡುವಂತೆ) ಅಬ್ಬರದ ಪ್ರಚಾರ ನೀಡುವುದೇ ಇಲ್ಲ! ‌ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಇಂತಹ ವಿಷಯಗಳನ್ನು ಈ ಚಾನೆಲ್ ಗಳು ಹೇಳುವ ಕಾರ್ಯ ಮಾಡುವುದಿಲ್ಲ. ಬರಿ ಆಸ್ಪತ್ರೆ, ಬೆಡ್, ವೆಂಟಿಲೇಟರ್, ಆಂಬುಲೆನ್ಸ್ ಕೊರತೆ, ಕೋವಿಡ್ ಸಾವಿನ ಸಾಲು ಸಾಲು ಹೆಣಗಳನ್ನು, ರುದ್ರಭೂಮಿಗಳನ್ನು ತೋರಿಸಿ… ತೋರಿಸಿ… ಜನತೆಯ ಮನೋಬಲವನ್ನು ಕುಗ್ಗಿಸುತ್ತಿದ್ದಾರೆ. ಖಂಡಿತ ಇದರ ಬಗ್ಗೆ ಮಾಹಿತಿ ಬೇಡವೆಂದಲ್ಲ! ಇದಕ್ಕೆಲ್ಲ ಒಂದು ಮಿತಿ ಇದ್ದರೆ ಚೆಂದ. ಗೂಗಲ್ ಮಾಡಿದರೆ ಸಿಕ್ಕುವ ಬಹಳಷ್ಟು ಆಸ್ಪತ್ರೆಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಪರ್ಕ ಸಂಖ್ಯೆಗಳು ನೂರಕ್ಕೆ 60 ಪ್ರತಿಶತ ತಪ್ಪಾಗಿರುತ್ತವೆ/ಬದಲಾಗಿರುತ್ತವೆ. ಇವುಗಳ ಸರಿಯಾದ ಸಂಪರ್ಕ ಸಂಖ್ಯೆ ತಿಳಿಸುವುದರೊಂದಿಗೆ… ಹೀಗೆ ಕೊರೋನಾ ಗೆದ್ದವರ ಕಥೆ, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ, ವೆಂಟಿಲೇಟರ್ ಗಳು ಲಭ್ಯವಿರುವ ಆಸ್ಪತ್ರೆ ಎಲ್ಲೆಲ್ಲಿದೆ, ರೋಗಿಗಳು ಯಾರನ್ನು ಸಂಪರ್ಕಿಸಬೇಕು ಎಂಬ ವಾರ್ಡ್, ತಾಲ್ಲೂಕು/ ಜಿಲ್ಲಾವಾರು ಮಾಹಿತಿಗಳನ್ನು ನೀಡಿದ್ದಾದರೆ.. ಈ ಚಾನೆಲ್ ಗಳ ಸಾಮಾಜಿಕ ಜವಾಬ್ದಾರಿಯನ್ನೂ, ಕಳಕಳಿಯನ್ನೂ ಮೆಚ್ಚಬಹುದು..

ಸುಮಾ ಕಿರಣ್

Leave a Reply

Your email address will not be published. Required fields are marked *