ಐಪಿಎಲ್ 2021 ಟೂರ್ನಿಗೆ ಸೇರಲಿದೆಯೇ ನಟ ಮೋಹನ್ ಲಾಲ್ ಮಾಲೀಕತ್ವದ 9ನೇ ತಂಡ?
ಹೊಸದೆಹಲಿ ನ. 12 ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿರುವ 8 ತಂಡಗಳಲ್ಲಿ 2 ತಂಡಗಳ ಒಡೆಯರು ಖ್ಯಾತ ಚಿತ್ರನಟರೇ ಆಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ನಟಿ ಪ್ರೀತಿ ಜಿಂಟಾ ಪಂಜಾಬ್ ತಂಡದ ಹೊಂದಿದ್ದರೆ, ನಟ ಶಾರುಖ್ ಖಾನ್ ಕೊಲ್ಕತ್ತಾ ತಂಡದ ಮಾಲೀಕರಾಗಿದ್ದಾರೆ. ಇದೀಗ ದಕ್ಷಿಣದ ಸ್ಟಾರ್ ನಟರೊಬ್ಬರು ಐಪಿಎಲ್ ನಲ್ಲಿ ಹೊಸ ತಂಡವನ್ನು ತಮ್ಮ ಮಾಲಿಕತ್ವದಲ್ಲಿ ಖರೀದಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೀರೋ ಹಾಗೂ ಹೀರೋಯಿನ್ ಗಳು ಐಪಿಎಲ್ ನಲ್ಲಿ ತಂಡದ ಫ್ರಾಂಚೈಸಿ ಪಡೆದುಕೊಳ್ಳುವ ಟ್ರೆಂಡ್ ಈ ಮೊದಲೇ ಆರಂಭಗೊಂಡಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಹೊಸ ತಂಡವೊಂದನ್ನು ಹುಟ್ಟು ಹಾಕಲು ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಉತ್ಸುಕರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಸೆಪ್ಟೆಂಬರ್ 19ಕ್ಕೆ ಆರಂಭವಾದ ಐಪಿಎಲ್ 2020 ಟೂರ್ನಿ ಮಂಗಳವಾರ ನವೆಂಬರ್ 10ಕ್ಕೆ ಕೊನೆಗೊಂಡಿತು. ಮುಂಬೈ ಇಂಡಿಯನ್ಸ್ ತಂಡ ದಾಖಲೆಯ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ತೆರೆಬಿದ್ದಿದೆ.
ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಬಿಸಿ ಯೋಜನೆ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆಯಿದೆ.
ಅಚ್ಚರಿಯ ವಿಚಾರ ಎಂದರೆ 2021 ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಕೊಳ್ಳುವ ಬಗ್ಗೆ ಬಿಸಿಸಿಐ ಮಾತುಕತೆ ನಡೆದಿದೆ ಎನ್ನಲಾಗಿದೆ. 13ನೇ ಆವೃತ್ತಿ ಐಪಿಎಲ್ ನಲ್ಲಿ ಕರೋನ ವೈರಸ್ ಕಾರಣ ಬಿಸಿಸಿಐ ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಅದನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹೊಸ ಫ್ರಾಂಚೈಸಿಗೆ ಮಾಲೀಕರಾಗಲು ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಐಪಿಎಲ್ ಫೈನಲ್ ಮ್ಯಾಚ್ ವೀಕ್ಷಣೆಗೆ ಮೋಹನ್ ಲಾಲ್ ದುಬೈಗೆ ತೆರಳಿದ್ದರು. ಈ ವಿಚಾರ ಈ ಉಹಾಪೋಹಗಳಿಗೆ ಮತ್ತಷ್ಟು ಚೈತನ್ಯ ನೀಡಿದೆ.