ಕರ್ನಾಟಕದ ತಿರುಪತಿ ಮಂಜು ಗುಣಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀ ವೆಂಕಟರಮಣ ಪದ್ಮಾವತಿ ದೇವಸ್ಥಾನ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ಶ್ರೀಮನ್ಮಹಾರಥೋತ್ಸವವು ಡಿಸೆಂಬರ್ 19,2021 ರವಿವಾರದಂದು ಸಂಪನ್ನಗೊಂಡಿತು…
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಊರು. ಶಿರಸಿಯಿಂದ ೨೬ ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ತಿರುಪತಿ ಎಂದೂ ಕರೆಯುತ್ತಾರೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ, ಚಳಿಗಾಲದಲ್ಲಿ ದಟ್ಟವಾದ ಮಂಜು ಮುಸುಕಿರುವುದರಿಂದ ಈ “ಮಂಜುಗುಣಿ” ಎಂದು ಕರೆಯಲಾಗುವುದೆಂದೂ ಹೇಳಲಾಗುತ್ತದೆ.
ಶ್ರೀ ಚಕ್ರತೀರ್ಥ ಕೆರೆ
ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ, ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಪ್ರತಿನಿತ್ಯವೂ ಇಲ್ಲಿ ಉಚಿತ ಅನ್ನ ಸಂತರ್ಪಣೆ ನಡೆಯುತ್ತದೆ.
ಕರ್ನಾಟಕದ ತಿರುಪತಿ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ಪ್ರತಿವರ್ಷ ಸರಿ ಸುಮಾರು ಏಪ್ರಿಲ್ ತಿಂಗಳ ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವವು ಇಲ್ಲಿನ ಬಹುಮುಖ್ಯ ವಾರ್ಷಿಕ ಉತ್ಸವವಾಗಿದೆ. ಅಂದು ಶ್ರೀ ವೆಂಕಟೇಶ ತಿರುಮಲದಿಂದ ಇಲ್ಲಿ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಇದೆ. ಇದಕ್ಕೆ ಒಪ್ಪುವಂತ ಸಂಗತಿ ಎಂದರೆ ಅಂದು ತಿರುಪತಿಯಲ್ಲಿ ಪೂಜಾ ಕಾರ್ಯಕ್ರಮಗಳು ಹಲವು ತಾಸುಗಳ ಕಾಲ ನಡೆಯುವುದಿಲ್ಲ.
ಆದರೆ 2021 ಏಪ್ರಿಲ್ ತಿಂಗಳಲ್ಲಿ ಸರ್ಕಾರದ ನಿಯಮಾವಳಿಯಂತೆ ಲಾಕ್ಡೌನ್ ನಿಂದ ಮುಂದುಡಲ್ಪಟ್ಟ ರಥೋತ್ಸವವು ದೇವಸ್ಥಾನದ ಆಡಳಿತ ಮಂಡಳಿಯ ಅನುಸಾರ ಧಾರ್ಮಿಕ ವಿಧಿ-ವಿಧಾನಗಳಿಗೆ ಸೀಮಿತ ವಾಗಿರುವಂತೆ ನಿಯಮಾವಳಿಗಳನ್ನು ರೂಪಿಸಿ ಸರ್ಕಾರದ ನಿಯಮಾನುಸಾರ ಈ ವರ್ಷದ ರಥೋತ್ಸವವು 2021ನೇ ಡಿಸೆಂಬರ್ 19 , ರವಿವಾರದಂದು ಸಂಪನ್ನಗೊಂಡಿತು.
ಬೆಳಿಗ್ಗೆ ಸುಮಾರು 7-30 ಗಂಟೆಗೆ ಶ್ರೀ ದೇವರ ರಥಾರೋಹಣ ನಡೆಯಿತು, ನಂತರ 8 ಗಂಟೆಗೆ ಶ್ರೀಮನ್ಮಹಾರಥವನ್ನು ಆಗಮಿಸಿದ ಭಕ್ತಾದಿಗಳೆಲ್ಲಾ ರಥಬೀದಿಯಲ್ಲಿ ಭಕ್ತಿಯಿಂದ ಎಳೆದು, ಮತ್ತೆ ರಥದ ನೆಲೆಗೆ ತಲುಪಿಸಿದರು.
ನಂತರ ಹಣ್ಣುಕಾಯಿ ಸೇವೆ,
ರಥದ ಮೇಲೆ ಏರಿ ಶ್ರೀ ದೇವರ ದರ್ಶನ ಪಡೆದು ಇಷ್ಟಾರ್ಥಗಳನ್ನು ಬೇಡಿಕೊಂಡು ಪುನೀತರಾದರು.
-ಶಾಂತಾರಾಮ ಶಿರಸಿ,
ಉತ್ತರ ಕನ್ನಡ..