ಅಣ್ಣಾವ್ರು ನನ್ನೆರಡೂ ಹಸ್ತಗಳನ್ನೂ ಬಿಗಿಯಾಗಿ ಆತ್ಮೀಯತೆಯಿಂದ ಹಿಡಿದು ಅಭಿನಂದಿಸಿದ್ದರು

ಡಾ. ರಾಜ್‍ಕುಮಾರ್ ಅವರನ್ನು ಹತ್ತಿರದಿಂದ ಕಾಣಲು ಅದೆಷ್ಟು ಮಂದಿ ತವಕಿಸುತ್ತಿದ್ದರು, ಅವರ ಸಮೀಪ ನಿಂತು ಒಂದೇ ಒಂದು ಫೋಟೊ ತೆಗೆಸಿಕೊಳ್ಳಬೇಕು ಎಂದು ಎಷ್ಟು ಮಂದಿ ಆಸೆ ಹೊಂದಿದ್ದರು, ಕಡೇ ಪಕ್ಷ ಅವರನ್ನು ಸಭೆ ಸಮಾರಂಭಗಳಲ್ಲಿ ನೋಡಲು ಅದೆಷ್ಟು ಜನ ಮುಗಿ ಬೀಳುತ್ತಿದ್ದರೋ?… ಆದರೆ ಅಂಥ ಅದೃಷ್ಟ ಇರುತ್ತಿದ್ದುದು ಮಾತ್ರ ಕೆಲವೇ ಕೆಲವರಿಗೆ ಮಾತ್ರ.

ಕೋಟಿ – ಕೋಟಿ ಕನ್ನಡಾಭಿಮಾನಿಗಳ ಪಾಲಿನ ಹೆಮ್ಮೆಯ ಪ್ರತೀಕವೇ ಆಗಿದ್ದ ಡಾ. ರಾಜ್ ಅವರೇ ನನ್ನ ಎರಡೂ ಹಸ್ತಗಳನ್ನು ಬಿಗಿಯಾಗಿ ಹಿಡಿದು ಅಭಿನಂದಿಸಿದಾಗ ನನಗೆ ಹೇಗನ್ನಿಸಿರಬಹುದು?
ಅವರಿಗೆ ಶೇಕ್ ಹ್ಯಾಂಡ್ ಮಾಡಲು ನಾನು ಮುಂದಾಗುತ್ತಿದ್ದಂತೆಯೇ ಅವರು ಆತ್ಮೀಯತೆಯಿಂದ ನನ್ನ ಹಸ್ತಗಳನ್ನು ತಮ್ಮ ಹಸ್ತಗಳಿಂದ ಬಿಗಿದಪ್ಪಿದರು. ನಿಷ್ಕಲ್ಮಶವಾದ ಮುಗುಳುನಗೆಯಿಂದ ಅವರು ನನ್ನನ್ನು ಅಭಿನಂದಿಸಿದ್ದರು.
ನಿಜ, “ಬೆಳ್ಳಿತೆರೆ-61” ಎಂಬ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರಪ್ರಥಮ ಬೃಹತ್ ಪುಸ್ತಕವೊಂದನ್ನು ನನ್ನ ಸಂಪಾದಕತ್ವದಲ್ಲಿ ಸ್ನೇಹಿತರುಗಳು ಸೇರಿ ಹೊರತಂದಿದ್ದೆವು. ಆ ಪುಸ್ತಕವನ್ನು ಪದ್ಮಭೂಷಣ ಡಾ. ರಾಜ್ ಅವರ ಅಮೃತ ಹಸ್ತದಿಂದಲೇ ಬಿಡುಗಡೆ ಮಾಡಿಸಬೇಕು ಎಂಬುದು ನಮ್ಮ ಕನಸಾಗಿತ್ತು. 1996ರ ಕಾಲವದು. ಸತತ ಎರಡು ವರ್ಷಗಳ ನಮ್ಮ ಶ್ರಮ ಅಂತೂ ಸಾರ್ಥಕವಾಗಿ ಪುಸ್ತಕ ಹೊರಬಂತು, ನಾವು ಕಂಡ ಕನಸೂ ಸಹ ನನಸಾಯಿತು.
ಹೌದು, ದಾವಣಗೆರೆಗೆ ಅಣ್ಣಾವ್ರು ಬಂದರು. ಅವರೇ ಆ ಪುಸ್ತಕವನ್ನು ಬಿಡುಗಡೆ ಮಾಡಿ ನಮ್ಮೆಲ್ಲರ ಕುರಿತು ಹೆಮ್ಮೆಯ ಮಾತುಗಳನ್ನಾಡಿದರು. ನಾಲ್ಕಾರು ಹಾಡುಗಳನ್ನೂ ಹಾಡಿ ಸಾವಿರಾರು ಅಭಿಮಾನಿಗಳನ್ನೂ ರಂಜಿಸಿದ್ದರು.

“ಬೆಳ್ಳಿತೆರೆ-61” ಪುಸ್ತಕಕ್ಕೆ ಒಂದು ಇತಿಹಾಸವಿದೆ. ಅನೇಕರ ಅವಿರತ ಪರಿಶ್ರಮವಿದೆ. ನಿಸ್ವಾರ್ಥ ಸೇವೆ ಇದೆ. ಈ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಂದಿನ ಕೆನರಾಬ್ಯಾಂಕ್ ಉದ್ಯೋಗಿ ಕೆ.ಜಿ.ರಾಮಚಂದ್ರಾಚಾರ್ ಕೆಲಸವನ್ನೇ ತ್ಯಜಿಸಿದರು. ನಾನೂ ಸಹ ಈ ಪುಸ್ತಕದ ಕೆಲಸ ಪೂರ್ಣಗೊಳಿಸಲು ದಿನಪತ್ರಿಕೆಯೊಂದರಲ್ಲಿದ್ದ ಉದ್ಯೋಗವನ್ನೂ ಕಳೆದುಕೊಳ್ಳಬೇಕಾಯಿತು. ಲಾಭದ ಉದ್ದೇಶ ಹೊಂದದೇ ಏನನ್ನಾದರೂ ಸಾಧಿಸಬೇಕು ಎಂಬ ಹುಚ್ಚು ನಿರ್ಧಾರದಿಂದ ನಾವು ಹಣವನ್ನೂ ಕಳೆದುಕೊಂಡೆವು. ಆದರೆ ಆ ನೋವೆಲ್ಲವೂ ಪುಸ್ತಕ ಹೊರಬಂದಾಗ, ಡಾ. ರಾಜ್ ಅವರೇ ತಮ್ಮ ಪತ್ನಿ ಪಾರ್ವತಮ್ಮನವರ ಸಹಿತ ದಾವಣಗೆರೆಗೆ ಬಂದು ಆ ಪುಸ್ತಕ ಬಿಡುಗಡೆ ಮಾಡಿದಾಗ ಮಾಯವಾಯಿತು.

ನನ್ನೊಂದಿಗೆ ಈ ಸುಂದರ ಹಾಗೂ ದಾಖಲೆಯ ಪುಸ್ತಕ “ಬೆಳ್ಳಿತೆರೆ-61” ನ್ನು ಹೊರತರಲು ಶ್ರಮಿಸಿದ ಕೆಲವರ ಹೆಸರನ್ನು ಸ್ಮರಿಸಲೇಬೇಕು. ಕೆ.ಜಿ.ರಾಮಚಂದ್ರಾಚಾರ್, ಯರಗಂಟಯ್ಯ ನಾಯ್ಕ, ಸಂಧ್ಯಾ ಸುರೇಶ್, ಪದ್ಮಿನಿ ಸುಧೀರ್, ಸುಧಾ ಜೋಶಿ, ಅರುಂಧತಿ ರಮೇಶ್, ಡಾ. ಕೌಸರ್, ಬಶೀರ್, ಸವಣೂರು ಬಾಬು, ವಾಸುದೇವ ನಾಡಿಗ್, ಮಾಲತೇಶ್ ರಾವ್, ಚಿತ್ರಗ್ರಾಹಕರಾದ ಶ್ರೀನಿವಾಸ್, ಅಶೋಕ್ ಸ್ಟುಡಿಯೋದ ವಿವೇಕ್, ಎಸ್.ಟಿ. ಐರಣಿ, ಅಜ್ಜಂಪುರ ರಾಜು, ಗಾಯತ್ರಿ ದೇಸಾಯಿ ಮುಂತಾದವರ ಕೊಡುಗೆ ಅಪಾರವಾದದ್ದು. ಹರಿಹರದ ಆಶಾಗ್ರಾಫಿಕ್ಸ್‍ನ ಪ್ರಕಾಶ್ ರಾವ್ ಅವರು ನಮ್ಮ ಪರದಾಟ ನೋಡಲಾರದೆ ನಾವು ಕೊಟ್ಟ ಮುಂಗಡ ಹಣದಲ್ಲೇ ಪುಸ್ತಕವನ್ನು ಮುದ್ರಿಸಿಕೊಟ್ಟರು. (ನಂತರ ಹಂತ ಹಂತವಾಗಿ ಅವರಿಗೆ ಪೂರ್ತಿ ಹಣ ಮುಟ್ಟಿಸಿದೆವು)
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾದ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಪುಸ್ತಕ ಬಿಡುಗಡೆಯ ಬಳಿಕ ಅದರ ಸಂಪಾದಕನಾಗಿದ್ದ ನನ್ನನ್ನು ಸಂಪಾದಕ ಮಂಡಳಿಯ ಪರವಾಗಿ ಡಾ. ರಾಜ್ ಅವರು ಅಭಿನಂದಿಸಿದ ಆ ಕ್ಷಣವನ್ನು ಮರೆಯಲು ಸಾಧ್ಯವೇ ?
ನಿಮ್ಮ ಮೂಗು ನನ್ನ ಥರಾ ಸ್ವಲ್ಪ ಉದ್ದ ಇದೆ ಅಲ್ವೇ ಅಂದಿದ್ದರು ಡಾ. ರಾಜ್

ಕಾರ್ಯಕ್ರಮಕ್ಕೂ ಮೊದಲು ನಗರದ ಗಣ್ಯರೊಬ್ಬರ ಮನೆಯಲ್ಲಿ ಅವರಿಗೆ ಆತಿಥ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದಾಗಲೇ ನಮ್ಮ ಅವರ ಭೆಟ್ಟಿ 2-3 ಸಲ ಆಗಿದ್ದರಿಂದ ಡಾ. ರಾಜ್ ಹಾಗೂ ಅವರ ಪತ್ನಿ ಪಾರ್ವತಮ್ಮನವರು ನನ್ನನ್ನು “ಆರಾಧ್ಯರೇ” ಎಂದು ಹೆಸರಿಡಿದು ಕರೆಯುತ್ತಿದ್ದರು. ಡಾ. ರಾಜ್ ದಂಪತಿಗಳನ್ನು ಸ್ವಾಗತಿಸಲು ನಾವು ತೆರಳಿದಾಗ ನನ್ನನ್ನು ನೋಡಿದ ಡಾ. ರಾಜ್ ಅವರು, ನಾನು ಗಮನಿಸಿರಲಿಲ್ಲ, ನಿಮ್ಮ ಮೂಗೂ ಸಹ ನನ್ನ ತರನೇ ಉದ್ದವಾಗಿದೆ ಅಲ್ವಾ ಎಂದರು. ಈ ರೀತಿ ಹೇಳುತ್ತಾ ತಮ್ಮ ಮೂಗಿನ ತುದಿಯ ಮೇಲೆ ಅವರು ಬೆರಳಿಟ್ಟರು. ತಕ್ಷಣವೇ ನಮ್ಮ ಚಿತ್ರಗ್ರಾಹಕ ಕ್ಲಿಕ್ಕಿಸಿದ ಫೋಟೊ ಇದು.

ಜಿ.ಎಂ.ಆರ್. ಆರಾಧ್ಯ

Leave a Reply

Your email address will not be published. Required fields are marked *