ಅಕಸ್ಮಾತಾಗಿ ತನ್ನ ಪತಿ ತೋರಿದ ಪ್ರೀತಿಯನ್ನು ಶಂಕಿಸಿದ ಪತ್ನಿ…! ಕೊನೆಗೆ ಏನಾಯಿತೆಂದು ಗೊತ್ತಾ…?

ಇಬ್ಬರೂ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿರುವಾಗ ಹೆಂಡತಿ ತನ್ನ ಗಂಡನೊಂದಿಗೆ ನಿಮ್ಮನ್ನು ಒಂದು ವಿಷಯ ಕೇಳಲೆ? ಎಂದಳು.

ಗಂಡ : ಕೇಳು ಅದಕ್ಕೆ ಅನುಮತಿ ಬೇಕೆ?
ಹೆಂಡತಿ : ಈ ಮಧ್ಯೆ ನೀವು ಆಫೀಸಿನಿಂದ ಬೇಗ ಬಂದು ನಮ್ಮನ್ನು ಸುತ್ತಾಡಲು ಹೊರಗೆ ಕರೆದುಕೊಂಡು ಹೋಗುತ್ತಿದ್ದೀರಿ. ಮಕ್ಕಳಿಗೆ ಹೋಂ ವರ್ಕ್ ಮಾಡಿಸುತ್ತಾ ಅವರೊಂದಿಗೆ ಸಮಯ ಕಳೆಯುತ್ತಿದ್ದೀರಿ. ನನ್ನೊಂದಿಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದೀರಿ. ಕಾರಣವೇನಿರಬಹುದೆಂದು ಸ್ವಲ್ಪ ಭಯದಿಂದಲೇ ಕೇಳಿದಳು.

ಗಂಡ : ನಾನು ಎಂದಿನಂತೆಯೇ ಇದ್ದೇನೆ. ನಿನಗ್ಯಾಕೆ ಹಾಗೆ ಅನ್ನಿಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ.
ಹೆಂಡತಿ : ನಿಜ ಹೇಳಿ. ನಿಮ್ಮ ಮುಖ ನೋಡಿದರೆ ಇನ್ನೊಂದು ಮನೆ ಮಾಡಿದ್ದೀರಿ ಅನ್ನಿಸುತ್ತದೆ.

ಗಂಡ : ಅಬ್ಬಾ…. ಆ ರೀತಿ ಯೋಚಿಸಬೇಡ.
ಹೆಂಡತಿ : ಹಾಗಿದ್ದಲ್ಲಿ ನಿಜ ಏನೆಂದು ಹೇಳಿ.

ಗಂಡ : ಅದಕ್ಕೆ ಬೇರೆ ವಿಷಯ ಇದೆ ಎನ್ನುತ್ತಾ ತನ್ನ ಡೈರಿಯಿಂದ ಒಂದು ಪತ್ರವನ್ನು ತೆಗೆದು ತನ್ನ ಹೆಂಡತಿ ಕೈಯಲ್ಲಿಟ್ಟನು. ಹೆಂಡತಿಗೆ ಆ ಪತ್ರವನ್ನು ಓದುವಾಗ ಕೈ ನಡುಗತೊಡಗಿತು. ತಾಯಿ ಮಗನಿಗೆ ಬರೆದ ಆ ಪತ್ರವನ್ನು ಓದುವಾಗ ಆಕೆಯ ಕಣ್ಣಲ್ಲಿ ನೀರು ಬಂದಿತು.

ಪ್ರೀತಿಯ ಮಗನಿಗೆ… ಒಂದಲ್ಲ ಒಂದು ದಿನ ಈ ಪತ್ರ ನಿನಗೆ ಸಿಗುತ್ತದೆ ಎಂಬ ಆಸೆಯಿಂದ ಬರೆಯುತ್ತಿರುವೆ. ಸ್ವಲ್ಪ ತಾಳ್ಮೆಯಿಂದ ಈ ಪತ್ರವನ್ನು ಪೂರ್ತಿಯಾಗಿ ಓದು ಚಿನ್ನಾ! ಈ ತಾಯಿಯ ಮನಸನ್ನು ಅರ್ಥ ಮಾಡಿಕೊಳ್ಳುವೆ ಎಂದು ಆಶಿಸುತ್ತಿದ್ದೇನೆ. ನನ್ನ ಮದುವೆಯಾದಾಗ ನಾನು ಒಬ್ಬ ಉಪನ್ಯಾಸಕಿಯಾಗಿದ್ದೆ. ನೀನು ಹುಟ್ಟಿದ ನಂತರ ನಿಮ್ಮ ತಂದೆಯವರಿಗೆ ಅದೃಷ್ಟ ಬಂದು ಚೆನ್ನಾಗಿ ಸಂಪಾದಿಸಿದರು. ನಿನ್ನ ತಂಗಿ ಹುಟ್ಟಿದ ಮೇಲೆ ನಾನು ಕೆಲಸವನ್ನು ಬಿಟ್ಟೆ.

ನಿಮ್ಮ ತಂದೆ ತುಂಬಾ ಬಿಜಿಯಾದರು. ಇನ್ನೂ ಹೆಚ್ಚಿನ ಹಣ ಗಳಿಸಬೇಕೆಂಬ ದುರಾಸೆಯಿಂದ ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ನಿಮ್ಮಿಂದಲೇ ನನಗೆ ಸಂತೋಷ ಸಿಗುತ್ತಿತ್ತು. ನಿಮ್ಮನ್ನು ಶಾಲೆಗೆ ಕಳುಹಿಸುವುದು. ನಂತರ ನಿಮ್ಮ ಬರುವಿಕೆಗಾಗಿ ಎದುರು ನೋಡುವುದು. ಹೀಗೆಯೇ ಕಾಲ ಕಳೆಯಿತು.

ನೀವು ದೊಡ್ಡವರಾದ ನಂತರ ಉದ್ಯೋಗಕ್ಕೆ ಹೋಗಿ ಬರುವುದು, ತಕ್ಷಣ ಊಟ ಮುಗಿಸಿ ಬೇಸರದಿಂದ ಮಲಗಿಬಿಡುವುದು. ಹೀಗೆಯೇ ನಿಮಗೆ ಸಮಯ ಸರಿಹೋಗುತ್ತಿತ್ತು. ನನ್ನೊಂದಿಗೆ ಮಾತಾಡಲೂ ಸಮಯ ಇರುತ್ತಿರಲಿಲ್ಲ. ನಿಮ್ಮ ತಂದೆ ವ್ಯಾಪಾರದ ಜವಾಬ್ದಾರಿಯನ್ನು ನಿನಗೆ ಒಪ್ಪಿಸಿದ ನಂತರ ನೀನು ಕೂಡಾ ಬಿಜೀ ಆದೆ. ನಿನ್ನ ತಂಗಿ ಮದುವೆಯಾದ ಮೇಲೆ ವಿದೇಶಕ್ಕೆ ಹೊರಟು ಹೋದಳು. ಅವಳೂ ಸಂಸಾರದಲ್ಲಿ ಬಿಜೀ ಆದಳು. ವಾರಕ್ಕೊಮ್ಮೆ 2 ನಿಮಿಷಗಳ ಕಾಲ ಫೋನಿನಲ್ಲಿ ಮಾತಾಡುತ್ತಿದ್ದಳು. ಅವಳ ಫೋನಿನ ಕರೆಗಾಗಿ ಕಾಯುತ್ತಿದ್ದೆ. ನಿಮ್ಮ ತಂದೆಯ ಆರೋಗ್ಯ ಹಾಳಾದ ಮೇಲೆ ಅವರಿಗೆ ಸಮಯಕ್ಕೆ ತಿಂಡಿ, ಮಾತ್ರೆ ಕೊಡುವುದು ಹೀಗೆ ಕಳೆಯುತ್ತಿತ್ತು. ನನ್ನ ಜೀವನವಿಡೀ ಗಂಡನಿಗಾಗಿ, ಮಕ್ಕಳಿಗಾಗಿ, ಅವರಿಗಾಗಿ ದುಡಿಯುವುದು, ಎದುರು ನೋಡುವುದರಲ್ಲೇ ಕಳೆದುಹೋಯಿತು. ನಿನಗೂ ಹೆಂಡತಿ, ಮಕ್ಕಳು ಇದ್ದಾರೆ. ಬದುಕಿರುವಾಗ ಹೇಳಲು ಆಗಲಿಲ್ಲ. ಸಾಯುವ ಮೊದಲು ಈ ಪತ್ರವನ್ನು ಬರೆಯುತ್ತಿದ್ದೇನೆ.

ನಿಮ್ಮ ತಂದೆಯವರ ಆರೋಗ್ಯ ಹಾಳಾದಾಗಲೂ ಕೇವಲ ತಿಂಡಿಗಾಗಿ, ಮಾತ್ರೆ ಕೊಡುವುದಕ್ಕಾಗಿ ಮಾತ್ರವೇ ನನ್ನನ್ನು ಮಾತಾಡುತ್ತಿದ್ದರು. ಅವರಿಗೆ ದಿನಪತ್ರಿಕೆಯನ್ನು ಓದಲು ಸಮಯ ವಿರುತ್ತಿತ್ತು. ನನ್ನನ್ನು ಮಾತಾಡಲು ಸಮಯ ಸಿಗುತ್ತಿರಲಿಲ್ಲ. ವಯಸಿನಲ್ಲಿರುವಾಗ ಹಣ ಸಂಪಾದನೆಯ ಮೋಜಿನಲ್ಲಿ ಮಾತಾಡಲು ಸಮಯ ಇರುತ್ತಿರಲಿಲ್ಲ. ಇನ್ನು ಈ ಇಳಿವಯಸಿನಲ್ಲಿ ಮಾತಾಡಲು ಏನಿರುತ್ತದೆ?

ಜೀವನವೆಲ್ಲಾ, ಎದುರು ನೋಡುವುದು… ಎದುರು ನೋಡುವುದು… ಎದುರು ನೋಡುವುದು… ಈಗ ಮರಣಕ್ಕಾಗಿ ಎದುರು ನೋಡುವುದು…

ನಿನ್ನ ಹೆಂಡತಿಯಾಗಲೀ, ಮಕ್ಕಳಾಗಲೀ, ನನ್ನ ಹಾಗೆ ಪತ್ರ ಬರೆಯುವ ಅವಕಾಶ ಬರಬಾರದೆಂಬ ಉದ್ದೇಶದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.

ಮನೆಯಲ್ಲಿರುವ ಹೆಂಗಸರಿಗೂ ಮನಸಿರುತ್ತದೆ ಎಂದು, ನಿಮಗಾಗಿಯೇ ಅವರು ಜೀವಿಸುತ್ತಾರೆ ಎಂದು ಗ್ರಹಿಸಿ…ನಾನು ಎದುರು ನೋಡಿದಂತೆ ನಿನ್ನ ಹೆಂಡತಿಯನ್ನು ಬೇಸರಗೊಳಿಸದೆ, ಮನಸು ಬಿಚ್ಚಿ ಮಾತಾಡಿ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೋ! ಹಣದ ವ್ಯಾಮೋಹದಿಂದ ನಿನ್ನ ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸದೆ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆ.

ನನ್ನ ಕೊನೆಯ ಆಸೆ…. ಸೊಸೆ, ಮೊಮ್ಮಗ, ಮೊಮ್ಮಗಳನ್ನು ಚೆನ್ನಾಗಿ ನೊಡಿಕೋ. ನನ್ನ ಪರಿಸ್ಥಿತಿ ನನ್ನ ಸೊಸೆಗೆ ಬರಬಾರದು. ಆಕೆಗೂ ಮನಸಿರುತ್ತದೆ. ಮನಸಿನ ತುಂಬಾ ನೀವೇ ಇರುತ್ತೀರಿ. ತನಗೆ ಪ್ರೀತಿ ಸಿಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾಳೆ ಎಂಬುದನ್ನು ತಿಳಿದುಕೊಂಡು ಅವಳನ್ನು ಒಬ್ಬ ಮನುಷ್ಯಳಾಗಿ ಗುರ್ತಿಸು. ನೀವೆಲ್ಲರೂ ಸದಾ ಸಂತೊಷವಾಗಿರಬೇಕೆಂದೇ ಕೋರಿಕೊಳ್ಳುತ್ತೇನೆ.

ಇಂತಿ,
ಸದಾ ನಿಮ್ಮ ಕ್ಷೇಮ ಬಯಸುವ
ನಿನ್ನ ತಾಯಿ….

ದಯವಿಟ್ಟು ನಿಮ್ಮ ಕುಟುಂಬದೊಂದಿಗೆ ಸಮಯ ಕಳೆದು ಜೀವಂತವಾಗಿದ್ದಾಗಲೇ ಅವರ ಮನಸನ್ನು ಗೆಲ್ಲಿ. ಯಾಂತ್ರಿಕ ಜೀವನಕ್ಕೆ ಗುರಿಯಾಗಬೇಡಿ..ನಿಮ್ಮ ಕುಟುಂಬವೇ ನಿಮ್ಮ ಜೊತೆಯಾಗಿರುತ್ತದೆ ಎಂಬುದನ್ನು ಮರೆಯಬೇಡಿ.

rasi-SiddaRajuGowda, Mandya.

ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ

Leave a Reply

Your email address will not be published. Required fields are marked *