ಓಟಿಗಾಗಿ ಕೊಡುವ ನೋಟನ್ನು ಬೇಡ ಎನ್ನಬೇಡಿ…
ತಮಗೇ ಮತಹಾಕಿ ಎಂದು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಣದ ಆಮಿಷ ಒಡ್ಡುವುದು ಇಂದು ನಿನ್ನೆಯದಲ್ಲ.ದಶಕಗಳ ಹಿಂದೆ ನೂರಿನ್ನೂರು ರೂಪಾಯಿಗಳಿಗೆ ಸೀಮಿತವಾಗಿದ್ದ ಈ “ಓಟಿಗಾಗಿ ನೋಟು” ಈಗ 1000 ರೂ ತನಕ ಎಂದು ಕೇಳಿದ್ದೇನೆ.ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಇದು 2 ರಿಂದ 3 ಸಾವಿರ ರೂ ತನಕವೂ ಇದೆಯಂತೆ.ಹೀಗಿರುವಾಗ ನನ್ನ ಮನವಿ ಇಷ್ಟೆ ,..ದಯವಿಟ್ಟು ಯಾವುದೆ ಅಭ್ಯರ್ಥಿ ಹಣ ನೀಡಿದರೂ ಬೇಡ ಎನ್ನಬೇಡಿ..
ಹೌದು,.ತಪ್ಪದೆ ಈ ದುಡ್ಡು ಪಡೆದುಕೊಳ್ಳಿ.ಆದರೆ ಮತವನ್ನು ಮಾತ್ರ ವಿವೇಚನೆಯಿಂದ,ದೇಶದ ಹಿತದೃಷ್ಟಿಯಿಂದ ಸೂಕ್ತ ಅಭ್ಯರ್ಥಿಗೆ ಹಾಕಿ ಬನ್ನಿ.
ನಮ್ಮ ಆಸ್ಪತ್ರೆ ಸಿಬ್ಬಂದಿ ಜೊತೆ ಮಧ್ಯಾಹ್ನ ಊಟಕ್ಕೆ ಕುಳಿತಾಗ ಇದ್ದಕ್ಕಿದ್ದಂತೆ ಚುನಾವಣಾ ವಿಷಯ ಚರ್ಚೆಗೆ ಬಂತು.ನಿತ್ಯ ರೋಗಿಗಳು, ತಪಾಸಣೆ,ಚಿಕಿತ್ಸೆ, ಎಮರ್ಜೆನ್ಸಿ, ಹೆರಿಗೆ…ಹೀಗೆ ಅದೆ ಜಂಜಡದಲ್ಲಿ ಇರುವ ನಮಗೆ ಇದ್ದಕ್ಕಿದ್ದಂತೆ ಚರ್ಚೆಗೆ ಬಂದ ಚುನಾವಣಾ ವಿಷಯದಲ್ಲಿ ಒಬ್ಬೊಬ್ಬರ ಅಭಿಪ್ರಾಯಗಳು ಹೊಸ ಆಲೋಚನೆ ಹುಟ್ಟು ಹಾಕುವಂತಿದ್ದವು.
ಸಾವಧಾನವಾಗಿ ಆಲೋಚಿಸಿದಾಗ ನಮಗೆ “ಹೌದು”ಎನ್ನಿಸಿದ ವಿಷಯವೆ ಓಟಿಗಾಗಿ ಕೊಡುವ ನೋಟನ್ನು ಎಲ್ಲರೂ ಸ್ವೀಕರಿಸಬೇಕು ಎಂಬುದು.
ಏನು ಹೀಗೆ ಹೇಳುತ್ತಿರುವರು ಎಂದುಕೊಳ್ಳುತ್ತೀರಾ?..ಆತಂಕ ಬೇಡ ಮುಂದಿನ ಸಾಲುಗನ್ನು ನೋಡಿ.
ಓಟಿಗಾಗಿ ಕೊಡುವರಲ್ಲ ನೋಟನ್ನು..ಇದನ್ನು ಯಾರು ಬೆವರು ಸುರಿಸಿ ದುಡಿದದ್ದಲ್ಲ. ನಿಯತ್ತಿನ ಹಣ ಅಲ್ಲವೇ ಅಲ್ಲ.ಕಳ್ಳ ಮಾರ್ಗದಿಂದ ಗಳಿಸಿರುವ(ದೋಚಿರುವ ಎಂಬುದು ಸೂಕ್ತ)ದುಡ್ಡಿದು.
ಜನರ ನಡುವೆ ಈ ಹಣ ಹಂಚಿಹೋಗಲಿ.”ಪಾಪದ ಹಣಕ್ಕೆ ಪಾಲುದಾರರಾಗಬೇಕೆ?”ಎಂಬ ಮನೋಸ್ಥಿತಿ ಬೇಡ.ಕಾರಣ ಹೇಳುವೆ.ಆದರೆ ಯಾವುದೇ ಕಾರಣಕ್ಕೂ ಹಣ ಬೇಡ ಎನ್ನಬೇಡಿ.
ಸೂಕ್ತ ಅಭ್ಯರ್ಥಿಗೆ ಮತಚಲಾಯಿಸಿ ಬನ್ನಿ.ಬಂದ ತಕ್ಷಣವೇ ಮಾಡಬೇಕಾದ ಮೊದಲ ಕೆಲಸ ಎಂದರೆ ಓಟಿಗಾಗಿ ಪಡೆದ ನೋಟನ್ನು ಈ ಕೆಲಕಾಣಿಸಿದ ರೀತಿಯಲ್ಲಿ ಯಾವುದು ಅನುಕೂಲವೋ ಹಾಗೆ ಮಾಡಿಬಿಡಿ.
- ದೇಶದ ಯೋಧರ ಕಲ್ಯಾಣ ನಿಧಿಗೆ ಅರ್ಪಿಸಿ.
- ನಿಮ್ಮೂರಲ್ಲಿ ಇರಬಹುದಾದ ಹಾಗೂ ನಿಸ್ವಾರ್ಥ ಸೇವೆಯಲ್ಲಿ ನಡೆಯುತ್ತಿರುವ ಅನಾಥಾಲಯಕ್ಕೆ ಅಥವಾ ವೃದ್ಧಾಶ್ರಮಕ್ಕೆ ಕೊಡಿ.
- ದೇವರ ಹುಂಡಿಗೆ ಮಾತ್ರ ಹಾಕಬೇಡಿ ಏಕೆಂದರೆ ದೇವರಿಗೆ ನೀಡುವಷ್ಟು ನಾವೇನೂ ಶ್ರೀಮಂತರಲ್ಲ .ಬದಲಾಗಿ
ದೇವಸ್ಥಾನದ ಎದುರು ಕೂತು ಭಿಕ್ಷೆ ಬೇಡುವ ವೃದ್ಧರಿಗೆ ಅಥವಾ ಮಕ್ಕಳಿಗೆ ನೀಡಿ.- ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಕೊಡಿ.
- ಚಿಕಿತ್ಸೆ ಪಡೆಯಲು ಹಣಕಾಸಿನ ಸಹಾಯಕ್ಕೆ ಗೋಗರಿಯುತ್ತಿರುವ ಬಡ ರೋಗಿಗಳಿಗೆ ಕೊಡಿ.ಓದಬೇಕು ಎಂಬ ಮನಸಿದ್ದು ಹಣಕಾಸಿನ ಅನಿವಾರ್ಯತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಕೊಟ್ಟು ..ಅವರ ಮುಖದಲ್ಲಿ ಮೂಡುವ ಸಂತಸವನ್ನೊಮ್ಮೆ ನೋಡಿ.
- ಜಾತಿ,ಧರ್ಮದ ಎಲ್ಲೆ ಮೀರಿ ನಮ್ಮಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಅಥವಾ ಯಾವುದಾದರು ಟ್ರಸ್ಟ್ ಗಳಿಗೆ ನೀಡಿ.
ಮೇಲ್ಕಾಣಿಸಿದ ರೀತಿಯಲ್ಲಿ ನೀವು ನೆರವು ನೀಡುವಾಗ, ಇದು ಕಡಿಮೆ ಹಣ ಎಂಬ ಕೀಳರಿಮೆ ಬೇಡ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ನೂರು ನೂರು ರೂಗಳೇ ಲಕ್ಷ, ಕೋಟಿ ಆಗುವುದು. ವೋಟಿಗಾಗಿ ಪಡೆದ ನೋಟು ‘ಪಾಪದ ಹಣ’ ಎಂಬುದಕ್ಕೆ ಇದು ಪ್ರಾಯಶ್ಚಿತ್ತವು ಹೌದು. ಒಂದಂತೂ ನಿಜ, ಹಣವನ್ನು ಪಡೆಯದೆ ಇರುವುದಕ್ಕಿಂತ ಅದನ್ನು ಪಡೆದು ಮೇಲಿನ ರೀತಿಯಲ್ಲಿ ನಡೆದುಕೊಂಡಾಗ ದೇವರು ಮೆಚ್ಚುವನಲ್ಲವೇ?
ಇದು ನಮ್ಮಗಳ ಬಿಡುವಿನ ಊಟದ ವೇಳೆಯಲ್ಲಿ ಚರ್ಚೆಯ ವಿಷಯವಾಗಿತ್ತು.
ಇಷ್ಟಕ್ಕೂ ಇದು ನಮ್ಮ ವ್ಯಯಕ್ತಿಕ ಆಲೋಚನೆ ಅಷ್ಟೇ..ಇದು ಸರಿಯೋ ತಪ್ಪೋ ತಮ್ಮಗಳ ಆಲೋಚನೆ-ವಿವೇಚನೆಗೆ ಬಿಟ್ಟದ್ದು.
✍ಶ್ರೀಮತಿ-ಸುನಿತಾ ಪ್ರಕಾಶ್
ಶುಶ್ರೂಷಕಿ,” ಆಶ್ರಯ ಆಸ್ಪತ್ರೆ “
ಅಂಕಣಗಾರ್ತಿ,”ಜನಮಿಡಿತ ಪತ್ರಿಕೆ “
ದೂರವಾಣಿ -9620642054