ಅಕ್ಕ,,, ಖಾಲಿ ಹಾಳೆ ಉಳಿದಿರುವ ನೋಟ್ ಬುಕ್ ಗಳು ಇದ್ದರೆ ಕೊಡಿ..

ನಾನು ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ಸೋಮೇಶ್ವರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಹಠಕ್ಕೆ ಬಿದ್ದು ಸರ್ಕಾರಿ ಪಿಯು ಕಾಲೇಜು ಸೇರಿ ವಿಜ್ಞಾನ ವಿಭಾಗದಲ್ಲಿ ಶೇ. 92ರಷ್ಟು ಅಂಕ ಗಳಿಸಿದ ಘಟನೆಯನ್ನು ಬರೆದಾಗ ವಿರಕ್ತಮಠದ ಬಸವಪ್ರಭು ಶ್ರೀಗಳು ಆಕೆಯನ್ನು ಶಿವಯೋಗಾಶ್ರಮದ ಕಾರ್ಯಕ್ರಮದಲ್ಲಿ ಆಹ್ವಾನಿಸಿ ಆಕೆಗೆ ಸನ್ಮಾನ ಮಾಡಿದ್ದು ಅಲ್ಲದೇ ಒಂದಷ್ಟು ಆರ್ಥಿಕ ನೆರವನ್ನು ನೀಡಿದ್ದರು. ಈಗ ಈ ಬಾಲಕನ ಸ್ಥಿತಿ ಆಕೆಗಿಂತಲೂ ಕೆಟ್ಟದ್ದಿದೆ. ಒಂದು ವೇಳೆ ಉಳ್ಳವರು ಮುಂದೆ ಬಂದು ಈತನಿಗೆ ಸಹಾಯ ಮಾಡಿದರೆ ಖಂಡಿತ ಒಳ್ಳೆಯ ವಿದ್ಯಾರ್ಥಿಯಾಗಿ ಹೆಸರು ತರಬಲ್ಲ .

ಇಂದು ಶನಿವಾರ ಶಾಲೆ ಮುಗಿದ ಬಳಿಕ ಆ ಬಾಲಕ ಎಲ್ಲ ಮಕ್ಕಳಂತೆ ಅರ್ಧ ದಿನದ ರಜೆಯನ್ನು ಖುಷಿಯಾಗಿ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಆತನಿಗೆ ನಾಳೆ ಅಗತ್ಯವಿರುವ ನೋಟ್ ಬುಕ್ ಗಳನ್ನು ಹೇಗೆ ಹೊಂದಿಸಬೇಕೆಂಬ ಚಿಂತೆ .ಇದೇ ಕಾರಣಕ್ಕೆ ಎರಡು ಮೂರು ಕಿಲೋಮೀಟರ್ ದೂರದ ಬಸಾಪುರದಿಂದ ಆರನೇ ತರಗತಿಯಲ್ಲಿ ಓದುತ್ತಿರುವ ವಿಕಾಸ್ ಎಂಬ ಈ ಬಾಲಕ ಕೆ.ಬಿ ಬಡಾವಣೆಯ ತನಕ ಬರಿಗಾಲಲ್ಲೇ ಬಂದಿದ್ದ. ಒಂದು ಕಡೆಯಿಂದ ಮನೆ ಮನೆಗೆ ತೆರಳಿ “ಅಕ್ಕ ಖಾಲಿ ಹಾಳೆ ಉಳಿದಿರುವ ನೋಟ್ ಬುಕ್ ಗಳು ಇದ್ದರೆ ಕೊಡಿ” ಎಂದು ಕೋರುತ್ತಿದ್ದ. ಒಮ್ಮೊಮ್ಮೆ ಈ ಮನೆಗಳವರು ನೀವು ತೂಕಕ್ಕೆ ಹಾಕುವ ಬದಲು ಖಾಲಿ ಹಾಳೆಗಳು ಉಳಿದ ನೋಟ್ ಬುಕ್ಗಳನ್ನು ಕೊಟ್ಟರೆ ನಾನು ಅವುಗಳನ್ನು ಪಡೆದು ಉಪಯೋಗಿಸುತ್ತೇನೆ ಎಂದು ವಿನಂತಿ ಸುತ್ತಿದ್ದ. ಆ ಬಾಲಕನ ಧ್ವನಿಯಲ್ಲಿ ದೈನ್ಯತೆ ಇತ್ತಾದರೂ ಅವನ ಮುಖದಲ್ಲಿ ತಾನು ಹೇಗಾದರೂ ಸರಿ ನೋಟ್ ಬುಕ್ಗಳನ್ನು ಸರಿ ಮಾಡಿಕೊಳ್ಳಬೇಕು ಎಂಬ ಛಲ ಇತ್ತು .ಹೀಗೆ ಮನೆಗಳನ್ನು ದಾಟಿ ‘ಜನಮಿಡಿತ’ ಕಚೇರಿಗೆ ಬಂದಾಗ ಆತನ ಬಗ್ಗೆ ಸಂಪಾದಕರು ಏಕೆ ಹೀಗೆ ಎಂದು ವಿಚಾರಿಸಿದರು. ಆ ಬಾಲಕ ಹೇಳಿದ ಕಾರಣ ಕೇಳಿದಾಗ ಹಿಂದೂ ಮುಂದು ನೋಡದೆ ಪಕ್ಕದಲ್ಲೇ ಇದ್ದ ಪುಸ್ತಕದ ಅಂಗಡಿಯಲ್ಲಿ ಆತನಿಗೆ ಅಗತ್ಯವಿರುವಷ್ಟು ನೋಟ್ ಬುಕ್ ಗಳನ್ನು ಕೊಡಿಸಿ ಕಳುಹಿಸಿದರು.

ಹೌದು, ಆತ ಬುದ್ಧಿ ತಿಳಿಯುವುದರೊಳಗೆ ತಂದೆ ತಾಯಿಗಳನ್ನು ಕಳೆದುಕೊಂಡ ನತದೃಷ್ಟ ಅಜ್ಜನ ಮನೆಯಲ್ಲಿ ಹಾಗೂ ಹೀಗೂ ಊಟಕ್ಕೆ ಕೊರತೆ ಇಲ್ಲದೆ ಬೆಳೆಸುತ್ತಿರುವರಾದರೂ, ಶಾಲೆಗೆ ಅಗತ್ಯವಿರುವಷ್ಟು ನೋಟ್ ಪುಸ್ತಕಗಳನ್ನು ಕೊಡಿಸುವ ಶಕ್ತಿ ಅವರಿಗಿಲ್ಲ ಎಂಬುದು ತಿಳಿಯಿತು. ನೋಟ ಬುಕ್ ಗಳನ್ನು ಸ್ವೀಕರಿಸಿದ ಆತನ ಕಣ್ಣುಗಳಲ್ಲಿ ಹೊಳಪಿತ್ತು ಓದೇ ತೀರುತ್ತೇನೆ ಎಂಬ ಹಠ ಇದ್ದಂತಿತ್ತು. ಸರ್ಕಾರದ ಯೋಜನೆಗಳು ಏಕೆ ಇಂತಹವರನ್ನು ತಲುಪುತ್ತಿಲ್ಲ ಈ ಬೆಸ್ತರ ಹುಡುಗನಿಗೆ ಸಹಾಯ ಹಸ್ತ ಚಾಚಲು ಏಕೆ ಸಂಘ-ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಕನಿಷ್ಠ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಹಾಕಲು ಈತನಿಗೆ ಆನ್ ಲೈನ್, ವಾಟ್ಸಪ್, ಫೇಸ್ಬುಕ್ಗಳ ಅರಿವೇ ಇಲ್ಲದ ಮುಗ್ಧನೀತ. ಓದುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಅಲ್ಲಿ ಕೇವಲ ಪಠ್ಯಗಳನ್ನು ಮಾತ್ರ ನೀಡುತ್ತಾರೆ ಹೊರತು ನೋಟ್ ಬುಕ್ ಗಳನ್ನಲ್ಲ. ಆದ್ದರಿಂದ ಈತ ಪರದಾಡ ತೊಡಗಿದ್ದಾನೆ. ಇಂತಹ ಘಟನೆಗಳು ಬೆಳಕಿಗೆ ಬಂದಾಗ ಸಹಾಯ ಹಸ್ತ ಚಾಚಲು ನಮ್ಮಲ್ಲಿ ಸಹೃದಯರ ಕೊರತೆಯಿಲ್ಲ. ಬೆಳಕು ಚೆಲ್ಲುವ ಕೆಲಸ ನಮ್ಮದು.

ಮುಂದಿನ ವಾರದ ಭಾನುವಾರಕ್ಕೆ ‘ಜನ ಮಿಡಿತ ‘ಕಾರ್ಯಾಲಯಕ್ಕೆ ಈತನಿಗೆ ಬರಲು ಹೇಳಿದ್ದಾರೆ. ಅಷ್ಟರೊಳಗೆ ಸಹೃದಯರು ಈತನ ಅಗತ್ಯ ಪಠ್ಯ ಪರಿಕರಗಳನ್ನು ನೀಡಬಲ್ಲರು ಎಂಬ ವಿಶ್ವಾಸವಿದೆ .

✍✍ಸುನಿತಾಪ್ರಕಾಶ್
ಅಂಕಣಗಾರ್ತಿ, ‘ಜನಮಿಡಿತ’

Leave a Reply

Your email address will not be published. Required fields are marked *