ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ‘ಜನಮಿಡಿತ’ ಪತ್ರಿಕೆಯಿಂದ ಶುಭಹಾರೈಕೆ

ಎಸ್ಸೆಸ್ಸೆಲ್ಸಿ ಬರೆಯುತ್ತಿರುವ ಪ್ರೀತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ,
ಇಂದಿನಿಂದ ಪರೀಕ್ಷೆ ಸಂಭ್ರಮ, ಯಾವುದೇ ಆತಂಕ ದುಗುಡವಿಲ್ಲದೆ ಪರೀಕ್ಷೆ ಬರೆಯಿರಿ. ನಿಮ್ಮ ತಂದೆ- ತಾಯಿಯರ, ಹಿರಿಯರ ಹಾಗೂ ಶಿಕ್ಷಕರ ಆಶೀರ್ವಾದ ನಿಮ್ಮ ಜೊತೆ ಇದ್ದೇ ಇರುತ್ತದೆ‌. ಒಂದು ನೆನಪಿಡಿ., ಎಲ್ಲಾ ಪರೀಕ್ಷೆಗಳಿಗಿಂತ ಜೀವನ ಮುಖ್ಯವಾದುದು. ಕಡಿಮೆ ಅಂಕ ಗಳಿಸಿದವರಿಗೆ ಭವಿಷ್ಯವೇ ಇಲ್ಲ ಎಂಬ ಭ್ರಮೆ ಬೇಡ. ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು.

ಪರೀಕ್ಷೆಗೆ ಹೊರಡುವ ಮುನ್ನ ಒಮ್ಮೆ ಇಲ್ಲಿ ಕಣ್ಣಾಡಿಸಿ. ಹಾಗೆಂದು ಇದೇನು ನಿಮಗೆ ತಿಳಿಯಲಾರದ ಅಥವಾ ಯಾರೂ ತಿಳಿಸಲಾರದ ವಿಷಯವೇನಲ್ಲ. ಆದರೂ ಒಮ್ಮೆ ಇದನ್ನು ಗಮನಿಸಿ.

  • ನಿಮ್ಮ‌ ಪ್ರವೇಶ ಪತ್ರ(hall ticket)ವನ್ನು ನೆನಪಿನಲ್ಲಿ ತೆಗೆದುಕೊಂಡು ಹೋಗಿ.
  • ಶಾಂತಾ ಚಿತ್ತದಿಂದ ಪರೀಕ್ಷಾ ಕೊಠಡಿ ಪ್ರವೇಶಿಸಿ.
  • ಪರೀಕ್ಷಾ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚೆನೇ ನಿಮಗಾಗಿಯೇ ಕಾಯ್ದಿರಿಸಿದ ಸ್ಥಳದಲ್ಲಿ ಹಾಜರಿರಿ.
  • ಪ್ರಶ್ನೆ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರಿಂದ ಪಡೆಯುವ ಮೊದಲು ಒಂದೇ ಒಂದು ನಿಮಿಷ ಕಣ್ಣು ಮುಚ್ಚಿ ಕೊಂಚ ರಿಲ್ಯಾಕ್ಸ್ ಆಗಿ.
  • ಪರೀಕ್ಷೆಗೆ ಬೇಕಾಗುವ ಸಲಕರಣೆಗಳನ್ನು ಹೊರತುಪಡಿಸಿ ನಿಮ್ಮ‌ಬಳಿ ಇನ್ನೇನನ್ನೂ ಇಟ್ಟು ಕೊಳ್ಳಬೇಡಿ.
  • ನಿಮ್ಮ ಅನುಮಾನಗಳೇನೇ ಇದ್ದರೂ ಕೊಠಡಿ ಮೇಲ್ವಿಚಾರಕರ ಬಳಿ ಕೇಳಿ.
  • ಕೆಲ ಕೆಟ್ಟ ಗಳಿಗೆಯಲ್ಲಿ ಆಕಸ್ಮಾತ್ ಎಂಬಂತೆ ನೀವು ಅಭ್ಯಾಸ ಮಾಡುವಾಗ ಟಿಪ್ಪಣಿಗೆಂದು ನೋಟ್ಸ್ ಮಾಡಿಕೊಂಡಿರುವ ಚೀಟಿಗಳು ಹಾಗೆಯೇ ಜೇಬಲ್ಲಿ ಉಳಿದಿರುವ ಸಾಧ್ಯತೆ ಇರುವುದರಿಂದ ಒಮ್ಮೆ ಪರೀಕ್ಷಿಸಿ.
  • ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಎಲ್ಲಾ ಪ್ರಶ್ನೆಗಳನ್ನು ಒಮ್ಮೆ ಓದಿ. ಇದಕ್ಕೆ ನಿಮಗೆ ತಗಲುವುದು 2 ರಿಂದ 3 ನಿಮಿಷ ಮಾತ್ರ.
  • ಮೊದಲು ಸುಲಭದ ಹಾಗೂ ತಮಗೆ ಪೂರ್ಣ ವಿಶ್ವಾಸವಿರುವ ಪ್ರಶ್ನೆಗಳನ್ನು ಉತ್ತರಿಸಿ.
  • ಉತ್ತರ ಬರೆಯುವ ವೇಳೆ ಸಮಯದ ಕಡೆಗೂ ಗಮನ ಖಂಡಿತ ಇರಲಿ.
  • 10 ನಿಮಿಷಗಳ ಮೊದಲು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಇನ್ನೊಮ್ಮೆ ತಮ್ಮ ಉತ್ತರ ಪತ್ರಿಕೆಯನ್ನು ಗಮನಿಸಲು ಅಥವಾ ಸಣ್ಣ-ಪುಟ್ಟ ಬದಲಾವಣೆಗಳಿದ್ದರೆ ಅವುಗಳನ್ನು‌ ಮಾಡಲು ಬಳಸಿಕೊಳ್ಳಿ.
  • ಸಹಪಾಠಿಗಳೊಂದಿಗೆ ಅನವಶ್ಯಕವಾಗಿ ಮಾತನಾಡದಿರಿ. ಇದರಿಂದ ಸಮಯವೂ ವ್ಯರ್ಥ ಹಾಗೂ ಪರೀಕ್ಷಾ ಮೇಲ್ವಿಚಾರಕರ ಅನುಮಾನಕ್ಕೂ ಆಸ್ಪದವಾಗಬಹುದು.
    ಕೊನೆಯದಾಗಿ ಎಲ್ಲಾ ಪರೀಕ್ಷಾರ್ಥಿಗಳು ಒಂದನ್ನು ಗಮನದಲ್ಲಿಟ್ಟುಕೊಳ್ಳಿ.
    ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮನುಷ್ಯನ ಬುದ್ಧಿವಂತಿಕೆಯನ್ನಳೆಯುವ ಅಳತೆಕೋಲು ಅಲ್ಲವೇ ಅಲ್ಲ. ಇದು ಎಂದೂ ಎಂದೆಂದೂ ಸತ್ಯ. ಇದನ್ನು ನೆನಪಿನಲ್ಲಿಡಿ.
    ಕೊರೋನಾ ಆತಂಕದಿಂದ ದೂರವಿಡಿ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ವಹಿಸಿದ್ದು, ನಿಮ್ಮ ರಕ್ಷಣೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂಬುದು ನಿಮ್ಮ ತಲೆಯಲ್ಲಿರಲಿ. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಮರೆಯದಿರಿ.

ಮತ್ತೊಮ್ಮೆ ಎಲ್ಲರಿಗೂ ಆಲ್ ದಿ ಬೆಸ್ಟ್.

  • ಜಿ. ಎಂ. ಆರ್. ಆರಾಧ್ಯ ಸಂಪಾದಕ

Leave a Reply

Your email address will not be published. Required fields are marked *