ಕಾವ್ಯಮಿಡಿತ: ವಾರದ ಕವಿತೆ | ಕ್ಷಣಗಳು | ಶಿವಮೂರ್ತಿ.ಹೆಚ್।ನಮ್ಮದೊಂದು ಸೆಲ್ಫಿ।ಮಾರುತಿ ವಿ ಹೆಚ್ ಬೆಳವನೂರು

ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.

ಈ ವಾರದ ವಿಜೇತ ಕವಿತೆ – 
ಕ್ಷಣಗಳು ।ನಮ್ಮದೊಂದು ಸೆಲ್ಫಿ

ಕ್ಷಣಗಳು

 ಕುಲ್ಫಿ ತಿನ್ನುವ ಮಕ್ಕಳಿಗೂ ಸಹ
ಸೆಲ್ಫಿ ತೆಗೆಯೋ ಹುಚ್ಚಿನ ಮೋಹ
ಕಪ್ಪು ಬಿಳುಪಿನ ಮನುಷ್ಯನ ಬಾಳಲಿ
ಬಣ್ಣ ಬಣ್ಣದ ಕನಸಿನ ರಂಗೋಲಿ.

ಹರಿದು ಚೂರಾದ ಬಟ್ಟೆಗಳು
ಹಸಿದು ಕಂಗಾಲಾದ ಹೊಟ್ಟೆಗಳು
ದಾರಿದ್ರ್ಯದ ಬೇಗೆಯ ಬವಣೆಗಳು
ಮರೆಸಿತು ಈ ಸೆಲ್ಫಿಯ ಕ್ಷಣಗಳು.

ನಿಷ್ಕಲ್ಮಶ ಮನಗಳು ಕಲೆತಾಗ
ನಿಶ್ಚಿಂತೆಯ ಗಳಿಗೆಗಳು ಬಂದಾಗ
ನಾವೆಲ್ಲ ಆತ್ಮೀಯರು ಸೇರಿದೆವು
ನಿಂತೊಮ್ಮೆ ಸೆಲ್ಫಿಯ ತೆಗೆದವು.

ಐವರು ಗೆಳೆಯರು ನಾವು ಸೇರಿರಲು
ಐಫೋನ್ ಈ ಪೋನುಗಳ ಬೇಕಿಲ್ಲ
ಚಪ್ಪಲಿಯೇ ನಮಗೆ ಕ್ಯಾಮೆರಾವು
ಚಿತ್ರವ ನಗುನಗುತಾ ಕ್ಲಿಕ್ಕಿಸಿದೆವು.

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆ
ಅನುಭವಮಂಟಪ, ದಾವಣಗೆರೆ

ನಮ್ಮದೊಂದು ಸೆಲ್ಫಿ

ಎಲ್ಲರಿಗೂ ಉಂಟೊಂದು ಮನಸು
ಅದರಲ್ಲೊಂದು ಮೂಕ ವೇದನೆಯ ಕನಸು
ಕನಸಿಗೆ ರೆಕ್ಕೆ ಕಟ್ಟಿರಲು ಸೊಗಸು
ಅದುವೇ ಬಾಲ್ಯವೆಂಬ ಹೊಂಗನಸು

ಮುಖ ಚಹರೆ ಕಪ್ಪಿದ್ದರೂ ಸರಿಯೆ
ಮನವು ಮುಗಿಲ ಹಾಲ್ಜೇನ ಹನಿಯೆ
ಹರಿದಿಹುದು ಸ್ನೇಹದ ಝರಿಯೆ
ನಗುವಿನಲಿ ನೋವೆಲ್ಲ ಮರೆಗೆ ಸರಿಯೆ

ಆಧುನಿಕತೆಯಲಿ ನಮಗುಂಟು ಭೇದ
ನಮ್ಮ ನಗುವಿಲ್ಲವೆ ನೋಡಲು ಚೆಂದ
ಚಪ್ಪಲಿ ಹಿಡಿದು ತೆಗೆಯಲೊಂದು ಸೆಲ್ಫಿ
ಸಂತಸದಲಿ ಮೊಗವಾಗಿತ್ತು ಖುಲ್ಫಿ

ಯಾರೂ ಸೋಲಿಸಲಾರರು ನಮ್ಮನ್ನು
ಕದಿಯಲಾರರು ನಮ್ಮ ಬಡತನವನ್ನು
ಬಾಡದೆಂದಿಗೂ ನಮ್ಮೀ ಮನದ ಹೂವು
ತೋರಲಾರೆವು ಎಂದಿಗೂ ಅದರ ನೋವು.

✍ ಮಾರುತಿ ವಿ ಹೆಚ್ ಬೆಳವನೂರು
ಸಹ ಶಿಕ್ಷಕರು
ಕುವೆಂಪು ಪ್ರೌಢಶಾಲೆ
ಶ್ಯಾಗಲೆ

 

ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com

 



Leave a Reply

Your email address will not be published. Required fields are marked *