ಇಮೋಜಿ ಲೋಕ
ಅಬ್ಬಬ್ಬಾ, ಒಳ್ಳೆ ಚಂಡಿಗೆ ಮುಳ್ಳು ಚುಚ್ಚಿದಂತಹ ಕೆಂಪು, ನೀಲಿ, ಹಸಿರು ಹೀಗೆ ಬಣ್ಣ ಬಣ್ಣದ ಉಂಡೆಗಳು ಟಿವಿ, ಮೊಬೈಲ್, ಪೇಪರ್ ತುಂಬಾ ತಿರುಗಾಡೋಕೆ ಪ್ರಾರಂಭವಾಗಿ ವರ್ಷವೇ ಕಳೆಯಿತು. ಇದರ ಜೊತೆಗೆ ಈಗ ಹೊಸದಾಗಿ ಸೇರ್ಪಡೆಗೊಂಡದ್ದು ವ್ಯಾಕ್ಸಿನೇಷನ್, ಬೆಡ್, ಆಕ್ಸಿಜನ್, ವೆಂಟಿಲೇಟರ್, ಅವರು ಇವರನ್ನು ಬಯ್ಯೋದು… ಇವರು ಅವರನ್ನು ಬಯ್ಯೋದು. (ಯಾರು ಯಾರನ್ನು ಅನ್ನೋದು ನಿಮ್ಮ ಕಲ್ಪನೆಗೆ ಬಿಟ್ಟದ್ದು.) ಇದನ್ನೇ ಟಿವಿ, ಪೇಪರ್, ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾ ದಲ್ಲಿ ನೋಡಿ… ಕೇಳಿ… ಓದಿ… ರೋಸಿ ಹೋಗಿದ್ದೀರಾ. ಅಬ್ಬಾ! ನಿಮಗೆ ಏನು ಅನಿಸಿದೆಯೋ ಖಂಡಿತ ನನಗಂತೂ ಗೊತ್ತಿಲ್ಲ. ನನಗಂತೂ ಇವುಗಳನ್ನೆಲ್ಲ ಕಂಡು ವಾಕರಿಕೆ ಬರುವಷ್ಟು ಅಸಹ್ಯ ಹುಟ್ಟಿ ಬಿಟ್ಟಿದೆ. ಅದಕ್ಕಾಗಿ ಈ ಎಲ್ಲಾ ತಲೆಬಿಸಿಗಳನ್ನು ಒಂದು ಸ್ವಲ್ಪ ಹೊತ್ತು ಬದಿಗಿಟ್ಟು ಒಂದಷ್ಟು ರಿಲಾಕ್ಸ್ ಆಗೋಣ ಅನಿಸಿತು. ಆಗ ಕಣ್ಣಿಗೆ ಬಿದ್ದದ್ದೇ ಈ ಅದ್ಭುತ ಇಮೋಜಿ ಲೋಕ.
ಇತ್ತೀಚಿನ ದಿನಗಳಲ್ಲಿ ವಾಟ್ಸಪ್, ಫೇಸ್ಬುಕ್ ನ ಬಹುದೊಡ್ಡ ಪಾಲನ್ನು ಇಮೋಜಿಗಳು ಪಡೆದುಕೊಂಡಿದ್ದೇವೆ ಎಂದರೂ ತಪ್ಪಾಗಲಾರದು. ಹೇಳಬೇಕಾದ ಎಷ್ಟೋ ಮಾತುಗಳನ್ನು ಭಾವನೆಗಳ ಸಮೇತ ಈ ಇಮೋಜಿಗಳು ಹೇಳಲು ಶಕ್ತವಾಗಿದ್ದಾವೆ ಎಂದೇ ನನ್ನ ಅನಿಸಿಕೆ. ಎಷ್ಟೋ ಬಾರಿ ಏನು ಹೇಳಬೇಕು ಎಂದು ತೋಚದೆ ಇದ್ದಾಗಲೂ…. ಇಮೋಜಿಗಳು ಸಹಕಾರಿಯಾದದ್ದೂ ಇದೆ. ಒಟ್ಟಿನಲ್ಲಿ ಹೇಳಬೇಕೆಂದರೆ… ಇಮೋಜಿಗಳು ಬಹಳಷ್ಟು ಬಾರಿ ಪೇಚಿನ ಪ್ರಸಂಗದಿಂದ ತಪ್ಪಿಸಿ ಮಾನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾವೆ ಎನ್ನಲಡ್ಡಿಯಿಲ್ಲ.
ನನ್ನ ಮಟ್ಟಿಗೆ ಹೇಳುವುದಿದ್ದರೆ… ಬಹುಶಃ ನನ್ನಷ್ಟು ಈ ಇಮೋಜಿಗಳನ್ನು ಬಳಸುವವರು ಇನ್ನೊಬ್ಬರು ಸಿಗಲಾರರೇನೋ. ವಯಸ್ಸು, ಲಿಂಗ, ಹುದ್ದೆಗಳ ಭೇದವಿಲ್ಲದೆ ಎಲ್ಲರಿಗೂ ಕಳುಹಿಸುವ ನನ್ನನ್ನು ಯಾರ್ಯಾರು ಏನೆಂದು ಎಣಿಸಿದ್ದಾರೋ ದೇವರಾಣೆಗೂ ಗೊತ್ತಿಲ್ಲ. ಅದರಲ್ಲೂ ಒಂದು ಮಜಾ ಎಂದರೆ… ಈ ಇಮೋಜಿ ಬರೆದೆ ಬರೀ ಸಂದೇಶವೇ ರವಾನೆ ಆಗುತ್ತಿದ್ದರೆ ಆ ಕಡೆ ವ್ಯಕ್ತಿಯಿಂದ ಬರುವ ಪ್ರಶ್ನೆ “ಹೋಯ್, ಇದು ನೀವೆ ಅಲ್ದಾ. ಕುಂಬಳಕಾಯಿ (ಇಮೋಜಿ ಮಕ್ಕಳಿಗೆ ನಾವಿಟ್ಟ ಹೆಸರು) ಬರಲೇ ಇಲ್ಲ” ಎಂದು ಕೇಳಿಯೇ ಬಿಡುತ್ತಾರೆ. ಅಷ್ಟರಮಟ್ಟಿಗೆ ನನ್ನ ಹಾಗೂ ಇಮೋಜಿಗಳ ಸಂಬಂಧ ಗಾಢವಾಗಿದೆ.
ಇತ್ತೀಚಿಗೆ ನಮ್ಮ ಸಿರಿಮನೆ ಅಡ್ಮಿನ್ ಗ್ರೂಪ್ನಲ್ಲಿ ಹೊಸದಾಗಿ ಒಂದು ರೂಲ್ಸ್ ಬಂದಿದೆ. ಮೀಟಿಂಗ್ ಸಮಯದಲ್ಲಿ ಈ ಮಕ್ಕಳನ್ನು (ಇಮೋಜಿ ಮಕ್ಕಳು) ಸದಸ್ಯರು ಕರೆತರಬಾರದು ಎಂದು. ಕ್ಷಣ ಕಾಲ ಯೋಚಿಸಿ! ಇಂತಹ ಒಂದು ರೂಲ್ಸ್ ಬರೋದಕ್ಕೆ ಹಿಂದೆ ಮೀಟಿಂಗ್ ಗಳಲ್ಲಿ ಈ ಮಕ್ಕಳು ಅದೆಷ್ಟು ಉಪದ್ರ ನೀಡಿರಬೇಕು… ಹೌದು, ಮೀಟಿಂಗ್ ಬಹಳ ಸೀರಿಯಸ್ಸಾಗಿ, ಗಹನವಾದ ವಿಚಾರದಿಂದ ನಡೆಯುತ್ತಿದ್ದಾಗ ನಾನು ಮತ್ತು ತೇಜು ಅಕ್ಕ ಈ ಮಕ್ಕಳನ್ನು ಕರ್ಕೊಂಡು ಬಂದು ಅಲ್ಲಿ ಎತ್ತಿಹಾಕಿ ಬಿಡುತ್ತಿದ್ದೆವು. ಅಲ್ಲಿಂದ ಮೀಟಿಂಗ್ ಹಾದಿ ತಪ್ಪಿ ಹೋಗುತ್ತಿತ್ತು. ಮತ್ತೆ ಹಾದಿಗೆ ತರೋದಕ್ಕೆ ನಮ್ಮ ಬಿಗ್ ಬಾಸ್ (ಸಂಸ್ಥಾಪಕರಾದ ರವಿಯಣ್ಣ) ಹೆಣಗಾಡಬೇಕಾಗುತ್ತಿತ್ತು. ಅಷ್ಟರಲ್ಲಿ ಈ ಅಡ್ಮಿನ್ ಗಳಲ್ಲಿ ಒಂದಿಬ್ಬರು ನಾಪತ್ತೆಯಾಗಿ ಮೀಟಿಂಗ್ ಅವಸಾನವಾಗುತ್ತಿತ್ತು. ಇದನ್ನು ನೋಡಿ… ಸಹಿಸಿ… ಸಾಕಾದ ನಮ್ಮ ಬಿಗ್ಬಾಸ್ ಕೊನೆಗೂ ತಮ್ಮ ರೂಲ್ಸ್ ಬುಕ್ನಲ್ಲಿ ಈ ಹೊಸ ರೂಲ್ಸ್ ಸೇರಿಸಿ, ಮೀಟಿಂಗ್ ಮಾಡುವಾಗ ಮಕ್ಕಳನ್ನು ಕರೆ ತರದಂತೆ ನಮ್ಮ ಕೈ ಕಟ್ಟಿಹಾಕಿಯೇ ಬಿಟ್ಟರು.
ಇದಾದರೂ ಹೇಗೋ ಸರಿ ಎನ್ನಬಹುದು. ಇದಕ್ಕೂ ತಮಾಷೆಯ ಒಂದು ಘಟನೆ ನಡೆಯಿತು. ಈ ಬರಹದ ಕಾರಣದಿಂದಾಗಿ ನನಗೆ ಒಂದಷ್ಟು ಜಿಲ್ಲಾವಾರು ಪತ್ರಿಕೆಗಳ ಸಂಪಾದಕರ ಪರಿಚಯ ಆಗಿದ್ದಿದೆ. ಹಾಗೆ ಪರಿಚಯ ಆದ ಸಂಪಾದಕರುಗಳಿಗೂ ಈ ಇಮೋಜಿಗಳನ್ನು ಕಳುಹಿಸುವ ಏಕೈಕ ಭೂಪತಿ ನಾನೇ ಇರಬಹುದು ಎಂದುಕೊಳ್ಳುತ್ತೇನೆ. ಹೀಗೆ ಒಬ್ಬರು ಆತ್ಮೀಯರಾದ ಸಂಪಾದಕರಿಗೆ ಓಡುವ ಜಿರಳೆಯ ಇಮೋಜಿಯನ್ನು ಬಹಳ ಧೈರ್ಯ ಮಾಡಿ ಕಳುಹಿಸಿದೆ. ಅವರು ಅದನ್ನು ಅವರ ಆತ್ಮೀಯರೊಬ್ಬರಿಗೆ ಕಳುಹಿಸಿದ್ದಾರೆ. ಎಂದೂ ಇಂತಹ ಇಮೋಜಿಗಳನ್ನು ಇವರು ಕಳುಹಿಸಿದ್ದಿರಲಿಲ್ಲ. ಹಾಗಾಗಿ ಅದು ಇಮೋಜಿ ಎಂಬ ಅರಿವು ಇರದ ಆ ಆತ್ಮೀಯರು, ಇವರ ಎದುರಿಗೆ ಮೊಬೈಲ್ ಸ್ಕ್ರೀನ್ ಅಲ್ಲಿ ಹುಳ ಹರಿಯುತ್ತಿದೆ ಎಂದು… ಮೊಬೈಲ್ ಅನ್ನು ಬಿಚ್ಚಿ ಕೊಡವಿದ್ದೇ… ಕೊಡವಿದ್ದು. ಇವರೋ ಅದನ್ನು ನೋಡುತ್ತಾ ನಕ್ಕಿದ್ದೇ… ನಕ್ಕಿದ್ದು. ಕೊನೆಗೂ ಅದು ಇಮೋಜಿ ಎಂದು ತಿಳಿದು ಅವರು ನಿರಾಳವಾದರೂ… ಒಂದು ಕ್ಷಣ ಬೆಸ್ತು ಬಿದ್ದದ್ದಕ್ಕಾಗಿ ಪೇಚಾಡಿಕೊಂಡದ್ದು ಸುಳ್ಳಲ್ಲ.
ಹೀಗೆ ಬಹಳಷ್ಟು ಬಾರಿ ಮುಜುಗರದ, ಜಗಳದ, ಕೋಪದ ಕ್ಷಣಗಳನ್ನು ಈ ಇಮೋಜಿಗಳು ಹಗುರಗೊಳಿಸಿದೆ. ಕುಣಿಯುವ, ನಗುವ, ಅಳುವ, ತಿರುಗುವ ವಿಚಿತ್ರ ಭಾವನೆಗಳನ್ನು ಹೊರ ಹಾಕುವ ಮಕ್ಕಳ ಇಮೋಜಿಯಂತೂ ಟಾಮ್ ಅಂಡ್ ಜೆರ್ರಿಯಂತೆ ಎಲ್ಲಾ ವಯೋಮಾನದವರಿಗೂ ಅತ್ಯಂತ ಪ್ರಿಯ. ಎಷ್ಟೋ ಬಾರಿ ಮನಸ್ಸಿಗೆ ಬೇಸರವಾದಾಗ… ಇವುಗಳನ್ನು ನೋಡಿ ಮನಸ್ಸು ಸಮಾಧಾನಗೊಂಡು, ನಿರಾಳವಾದದ್ದು ಇದೆ. ನನಗಂತೂ ಬೇಸರವಾಗಲಿ, ದುಃಖವಾಗಲಿ, ಖುಷಿ ಇರಲಿ, ನಗುವಿರಲಿ ಹಂಚಿಕೊಳ್ಳಲು ಇರುವ ಉತ್ತಮ ಸಂಗಾತಿಗಳು ಈ ಇಮೋಜಿಗಳು. ಯಾರು ಏನೇ ಅಂದುಕೊಂಡರೂ… ನಾನಂತೂ ವಯಸ್ಸು, ಲಿಂಗ, ಹುದ್ದೆಯ ಭೇದವಿಲ್ಲದೆ (ಖಂಡಿತವಾಗಿಯೂ ಇಮೋಜಿ ಗಳಿಗೆ ಯಾವ ಭೇದವೂ ಅಂಟುವುದಿಲ್ಲ) ಎಲ್ಲರಿಗೂ ಕಳುಹಿಸಿದ್ದೇನೆ… ಮುಂದೆಯೂ ಕಳುಹಿಸುತ್ತೇನೆ.
ಸುಮಾ ಕಿರಣ್