ಇಲ್ಲಿದೆ ನೋಡಿ ಸರಳ ಟಿಪ್ಸ್ ,ಒಣ ಕಣ್ಣುಗಳ ಸಮಸ್ಯೆಗಳಿಗೆ

ಒಣಗಿರುವ ಕಣ್ಣುಗಳು ಅಥವಾ Dry eye syndrome (dry eyes) ಎಂದರೆ ನಮ್ಮ ಕಣ್ಣುಗಳಿಗೆ ಅಗತ್ಯವಿದ್ದಷ್ಟು ಪ್ರಮಾಣದ ಕಣ್ಣೀರು ಲಭಿಸದೇ ಹೋಗುವ ಸ್ಥಿತಿಯಾಗಿದೆ. ಪರಿಣಾಮವಾಗಿ ಕಣ್ಣಿನ ಹೊರಪದರದಲ್ಲಿ ಕಣ್ಣೀರಿನ ಪಸೆ ಕಡಿಮೆಯಾಗಿ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಈಗ ಕಣ್ಣಿನ ಪದರ ಗಾಳಿಗೆ ಸುಲಭವಾಗಿ ಒಡ್ಡಿರುವುದರಿಂದ ಉರಿಯೂ ಎದುರಾಗುತ್ತದೆ. ಅಲ್ಲದೇ ಕಣ್ಣುಗಳಲ್ಲಿ ಅಂಟಿಕೊಳ್ಳುವ ಕಿಸರು ಒಸರುವುದು, ಬೆಳಕಿಗೆ ಅತಿಯಾದ ಸಂವೇದನೆ ಪ್ರಕಟಿಸುವುದು, ಮಂದವಾದ ದೃಷ್ಟಿ ಹಾಗೂ ಕಣ್ಣುಗಳು ಕೆಂಪಗಾಗುವುದು ಎದುರಾಗುತ್ತವೆ. ಈ ತೊಂದರೆಯಿಂದ ಹೊರಬರಲು ಇಂದಿನ ಲೇಖನದಲ್ಲಿ ವಿಧಾನಗಳನ್ನು ಸೂಚಿಸಲಾಗಿದೆ;

ಬೆಚ್ಚಗಿನ ಹಿತವಾದ ಒತ್ತಡ

ಒಂದು ದಪ್ಪನೆಯ ಬಟ್ಟೆಯನ್ನು ಉಗುರುಬೆಚ್ಚನಯ ನೀರಿನಲ್ಲಿ ಕೊಂಚ ಹೊತ್ತು ಮುಳುಗಿಸಿಡಿ. ಬಳಿಕ ಇದನ್ನು ಹಿಂಡಿ ಕಣ್ಣುಗಳ ಮೇಲೆ ಸುಮಾರು ಐದು ನಿಮಿಷ ಇರಿಸಿ. ಬಳಿಕ ಹೆಚ್ಚಿನ ಒತ್ತಡವಿಲ್ಲದೇ ಈ ಬಟ್ಟೆಯನ್ನು ಹೆಚ್ಚಿನ ಒತ್ತಡವಿಲ್ಲದೇ ಕಣ್ಣುಗುಡ್ಡೆಗಳ ಮೇಲೆ ಉಜ್ಜಿಕೊಳ್ಳಿ. ಮೇಲ್ರೆಪ್ಪೆಯನ್ನು ಮೇಲಿನಿಂದ ಕೆಳಗೂ, ಕೆಳರೆಪ್ಪೆಯನ್ನು ಕೆಳಗಿನಿಂದ ಮೇಲೂ ಬರುವಂತೆ ಉಜ್ಜಿ. ಅಲ್ಲದೇ ಅಂಚುಗಳಲ್ಲಿ ಯಾವುದೇ ಕಸ ಅಥವಾ ಕಿಸರು ಕಂಡುಬಂದರೆ ನಿವಾರಿಸಿ.ಈ ವಿಧಾನದಿಂದ ನೈಸರ್ಗಿಕ ಪೋಷಣೆಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಕಣ್ಣುಗಳು ಕೆಂಪಗಾಗುವುದು, ಉರಿ ಮೊದಲಾದವು ಕಡಿಮೆಯಾಗುತ್ತವೆ.

ಕೊಬ್ಬರಿ ಎಣ್ಣೆ

ಈ ಎಣ್ಣೆಯಲ್ಲಿ ಕಣ್ಣುಗಳಿಗೆ ಇನ್ನಷ್ಟು ನೀರು ಒಸರಿಸುವ ಗುಣವಿದೆ ಹಾಗೂ ಕಣ್ಣೀರು ಅತಿ ಶೀಘ್ರವಾಗಿ ಆವಿಯಾಗದಂತೆ ತಡೆಯುತ್ತದೆ. ಜೊತೆಗೇ ಇದರಲ್ಲಿರುವ ಉರಿಯೂತ ನಿವಾರಕ ಗುಣ ಒಣಗಣ್ಣುಗಳಿಂದ ಎದುರಾಗುವ ಉರಿಯನ್ನು ಶಮನಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಹತ್ತಿಯುಂಡೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಹಿಂಡಿದ ಬಳಿಕ ಕಣ್ಣುಗಳನ್ನು ಮುಚ್ಚಿಕೊಂಡು ಕಣ್ಣುಗುಡ್ಡೆಯ ಮೇಲೆ ಇರಿಸಿ ಹದಿನೈದು ನಿಮಿಷ ಕಾಲ ಹಾಗೇ ಬಿಡಿ. ನಿಮ್ಮ ಉರಿ ಕಡಿಮೆಯಾಗುವವರೆಗೂ ದಿನವಿಡೀ ಈ ವಿಧಾನವನ್ನು ಪುನರಾವರ್ತಿಸುತ್ತಾ ಹೋಗಿ.

ಗುಲಾಬಿ ನೀರು

ಇದೊಂದು ನೈಸರ್ಗಿಕ ಒತ್ತಡ ನಿವಾರಕ ದ್ರವವಾಗಿದ್ದು ಒಣ ಮತ್ತು ಆಯಾಸಗೊಂಡಿರುವ ಕಣ್ಣುಗಳಿಗೆ ಅದ್ಭುತ ಆರೈಕೆ ಒದಗಿಸುತ್ತದೆ. ಜೊತೆಗೇ, ಇದರಲ್ಲಿ ವಿಟಮಿನ್ ಎ ಸಹಾ ಸಮೃದ್ದವಾಗಿದ್ದು ಇದರ ಕೊರತೆಯಿಂದ ಕಣ್ಣುಗಳು ಒಣಗಿರುತ್ತವೆ. ಇದನ್ನು ಉಪಯೋಗಿಸಲು ಒಂದು ಹತ್ತಿಯುಂಡೆಯನ್ನು ಗುಲಾಬಿ ನೀರಿನಲ್ಲಿ ಮುಳುಗಿಸಿ ಕಣ್ಣುಮುಚ್ಚಿ ಕಣ್ಣುರೆಪ್ಪೆಗಳ ಮೇಲೆ ಆವರಿಸುವಂತೆ ಇರಿಸಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪರ್ಯಾಯವಾಗಿ ಅಪ್ಪಟ ಗುಲಾಬಿ ನೀರಿನ ಕೆಲವು ತೊಟ್ಟುಗಳನ್ನು ಕಣ್ಣಿನ ಒಳಗೂ ಬಿಟ್ಟುಕೊಳ್ಳುವ ಮೂಲಕ ಉರಿಯನ್ನು ತಕ್ಷಣವೇ ಕಡಿಮೆಯಾಗಿಸಬಹುದು. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.

ಪೌಷ್ಟಿಕ ಹೆಚ್ಚುವರಿ ಆಹಾರಗಳು

ಅಧ್ಯಯನಗಳಲ್ಲಿ ಕಂಡುಕೊಂಡಂತೆ ಒಮೆಗಾ ೩ ಕೊಬ್ಬಿನಾಮ್ಲಗಳಿರುವ ಆಹಾರಗಳು ಒಣಕಣ್ಣುಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಈ ಅಂಶ ಹೆಚ್ಚಿರುವ ಸಾಲ್ಮನ್ ಮೀನು, ಬೂತಾಯಿ ಮೀನು, ಅಗಸೆ ಬೀಜದ ಎಣ್ಣೆ, ಅಕ್ರೋಟು ಮೊದಲಾದವುಗಳನ್ನು ಸೇವಿಸುವ ಮೂಲಕ ಉರಿಯೂತ ಕಡಿಮೆಯಾಗಲು ಹಾಗೂ ಕಣ್ಣೀರಿನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ. ತನ್ಮೂಲಕ ಕಣ್ಣಿನ ಉರಿಯೂ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *