ಏನೇ ವಿರೋಧ ಬಂದರೂ ಪೌರತ್ವ ತಂದೆ ತರ್ತೀವಿ: ಅಮಿತ್ ಶಾ ಸವಾಲು

ನವದೆಹಲಿ, ಡಿ. 17: ಅದೆಷ್ಟೇ ಪ್ರತಿಭಟನೆ, ವಿರೋಧ ಹಾಗೂ ಇಂಥವರುಗಳಿಗೆ ಕುಮ್ಮಕ್ಕು ಇರಲಿ, ನಾವು ಮಾತ್ರ ಪೌರತ್ವ ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ರೂಪದಲ್ಲಿ ಹೇಳಿದ್ದಾರೆ.

ಯಾರ ಕುಮ್ಮಕ್ಕು ಹಾಗೂ ಬೆಂಬಲದಿಂದ ಈ ರೀತಿ ಹಿಂಸಾಚಾರಗಳು ನಡೆಯುತ್ತಿವೆ ಎಂಬುದನ್ನು ಕೇಂದ್ರ ಗೃಹ ಇಲಾಖೆ ಈಗಾಗಲೇ ವರದಿ ಮಾಡಿದೆ ಎಂದು ಪರೋಕ್ಷವಾಗಿ ಅವರು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ತಿದ್ದುಪಡಿ ಮಸೂದೆ ಅಂಗೀಕಾರವಾದಾಗಿನಿಂದಲೂ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಹಿನ್ನಲೆಯಲ್ಲಿ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರೋಧವಿದ್ದರೂ ಪೌರತ್ವ ಕಾಯ್ದೆ ಜಾರಿಗೆ ತಂದೇ ತರ್ತೀವಿ ಎಂದು ಸವಾಲು ಹಾಕಿದ್ದಾರೆ.

ಪಾಕಿಸ್ತಾನ, ಬಾಂಗ್ಲದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವುದು ಮತ್ತು ಗೌರವದಿಂದ ದೇಶದಲ್ಲಿ ವಾಸಿಸುವುದನ್ನು ಮೋದಿ ಸರ್ಕಾರ ಖಚಿತ ಪಡಿಸುತ್ತದೆ ಎಂದು ಪ್ರತಿಪಾದಿಸಿದರು.

ಈ ಹೊಸ ಕಾನೂನಿನ ವಿರುದ್ಧವಾಗಿರುವವರು ಈ ಕಾಯ್ದೆಯನ್ನು ತಮ್ಮಿಂದ ಸಾಧ್ಯವಾದಷ್ಟು ವಿರೋಧಿಸುವಂತೆ ಸವಾಲು ಹಾಕಿದರು. ಏನೇ ಬರಲಿ, ಈ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗುತ್ತದೆ ಮತ್ತು ಅವರು ಗೌರವದಿಂದ ಭಾರತದಲ್ಲಿ ಬದುಕುವುದು ಖಚಿತ. ಈ ವಿಚಾರದಲ್ಲಿ ಮೋದಿ ಸರ್ಕಾರ ದೃಢವಾಗಿದೆ ಎಂದರು.

2019 ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಯಿಂದಾಗಿ ಯಾವುದೇ ಭಾರತೀಯನು ತನ್ನ ರಾಷ್ರ್ಟೀಯತೆಯನ್ನು ಕಳೆದುಕೊಳ್ಳುವುದಿಲ್ಲ. ಇನ್ನು ಮೂರು ನೆರೆಯ ರಾಷ್ರ್ಟಗಳ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಶಾಸನವನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಕಂಡಲ್ಲಿ ಗುಂಡಿಡಿ:

ಈ ನಡುವೆ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕರ್ನಾಟಕದಲ್ಲಿ ಮಾತನಾಡಿ ಪೌರತ್ವ ಕಾಯಿದೆ ವಿರೋಧಿ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದು ಕಂಡು ಬಂದಲ್ಲಿ ಕಂಡಲ್ಲಿ ಗುಂಡು ಇಡುವಂತೆ ಆದೇಶ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *