ಈಗ ಅಂಧಕಾರದಲ್ಲಿದೆ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕು ನೀಡಿದ್ದ ಶಿಕ್ಷಕ ಮಂಜುನಾಥ್ ಎಸ್ ಪಾಟೀಲರ ಕುಟುಂಬ

ಮೇಲಿನ ಚಿತ್ರ 1 ರಲ್ಲಿ ಇರುವುದು ಶಿಕ್ಷಕ ಮಂಜುನಾಥ್ ಪಾಟೀಲ್ ಚಿತ್ರ 2 ರಲ್ಲಿ ಇರುವುದು ಸಹ ಇದೇ ಶಿಕ್ಷಕ ಮಂಜುನಾಥ್ ಪಾಟೀಲ್……!
ಹೌದು ಎಂಟು ವರ್ಷಗಳ ಹಿಂದೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ನೂರಾರು, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿ ಶಿಕ್ಷಕ ವೃತ್ತಿಯನ್ನು ಆರಾಧಿಸಿ, ಆಸ್ವಾದಿಸಿ, ಇದೀಗ ಯಾರೂ ನಿರೀಕ್ಷಿಸದ ರೀತಿಯಲ್ಲಿ ಮಾನಸಿಕ ಒತ್ತಡ ಹಾಗೂ ಅನಾರೋಗ್ಯಕ್ಕೆ ಒಳಗಾಗಿ ಯಾರನ್ನೂ ಗುರುತಿಸಲು ಆಗದಂತಹ ಸ್ಥಿತಿಯಲ್ಲಿದ್ದಾರೆ .

ಕವಿಗೋಷ್ಠಿ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಸಮಾರಂಭಗಳಲ್ಲಿ ವಿಜಯಲಕ್ಷ್ಮಿ ಎಂಬುವವರನ್ನು ನೋಡಿದ್ದೇನೆ. ಇತ್ತೀಚೆಗೆ ರೋಟರಿ ಬಾಲಭವನದಲ್ಲಿ ನಡೆದ ತಾರೇಶ್ ಹಾಗೂ ಪರಮೇಶ್ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಜಯಲಕ್ಷ್ಮಿ ಅವರು ವೇದಿಕೆಯಲ್ಲಿ ಶಿಕ್ಷಕರ ಕುರಿತು “ಜನ ಮಿಡಿತ” ಸಂಪಾದಕ ಆರಾಧ್ಯ ಹಾಗೂ ಇತರರು ಆಡಿದ ಕಳಕಳಿಯ ಮಾತುಗಳನ್ನು ಆಲಿಸಿದ ಬಳಿಕ ತಾರೇಶ್ ಅವರ ಬಳಿ ಬಂದು ಈ ಕುರಿತು ಜನ ಮಿಡಿತ ಪತ್ರಿಕೆಯಲ್ಲಿಯೂ ಸಹ ಸ್ವಲ್ಪ ಬರೆಯಿಸಿ ನಮಗೆ ಸಹಕಾರ ನೀಡಿ ಎಂದು ವಿನಂತಿಸಿದರು. ಹಾಗಾಗಿ ಕಕ್ಕರಗೊಳ್ಳದವರೇ ಆದ ತಾರೇಶ್ ಅವರು ನಾನು ಇದೇ ಪತ್ರಿಕೆಯಲ್ಲಿ ಅಂಕಣಗಾರ್ತಿ ಆಗಿರುವುದರಿಂದ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿಸಿ ಲೇಖನವೊಂದನ್ನು ಪ್ರಕಟಿಸಲು ಕೋರಿದರು. ಒಮ್ಮೆ ಅವರು ತಮ್ಮ ಪತಿ ಮಂಜುನಾಥ್ ಪಾಟೀಲ್ ಬಗ್ಗೆ ಅಂದಿನ ಹಾಗೂ ಇಂದಿನ ಸ್ಥಿತಿಯನ್ನು ವಿವರಿಸುತ್ತಾ ಹೋದಂತೆ ಇದೊಂದು ಮನಕಲುಕುವ ಮಾನವೀಯ ಲೇಖನ ವಾಗಬಲ್ಲದು ಅನ್ನಿಸಿತು. ಹಾಗಾಗಿ ದಿನಾಂಕ 5ರ ಶಿಕ್ಷಕರ ದಿನಾಚರಣೆಯಂದೇ ಇದನ್ನು ಪ್ರಕಟಿಸಬೇಕು ಅಂದುಕೊಂಡೆ .

ಅನಾದಿ ಕಾಲದಿಂದಲೂ ಗುರುವಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನಮಾನವಿರುವುದು ನಮಗೆಲ್ಲ ತಿಳಿದಿರುವ ವಿಷಯ. ನಾನಿಲ್ಲಿ ಪರಿಚಯಿಸಲು ಹೊರಟಿರುವುದು ಸಹ ಒಬ್ಬ ಶಿಕ್ಷಕರನ್ನು. ಮಂಜುನಾಥ್ ಎಸ್ ಪಾಟೀಲ್ ಎನ್ನುವ ಇವರು ಕಳೆದ ಎಂಟು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಕಕ್ಕರಗೋಳ್ಳ ಗ್ರಾಮದಲ್ಲಿ ಬಾಪೂಜಿ ಖಾಸಗಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು .ಶಾಲೆಯ ಬಗ್ಗೆ ಅತಿಯಾದ ಕಾಳಜಿ, ಕಳಕಳಿ ಹಾಗೂ ಮಕ್ಕಳ ಮೇಲಿನ ಪ್ರೀತಿಯಿಂದ ಗ್ರಾಮದ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು. ಹದಿನಾಲ್ಕು ವರ್ಷಗಳ ತಮ್ಮ ಶಿಕ್ಷಕ ವೃತ್ತಿಯಲ್ಲಿ ಪಡೆದುದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು ಎನ್ನುತ್ತಾರೆ ಪತ್ನಿ ವಿಜಯಲಕ್ಷ್ಮಿ. ಇದೀಗ ಕಳೆದ ಎಂಟು ವರ್ಷಗಳಿಂದ ಮಂಜುನಾಥ್ ಎಸ್ ಪಾಟೀಲ್ ಅವರು ಮಾತಿಲ್ಲದೆ, ನಡೆದಾಡಲು ಶಕ್ತಿಯೂ ಇಲ್ಲದೆ ತನ್ನೆಲ್ಲ ಚಟುವಟಿಕೆಗಳಿಗೂ ವಿಜಯಲಕ್ಷ್ಮಿ ಅವರನ್ನು ಅವಲಂಬಿಸಿದ್ದಾರೆ .ಹಾಸಿಗೆಯಲ್ಲಿ ತಮ್ಮ ನಿತ್ಯಕರ್ಮಗಳನ್ನು ಮಾಡುತ್ತಿದ್ದಾರೆ ಮೂರು ಜನ ಹೆಣ್ಣು ಮಕ್ಕಳನ್ನು ಹೊಂದಿರುವ ಮಂಜುನಾಥ್ ಎಸ್ ಪಾಟೀಲ್ ಹಾಗೂ ವಿಜಯಲಕ್ಷ್ಮಿ ದಂಪತಿಗಳು ನಿಜಕ್ಕೂ ದುರಾದೃಷ್ಟವಂತರು ಎಂದರೆ ತಪ್ಪಾಗಲಾರದು .ಏಕೆಂದರೆ ಮೂರು ಜನ ಹೆಣ್ಣು ಮಕ್ಕಳಲ್ಲಿ ಮೊದಲ ಮಗಳು ಮಾನಸ ಮತ್ತು ಕೊನೆಯ ಮಗಳು ಸಾಧನ ಕೂಡ ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಎರಡನೆಯ ಮಗಳು ಭುವನೇಶ್ವರಿ ಡಿಪ್ಲೊಮಾ ಓದುತ್ತಿದ್ದಾಳೆ .ಪತಿ ಮಂಜುನಾಥ್ ಹಾಗೂ ಈ ಮಕ್ಕಳನ್ನು ಕುರಿತು ಗದ್ಗದಿತರಾಗುತ್ತಾರೆ ವಿಜಯಲಕ್ಷ್ಮಿಯವರು. ವಿಧಿಯ ಈ ಕ್ರೂರತನಕ್ಕೆ ಬದುಕು ಬೇಸತ್ತು ಹೋಗಿದೆ ಎನ್ನುತ್ತಾರೆ, ಪತಿ ಹಾಗೂ ಅಂಗವೈಕಲ್ಯ ಹೆಣ್ಣುಮಕ್ಕಳ ಜವಾಬ್ದಾರಿ ಮತ್ತು ಮನೆಯ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ತಮ್ಮ ಪರಿಚಯಸ್ತರೊಬ್ಬರ ಕಂಪ್ಯೂಟರ್ ಸೆಂಟರ್ ನಲ್ಲಿ ಟೈಪಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ವಿಜಯಲಕ್ಷ್ಮಿ.(ಅದು ಸಹ ಕಂಪ್ಯೂಟರ್ ಪರಿಕರಗಳು ಮತ್ತು ಅಂಗಡಿ ಮಾಲೀಕರಿಗೆ ಬಂದ ಹಣದಲ್ಲಿ ಅರ್ಧ ಹಣ ಕೊಟ್ಟು ಉಳಿದರ್ಧವನ್ನು ಮಾತ್ರ ಪಡೆಯುತ್ತಾ )
ತಮ್ಮ ಶಿಕ್ಷಕ ಪತಿಗೆ ಒದಗಿರುವ ದುಸ್ಥಿತಿಯ ಕುರಿತು ಹಾಗು ಕುಟುಂಬ ನಿರ್ವಹಣೆಗೆ ಕಷ್ಟವಾಗಿರುವ ಕುರಿತು ವಿಜಯಲಕ್ಷ್ಮಿಯವರು ಹಲವಾರು ಸಂಘ ಸಂಸ್ಥೆಗಳ ಮೊರೆ ಹೋದರೂ ಏನೂ ಸಹಾಯ ಸಿಗಲಿಲ್ಲ. ಪತಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಾಲೆಯವರು ಕೂಡ ಕೈಚೆಲ್ಲಿದರು ಎನ್ನುತ್ತಾರೆ. ಸಾವಿರಾರು ಮಕ್ಕಳಿಗೆ ವಿದ್ಯೆ ವಿನಯತೆಯನ್ನು ಧಾರೆಯೆರೆದ ಗುರುವಿಗಿಂದು ಇಂತಹ ಹೀನಾಯ ಸ್ಥಿತಿ ಕಂಡು ಮನ ಮರುಗದೆ ಇರದು. ಮಂಜುನಾಥ್ ಅವರಿಗೆ ಸಹೋದರರ ಸಹಕಾರವೂ ಇಲ್ಲ, ಬಂಧು ಬಳಗಗಳ ಆತ್ಮೀಯತೆಯೂ ಇಲ್ಲ. ಮಕ್ಕಳ ಅಸ್ತವ್ಯಸ್ತತೆ ಕಂಡು ಒಬ್ಬ ತಂದೆಗೆ ಆಗಬಹುದಾದ ನೋವನ್ನು ಊಹಿಸಿಕೊಂಡರೆ ಕಣ್ಣುಗಳು ತೇವವಾಗದಿರಲು ಸಾಧ್ಯವೇ.? ತನ್ನನ್ನು ತಾನು ನೋಡಿಕೊಳ್ಳಲಾಗದ ಒಬ್ಬ ಅಸಹಾಯಕ ತಂದೆ, ತನ್ನಂತೆ ಅಸಹಾಯಕ ಪರಿಸ್ಥಿತಿಯಲ್ಲಿರುವ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿ ಅದೆಷ್ಟು ನೋವು ಸಂಕಟ ಅನುಭವಿಸುತ್ತಿರಬೇಕು ಎನ್ನುವುದು ಊಹೆಗೆ ನಿಲುಕದ್ದು .ಮೂರು ಜನರಿಗೆ ಸರ್ಕಾರದಿಂದ ದೊರೆಯಬಹುದಾದ ಒಂದಿಷ್ಟು ಅಂಗ ವೈಫಲ್ಯದ ಮಾಶಾಸನ ಬರುತ್ತಿದೆಯಾದರೂ, ಅದರಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಜೀವನ ನಡೆಸುವುದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಆದರೆ ಮಾಶಾಸನ ಉಸಿರಾಡಲು ಒಂದಿಷ್ಟು ಆಮ್ಲಜನಕ ಸಿಕ್ಕಂತೆ ದೊರೆಯುತ್ತಿರುವುದು ಕೊಂಚ ಸಮಾಧಾನದ ವಿಷಯ ಎನ್ನುತ್ತಾರೆ ವಿಜಯಲಕ್ಷ್ಮಿ.

ಆರೋಗ್ಯಪೂರ್ಣವಾಗಿ ಎಲ್ಲರಂತೆ ಇರುವ ತಮ್ಮ ಎರಡನೇ ಮಗಳು ಭುವನೇಶ್ವರಿಯೆ ಈಗ ಈ ಕುಟುಂಬಕ್ಕೆ ಆಶಾಕಿರಣ. ಕಷ್ಟಪಟ್ಟು ಓದಿ ಒಳ್ಳೆಯ ಉದ್ಯೋಗ ಪಡೆದು ನಮ್ಮ ಈ ಬವಣೆಯನ್ನು ಆಕೆಯಷ್ಟೇ ನೀಗಿಸಲು ಸಾಧ್ಯ ಎಂಬ ಭರವಸೆಯ ನಿಟ್ಟುಸಿರು ವಿಜಯಲಕ್ಷ್ಮಿ ಅವರದ್ದು.ಹಾಗಾಗಿ ಮೊದಲ ಮತ್ತು ಮೂರನೇ ಮಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮುಗಿಸಿದ್ದರು ಸಹ ಅವರು ಅಸಹಾಯಕ ಸ್ಥಿತಿಯಲ್ಲಿದ್ದರೂ ಎರಡನೆಯ ಮಗಳು ಭುವನೇಶ್ವರಿಯ ಮೇಲೆಯೇ ಕುಟುಂಬದ ಭವಿಷ್ಯ ನಿಂತಿದೆ. ಈ ನಿಟ್ಟಿನಲ್ಲಿ ಚಿಂತಿಸುತ್ತಾ ಆಕೆಯ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ನೀಡಿದ್ದಾರೆ .

ಕಕ್ಕರಗೊಳ್ಳದಲ್ಲಿ ಅವರ ಶಿಷ್ಯರಾಗಿ ಅವರಿಂದ ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಈಗ ತಮ್ಮ ಗುರುವಿಗೆ ಒದಗಿರುವ ಸ್ಥಿತಿಯ ಬಗ್ಗೆ ಬಹುಶಃ ತಿಳಿದಿರಲಾರದೇನೋ? ಅವರ ಶಿಷ್ಯಂದಿರ ಪೈಕಿ ಆರ್ಥಿಕವಾಗಿ ಇಂದು ಸಬಲರಾಗಿರುವ ಶಿಷ್ಯವರ್ಗ ಇರಲೂಬಹುದು .ಹಾಗಾಗಿಯೇ ಈ ಲೇಖನದ ಮೂಲಕ ವಿಜಯಲಕ್ಷ್ಮಿ ಅವರ ಒಂದು ವಿನಂತಿಯನ್ನು ಸಹ ಹೇಳುತ್ತೇವೆ. ಸಹಕಾರ ನೀಡುವ ಸಹೃದಯರು ಕೆಳಗಿರುವ ಮೊಬೈಲ್ ನಂಬರ್ ನಲ್ಲಿ ಶಿಕ್ಷಕ ಮಂಜುನಾಥ್ ಪಾಟೀಲ್ ಅವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಅವರನ್ನು ಸಂಪರ್ಕಿಸಬಹುದು. ಎರಡನೆಯ ಮಗಳು ಭುವನೇಶ್ವರಿಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೆರವು ನೀಡುವವರು ಸಹ ಅವರನ್ನು ಸಂಪರ್ಕಿಸಬಹುದು. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಶಿಕ್ಷಕ ಮಂಜುನಾಥ್ ಅಥವಾ ಅವರ ಇಬ್ಬರು ಇಂಥದ್ದೇ ದೈಹಿಕ ಸ್ಥಿತಿಯಲ್ಲಿರುವ ಹೆಣ್ಣು ಮಕ್ಕಳ ಆರೋಗ್ಯವನ್ನಂತೂ ಸುಸ್ಥಿತಿಗೆ ತರಲು ಆಗದು. ಆದರೆ ಶಿಕ್ಷಕರೊಬ್ಬರಿಗೆ ಒಂದಿಷ್ಟು ಗುರು ಕಾಣಿಕೆ ರೂಪದಲ್ಲಿ ಅವರ ಶಿಷ್ಯ ವರ್ಗ ಸಹಕಾರ ನೀಡಿದ್ದೇ ಆದರೆ ಅವರ ಕುಟುಂಬಕ್ಕೆ ಕೊಂಚ ನೆಮ್ಮದಿ ಕಾಣಲು ತಮ್ಮ ಪಾಲನ್ನು ನೀಡಿದಂತಾಗುತ್ತದೆ ಅಲ್ಲವೇ. ದಯವಿಟ್ಟು ವಾಟ್ಸಾಪ್ನಲ್ಲೂ ಹಾಗೂ ಜನ ಮಿಡಿತ ಫೇಸ್ ಬುಕ್ ನಲ್ಲೂ ಪ್ರಕಟವಾಗಲಿರುವ ಈ ಲೇಖನವನ್ನು ಹೆಚ್ಚು ಜನರಿಗೆ ಶೇರ್ ಮಾಡುವ ಮೂಲಕ ತಿಳಿಯಪಡಿಸಿ ಎಂಬುದು ನನ್ನ ವೈಯಕ್ತಿಕ ಮನವಿ .
ವಿಜಯಲಕ್ಷ್ಮಿ ಅವರ ಮೊ.-9986113461

✍ಶ್ರೀಮತಿ ಸುನಿತಾಪ್ರಕಾಶ್
ಅಂಕಣಗಾರ್ತಿ,” ಜನಮಿಡಿತ “

2 thoughts on “ಈಗ ಅಂಧಕಾರದಲ್ಲಿದೆ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕು ನೀಡಿದ್ದ ಶಿಕ್ಷಕ ಮಂಜುನಾಥ್ ಎಸ್ ಪಾಟೀಲರ ಕುಟುಂಬ

 • September 5, 2019 at 4:03 pm
  Permalink

  ಮನ ಕಲಕುವ ಲೇಖನ.ಶಿಕ್ಷಕರ ದಿನದಂದು ಪ್ರಕಟಿಸಿದ್ದು ಜನಮಿಡಿತದ ಜನಪರ ಕಾಳಜಿ ಕಾಣಿಸುತ್ತದೆ.

  Reply
 • September 5, 2019 at 4:10 pm
  Permalink

  ಮನ ಕಲಕುವ ಲೇಖನ,
  ಶಿಕ್ಷಕರ ದಿನಾಚರಣೆಯಂದು ಪ್ರಕಟಿಸಿದ್ದು ಜನಮಿಡಿತದ ಜನಪರ ಕಾಳಜಿ ಕಾಣುತ್ತದೆ.

  Reply

Leave a Reply

Your email address will not be published. Required fields are marked *