ಅವರಗೊಳ್ಳ ಕನ್ನೇಶ್ವರ ದೇವಾಲಯ

ರಾಜ್ಯದ ವಾಸ್ತು ಶಿಲ್ಪಗಳಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ಗಣನೀಯವಾದದು. ಇವರ ಜೊತೆಯಲ್ಲಿ ಸೇವುಣರು ಹಾಗು ಯಾದವರ ಕಾಲದಲ್ಲಿ ನಿರ್ಮಾಣವಾದ ಬಹಳಷ್ಟು ದೇವಾಲಯಗಳು ಕಾಣ ಬರುತ್ತವೆ. ದಾವಣಗೆರೆ ಜಿಲ್ಲೆಯಲ್ಲೂ ಹಲವು ದೇವಾಲಯಗಳು ಕಾಣ ಸಿಗಲಿದ್ದು ಅವುಗಳಲ್ಲಿ ಪ್ರಮುಖವಾದ ದೇವಾಲಯಗಳಲ್ಲಿ ದಾವಣಗೆರೆ ತಾಲ್ಲೂಕಿನ ಅವರಗೊಳ್ಳದ ಕನ್ನೇಶ್ವರ ದೇವಾಲಯವೂ ಒಂದು.

ಇತಿಹಾಸ ಪುಟದಲ್ಲಿ ಅವರಗೊಳ್ಳ ಪ್ರಮುಖ ಪಟ್ಟಣವಾಗಿ ಕಾಣಿಸಿಕೊಂಡಿತ್ತು. ಇಲ್ಲಿನ 1279 ರ ಶಾಸನದಲ್ಲಿ ಸೇವುಣ ಮಹಾದೇವ ಕೂಚರಸನ ಮಗ ಕೂಚಚಮೂಪತಿಯು ಇಲ್ಲಿನ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಶಾಸನಗಳಲ್ಲಿ ಅವರಗೊಳ ಎಂಬ ಉಲ್ಲೇಖವಿದೆ.

ಕನ್ನೇಶ್ವರ ದೇವಾಲಯ

ಸುಮಾರು 11 – 12 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ತೆರೆದ ಮಂಟಪವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು 3 ½ ಅಡಿ ಎತ್ತರದ ಶಿವಲಿಂಗವಿದೆ. ದಾವಣಗೆರೆ ಪರಿಸರದಲ್ಲಿ ದೊರೆತ ಬೃಹತ್ ಶಿವಲಿಂಗವಾಗಿದ್ದು ಶಿವಲಿಂಗದ ಜಲಹರಿ ಬಲಭಾಗದಲ್ಲಿ ಇರುವುದು ವಿಷೇಶ. ದೇವಾಲಯ ಪಶ್ಚಿಮಕ್ಕೆ ಅಭಿಮುಖವಾದ ಕಾರಣ ಶಿವಲಿಂಗದ ಜಲಹರಿ ಬಲಭಾಗದಲ್ಲಿದೆ. ಇನ್ನು ಗರ್ಭಗುಡಿ ಹಾಗು ಅಂತರಾಳದ ಮಧ್ಯದಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ನಂದಿ ಇದೆ. ಇನ್ನು ಶ್ರಾವಣ ಮಾಸದಲ್ಲಿ ಸೂರ್ಯನ ಕಿರಣಗಳು ಶಿವನ ಮೇಲೆ ಬೀಳುವಂತೆ ವಿನ್ಯಾಸ ಗೊಳಿಸಲಾಗಿದೆ.

ಇನ್ನು ಬಾಗಿಲುವಾಡ ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದ್ದು ತೆರೆದ ಮುಖಮಂಟಪದಲ್ಲಿ ಸುಮಾರು ಎಂಟು ಕಂಭಗಳಿವೆ. ಇನ್ನು ಕಂಭಗಳಲ್ಲಿ ಅಲಲ್ಲಿ ಅಲಂಕರಣಗಳ ಕೆತ್ತೆನೆ ನೋಡಬಹುದು. ದೇವಾಲಯದಲ್ಲಿ ಪ್ರಮುಖವಾಗಿ ಗಮನಿಸಬೇಕಾದದ್ದು ಶಿಖರ ಭಾಗ ಘಾಂಸನ (ಕದಂಬ ನಾಗರ) ಶೈಲಿಯಲ್ಲಿರುವ ಶಿಖರ. ಸುಮಾರು ಒಂಬತ್ತು ಹಂತದ ಶಿಖರ ಇಲ್ಲಿನ ಪರಿಸರದಲ್ಲಿ ಅಪುರೂಪದ ಬೃಹತ ಶಿಖರ. ಹೊರಬಿತ್ತಿಯಲ್ಲಿ ಯಾವುದೇ ಅಲಂಕರಣಗಳಿಲ್ಲ. ಮುಂದಿನ ಭಾಗವನ್ನು ನವೀಕರಣಗೊಳಿಸಿ ವಿಸ್ತರಿಸಲಾದರೂ ಹಳೆಯ ದೇವಾಲಯದ ಭಾಗಗಳನ್ನು ಉಳಿಸಿಕೊಳ್ಳಲಾಗಿದೆ. ಇನ್ನು ದೇವಾಲಯದ ಸನಿಹದಲ್ಲಿ ವೀರಗಲ್ಲಿದೆ.

ವೀರಭದ್ರ ದೇವಾಲಯ

ಇನ್ನು ದೇವಾಲಯದ ಸನಿಹದಲ್ಲಿರುವ ಮತ್ತೊಂದು ದೇವಾಲಯ ವೀರಭದ್ರ ದೇವಾಲಯ. ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿರುವ ಈ ದೇವಾಲಯ ಸಾಕಷ್ಟು ನವೀಕರಣಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ವೀರಭದ್ರನ ಶಿಲ್ಪವಿದೆ. ಕೈಯಲ್ಲಿ ಖಡ್ಗ ಹಾಗು ಗುರಾಣಿ ಹಿಡಿದಂತೆ ಕೆತ್ತಲಾಗಿದೆ.

ದೇವಾಲಯದ ನವರಂಗದಲ್ಲಿ ಹಲವು ಶಿಲ್ಪಗಳನ್ನು ಇರಿಸಲಾಗಿದ್ದು ಅವುಗಳಲ್ಲಿ ಶೂಲ ಬ್ರಹ್ಮ, ಶಿವಲಿಂಗ, ಕಾರ್ತಿಕೇಯ, ಗಣಪತಿ, ವಿಷ್ಣುವಿನ ಶಿಲ್ಪ ಗಮನ ಸೆಳೆಯುತ್ತದೆ. ದೇವಾಲಯದ ಎದುರು ಭಾಗದಲ್ಲಿನ ಬಲಿಕಂಭ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ನೂತನವಾದ ಶಿಖರವನ್ನು ನಿರ್ಮಿಸಲಾಗಿದೆ.

ಇಲ್ಲಿ ಮಾಘ ಶುದ್ದ ಭರತ ಹುಣ್ಣೆಮೆಯಲ್ಲಿ ನಡೆಯುವ ವೀರಭದ್ರ ಜಾತ್ರೆ ಈ ಪರಿಸರದಲ್ಲಿ ನಡೆಯುವ ಬೃಹತ್ ಜಾತ್ರೆಯಲ್ಲಿ ಒಂದು. ಒಂಬತ್ತು ದಿನ ನಡೆಯುವ ಈ ಜಾತೆಯಲ್ಲಿ ಹಲವು ಅಚರಣೆ ನಡೆಯಲಿದ್ದು ಕೊನೆಯಲ್ಲಿ ರಥೋತ್ಸವ ನಡೆಯಲಿದೆ.

ತಲುಪವ ಬಗ್ಗೆ : ಅವರಗೊಳ್ಳ ದಾವಣಗೆರೆಯಿಂದ ಕೊಂಡಜ್ಜಿ ರಸ್ತೆಯಲ್ಲಿ ಹಾಗು ಹರಿಹರದಿಂದ ಕೇವಲ ಎಂಟು ಕಿ ಮೀ ದೂರದಲ್ಲಿದೆ.

-ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *