ಏಕರೀತಿ ನಾಗರಿಕ ಸಂಹಿತೆ ಜಾರಿಗೂ ಮೊದಲು ನಮ್ಮಲ್ಲಿನ ಮೀಸಲಾತಿ ಪದ್ಧತಿ ಬದಲಾಗಬೇಕು

ಅಯೋಧ್ಯೆ ವಿವಾದ ಬಗೆಹರಿದಿದೆ. 370 ವಿಧಿಯನ್ನೂ ತೆಗೆದು ಹಾಕಲಾಗಿದೆ. ತ್ರಿವಳಿ ತಲಾಕ್’ಗೂ ತಿಲಾಂಜಲಿ ಇಡಲಾಗಿದೆ‌. ಇನ್ನು ಹಾಲಿ ಕೇಂದ್ರ ಸರ್ಕಾರದ ಮುಂದಿರುವುದು ಎರಡೇ ಅಂಶಗಳು. ಮೊದಲನೆಯದು “ಒಂದೇ ದೇಶ ಒಂದೇ ಚುನಾವಣೆ” ಮತ್ತು ಎರಡನೆಯದು ರಾಷ್ಟ್ರದಲ್ಲಿ “ಏಕರೂಪ ನಾಗರೀಕ ಸಂಹಿತೆ” ಜಾರಿಗೆ ತರುವುದು. ಮೇಲಿನ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಿದ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಬಹುಶಃ ಇದೇನು ಅಷ್ಟೊಂದು ಕಷ್ಟಸಾಧ್ಯವಾದುದಲ್ಲ.

ಏಕರೀತಿಯ ನಾಗರೀಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಮೊದಲು ಅದರ ಅಡಿಪಾಯ ಎಂಬಂತೆ ನಮ್ಮಲ್ಲಿನ ಮೀಸಲಾತಿ ಪದ್ಧತಿಯನ್ನು ಬದಲಿಸಲೇ ಬೇಕಿದೆ. ಜಾತಿ ಜಾತಿಗಳ ಮಧ್ಯೆ ಇದು ಸಂಘರ್ಷಕ್ಕೆ ಕಾರಣವಾಗಿರುವ ಸಾಕಷ್ಟು ಪ್ರಕರಣಗಳನ್ನು ಕಂಡಿದ್ದೇವೆ. ಮೀಸಲಾತಿ ಎಂಬ ಒಂದೇ ಕಾರಣಕ್ಕೆ ಪ್ರತಿಭೆಗಳನ್ನು ಹತ್ತಿಕ್ಕುವ ಪರಿ ಭಾರತದಲ್ಲಿ ದುರದೃಷ್ಟಕರ.

ನಮ್ಮಲ್ಲಿ ಅನೇಕ ರಾಷ್ಟ್ರ ಹಿತಚಿಂತಕರು, ಮಠ-ಪೀಠಾಧೀಶರು ಹಾಗೂ ಮುತ್ಸಾದ್ಧಿಗಳು ಹಿಂದಿನಿಂದಲೀ ಮೀಸಲಾತಿಯ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ‌. ಅವರ ಅಭಿಪ್ರಾಯ ಸಮ್ಮತವಾದುದಾದರೂ ಓಟ್ ಬ್ಯಾಂಕ್ ಎಂಬ ಒಂದೇ ಕಾರಣಕ್ಕೆ ಕೆಲ ನಿಗದಿತ ಸಮುದಾಯಗಳನ್ನು ಕತ್ತಲಲ್ಲಿಟ್ಟು “ಮೀಸಲಾತಿ” ಎಂಬ ಗುಮ್ಮನನ್ನು ತೋರಿಸಿ ಅವರನ್ನು ಓಲೈಸಿಕೊಂಡು ಬಂದಿರುವುದನ್ನು ನಾವು-ನೀವೆಲ್ಲ ನೋಡುತ್ತಲೇ ಬಂದಿದ್ದೇವೆ.

ಹಾಲಿ ಮೀಸಲಾತಿ ವ್ಯವಸ್ಥೆಯಲ್ಲಿರುವ ವರ್ಗಗಳ ಮೇಲೆ ಖಂಡಿಯ ನನಗೆ ಅಸಮಧಾನವಿಲ್ಲ. ಆದರೆ ಇದು ಇನ್ನೂ ಎಲ್ಲಿಯ ತನಕ?

ಸಾವಿರಾರು ಜಾತಿ, ನೂರಾರು ಭಾಷೆ ಹಾಗೂ ಸಂಸ್ಕೃತಿ‌ ಒಳಗೊಂಡಿರುವ ಉಪಖಂಡವೆಂದೇ ಕರೆಯಲ್ಪಡುವ ಭಾರತದಲ್ಲೇ ಇದ್ದು ಇಲ್ಲಿಯ ಗಾಳಿ, ನೀರು, ಆಹಾರ ಸೇವಿಸುತ್ತಿರುವ ಎಲ್ಲರೂ ಭಾರತೀಯರೇ ಆಗಿ ದೇಶದಲ್ಲಿ ಸರ್ವರಿಗೂ ಒಂದೇ ರೀತಿಯ ಕಾನೂನು ವ್ಯವಸ್ಥೆ ಜಾರಿಯಲ್ಲಿ ಬರಬೇಕು ಎಂಬುವುದು ಎಷ್ಟು ಸತ್ಯವೋ ಮೀಸಲಾತಿ ವ್ಯವಸ್ಥೆಯಲ್ಲಿಯೂ ಜಾತಿ ಪದ್ಧತಿಯನ್ನು ತೊಲಗಿಸಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಜಾತಿ-ವರ್ಗದ ಜನರಿಗೂ ಈ ಸೌಲಭ್ಯವನ್ನು ಒದಗಿಸಬೇಕು ಎಂಬುವುದು ಅಷ್ಟೇ ಸತ್ಯ‌. ಆದರೆ ಮೀಸಲಾತಿ ಪ್ರಮಾಣ ಯಾವುದೇ ಕಾರಣಕ್ಕೂ ಶೇ. 50 ನು ಮೀರಲೇಬಾರದು. ಉಳಿದ ಶೇ. 50 ಜಾತಿಯ ವರ್ಗ ಮೀರಿ ಪ್ರತಿಭೆಗಳಿಗೆ ಮಾತ್ರ ಅವಕಾಶವಿಡಬೇಕು. ಇಲ್ಲದಿದ್ದರೆ ಇದೂ ಒಂದು ವಿಧದ ರಾಷ್ಟ್ರ ದ್ರೋಹ ಆದೀತು.

ನಾನು ಅನೇಕ ಬಾರಿ ಈ ವಿಷಯವನ್ನು ನನ್ನ ಬರಹಗಳಲ್ಲಿ ಪ್ರಸ್ತಾಪ ಮಾಡಿದ್ದೇನೆ. ಅಂತರ್ ರಾಷ್ಟ್ರೀಯ ಮಟ್ಟದ ಕಂಪೆನಿಗಳು (ಎಂಎನ್ ಸಿ) ತನ್ನ ಕಂಪೆನಿಗೆ ಉದ್ಯೋಗಿಗಳನ್ನು ಭರ್ತಿ ಮಾಡಿ ಕೊಳ್ಳುವಾಗ ಒಂದು ವೇಳೆ ಹಾಲಿ ಸರಕಾರ ಅನುಸರಿಸುತ್ತಿರುವ ಮೀಸಲಾತಿ ನೀತಿಯನ್ನೇ ಅನುಸರಿಸಬೇಕು ಎಂಬಂತೆ ಆಗಿದ್ದರೆ ಅಂತಹ ಕಂಪೆನಿಗಳು ಎಂದೋ ದೇಶದಿಂದ ಓಡಿ ಹೋಗುತ್ತಿದ್ದವು. ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡಿ ಸ್ಥಾಪಿಸಿದ ಇಂಥ ಕಂಪೆನಿಗಳು ಯಾವುದೇ ಮೀಸಲಾತಿ ಅನುಸರಿಸದೆ ತನಗೆ ಬೇಕಾದ ಉದ್ಯೋಗಿಗಳನ್ನು ತನ್ನದೇ ಆದ ಪರೀಕ್ಷೆಗಳ ಮೂಲಕ ಪಕ್ಕ ಪ್ರತಿಭೆ ಆಧಾರಿತವಾಗಿಯೇ ನೇಮಿಸಿ ಕೊಳ್ಳುತ್ತದೆ. ಹಾಗೆ ಅದು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಯ ಜಾತಿ- ಧರ್ಮ ವರ್ಗದ ಕುರಿತು ಒಂದಂಶದಷ್ಟನ್ನೂ ಲೆಕ್ಕಿಸುವುದಿಲ್ಲ ಅಲ್ಲವೇ?.

ಒಂದು ಸರ್ಕಾರವಾಗಿ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲವನ್ನೂ ಪ್ರತಿಭೆ ಆಧಾರಿತ ವ್ಯವಸ್ಥೆಯಡಿಯಲ್ಲಿ ತರುವುದು ಅಸಾದ್ಯ ಎನಿಸಿದರೂ ಹಾಲಿ ಮೀಸಲಾತಿ ಅಡಿ ಇರುವ ವ್ಯವಸ್ಥೆ ಗಳಿಗಿಂತಲೂ ಹಾರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹೀನಾಯ ಸ್ಥಿತಿಯಲ್ಲಿರುವ ಸಾಮಾನ್ಯ ವರ್ಗದ ಕನರು ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇರುವರು ಎಂಬುವುದು ಅಷ್ಟೇ ನಿಜ‌. ಹಾಗಾಗಿ ಹಾಲಿ ಇರುವ ಕೇವಲ ಜಾತಿ-ವರ್ಗ ಆಧಾರಿತ ಮೀಸಲಾತಿ ಪ್ರಮಾಣವನ್ನು ತಕ್ಷಣವೇ ರದ್ದು ಗೊಳಿಸಿ ಆರ್ಥಿಕಬಾಗಿ ಹಿಂದುಳಿದ ಎಲ್ಲಾ ಜಾತಿ-ವರ್ಗದ ಜನತೆಗೂ ಈ ಸೌಲಭ್ಯ ದೊರೆಯುವಂತೆ ಮಾಡಲೇಬೇಕು. ಆದರೆ ಈ ಸೌಲಭ್ಯ ಪ್ರತಿಭಾನ್ವಿತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗುವಂತೆ ಇರಬಾರದು‌. ಈ ಪ್ರತಿಭಾನ್ವಿತರ ಪಟ್ಟಿ ಯಲ್ಲೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೂ ಸ್ಪರ್ಧಿಸಲು ಅವಕಾಶ ಇದ್ದೇ ಇದೆ ಎಂಬುದನ್ನು ಒತ್ತಿ ಹೇಳಲೇ ಬೇಕಿದೆ.

ಅನಗತ್ಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸುವ ಮಂದಿ ಇಂತಹ ಉಪಯುಕ್ತ ಹಾಗೂ ಸಮ್ಮತ ಅಭಿಪ್ರಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಸತಿಸುವ ಮೂಲಕ ಸಮಾನ ಮನಸ್ಕ ರನ್ನು ಈ ನಿಟ್ಟಿನಲ್ಲಿ ಸೆಳೆದು ಯಾವ ಕಾರಣಕ್ಕೆ ಮೇಲಿನ ವ್ಯವಸ್ಥೆಯನ್ನು ಜಾರಿಗೆ ತರಲು ಆಗುವುದಿಲ್ಲ ಎಂಬುದನ್ನು ರಾಷ್ಟ್ರದ ನಾಗರೀಕರಿಗೆ ನಮ್ಮ ವ್ಯವಸ್ಥೆ ವಿವರಿಸಲಿ ಅಲ್ಲವೇ?

  • ಜಿ. ಎಂ. ಆರ್‌. ಆರಾಧ್ಯ

Leave a Reply

Your email address will not be published. Required fields are marked *