ಕಾವ್ಯಮಿಡಿತ: ವಾರದ ಕವಿತೆ | ಮಧುಚಂದ್ರದ ಸೆಳೆತ| ರಂಗನಾಥ ಕನಾ. ದೇವರಹಳ್ಳಿ
ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.
ಈ ವಾರದ ವಿಜೇತ ಕವಿತೆ – ಮಧುಚಂದ್ರದ ಸೆಳೆತ
ಮಧುಚಂದ್ರದ ಸೆಳೆತ
ಚಂದ್ರನು ಹಿಮಮಳೆಯ ಸುರಿಸುತಿಹನು
ಬಿಸಿಸ್ಪರ್ಶಕೆ ಆಮಂತ್ರಣ ತಾ ನೀಡಿಹನು!!
ಬೆಳದಿಂಗಳ ಶಯನದೋ ಕರೆದಿಹನು
ದುಂಬಿ ಪುಷ್ಪಗಳ ಚುಂಬನಕೆ ಅಣಿಮಾಡಿಹನು!!
ಮೇಘಗಳು ನಾಚುತ್ತಾ ಬೆರಗುಗಣ್ಣ ಬೀರಿ
ತಂಪೆಲರ ತಂದವು ಸಿಹಿಯಪ್ಪುಗೆಯ ಕೋರಿ!!
ತಿಳಿನೀರು ಮೌನದಲಿ ಮಿಲನಕೊಪ್ಪುವ ಪರಿ
ಬಾನಾಡಿಗಳು ಮಲಗಿಹವು ಕನಸಿನಾಸೆ ತೋರಿ!!
ಚಂದದಾ ತಂಪುಹನಿ ಎಲೆಯಮೇಲೆ ಜಾರಲು
ಅಧರಗಳ ಜೇನಹನಿ ಹೀರುತಾ ಬೆರೆತಿರಲು!!
ರೋಮರೋಮಗಳು ಬೆದರಿ ತನುನಡುಗುತಿರಲು
ಸ್ಪರ್ಷದುತ್ಸವ ತಡೆಯಿಲ್ಲದೆ ಸಾಗುತಿರಲು!!
ಚಳಿಯಲ್ಲೂ ಬೆವರ ಬಿಸಿಸ್ನಾನ ಮಾಡಿಸಿದಂತೆ
ಶಶಿಯು ಮನ್ಮಥನ ಜೊತೆ ಒಪ್ಪಂದವಾದಂತೆ!!
ಅಮಲುಕಂಗಳ ನೋಟ ಶೃಂಗಾರಕ್ಕಡಿಯಂತೆ
ಪ್ರೇಮನದಿಯೊಂದು ಹೃದಯದೊಳೋಡಿದಂತೆ!!
ಚಂದ್ರನು ನಿನ್ನ ನಗುವಲ್ಲಿ ಮಿಂದನೇ ಚೆಲುವೆಯೇ
ಪ್ರೇಮಿಗಳ ಪ್ರತಿನಿಧಿಯಾಗಿ ತಂದನೊಲವೆಯೇ!!
ಸಾಗರವುಕ್ಕಲಿಲ್ಲವೇ ಮೋಡಮಳೆ ಸುರಿಸಲಿಲ್ಲವೇ
ಚಂದ್ರನಿದ್ದರೂ, ಮಿಲನದಬ್ಬರಕೆ ಸೋತ ತಾರೆಯೇ!!
ಯಾವ ಕುಲವಿಲ್ಲ ಮೇಲುಕೀಳಿಲ್ಲ ಚಂದಿರನ ಮುಂದೆ
ಪ್ರಕೃತಿ ಪುರುಷನ ರಸಪಯಣಕೆ ಎಲ್ಲವೂ ಒಂದೆ!!
ತಾರೆಗಳ ಸಂಗೀತಕೆ ಲೋಕವಾ ಸಿಂಗರಿಸಿ ನಿಂದೆ
ಎಂಥಹ ಚಂದದ ಮಧುಮಂಚಕೆ ನೀ ಅರಸಿ ಬಂದೆ!!
ನಿನ್ನ ಜೀವವ ಹೃದಯದಿ ಕಾಯುವ ಒಡೆಯನು
ನಿನ್ನ ಪ್ರೀತಿಯ ಕಡಲ ಒಡಲಿನ ನಾವಿಕನು!!
ಹೆಜ್ಜೆಗೆಜ್ಜೆ ಸೇರಿಸಿ ಪಿಡಿದ ಕರವನು ಎಂದೂ ಬಿಡೆನು
ಭಾಷೆಕೊಡುವ ಗಳಿಗೆಗೆ ಪ್ರಕೃತಿ ಸಾಕ್ಷಿಯಾಗಿಡುವೆನು!!
ಇಹಲೋಕ ಮರೆತು ಸ್ವರ್ಗವೇ ಧರೆಗಿಳಿದಂತೆ
ತಿಂಗಳೊಡೆಯ ಅದಕೆ ರಾಯಭಾರಿಯಾದಂತೆ!!
ತಾರೆಗಳ ಮಧ್ಯೆ ರಂಗಮಂಚದ ಸೃಷ್ಟಿಯಂತೆ
ಮಧುಚಂದ್ರನ ಸೆಳೆತಕೆ ನರನಾರಿ ಬೆರೆತಂತೆ!!
– ರಂಗನಾಥ ಕನಾ. ದೇವರಹಳ್ಳಿ.
ಕವನ ಮತ್ತು ಲೇಖನಗಳಿಗೆ ಆಹ್ವಾನ
ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com