ಐಟಿ ದಾಳಿ ವಿವರಗಳನ್ನು ಇಲಾಖೆ ಬಹಿರಂಗಪಡಿಸುವುದಿಲ್ಲ ಏಕೆ…?

 

ಕೆಲವರ್ಷಗಳ ಕೆಳಗೆ ಐಟಿ(ಇನ್ಕಂಟ್ಯಾಕ್ಸ್‌) ದಾಳಿ ನಡೆದಾಗ ಸಮಾಜದಲ್ಲಿ ದಾಳಿಗೊಳಗಾದ ವ್ಯಕ್ತಿಯನ್ನು ಹಾಗೂ ಕುಟುಂಬದವರನ್ನು ಅವಮಾನಕರ ರೀತಿಯಲ್ಲಿ ನೋಡಲಾಗುತ್ತಿತ್ತು. ಇದರರ್ಥ ಅಕ್ರಮವಾಗಿ ಹಣ ಸಂಪಾದಿಸಿರುವ ಈ ಮಂದಿ ಸರ್ಕಾರ ದ್ರೋಹಿಗಳಷ್ಟೇ ಅಲ್ಲ, ಸಮಾಜ ದ್ರೋಹಿಗಳೂ ಕೂಡ ಎಂಬುದಾಗಿತ್ತು. ಆದರೆ ದಿನಗಳೆದಂತೆ ಐಟಿ ದಾಳಿ ಎಂಬುದು ಒಂದು ಕಾನೂನಾತ್ಮಕ ದಾಳಿಯಷ್ಟೆ ಎಂದಾಯಿತು. ಇತ್ತೀಚಿನ ದಿನಗಳಲ್ಲಿ ಐಟಿ ದಾಳಿ ಅಧಿಕಾರದಲ್ಲಿರುವವರು ಅಧಿಕಾರ ನಡೆಸಿ ಕೆಳಗಿಳಿದ ಪ್ರಭಾವಿಗಳ ಮನೆಗಳ ಮೇಲೆ ಅಧಿಕಾರಿಗಳನ್ನು ಚೂ ಬಿಟ್ಟು ನಡೆಸುವ ಒಂದು ತಂತ್ರ ಎಂಬಂತಾಗಿದೆ. ಇದಕ್ಕೆ ಅಪವಾದವೆಂಬಂತೆ ಅಲ್ಲೊಂದು ಇಲ್ಲೊಂದು  ಆಡಳಿತ ಪಕ್ಷದ ಪ್ರತಿನಿಧಿಗಳಾಗಿರುವ ಕೆಲವರ ಮನೆಯ ಮೇಲೆ ದಾಳಿ ನಡೆಯುತ್ತವೆ.

ನಾನು ಹೇಳ ಹೊರಟಿರುವುದು ದಾಳಿಯಾರ ಮೇಲೆ ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂಬುದರ ಕುರಿತು ಅಲ್ಲ. ದಾಳಿ ನಡೆದ ಬಳಿಕ ಅಧಿಕಾರಿಗಳು ತಮಗೆ ತಪಾಸಣೆಯ ವೇಳೆ ಲಭ್ಯವಾದ ಅಕ್ರಮ ಆಸ್ತಿ ಪಾಸ್ತಿಗಳ ವಿವರಗಳನ್ನು ಅಧಿಕೃತವಾಗಿ ಏಕೆ ಘೋಷಿಸುವುದಿಲ್ಲ ಎಂಬ ಬಗ್ಗೆ.

ನನಗೆ ತಿಳಿದಿರುವಂತೆ ಈವರೆಗೆ ದಾವಣಗೆರೆ ನಗರದಲ್ಲೇ ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮನೆಗಳ ಮೇಲೆ ಹಾಗೂ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ. ಆದರೆ ದಾಳಿಯ ನಂತರ

ದ ವಿವರಗಳು ಮಾತ್ರ ಯಾವ ಮಾಧ್ಯಮದಲ್ಲೂ ಪ್ರಚಾರವಾಗಿಲ್ಲ. ಪ್ರಚಾರವಾಗಲು ಮಾಹಿತಿ ಬೇಕಲ್ಲ? ದಾಳಿಯ ಸಂದರ್ಭದಲ್ಲಿ ಅಕ್ರಮ ಸಂಪತ್ತನ್ನು ಹೊಂದಿದ್ದ ವ್ಯಕ್ತಿಗಳಿಗೆ ಯಾವ ರೀತಿಯ ಶಿಕ್ಷೆಗಳಾಗಿವೆ ಎಂಬುದೂ ತಿಳಿದಿಲ್ಲ. ತಿಳಿಸುವವರಾದರೂ ಯಾರು? ಮಾಧ್ಯಮಗಳೂ ಸಹ ದಾಳಿಯ ವಿಷಯವನ್ನು ಪ್ರಕಟಿಸಲು ತೋರಯಿವ ಉತ್ಸುಕತೆಯನ್ನು ಇದಾದ ನಂತರದ ಬೆಳವಣಿಗೆಗಳನ್ನು ಬೆನ್ನು ಹತ್ತಿ ವರದಿ ಮಾಡದಿರುವುದು ಸಹ ದುರದೃಷ್ಟಕರ.

ಲೋಕಾಯುಕ್ತ ಅಧಿಕಾರಿಗಳು ಇದ್ದುದರಲ್ಲೇ  ತಕ್ಕಮಟ್ಟಿಗೆ ಇಂತಹ ವಿವರಗಳನ್ನು ಮಾಧ್ಯಮಗಳಿಗೆ ತಕ್ಷಣವೇ  ಬಿಡುಗಡೆ ಮಾಡುತ್ತಾರೆ. ಆದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾತ್ರ  “ರಹಸ್ಯ ಕಾಪಾಡುವುದೇ ತನ್ನ ಮಂತ್ರ’’ ಎಂಬ ತಂತ್ರವನ್ನು ಅನುಸರಿಸುತ್ತಿದೆ. ಬಹುಶಃ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ನಮ್ಮ ಸರ್ಕಾರಗಳು ಈ ಇಲಾಖೆಯ ಅಧಿಕಾರಿಗಳಿಗೆ ಈ ತನಕವೂ ನೀಡಿಲ್ಲವೇನೋ?

ಪಾರದರ್ಶಕ ಆಡಳಿತ ಹಾಗೂ ಪರಿವರ್ತನೆಯ ಹೊಸ ಅಧ್ಯಾಯ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂಥ ದಾಳಿಗಳ ಬಳಿಕ ಐಟಿ ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಲಭ್ಯವಾದ ಅಕ್ರಮ ಆಸ್ತಿ ಗಳಿಕೆಯ ಎಲ್ಲಾ ವಿವರಗಳನ್ನೂ ಮಾಧ್ಯಮದವರಿಗೆ ತಿಳಿಸಬೇಕು ಎಂಬ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ. ಪರಿಶೀಲನೆ ನೆಪದಲ್ಲಿ ಇಲಾಖೆ ಅಧಿಕಾರಿಗಳು ವಿವರ ಒದಗಿಸಲು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಆದರೆ ಕಾಲಾವಕಾಶ ಹೆಚ್ಚಾದಂತೆ ಇಲಾಖೆ ಅಧಿಕಾರಿಗಳೇ ಭ್ರ-ಷ್ಟರಾಗುವ ಸಾಧ್ಯತೆಗಳು ಇದಕ್ಕಿಂತಲೂ ಹೆಚ್ಚಿವೆ. ಆದ್ದರಿಂದ ಮಾಧ್ಯಮಗಳಿಗೆ ವಿವರಗಳು ಲಭ್ಯವಾದರೆ ದಾಳಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಅಲ್ಲವೇ?

Leave a Reply

Your email address will not be published. Required fields are marked *