ಕನ್ನಡದ ಮೊದಲ ಸ್ವಾತಂತ್ರ್ಯದ ಮಹಿಳಾ ಕಿಡಿ – ಕಿತ್ತೂರು ರಾಣಿ ಚನ್ನಮ್ಮ

( 23 ನೇ ಅಕ್ಟೋಬರ್ ರಾಣಿ ಚನ್ನಮ್ಮನ ಜಯಂತಿ )

               ಸ್ವಾತಂತ್ರ ಪೂರ್ವ ಭಾರತದ ಒಂದು ಪುಟ್ಟ ಸಂಸ್ಥಾನ ಕಿತ್ತೂರು ಸ್ವಾತಂತ್ರ ರಾಜ್ಯವಾಗಿತ್ತು. ಈ ಸಂಸ್ಥಾನದ ಮೇಲೆ ರಣಹೇಡಿ, ಕುಠಿಲ ಬ್ರಿಟಿಷ್ ಕಂಪನಿ ಸರಕಾರದ ಕೆಂಗಣ್ಣು ಬಿದ್ದಿತು. ಈ ರಾಜ್ಯ ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿರುವ ಆಂಗ್ಲರಿಗೆ ಬಿಸಿಮುಟ್ಟಿಸಿದ್ದು ಕನ್ನಡ ಸ್ವಾತಂತ್ರ್ಯ ಕ್ರಾಂತಿ ವೀರ ಮಹಿಳೆ, ಕೆಂಪು ಮೂತಿಗಳಿಗೆ ಭಯ ಹುಟ್ಟಿಸಿದವಳೆ ಕ್ರಾಂತಿ ಮಣಿ ಕಿತ್ತೂರು ರಾಣಿ ಚನ್ನಮ್ಮ. ದತ್ತು ಮಕ್ಕಳಿಗೆ ರಾಜ್ಯವಾಳುವ ಹಕ್ಕಿಲ್ಲಾ ಎಂದು ಕಾಯ್ದೆ ಮಾಡಿ ಸ್ವತಂತ್ರ ಸಂಸ್ಥಾನಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಬ್ರಿಟಿಷರಿಗೆ ವಿರುದ್ಧವಾಗಿ ನಿಂತಳು. ಕಪ್ಪ ಕೊಡಬೇಕು ಇಲ್ಲಾ ಸಂಸ್ಥಾನ ಸರಕಾರಕ್ಕೆ ಅಧಿನಪಡಿಸಬೇಕು. ಇಲ್ಲಾ ಬ್ರಿಟಿಷ್ ಷರತ್ತಿಗೆ ಒಳಪಟ್ಟು ರಾಜ್ಯ ಅವರು ಹೇಳಿದಂತೆ ನಡೆಯಬೇಕು. ಇದನ್ನು ಚನ್ನಮ್ಮ ಸಹಿಸದೆ  “ನಮ್ಮ ರಾಜ್ಯದ ಮೇಲೆ ನಿಮಗೇಕೆ ಅಧಿಕಾರ  ಕಪ್ಪ ಕೊಡಬೇಕಾ ಕಪ್ಪ ಮೋಡ ಸುರಿಯುತ್ತದ್ದೆ ಭೂಮಿ ಬೆಳೆಯುತ್ತದೆ. ನಾವು ಬೆವರು ಹರಿಸಿ ದುಡಿಯುತ್ತೇವೆ. ನಿಮಗೇಕೆ ಕೊಡಬೇಕು ಕಪ್ಪ” ಎಂದು ಕ್ರಾಂತಿ ಧ್ವನಿಯಲ್ಲಿ ಗುಡುಗಿ ಬ್ರಿಟಿಷರಿಗೆ ಭಯ ಹುಟ್ಟಿಸಿದಳು.

ಜೀವನ

               ಕಿತ್ತೂರು ರಾಣಿ ಚನ್ನಮ್ಮ ಅನೇಕ ಸ್ವಾತಂತ್ರ್ಯ ಸೇನಾನಿಗಳಲ್ಲೇ ಪ್ರಮುಖ ಮತ್ತು ಒಬ್ಬರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ 23 ನೇ ಅಕ್ಟೋಬರ್ 1778 ರಲ್ಲಿ ಜನಸಿದರು. ತಂದೆ ಕಾಕತಿಯ ದೇಸಾಯಿ ಧೂಳಪ್ಪ ಗೌಡರಾಗಿದ್ದರು. ರಾಣಿ ಚನ್ನಮ್ಮ ಬಾಲ್ಯದಲ್ಲಿ ದೇಶಾಭಿಮಾನಿ, ರಾಜನಿಷ್ಠೆ ಮತ್ತು ಜನರ ಧ್ವನಿಯಾಗಿ ಪ್ರಜಾ ಕಲ್ಯಾಣಕ್ಕಾಗಿ ಶ್ರಮಿಸುವ ವ್ಯಕ್ತಿತ್ವ ಹೊಂದಿದರು. ಬಿಲ್ಲುಗಾರಿಕೆ, ಕತ್ತೆವರಸೆ, ಕುದರೆಸವಾರಿ ಇತ್ಯಾದಿ ಯುದ್ಧ ತಂತ್ರದಲ್ಲಿ ಕರಗತರಾಗಿದ್ದರು. ಕಿತ್ತೂರಿನ ದೇಸಾಯಿಗಳಲ್ಲೇ ಪ್ರಸಿದ್ಧ ಕುಟುಂಬ. ದೇಸಾಯಿ ಮನೆತನದ ಮಲ್ಲಸರ್ಜನ ಕಿರಿಯ ಪ್ರೀತಿಯ ಪತ್ನಿಯಾಗಿದ್ದರು. ಇವರ ಪತಿಯ ಅಕಾಲಿಕ ಮರಣದಿಂದ ಶಿವಲಿಂಗರುದ್ರ ಸರ್ಜನನ್ನು ಪಟ್ಟ ಕಟ್ಟಲಾಯಿತು. ಇವನಿಗೆ ಮಕ್ಕಳಾಗಲಿಲ್ಲವೆಂದು ಮರಣ ಪೂರ್ಣದಲ್ಲಿ ಶಿವಲಿಂಗರುದ್ರ ತನ್ನ ಮಕ್ಕಳಿಲ್ಲ ಎನ್ನುವ ಕೊರಗು ನೀಗಿಸಲು ಮತ್ತು ರಾಜ್ಯ ನಡೆಸಿಕೊಂಡು ಹೋಗಲು ಮಾಸ್ತಮರಡಿಯ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ನಂತರ ಶಿವಲಿಂಗರುದ್ರನ ಹೆಂಡತಿ ವೀರಮ್ಮಳಿಗೆ ಪಟ್ಟ ಕಟ್ಟಲಾಯಿತು. ಇದನ್ನು ಕಂಪನಿ ಸರಕಾರ ವಿರೋಧಿಸಿ ಕಿತ್ತೂರು ವಶಪಡಿಸಿಕೊಳ್ಳಲು ಬಂದಿತು. ಆಗ ಬ್ರಿಟಿಷರಿಗೆ ಎದೆ ತಟ್ಟಿ ನಿಂತವಳೇ ವೀರ ರಾಣಿ ಕಿತ್ತೂರು ಚನ್ನಮ್ಮ. ರಾಜನಿಷ್ಠೆ ಮತ್ತು ದೇಶಾಭಿಮಾನಿಗಳಾದ ಸಂಗೊಳ್ಳಿ ರಾಯಣ್ಣ ಚನ್ನಮ್ಮನ ಬಲಗೈ ಬಂಟನಾಗಿ ನಿಂತು ರಾಜ್ಯ ರಕ್ಷಿಸಿದ. ಗುರುಸಿದ್ದಪ್ಪ, ಹಿಮ್ಮತಸಿಂಗ್, ನರಸಿಂಹರಾವ, ಗುರುಪುತ್ರ ಇತ್ಯಾದಿಯವರು ಚನ್ನಮ್ಮನ ಪರಮಾಪ್ತ ರಾಜ ಭಕ್ತರು ಮತ್ತು ಬೆಂಬಲಿಗರಾಗಿದ್ದರು.

ಕಿತ್ತೂರು ರಣಾಂಗಣದಲ್ಲಿ ಚನ್ನಮ್ಮನ ವೀರಾವೇಶ

          ದತ್ತು ಪುತ್ರ ತೆಗೆದುಕೊಂಡಿದ್ದನ್ನು ತಡೆಯುವದಕ್ಕಾಗಿ 13 ನೇ ಸಪ್ಟೆಂಬರ್ 1824 ರಂದು ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ದತ್ತು ಪ್ರಕ್ರಿಯೆ ತಿರಸ್ಕರಿಸುತ್ತಾನೆ. ಆಂಗ್ಲ ಕಂಪನಿ ಸರಕಾರ ತಾತ್ಕಾಲಿಕವಾಗಿ ಆಡಳಿತ ನೋಡಿಕೊಳ್ಳಲು ಮಲ್ಲಪ್ಪ ಶೆಟ್ಟಿ ಹಾಗೂ ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡಿ ತಮ್ಮ ಪರಮಾಪ್ತರಿಗೆ ಅಧಿಕಾರ ನೀಡಿ ಬಂಡವಾಳ ಕೊಠಡಿಗೆ ಬೀಗ ಹಾಕಿ ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಾರೆ.

              ಬ್ರಿಟಿಷರ ಕುತಂತ್ರ ಅರಿತು ರಣ ಹೇಡಿ ಆಂಗ್ಲರನ್ನು ಮಣಿಸಲು ಶಿವಲಿಂಗರುದ್ರನ ಮಲತಾಯಿ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರಿಗೆ ಹೆದರದೆ ರಣರಂಗದಲ್ಲಿ ಉತ್ತರ ನೀಡಲು ನಿರ್ಧರಿಸುತ್ತಾಳೆ. ಇವರ ಕುಠಿಲತೆ ಮತ್ತು ಸಂಭಾವ್ಯ ಅಪಾಯ ಅರಿತು ಬ್ರಿಟಿಷ್ ಅಧಿಕಾರಿಗಳಾದ ಮನ್ರೋಲಿ, ಥ್ಯಾಕರೆ ಮತ್ತು ಚಾಪ್ಲಿನನಿಗೆ ಸಂಧಾನಕ್ಕೆ ಕರೆ ಕಳಿಸುತ್ತಾಳೆ. ಮತ್ತು ರಾಜ್ಯ ರಕ್ಷಣೆಯ ದೂರ ದೃಷ್ಟಿಯಿಂದ ಕೊಲ್ಲಾಪುರ ಮೊದಲಾದ ಸಂಸ್ಥಾನಗಳಿಗೆ ಸಹಾಯ ಕೋರಿ ಪತ್ರ ಬರೆಯುತ್ತಾಳೆ.

    ಸಂಧಾನದ ನೆಪ ಒಡ್ಡಿ ಥ್ಯಾಕರೆ ಹಿಂದಿನಿಂದ ಮೋಸ ಮಾಡಿ ಕಿತ್ತೂರಿನ ಮೇಲೆ ದಾಳಿ ಮಾಡಿ ತೋಪುಗಳನ್ನು ಹಾರಿಸಲು ಬ್ರಿಟಿಷ್ ಸೈನಿಕರಿಗೆ ಆದೇಶ ನೀಡಿದ. ಇದನ್ನು ಅರಿತ ಕನ್ನಡ ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಾಳೆ. ರಣರಂಗದಲ್ಲಿ ಕೆಚ್ಚದೆಯಿಂದ ಹೋರಾಡುತ್ತಾರೆ. ಸಂಗೊಳ್ಳಿ ರಾಯಣ್ಣದ ಖಡ್ಗದ ಹೊಡೆತಕ್ಕೆ ಬ್ರಿಟಿಷ್ ಸೈನಿಕರ ರುಂಡ ಮುಂಡ ಕತ್ತರಿಸಿ ಅಂಗಾಂಗಗಳು ಬೇರ್ಪಡುತ್ತಿದ್ದವು. ಅಮಟೂರು ಬಾಳಪ್ಪನ ಬ್ರಿಟಿಷರನ್ನು ಸಾಯಿಸಲು ಬಾಯಿ ತೆಗೆದು ಹೆಬ್ಬುಲಿಯಂತೆ ಘರ್ಜಿಸುತಿತ್ತು. ಅನೇಕ ರಾಜ್ಯ ನಿಷ್ಠಾವಂತರ ಕೆಚ್ಚದೆಯ ಈಟಿ, ಕತ್ತೆಗಳು ಬ್ರಿಟಿಷರ ಹೆಣದಿಂದ ನೆಲ ರಕ್ತದಿಂದ ನೆನೆದು ಹೋಗಿತ್ತು.

                    ಚನ್ನಮ್ಮನ ಖಡ್ಗ ಬ್ರಿಟಿಷ್ ದಂಡನಾಯಕರ, ಸೈನಿಕರ, ಸೈನ್ಯಾಧಿಕಾರಿಗಳ ತಲೆ ಕತ್ತರಿಸುತ್ತಿದ್ದವು. ದೇಶ ಭಕ್ತರ ಒಗ್ಗಟ್ಟಿನ ಬಲ ದೈತ್ಯ ಕಂಪನಿ ಬ್ರಿಟಿಷರನ್ನೇ ತಬ್ಬಿಬ್ಬುಗೊಳಿಸಿತ್ತು. ಚನ್ನಮ್ಮನ ರಣ ತಂತ್ರ, ಯುದ್ಧ ನೀತಿ ಬ್ರಿಟಿಷ್ ಸರಕಾರಕ್ಕೆ ಸೋಲನ್ನುಂಟು ಮಾಡಿತು. ಧಾರವಾಡದ ಕಲೆಕ್ಟರ್ ಥ್ಯಾಕರೆ ಯುದ್ಧಲ್ಲಿ ಗುಂಡಿಗೆ ಬಲಿಯಾದ. ಆಂಗ್ಲ ಸೈನ್ಯಾಧಿಕಾರಿಗಳಾದ ಸ್ಟೀವನ್ಸನ್, ಈಲಿಯಟ್ ಮತ್ತು ದೇಶ ದ್ರೋಹಿ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಹತರಾದರು. ಆದ್ದರಿಂದ ಈ ದಿನವನ್ನು ಜಯದ ನೆನಪಿಗಾಗಿ “ಕಿತ್ತೂರು ಉತ್ಸವ” ಅಂತಾ ಇಂದಿಗೂ ಆಚರಿಸಲಾಗುತ್ತಿದೆ.                ಈ ಸೋಲು ಬ್ರಿಟಿಷರಿಗೆ ನುಂಗಲಾರದ ಮತ್ತು ಅರಗಿಸಲಾಯಿತು. ದೊಡ್ಡ ಸೇನೆಯೊಂದಿಗೆ ಕಿತ್ತೂರು ಮೇಲೆ ದಾಳಿ ಮಾಡಿ ಮದ್ದಿನ ಕೋಣೆಗೆ ದೇಶಿಯ ಕೆಲವು ದ್ರೋಹಿಗಳಿಂದ ನೀರು ತುಂಬಿಸಿ ಮದ್ದು ಹಾರದ ಹಾಗೆ ಮಾಡಿ ಕುತಂತ್ರದಿಂದ ಚಿಕ್ಕ ರಾಜ್ಯದ ಮೇಲೆ ದೊಡ್ಡ ಸೇನೆ ನುಗ್ಗಿಸಿ ಮೋಸದಿಂದ ಕಿತ್ತೂರ ಮೇಲೆ ದಾಳಿ ಮಾಡಿದರು. ಮಾಡು ಮಡಿ ತತ್ತ್ವದಲ್ಲಿ ಹೋರಾಡುತ್ತಾ ಅನೇಕ ಸ್ವಾತಂತ್ರ್ಯ ವೀರ ಯೋಧರು ಕಿತ್ತೂರು ಉಳಿಸಲು ಆಂಗ್ಲರ ವಿರುದ್ಧ ಸೆಣಸುತ್ತಾ ಪ್ರಾಣಾರ್ಪಣೆ ಮಾಡಿದರು. ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಚನ್ನಮ್ಮನನ್ನು ಉಳಿಸಲು ಸರ್ವ ಪ್ರಯತ್ನ ಮಾಡಿದರು ಕಿತ್ತೂರು ಸೋಲುತ್ತದೆ. ಚನ್ನಮ್ಮನ ಬಂಧನವಾಯಿತು ಮತ್ತು ಸೊಸೆಯಂದಿರು ಜೈಲಿಗೆ ಹೋದರು. ಚನ್ನಮ್ಮನನ್ನು ಬಿಡಿಸಲು ಅನೇಕ ಬಾರಿ ದೇಶ ಭಕ್ತರು ಪ್ರಯತ್ನಿಸಿ ವಿಫಲವಾಗಿ ಅನೇಕರು ಹುತಾತ್ಮರಾದರು. 2 ನೇ ಫೆಬ್ರವರಿ 1829 ರಲ್ಲಿ ಬೈಲುಹೊಂಗಲದಲ್ಲಿ ಚನ್ನಮ್ಮ ವಜ್ರವನ್ನು ನುಂಗಿ ಮರಣ ಹೊಂದಿದಳು. ಕೆಲವು ಇತಿಹಾಸಕಾರರು ಬ್ರಿಟಿಷರೆ ಹತ್ಯೆ ಮಾಡಿದ್ದಾರೆ ಅಂತಾ ವಾದವಿದೆ. ಇಂತಹ ಮಹಾ ಕ್ರಾಂತಿ ರಾಣಿ ಚನ್ನಮ್ಮ ಸ್ವಾತಂತ್ರ್ಯದ ಕನ್ನಡ ರತ್ನವಾಗಿದೆ. 


ಲೇಖಕರು:- ಶರೀಫ ಗಂಗಪ್ಪ ಚಿಗಳ್ಳಿ ( ಸಾಹಿತಿ)
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ- 580024

Leave a Reply

Your email address will not be published. Required fields are marked *