ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವ ಉಳಿದೀತೇ?

ಈ ‘ನವೆಂಬರ್’ ಬಂತು ಎಂದರೆ ಸಾಕು ಎಲ್ಲಿಲ್ಲದ ಕನ್ನಡ ಅಭಿಮಾನ ಎಲ್ಲರಲ್ಲಿಯೂ ಉಕ್ಕಿ ಹರಿಯುತ್ತದೆ. ಎಲ್ಲಿ ನೋಡಿದರಲ್ಲಿ ಕನ್ನಡದ ಬಾವುಟ, ಕನ್ನಡದ ಕೀರ್ತಿಪತಾಕೆ ರಾರಾಜಿಸಲು ಪ್ರಾರಂಭಿಸುತ್ತದೆ. ಅದೇ ನವೆಂಬರ್ ಮುಗಿದ ನಂತರ ಅದೆಲ್ಲವೂ ಕಬ್ಬಿಣದ ಪೆಟ್ಟಿಗೆ ಸೇರಿ ಅಟ್ಟದ ಮೂಲೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತದೆ. ( ಈ ವರ್ಷಕ್ಕೆ ಒಮ್ಮೆ ಬರುವ ಗಣಪತಿ ಹಬ್ಬದ ಅಲಂಕಾರಿಕ ವಸ್ತುವಿನಂತೆ ಕನ್ನಡ ಆಗಿದೆ ಎಂಬುದು ಶೋಚನೀಯ ಸ್ಥಿತಿ.)

ಕನ್ನಡ ಹೀಗೆಂದಾಕ್ಷಣ ಮೈ – ಮನಸ್ಸೆಲ್ಲಾ ಏನೋ ‘ರೋಮಾಂಚನಗೊಳ್ಳುತ್ತದೆ’. ಮೂರು “ರಾಷ್ಟ್ರಕವಿಗಳನ್ನು” ಹೊಂದಿರುವ, ಎಂಟು “ಜ್ಞಾನಪೀಠವನ್ನು” ಪಡೆದಿರುವ (ಭಾರತದ ಇತರ ಯಾವ ಭಾಷೆಯೂ ಪಡೆಯದಿರುವಷ್ಟು) ‘ಸಂಪದ್ಭರಿತ’ ಭಾಷೆಯೆಂದರೆ ನಮ್ಮ ಕನ್ನಡ. ಇಂತಹ ಕನ್ನಡ ಇಂದು ನಿಧಾನವಾಗಿ ಮೂಲೆ ಗುಂಪಾಗುವತ್ತ ಸರಿಯುತ್ತಿರುವ ಬಗ್ಗೆ ನಮಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಖೇದದ ಸಂಗತಿ.

ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಮೊದಲು ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಅದು ಸಾಧ್ಯವಿಲ್ಲ ಎಂದ ಮೇಲೆ ಕನ್ನಡವನ್ನು ಉಳಿಸುವುದು ಅಸಾಧ್ಯದ ಮಾತು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಎಂಬ ಕೂಗು ಇಂದು ‘ಅರಣ್ಯರೋಧನವಾಗುತ್ತಿದೆ’. ಒಂದೆಡೆ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಎಂದು ಬೊಬ್ಬಿಡುವ ಸರಕಾರ ಪ್ರತಿ ವರ್ಷವೂ ಹಲವಾರು ಕನ್ನಡ ಮಾಧ್ಯಮ ಶಾಲೆಗಳನ್ನು ಮಕ್ಕಳಿಲ್ಲದ ನೆಪವೊಡ್ಡಿ ‘ಮುಚ್ಚುವ’, ಅಥವಾ ‘ವಿಲೀನಗೊಳಿಸುವ’ ಕಾರ್ಯಕ್ಕೆ ಮುಂದಾಗುತ್ತಿರುವ ಕ್ರಮ ನೋಡಿದರೆ ಸರಕಾರ ಮಾಡಲು ಹೊರಟಿರುವುದಾದರೂ ಏನು ಎಂಬ ಚಿಂತನೆ ಮೂಡುತ್ತದೆ?

ದುಂಡಿರಾಜರ ಚುಟುಕೊಂದನು ಈ ಸಂದರ್ಭದಲ್ಲಿ ನೆನೆದರೆ ಸೂಕ್ತವೇನೋ? “ಆಡಳಿತದಲ್ಲಿ ಕನ್ನಡ, ಸುತ್ತೋಲೆಯಲ್ಲಿ ಕನ್ನಡ, ಬೋರ್ಡ್ ಬರಹಗಳಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ ಹೀಗೆ ಎಲ್ಲೆಡೆ ಕನ್ನಡ… ಜಾರಿ ಎನ್ನುವ ಘೋಷಣೆ ಅಂತು ಕನ್ನಡ ಜಾರಿ… ಜಾರಿ… ಜಾರಿ ಹೋಗುತ್ತಿದೆ”. ಬಹುಶಃ ಹಾಸ್ಯಕ್ಕಾಗಿ ಅಂದು ಅವರು ಹೇಳಿದರು ಇಂದು ಕನ್ನಡದ ಪರಿಸ್ಥಿತಿ ಇಂತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಪ್ರತಿ ವರ್ಷವೂ ಕೆಲವಾರು ಕನ್ನಡ ಮಾಧ್ಯಮ ಶಾಲೆಗಳಿಗೆ ‘ಬೀಗಮುದ್ರೆಯನ್ನು’ ಒತ್ತುತ್ತಿರುವ ಸರಕಾರ ಹಲವಾರು ಖಾಸಗಿ ಶಾಲೆಗಳನ್ನು ತೆರೆಯಲು ‘ಪರವಾನಿಗಿ’ ನೀಡುತ್ತಿರುವುದು ಕಂಡರೆ ಕನ್ನಡ ಉಳಿಸಿ ಎಂಬ ಸರಕಾರದ ಕೂಗು “ಮೊಸಳೆ ಕಣ್ಣೀರಿನಂತೆ” ಕಾಣಿಸುತ್ತದೆ.

ಇಲ್ಲಿ ಕೇವಲ ಸರಕಾರದ ಪಾತ್ರ ಮಾತ್ರ ಪ್ರಮುಖವಲ್ಲ. ಜನ ಸಾಮಾನ್ಯರ ‘ಜವಾಬ್ದಾರಿಯೂ’ ಅಷ್ಟೇ ಇದೆ. ಇಂದಿನ ಆಧುನಿಕ ಶಿಕ್ಷಣಕ್ಕೆ ಮಾರು ಹೋಗಿರುವಂತಹ ಪಾಲಕರು ಆಧುನಿಕ ಆಂಗ್ಲ ಮಾಧ್ಯಮ ಶಿಕ್ಷಣದತ್ತ ವಾಲುತ್ತಿದ್ದಾರೆ. ಖಂಡಿತ! ಇದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಆಧುನಿಕ ಯುಗದಲ್ಲಿ ಎಲ್ಲವೂ ಆಂಗ್ಲಮಯವಾಗುತ್ತಿರುವುದು ಅಷ್ಟೇ ಸತ್ಯ! ಆದರೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದರು ಕನ್ನಡವನ್ನು ‘ಪ್ರಥಮ ಭಾಷೆಯಾಗಿ’ ಕಲಿಸಲು ಸಾಧ್ಯವಿದೆ.

ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚಿನ ಎಲ್ಲಾ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ‘ತೃತೀಯ ಭಾಷೆಯಾಗಿ’ ಕಲಿಸಲಾಗುತ್ತಿದೆ. ಅಂತಹ ಶಾಲೆಗಳಿಗೇ ಮಕ್ಕಳನ್ನು ದಾಖಲಿಸುವ ಪಾಲಕರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿಲ್ಲ. ಕೇವಲ ‘ನಾಮಕಾವಸ್ತೆಗೆ’ ಕನ್ನಡ ಕಲಿಯುವ ಮಕ್ಕಳಿಗೆ ಕನ್ನಡ ಭಾಷೆಯ ಹಿರಿಮೆ, ಆಳವಾದ ಜ್ಞಾನ, ವ್ಯಾಕರಣ ಜ್ಞಾನ, ಸಾಹಿತ್ಯ, ಸೌಂದರ್ಯ ಯಾವುದು ದೊರಕದು. ಪ್ರಸಿದ್ಧ ಕವಿಗಳು, ಸಾಹಿತಿಗಳ ಬಗ್ಗೆ ಕನಿಷ್ಠ ಜ್ಞಾನವನ್ನು ಪಡೆಯದ ಮಕ್ಕಳಿಂದ ಮುಂದೆ ಕನ್ನಡ ಸಾಹಿತ್ಯ ರಚನೆ ಸಾಧ್ಯವೇ?

ಹೀಗೆ ಕನ್ನಡದ ಅಸ್ತಿತ್ವವೇ ಅಲುಗಾಡುತ್ತಿರುವಾಗ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಸಾಧ್ಯವೇ? ಕನಿಷ್ಠ ಪಾಲಕರು ತಮ್ಮ ಮಕ್ಕಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವ ಪ್ರಯತ್ನ ಮಾಡಿದರೆ ಉತ್ತಮ. ಇಲ್ಲದಿದ್ದರೆ ಇದುವರೆಗೂ ಕನ್ನಡ ಪಡೆದ ಸ್ಥಾನಮಾನ, ಪ್ರಶಸ್ತಿಗಳಿಗೆ ಸೀಮಿತವಾಗಿ ಬಿಡುತ್ತದೆ. ಮುಂದೆ ಅವುಗಳೆಲ್ಲಾ ‘ಕನ್ನಡಿಯೊಳಗಿನ ಗಂಟೇ’ ಆಗುತ್ತದೆ.

ಜೈ ಕರ್ನಾಟಕ
ಜೈ ಕನ್ನಡಾಂಬೆ

-ಸುಮಾ ಕಿರಣ್

Leave a Reply

Your email address will not be published. Required fields are marked *