ಕನ್ನಡ ನಾಡು ನುಡಿ ಸಂಸ್ಕೃತಿ ಕಟ್ಟುವ ಕೆಲಸ ಪರಿಷತ್ತು, ಸಂಘ ಸಂಸ್ಟೆ, ವೇದಿಕೆ ಗಳಿಗೆ ಗುತ್ತಿಗೆ ನೀಡಿಲ್ಲ

ಕನ್ನಡ ಉತ್ಸವಗಳನ್ನು ನಡೆಸುವ ಉತ್ಸಾಹಿಗಳು ಕನ್ನಡವನ್ನು ಸ್ಥಾಪಿಸುವ ಕಡೆ ಗಮನ ಕೊಡಬೇಕು. ಕನ್ನಡವನ್ನು ಸ್ಥಾಪಿಸುವುದೆಂದರೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ನಮ್ಮ ಕುಲ, ಕನ್ನಡವೇ ನಮ್ಮ ತತ್ವ ಎನ್ನುವಷ್ಟರ ಮಟ್ಟಿಗೆ ಆಚರಣೆಗೆ ತರುವುದು. ಹಿರಿಯ ಸಾಹಿತಿಯೊಬ್ಬರು ಹೇಳಿದ ನೆನಪಿದೆ, “ಕನ್ನಡದಲ್ಲಿ ಕೀರ್ತಿ ಪಡೆಯುವುದು ಸುಲಭ ಆದರೆ ಜೀವನ ನಡೆಸುವುದು ಕಷ್ಟ “ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಅನೇಕರು ಧ್ವನಿ ಎತ್ತುವುದನ್ನು, ಎತ್ತು ತ್ತಿರುವುದನ್ನು ಕೇಳಿದ್ದೇವೆ. ಆದರೆ ಖಾಸಗಿ ಸಂಸ್ಥೆಯ ಶಾಲೆಗಳಿಗೆ ಕನ್ನಡ ಮಾಧ್ಯಮ ಬೇಕಿಲ್ಲ .ಪೋಷಕರಿಗೂ ಆಂಗ್ಲ ಮಾಧ್ಯಮದ ಮೇಲೆ ಒಲವು .ದುರಾದೃಷ್ಟ ಎಂದರೆ ಒಳ್ಳೆಯ ಕನ್ನಡ ಶಾಲೆಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಶಕ್ತಿಯಿಲ್ಲ. ಶಕ್ತಿ ಎನ್ನುವುದಕ್ಕಿಂತಲೂ ಇಚ್ಛಾಶಕ್ತಿ ಇಲ್ಲ. ಕೇವಲ ಘೋಷಣೆಗಳಿಂದ ಮಾತ್ರ ಕನ್ನಡ ಆಡಳಿತ ಅಸಾಧ್ಯ. ಅದಕ್ಕೆ ದೃಢವಾದ ರಾಜಕೀಯ ಮನಸ್ಸು ಬೇಕು.

ಶರವೇಗದಲ್ಲಿ ಬೆಳೆಯುತ್ತಿರುವ ನಮ್ಮ ಸಿಲಿಕಾನ್ ಸಿಟಿಯಲ್ಲಿ ಕನ್ನಡದಲ್ಲಿ ಮಾತನಾಡುವುದು ತಮ್ಮ ಗೌರವಕ್ಕೆ ಕುಂದು ಎಂಬ ಭಾವನೆ ಇತ್ತೀಚಿನ ಯುವ ಕನ್ನಡಿಗರಲ್ಲಿ ಮನೆಮಾಡಿದೆ . ಆ ಭಾವನೆಯನ್ನು ಬುಡಸಮೇತ ಕಿತ್ತೊಗೆದು ಕನ್ನಡದಲ್ಲಿ ಮಾತನಾಡುವುದು ನಮ್ಮ ಜನ್ಮಸಿದ್ಧ ಹಕ್ಕು ಎನ್ನುವುದನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕಿದೆ. ಒಂದು ಭಾಷೆಗೆ ಪ್ರತಿಷ್ಠೆ ಬರುವುದು ಅದರ ಬಳಕೆಯಿಂದ ಮಾತ್ರ ಎನ್ನುವುದು ಸತ್ಯ .ಕನ್ನಡವನ್ನು ಕಾಪಾಡುವ ಕೆಲಸ ಯಾರೋ ಚಳವಳಿದಾರರಿಗೆ , ಪರಿಷತ್ತುಗಳಿಗೆ , ಹಾಗೂ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟವರಂತೆ ಶ್ರೀ ಸಾಮಾನ್ಯರಾದ ನಾವು ಕೈಕಟ್ಟಿ ಕೂರದೆ ತಮ್ಮ ತಮ್ಮ ಪಾಲಿನ ಕೆಲಸ ನಿರ್ವಹಿಸಬೇಕು.

“ಕನ್ನಡ ಎಂಬುದು ವ್ಯಕ್ತಿಗಳಿಗಿಂತ ದೊಡ್ಡದು ಎಂಬುದನ್ನು ಮರೆಯಬಾರದು”.

ರಾಜ್ಯದ ರಾಜಧಾನಿಯಲ್ಲಿ ಕ್ರಮೇಣ ಅನ್ಯ ಭಾಷಿಗರ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ನಮಗೆ ಭಾಷೆಗಳ ಸಂಘರ್ಷ ಬೇಕಿಲ್ಲವಾದರು, ಇಲ್ಲಿನ ಗಾಳಿ, ನೀರು, ಹಾಗೂ ಆಹಾರವನ್ನು ಸೇವಿ ತ್ತಿರುವವರಿಗೆ ಕನ್ನಡವು ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ.

ಕನ್ನಡಿಗರಾದ ನಾವು ವಿಶಾಲ ಮನೋಭಾವದವರು, ಆದರೆ ನೆರೆ ರಾಜ್ಯದವರ ಭಾಷಾಭಿಮಾನವನ್ನು ನೋಡಿ ಕಲಿಯಬೇಕಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಇನ್ನು ಹಲವಾರು ರಾಜ್ಯಗಳಲ್ಲಿ ಅವರ ಭಾಷೆಗೇ ಪ್ರಥಮ ಆದ್ಯತೆ. ಹೊರ ರಾಜ್ಯದವರು ಪ್ರವಾಸಕ್ಕೋ ಅಥವಾ ಬೇರಾವುದೋ ಉದ್ದೇಶದಿಂದ ಅಲ್ಲಿಗೇ ಹೋದರೆ ಅಲ್ಲಿಯ ಭಾಷೆಗೆ ಹೊಂದಿಕೊಂಡು ಒಡನಾಡಬೇಕೆ ಹೊರತು ಅವರು ನಮ್ಮ ಭಾಷೆಗೆ ಹೊಂದಿಕೊಳ್ಳುವುದಿಲ್ಲ. ಈ ರೀತಿಯ ಭಾಷಾಭಿಮಾನ ನಮ್ಮಲ್ಲೂ ಬೆಳೆಯಬೇಕು.

ಭಾಷೆ, ಗಡಿಗಳ ಸಂಘರ್ಷದ ಸಂದರ್ಭದಲ್ಲಿ ಅನ್ಯ ಭಾಷಿಗರು ಅಥವಾ ಜಾತಿಗಳ ಮೇಲೆ ಮುಗಿಬಿದ್ದಾಗ ಕನ್ನಡಿಗರನ್ನು ಪರಭಾಷಿಗಳು ನಿಂದಿಸಿದ ಉದಾಹರಣೆಗಳಿವೆ. ನಮಗೆ ಕನ್ನಡ ಬೇಕು ಎಂದರೆ ಬೇರೆ ಭಾಷೆಗಳು ಬೇಡ ಎಂದಲ್ಲ ,ನಮ್ಮ ತಾಯಿಯನ್ನು ನಾವು ಪ್ರೀತಿಸುತ್ತೇವೆ ಎಂದರೆ ನೆರೆಹೊರೆಯವರನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ. ಹಾಗೊಂದು ವೇಳೆ ಹೇಳಿದರೆ ಮಾನವ ಸಂಬಂಧಗಳ ಅರ್ಥ ಅವರಿಗೆ ಗೊತ್ತಿಲ್ಲ. ಕನ್ನಡ ನಮ್ಮ ಹೃದಯವು ಹೌದು, ಚರ್ಮವು ಹೌದು. ಅದಿಲ್ಲದೆ ನಾವು ಬಾಳಲಾರೆವು. “ಮನೆಗಳು ಕೂಡಿದರೆ ಊರೇ ಹೊರತು ಊರಿನಿಂದ ಮನೆಗಳು ಉದ್ಭವಿಸುವುದಿಲ್ಲ”. ಒಳ್ಳೆಯ ಕನ್ನಡಿಗರಾದರೆ ಮಾತ್ರ ಒಳ್ಳೆಯ ಭಾರತೀಯನಾಗಬಲ್ಲ. ಕನ್ನಡದ ಹಿತವನ್ನು ಕಾಪಾಡುವುದು ಕನ್ನಡ ಪತ್ರಿಕೆಗಳ ನೈತಿಕ ಜವಾಬ್ದಾರಿಯೂ ಹೌದು. ಕಾರಣ ಕನ್ನಡಿಗರಲ್ಲಿ ಸಾಧನೆ ಹಾಗೂ ಸಾಮರ್ಥ್ಯದ ಕೊರತೆ ಇಲ್ಲ, ಇರುವುದು ಪ್ರಚಾರದ ಅಭಾವ .
ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಜಿಲ್ಲೆಗಳು, 29406 ಹಳ್ಳಿಗಳಿವೆ. ತೀರಾ ಸಣ್ಣ ಹಳ್ಳಿಗಳನ್ನು ಹೊರತು ಪಡಿಸಿ ಕನಿಷ್ಟ 29 ಸಾವಿರ ಹಳ್ಳಿಗಳಲ್ಲಿ ಮದ್ಯದಂಗಡಿಗಳಿವೆ. ಅವುಗಳಿಗೆ ನಮ್ಮ ಘನ ಸರ್ಕಾರ ಅನುಮತಿ ನೀಡಿದೆ. ಆದರೆ ಕನ್ನಡ ನಾಡು ನುಡಿಯ ಕುರಿತು ಮಾಹಿತಿ ಒದಗಿಸುವ ಗ್ರಂಥಾಲಯಗಳಿಲ್ಲದಿರುವುದು ನಿಜಕ್ಕೂ ವಿಷಾದನೀಯ.

ಕನಿಷ್ಠ ಈ ರಾಜ್ಯೋತ್ಸವದ ಸಂದರ್ಭದಲ್ಲಾದರೂ ಊರಿಗೊಂದು ಗ್ರಂಥಾಲಯವನ್ನು ಸ್ಥಾಪಿಸುವ ಮನಸ್ಸು ಮಾಡೋಣ ಕನ್ನಡಕ್ಕೆ ಎಂಟು ಜ್ಞಾನಪೀಠಗಳನ್ನು ತಂದುಕೊಟ್ಟ ದಿಗ್ಗಜರ ಸ್ಮರಣೆಯಲ್ಲಿ ಈ ಕೈಂಕರ್ಯಕ್ಕೆ ಮುಂದಾಗೋಣ .ಪಂಚಾಯಿತಿಗಳಲ್ಲೊ, ಕಾರ್ಯಾಲಯಗಳಲ್ಲೊ ಅಥವಾ ಉಳ್ಳವರ ಮನೆಗಳಲ್ಲೊ ಒಂದು ಕೊಠಡಿಯಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತು ಹೆಮ್ಮೆ ಮೂಡಿಸುವ ಪುಸ್ತಕಗಳನ್ನು ಜನತೆಗೆ ಸುಲಭವಾಗಿ ಲಭ್ಯವಾಗುವಂತೆ ಮಾಡೋಣ .”ದುಡಿಯುವ ಕೈಗಳಿಗೆ ಉದ್ಯೋಗ ನೀಡಿದಾಗ ಮಾತ್ರ ಜೀವನ ನೆಮ್ಮದಿಯಿಂದ ನಡೆಸಲು ಸಾಧ್ಯ”. ಹಾಗಾಗಿ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟಿರುವ ಬೃಹತ್ ಕಂಪನಿಗಳಲ್ಲಿ ಆಂಗ್ಲ ಭಾಷಿಗರಿಗೆ ನೀಡುತ್ತಿರುವ ಆದ್ಯತೆ ಮತ್ತು ಮೀಸಲಾತಿ ಮೊದಲು ಕನ್ನಡಿಗರಿಗೆ ನೀಡಬೇಕಿದೆ. ಪ್ರತಿಭಾವಂತರಿಗೆ ನೀಡಲು ಅಡ್ಡಿ ಇಲ್ಲವಾದರೂ ಅವರು ಕನ್ನಡಿಗರಾಗಿರಬೇಕು. ಜಾತಿ ಆಧಾರಿತ ಮೀಸಲಾತಿಗಿಂತ ಈ ರೀತಿಯ ಕಲ್ಪನೆ, ಆಲೋಚನೆ ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರಕುವಲ್ಲಿ ಸಹಾಯಕವಾಗಬಹುದು .

ಕನ್ನಡಿಗರು ಸಾಹಿತ್ಯಿಕವಾಗಿ ಸದಾ ಮುಂದು ಎನ್ನುವುದನ್ನು ನಾಡಿನ ಪ್ರಸಿದ್ಧ ಲೇಖಕರು ,ಕವಿಗಳು ಹಾಗೂ ವಿಮರ್ಶಕರು ಈಗಾಗಲೇ ಸಾಬೀತು ಮಾಡಿದ್ದಾರೆ.ಆದರೆ ಕನ್ನಡಿಗರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶ್ಯಕ್ಷಣಿಕವಾಗಿ, ಔದ್ಯೋಗಿಕವಾಗಿ ಯು ಇನ್ನಷ್ಟು ಅಭವೃದ್ಧಿ ಹೊಂಡಬೇಕಿದೆ. ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕಿದೆ. ಹೆಚ್ಚಿನ ಅವಕಾಶಗಳನ್ನು ಬಾಚಿಕೊಳ್ಳಬೇಕಿದೆ.

✍ಸುನಿತಾಪ್ರಕಾಶ್

Leave a Reply

Your email address will not be published. Required fields are marked *