ಆಟೋ ಚಾಲಕನಿಗೆ ಕೋಟಿ ರೂ ಆಸ್ತಿ ಕೊಟ್ಟ ಮಹಿಳೆ…!

ಮಿತ್ರರೆ, ಈ ಮಹಾಭಾರತದ ಕರ್ಣ ಅವನ ದಾನದ ಗುಣದಿಂದಲೇ ನಮಗೆಲ್ಲ ಚಿರಪರಿಚಿತನಾದದ್ದು. ಕರ್ಣನ ದಾನದ ಗುಣವನ್ನು ಇಂದಿಗೂ ಕೊಂಡಾಡುತ್ತಿರುತ್ತೇವೆ. ತನ್ನದಾಗಿ ಇರುವುದನ್ನೆಲ್ಲವನ್ನೂ ನಿಷ್ಕಲ್ಮಶ ಮನದೊಂದಿಗೆ ಯಾವುದೇ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ನೀಡಿದವನೇ ಈ ಕರ್ಣ. ಅರೆರೆ! ಇದೇನಿದು ಕರ್ಣನ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ ಎಂದಿರಾ? ಪುರಾಣದ ಕರ್ಣನಂತೆ ಆಧುನಿಕ ಯುಗದಲ್ಲೂ ಕೊಡುಗೈ ದಾನಿಗಳು ಹಲವಾರು ಜನರಿದ್ದಾರೆ. ಆದರೆ, ಅವರ ದಾನಕ್ಕೆ ಕಾರಣ ಮತ್ತು ದಾನದ ರೀತಿಗಳು ಭಿನ್ನವಾಗಿರುತ್ತದೆ ಅಷ್ಟೇ! ಇಂದು ಅಂತಹ ಒಬ್ಬ ಸಹೃದಯಿ ದಾನಿಯ ಪರಿಚಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.

ಒಡಿಸ್ಸಾದ ಕಟಕ್ ನಲ್ಲಿ ವಾಸವಾಗಿದ್ದ ಮಿನಾತಿ ಪಟ್ನಾಯಕ್ ಎನ್ನುವ 63 ವರ್ಷದ ಮಹಿಳೆಯೊಬ್ಬರು ತಮ್ಮ ಐಷಾರಾಮಿ ಬಂಗಲೆ, ಒಡವೆ, ಆಭರಣ, ನಗದು ಎಲ್ಲವನ್ನು ತಮ್ಮ ಮನೆಗೆ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ರಿಕ್ಷಾ ಚಾಲಕನ ಹೆಸರಿಗೆ ವರ್ಗಾಯಿಸಿದ್ದಾರೆ. ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಈಕೆಯ ಈ ನಿರ್ಧಾರದ ಹಿಂದೆ ಪ್ರಬಲವಾದ ಕಾರಣವು ಇದೆ. ಅದೇನೆಂದು ತಿಳಿಯೋಣ ಬನ್ನಿ.

ಮಿತ್ರರೇ, ಮಿನಾತಿಯವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದಾಗಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಈ ವರ್ಷ ಅವರ ಪ್ರೀತಿಯ ಏಕೈಕ ಪುತ್ರಿ ಕೋಮಲ್ ಅವರು ಹೃದಯಾಘಾತದಿಂದ ಅಸುನೀಗಿದ್ದರು. ಈ ಸಂದರ್ಭದಲ್ಲಿ ಒಂಟಿಯಾಗಿದ್ದ ಮಿನಾತಿ ಅವರನ್ನು ಸಂಬಂಧಿಕರು ದೂರವಿರಿಸಿದ್ದರು. ಯಾರೊಬ್ಬರೂ ಇವರ ಕಷ್ಟ-ಸುಖವನ್ನು ವಿಚಾರಿಸಲು ಬರಲಿಲ್ಲ. ಆಗ ಇವರಿಗೆ ಆಸರೆಯಾಗಿ ನಿಂತದ್ದು ರಿಕ್ಷಾ ಚಾಲಕ.

ಈ ಹಿಂದೆ ಕೋಮಲ್ ಚಿಕ್ಕವಳಿರುವಾಗ ಅವಳನ್ನು ಶಾಲೆಗೆ ಕರೆದೊಯ್ಯಲು ಬರುತ್ತಿದ್ದ ಬುಧ ಎಂಬ ರಿಕ್ಷಾ ಚಾಲಕ. ಆನಂತರದ ದಿನಗಳಲ್ಲಿ ಮನೆಯ ಸದಸ್ಯರಲ್ಲಿ ಒಬ್ಬರಾಗಿ, ಮೀನಾತಿ ಅವರ ಕಷ್ಟ ಸುಖದಲ್ಲಿ ಅವರಿಗೆ ಆಸರೆಯಾಗಿ ನಿಂತಿದ್ದ. ಬುಧನ ಜೊತೆಗಿನ ಸುದೀರ್ಘ 25 ವರ್ಷದ ಒಡನಾಟದಿಂದ ಅವನ ಬಗ್ಗೆ ಚೆನ್ನಾಗಿ ತಿಳಿದಿದ್ದ ವಿನಾತಿಯವರು ಅವನ ನಿಸ್ವಾರ್ಥ ಸೇವೆ ಹಾಗೂ ಕಷ್ಟದ ಸಮಯದಲ್ಲಿ ಬುಧ ನೀಡಿದ ಬೆಂಬಲವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು. ಈಗ ಅವಕಾಶ ದೊರೆತಾಗ ತಮ್ಮ ಸಮಸ್ತ ಆಸ್ತಿಯನ್ನು ಬುಧನಿಗೆ ವರ್ಗಾಯಿಸುವ ಜೊತೆಗೆ ಮುಂದೆ ಆತನಿಗೆ ತನ್ನ ಸಂಬಂಧಿಕರಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಹಾಗೆಯೇ ಬುಧ ಹಾಗೂ ಅವನ ಹೆಂಡತಿ ಮೂವರು ಮಕ್ಕಳು ಇದೀಗ ಮಿನಾತಿ ಅವರ ಜೊತೆಯಲ್ಲಿ ಅವರ ಬಂಗಲೆಯಲ್ಲೇ ವಾಸವಾಗಿದ್ದಾರೆ. ಬುಧ ಈಗ ರಿಕ್ಷಾ ಕೆಲಸವನ್ನು ನಿಲ್ಲಿಸಿದ್ದಾನೆ. ಇಳಿಯ ವಯಸ್ಸಿನಲ್ಲಿ ನೆಮ್ಮದಿಯ ಜೀವನವನ್ನು ಕಂಡುಕೊಂಡಿದ್ದಾನೆ.

ಮಿತ್ರರೇ, ಇರುವ ಅತ್ಯಲ್ಪ ಜೀವಿತಾವಧಿಯಲ್ಲಿ ಹಣದ ಹಿಂದೆ ಹೋಗುವವರೇ ಅಧಿಕ. ಪ್ರೀತಿ, ವಿಶ್ವಾಸ, ಸ್ನೇಹ ಇದೆಲ್ಲವನ್ನೂ ಮೀರಿದ್ದು ಹಣ, ಸಂಪತ್ತು, ಆಸ್ತಿ. ಹಣಕ್ಕಾಗಿ ಸಂಬಂಧದಲ್ಲಿ, ಸ್ನೇಹದಲ್ಲಿ, ಪ್ರೀತಿಯಲ್ಲಿ ಒಡಕು ಮೂಡುವುದೇ ಅಧಿಕ. ಆದರೆ ಇಂತಹ ಅಪರೂಪದ ಮಾನವೀಯತೆ ತುಂಬಿದ ನೈಜ ಘಟನೆಗಳು ಹಣ ಎಂದರೆ ಅದೊಂದು ಕಾಗದದ ತುಂಡು ಅಷ್ಟೇ ಅದಕ್ಕೆ ಬೇರೇನು ಬೆಲೆ ಇಲ್ಲಾ ಎಂದು ಸಾಬೀತು ಪಡಿಸುತ್ತದೆ. ಇಂತಹ ಘಟನೆಗಳು ನಮ್ಮ ಸುತ್ತ ಇನ್ನಷ್ಟು ಮತ್ತಷ್ಟು ನಡೆಯಲಿ. ವಿನಾತಿ ಇಂಥವರ ಸಂತತಿ ಸಾವಿರವಾಗಲಿ.

ಸರ್ವೇ ಜನಾಃ ಸುಖಿನೋ ಭವಂತು

Leave a Reply

Your email address will not be published. Required fields are marked *