ಕಲ್ಲದೇವರಪುರದ ದೇವಾಲಯಗಳು

ದೇವಾಲಯಗಳ ಇತಿಹಾಸದಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ತುಂಬಾ ದೊಡ್ಡದು. ಅವರ ಹಲವು ದೇವಾಲಯಗಳು ರಾಜ್ಯದಲ್ಲಿ ಕಾಣ ಸಿಗಲಿದ್ದು ಅವುಗಳಲ್ಲಿ ಉತ್ತರ ಕರ್ನಾಟಕ ಹಾಗು ಮಧ್ಯ ಕರ್ನಾಟಕದ ಭಾಗಗಳಲ್ಲಿ ಸಾಕಷ್ಟು ಇದೆ. ಆದರೆ ಕೆಲವು ದೇವಾಲಯಗಳು ಪ್ರಸಿದ್ದಿ ಪಡೆದಿದ್ದು ಕೆಲವು ದೇವಾಲಯಗಳು ಪ್ರಚಾರದ ಕೊರತೆಯಿಂದ ಜನ ಮಾನಸದಿಂದ ದೂರ ಉಳಿದಿವೆ. ಅಂತಹ ದೇವಾಲಯಗಳಲ್ಲಿ ಜಗಳೂರು ತಾಲ್ಲೂಕಿನ ಕಲ್ಲದೇವರಪುರದ ದೇವಾಲಯಗಳು ಒಂದು.

ಇತಿಹಾಸ ಪುಟದಲ್ಲಿ ಕಲ್ಲದೇವರಪುರ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿತ್ತು. ಇಲ್ಲಿನ 1129 ರ ದೇವಗಿರಿ ಯಾದವ ದೊರೆ ರಾಮಚಂದ್ರನ ಕಾಲದ್ದು ಇದರಲ್ಲಿ ಬಸವಣ್ಣನ ಉಲ್ಲೇಖವಿದೆ. ಇನ್ನು 1526 ರ ಶಾಸನದಲ್ಲಿ ಕಲಿನಾಥ ದೇವರಿಗೆ ದತ್ತಿ ನೀಡಿದ ಉಲ್ಲೇಖವಿದೆ. ಇನ್ನು 1235 ರ ಹೊಯ್ಸಳ ವೀರ ಸೋಮೇಶ್ವರನ ಶಾಸನದಲ್ಲಿ ಇಲ್ಲಿನ ಮಣಲೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ಇದಲ್ಲದೇ ಇಲ್ಲಿ ಹಲವು ವೀರಗಲ್ಲುಗಳು ಹಾಗು ಬಿಡಿ ಶಿಲ್ಪಗಳು ಇದರ ಇತಿಹಾಸಕ್ಕೆ ಸಾಕ್ಷಿಯಂತಿದೆ.

ಕಲ್ಲದೇವರಪುರ ಕಲ್ಲೇಶ್ವರ ದೇವಾಲಯ :

ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ, ವಿಜಯನಗರ ಕಾಲದ ಸಭಾಮಂಟಪ, ನಂದಿಮಂಟಪ ಹಾಗು ನೂತನವಾಗಿ ನಿರ್ಮಿಸಿದ ರಾಜಗೋಪುರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಕಲ್ಲೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಇನ್ನು ಗರ್ಭಗುಡಿಯ ಬಾಗಿಲುವಾಡಕ್ಕೆ ಹೊದಿಕೆ ಹಾಕಲಾಗಿದ್ದು ಮೂಲ ಸ್ವರೂಪ ಕಾಣುವದಿಲ್ಲ.

ನವರಂಗದಲ್ಲಿ ತಿರುಗಣೆಯ ನಾಲ್ಕು ಕಂಭಗಳಿದ್ದು ಎರಡು ಕಡೆಯಿಂದ ಪ್ರವೇಶವಿದೆ. ಇನ್ನು ವಿತಾನದಲ್ಲಿ ಕಮಲದ ಕೆತ್ತೆನೆ ಇದೆ. ಇಲ್ಲಿ ಶಿವಲಿಂಗ ಎದುರು ನಂದಿಯ ಶಿಲ್ಪವಿದೆ. ಇಲ್ಲಿ ಗಣಪತಿ ಸೂರ್ಯನ ಶಿಲ್ಪಗಳಿವೆ. ನವರಂಗದ ಬಾಗಿಲುವಾಡಗಳು ಅಲಂಕೃತಗೊಂಡಿದೆ. ಇನ್ನು ಸಭಾ ಅಥವಾ ಮುಖಮಂಟಪದಲ್ಲಿ ವಿಜಯನಗರ ಶೈಲಿಯ ಕಂಭಗಳಿವೆ. ಇನ್ನು ಮುಂಭಾಗದಲ್ಲಿ ಪ್ರತ್ಯೇಕ ಮಂಟಪದಲ್ಲಿ ನಂದಿಯ ಶಿಲ್ಪವಿದೆ. ಇಲ್ಲಿ ಇತರ ಗರ್ಭಗುಡಿಯಲ್ಲಿ ಸುಮಾರು ಆರು ಅಡಿ ಎತ್ತರದ ವೀರಭದ್ರ ಹಾಗು ಮತ್ತೊಂದರಲ್ಲಿ ಗೌರಮ್ಮನ ಶಿಲ್ಪವಿದೆ. ದೇವಾಲಯಕ್ಕೆ ಘಾಂಸನ (ಕದಂಬ ನಾಗರ) ಶೈಲಿಯ ಶಿಖರವಿದೆ.

ಈ ಭಾಗದಲ್ಲಿ ಪ್ರಸಿದ್ದವಾದ ಈ ದೇವರಿಗೆ ವೈಶಾಖ ಹುಣ್ಣಿಮೆಯಂದು ಕಲ್ಲೇಶ್ವರ ಜಾತ್ರೆ ನಡೆಯಲಿದ್ದು ಆ ಸಮಯದಲ್ಲಿ ನಡೆಯುವ ದನಗಳ ಜಾತ್ರೆ ಪ್ರಸಿದ್ದಿಯಾದದ್ದು. ಸುಮಾರು ಆರು ದಿನ ನಡೆಯುವ ಈ ಜಾತ್ರೆ ತುಂಬಾ ವಿಜೄಂಭಣೆಯಿಂದ ನಡೆಯಲಿದೆ.

ಮಣಲೇಶ್ವರ – ತ್ರಿಕುಟೇಶ್ವರ ದೇವಾಲಯ :

ಇಲ್ಲಿ ಕಾಣುವ ಮತ್ತೊಂದು ದೇವಾಲಯವಿದು. ಮೂಲತಹ ಈ ದೇವಾಲಯ ತ್ರಿಕುಟಾಚಲ ಮಾದರಿಯದ್ದು. ದೇವಾಲಯ ಮೂರು ಗರ್ಭಗುಡಿಯನ್ನು ಹೊಂದಿದ್ದು ನವರಂಗ ಹಾಗು ಮಂಟಪವಿದೆ. ಉತ್ತರ, ಪಶ್ಚಿಮ ಹಾಗು ಪೂರ್ವಭಿಮುಖವಾಗಿರುವ ಮೂರು ಗರ್ಭಗುಡಿಯಲ್ಲೂ ಶಿವಲಿಂಗವಿದ್ದು ಕ್ರಮವಾಗಿ ಬ್ರಹ್ಮ, ವಿಷ್ಣು ಹಾಗು ಮಹೇಶ್ವರನನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಇದನ್ನು ತ್ರಿಕುಟೇಶ್ವರ ದೇವಾಲಯ ಎಂದೇ ಕರಯಲಾಗುತ್ತಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಮಣಲೇಶ್ವರ ಎಂದೇ ಕರೆಯಲಾಗಿದೆ.

ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ನವರಂಗದಲ್ಲಿ ವಾಹನ ಸಮೇತವಾದ ಸಪ್ತಮಾತೃಕಾ ಶಿಲ್ಪಗಳಿವೆ. ಇಲ್ಲಿ ಎರಡು ದೇವ ಕೋಷ್ಟಕಗಳಿದ್ದು ಇಲ್ಲಿ ಯಾವುದೇ ಶಿಲ್ಪಗಳು ಕಾಣ ಸಿಗುವದಿಲ್ಲ. ಇನ್ನು ದೇವಾಲಯಕ್ಕೆ ಶಿಖರದ ಭಾಗ ಕಾಣ ಬರುವದಿಲ್ಲ.

ತಲುಪವ ಬಗ್ಗೆ : ಕಲ್ಲದೇವರಪುರ ಜಗಳೂರಿನಿಂದ ಸುಮಾರು 15 ಕಿ ಮೀ ದೂರದಲ್ಲಿ ಹಾಗು ಚಿತ್ರದುರ್ಗದಿಂದ ಸುಮಾರು 27 ಕಿ ಮೀ ದೂರದಲ್ಲಿದೆ. (ಕೂಡ್ಲಗಿ ಮತ್ತು ಕೊಟ್ಟೂರು ಮಾರ್ಗ)

-ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *