ಕಾವ್ಯಮಿಡಿತ: ವಾರದ ಕವಿತೆ | ಯೋಧರಿಗೆ ಕಾವ್ಯ ನಮನ
ಉಗ್ರರ ಕುಕೃತ್ಯಕ್ಕೆ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಜನಮಿಡಿತದಲ್ಲಿ ಇಂದು ಸಲ್ಲಿಸಿರುವ ಕಾವ್ಯಾಂಜಲಿಗಳಲ್ಲಿ ಆಯ್ದ ಕವಿತೆಗಳಿವು.
ಹೆಮ್ಮೆಯ ಯೋಧರಿಗೆ ಕಾವ್ಯ ನಮನ
ಸಂಚಿನಲಿ ಬಂದು ಕ್ರೌರ್ಯವೆಸಗಿದ
ಪಾತಕಿಗಳಿಗೆ ಬುದ್ದಿಕಲಿಸಬೇಕಿದೆ
ನೆತ್ತರ ಹರಿಸಿಹ ದುಷ್ಟ ಉಗ್ರರಿಗೆ
ನರಕ ದರ್ಶನ ಮಾಡಿಸಬೇಕಿದೆ
ಹೇಡಿಗಳಂತೆ ಬಂದು ತೋರಿಹರು
ಪೌರುಷವ ಹುಟ್ಟಡಗಿಸಲು ಸಜ್ಜಾಗಿ
ಪಾಪಿಗಳ ಪಾತಾಳವನು ನೆಲಸಮ
ಮಾಡಿ ಕರಾಳತೆಯ ನೆರಳನು ನೀಡಿ
ಮುಗಿಲು ಮುಟ್ಟಿದೆ ದೇಶದ ಆಕ್ರಂದನ
ಅಗಲಿಹರು ಯೋಧರು ಬಂಧುಬಾಂಧವರ
ತಾಯಿ ಕನ್ನಡಾಂಬೆ ಇನ್ನು ಎಚ್ಚರ ವಹಿಸಿ
ರಕ್ಷಿಸಬೇಕಿದೆ ತನ್ನ ಒಡಲ ಕುಡಿಗಳನು
ನೆರೆಹೊರೆಯ ದೇಶಗಳು ಬೆನ್ನಿಗೆ ನಿಂತಿವೆ
ಪಾಕ್ ಉಗ್ರರ ನೆತ್ತರನು ಹರಿಸಲು
ನಮ್ಮ ಸೋದರರ ಆತ್ಮಕೆ ಶಾಂತಿ ನೀಡಲು
ಕೈ ಜೋಡಿಸಿ ಕನ್ನಡಿಗರೆ ಸಮರ ಸಾರಲು
ಕನ್ನಡಿಗರ ಪ್ರತಿ ಮನೆಯಲು ಜನಿಸಲಿ
ಕೆಚ್ಚೆದೆಯ ವೀರರು ,ಗಡಿ ಕಾಯುವ ಧೀರರು
ಎಳಿ ಎದ್ದೇಳಿ ಸಿದ್ದರಾಗಿ ಮುನ್ನುಗ್ಗಲು
ಹೆಮ್ಮೆಯ ಯೋಧರಿಗೆ ಕಾವ್ಯ ನಮನ ಸಲ್ಲಿಸಲು
-ಸುನಿತಾಪ್ರಕಾಶ್
ಎದ್ದು ಬನ್ನಿ ಕನ್ನಡಿಗರೆ
ಕನ್ನಡಾಂಬೆಯ ಹೆಮ್ಮೆಯ ಮಡಿಲ ಕುಡಿಗಳೆ
ದುಷ್ಟರ ಅಟ್ಟಹಾಸವ ಮೆಟ್ಟಿನಿಲ್ಲಲು
ಪಾತಕಿಗಳ ಹೃದಯ ಸೀಳಲು ಸಿದ್ದರಾಗಿ ಬನ್ನಿ
ಮಡಿದ ಯೋಧರಾತ್ಮಕೆ ಶಾಂತಿ ಕೋರಬನ್ನಿ
ಭರತ ಭುವಿಯಲಿ ನೆತ್ತರ ಹರಿಸಿಹ
ಕ್ಷುದ್ರ ಶಕ್ತಿಯನು ನಾಶ ಮಾಡಿ ಬನ್ನಿ
ನಮ್ಮೊಳಗಿಹ ಮಿತೃದ್ರೋಹಿಗಳಿಗೆ
ತಕ್ಕ ಪಾಠವ ಕಲಿಸಲು ಎದ್ದು ಬನ್ನಿ
ಪಾಕ್ ಕೈಗಳಿಗೆ ಸಾಥ್ ನೀಡಿದವರ
ರುಂಡ ಚಂಡಾಡಲು ಸಿಡಿದೆದ್ದು ಬನ್ನಿ
ಕೇಕೆ ಹಾಕುತಿಹ ಹೇಡಿಗಳ ಗುಂಡಿಗೆ
ನಡುಗಿಸುವ ವೀರ ಕನ್ನಡಿಗರೆ ಎದ್ದು ಬನ್ನಿ
ತ್ಯಾಗ ಸಾಹಸಕೆ ಹೆಸರಾಗಿಹ ಭೂಮಿ
ನಮ್ಮಿ ತಾಯ್ನೆಲದ ಋಣವ ತೀರಿಸ ಬನ್ನಿ
ದೇಶ ರಕ್ಷಣೆಗೆ ಪ್ರಾಣ ಮುಡಿಪಾಗಿಟ್ಟ
ಸೈನಿಕರ ಕುಟುಂಬಕೆ ಧೈರ್ಯ ನೀಡ ಬನ್ನಿ
ಸಹಾಯ ಹಸ್ತ ನೀಡಿಹ ನೆರೆ ರಾಷ್ಟ್ರಗಳ
ಸ್ಮರಿಸೋಣ, ನಮ್ಮೊಳಗಿಹ ಕ್ರಿಮಿಗಳ
ತೊಲಗಿಸೋಣ ಕನ್ನಡಿಗರೆ ಎದ್ದು ಬನ್ನಿ
ಯೋಧರಿಗೆ ಕಾವ್ಯ ನಮನ ಸಲ್ಲಿಸೋಣ ಬನ್ನಿ
-ಸುನಿತಾಪ್ರಕಾಶ್
ಬಂದೂಕಿನ ಉತ್ತರ
ರಣಭೂಮಿಯಲ್ಲಿ ಹೋರಾಡಲಾಗದಿರುವ
ರಣಹೇಡಿಗಳ ಹಿಂಡು ಮಾಡಿತು ದುಷ್ಕೃತ್ಯ
ರಣಕಲಿಗಳನು ರಣದಿ ಎದುರಿಸಲಾಗದಿರೋ
ರಣ ಪಾಷಂಡಿಗಳ ಮಾಡಬೇಕು ಅಂತ್ಯ.
ಭಾರತ ಮಾತೆಯ ಅಮರ ವೀರಪುತ್ರರನು
ನೇರ ಯುದ್ಧದಿ ಗೆಲ್ಲಲಾಗದ ಶಿಖಂಡಿಗಳು
ಆತ್ಮಾಹತ್ಯಾ ಬಾಂಬ ತಂತ್ರವನು ಹೂಡಿದರು
ಅಸುರತನವನು ಮೆರೆದಿರುವರು ಪಾತಕಿಗಳು.
ನಮ್ಮವರ ಹಸಿನೆತ್ತರು ಹಾರುವ ಮುನ್ನ
ನರ ರಾಕ್ಷಸರ ಹೆಡೆಮುರಿ ಕಟ್ಟುವ ಬನ್ನಿರಿ
ರಕುತ ಕೋಡಿ ಹರಿಸಿದ ಮತಾಂಧ ಮೂಢರ
ರಕುತವ ಹರಿಸಿ ಯಮಪುರಿಗಟ್ಟುವ ಬನ್ನಿರಿ.
ರಾಷ್ಟ್ರಾಭಿಮಾನವ ತೋರಿಸುವ ಕಾಲ ಬಂದಿದೆ
ರಾಷ್ಟ್ರ ಐಕ್ಯತೆ ಜಗಕೆ ಸಾರುವ ಕಾಲ ಕೂಡಿದೆ
ಕೆಸರೆರಚಾಟದ ರಾಜಕಾರಣ ಬಿಟ್ಟು ಒಂದಾಗುವ
ಕಾಶ್ಮೀರ ಭಾರತಾಂಬೆ ಕೀರಿಟವೆಂದು ಕೂಗಿ ಹೇಳುವ.
ಜಗದ ಭೂಪಟದಿಂದ ಭಯೋತ್ಪಾದಕರ ಅಳಿಸುವ
ಭಯೋತ್ಪಾದನೆ ಮರವು ಬೇರೊಡನೆ ಕಿತ್ತೆಸೆಯುವ
ಬಂದೂಕಿಗೆ ಬಂದೂಕಿನ ಉತ್ತರವನೇ ನೀಡುವ
ಭಾರತೀಯರ ಉಗ್ರ ನರಸಿಂಹ ರೂಪ ತೋರಿಸುವ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆ
ಅನುಭವಮಂಟಪ, ದಾವಣಗೆರೆ.