ಗಿಡಮೂಲಿಕೆ ಬನ್ನಿ(ಶಮೀ ವೃಕ್ಷ)
ವಿಜಯದಶಮಿ ಬಂತೆಂದರೆ ‘ಬನ್ನಿ’ ಯನ್ನು ನೆನೆಯದವರಿಲ್ಲ. ಜಗಳವಾಡಿ ಮಾತು ಬಿಟ್ಟು ಮುನಿಸಿಕೊಂಡವರು, ಹಳೆಯ ವೈಮನಸ್ಸಿನಿಂದ ದೂರವಾಗಲು ಬಯಸುವವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು “ಬನ್ನಿ ಕೊಟ್ಟು ಬಂಗಾರದ ಹಾಗೆ ಇರೋಣ” ಎಂದು ಒಂದಾಗುವ ಸಂಭ್ರಮ. ಬನ್ನಿ ಮುಡಿಯುವ ಆಚರಣೆಯು ಬಂಧುತ್ವ ಮತ್ತು ಭಾವೈಕೈತೆಯನ್ನು ಬೆಸೆಯುತ್ತದೆ. ಧನ್ವಂತರಿ ನಿಘಂಟಿನ ಪ್ರಕಾರ ‘ಪಂಚಭೃಂಗ’ ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಅತ್ಯಂತ ಹೆಚ್ಚು ಉಷ್ಣತೆ ಹಾಗು ಕಡಿಮೆ ನೀರಿರುವ ಕಡೆಯೂ ಬೆಳೆಯುವ ಭಾರತದ ದೈವೀಕ ಮರಗಳಲ್ಲಿ ಒಂದು. ರಾಜಸ್ಥಾನದಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ. ನೆರಳಿಗಾಗಿ, ಜಾನುವಾರುಗಳ ಮೇವಿಗಾಗಿ, ಸೌದೆ, ಫರ್ನಿಚರ್, ಗೋಂದು, ತೈಲ, ಮಸಿ(ಇಂಕ್), ಮದ್ಯ, ಗಾಡಿಯ ಗಾಲಿ, ಕಂಬ, ದಿಮ್ಮಿಗಳ ಹಾಗೂ ಕೃಷಿ ಉಪಕರಣಗಳ ತಯಾರಿಕೆಗಾಗಿ ಮರಗಳನ್ನು ಬೆಳೆಸುತ್ತಾರೆ. ಇದರ ಒಣಗಿದ ಕಾಯಿಗಳು ಅಲ್ಲಿನ ಪ್ರಮುಖ ಖಾದ್ಯ. ಇದರ ಕಾಯಿಯನ್ನು ಪಲ್ಯದಿಂದ ಹಿಡಿದು ಉಪ್ಪಿನಕಾಯಿವರೆಗೂ ಉಪಯೋಗಿಸುತ್ತಾರೆ. ಮಣ್ಣಿಗೆ ಫಲವತ್ತತೆ ಹೆಚ್ಚಿಸಲೂ, ಔಷಧಿ ಗಾಗಿಯೂ ಬಳಸುತ್ತಾರೆ.
ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ. ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ. ಪೂರ್ವ ಕಾಲದಲ್ಲಿ ಇದೇ ಮರದ ಕೊಂಬೆಗಳನ್ನು ಉಜ್ಜಿ ಅಗ್ನಿಯನ್ನು ಪಡೆಯುತ್ತಿದ್ದರು.
ಪುರಾಣಗಳಲ್ಲಿ ಬನ್ನಿ ಮರದ ಬಗ್ಗೆ ಸಾಕಷ್ಟು ರೋಚಕ ಕಥೆಗಳಿವೆ.
ಮೊದಲಿನಿಂದಲೂ ಪಾರಂಪರಿಕ ವೈದ್ಯರು ತಮ್ಮ ವೈದ್ಯಕೀಯದಲ್ಲಿ ಬಹು ನಂಬಿಕೆಯಿಂದ ಈ ಮರವನ್ನು ಬಳಸುತ್ತಾ ಬಂದಿದ್ದಾರೆ. ಕುಷ್ಟ ರೋಗ, ಚರ್ಮ ರೋಗಗಳು, ಗೆಡ್ಡೆಗಳು, ಭ್ರಮೆ, ಅರುಚಿ, ಮಸ್ತಿಷ್ಕ ದೌರ್ಬಲ್ಯ, ಬಾಲರೋಗಗಳು, ವಾತ, ಪಿತ್ತ, ಕಫ, ಕೆಮ್ಮು, ಮೂಲವ್ಯಾಧಿ, ಅತಿಸಾರ ಮತ್ತು ಶ್ವಾಸ ಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಈ ಮರದ ಸಾರವನ್ನು ಬಳಸಲಾಗುತ್ತದೆ. ಇದರ ತೈಲ ಗಾಯದಿಂದ ಸೋರುವ ರಕ್ತಸ್ರಾವವನ್ನು ತಡೆಯುತ್ತದೆ. ಪ್ರಾಣಿಗಳಿಗೆ ಉಷ್ಣ ಹೆಚ್ಚಾದಾಗ ಇದನ್ನು ಮೇವಿನೊಂದಿಗೆ ಸೇರಿಸಿ ತಿನ್ನಿಸುವ ಪದ್ಧತಿ ಇದೆ. ವ್ಯಕ್ತಿಯ ರೋಗ ಗುಣವಾದ ನಂತರ ಸ್ನಾನ ಮಾಡಲು ಬಳಸುವ ಐದು ಮೂಲಿಕೆಗಳಲ್ಲಿ ಇದೂ ಒಂದು. ಇದು ರೋಗದ ಸೋಂಕನ್ನು ನಿವಾರಿಸುವುದಲ್ಲದೆ ಶಕ್ತಿಯನ್ನು ಉತ್ತೇಜಿಸುತ್ತದೆ. ನುರಿತ ನಾಟಿ ವೈದ್ಯರ ಸಲಹೆಗಳಿಂದ ಅನಿರೀಕ್ಷಿತ ಗರ್ಭಪಾತವನ್ನು ತಪ್ಪಿಸಬಹುದು.
ತೊಗಟೆಯನ್ನು ಸಂಧಿವಾತದ ಚಿಕಿತ್ಸೆಯಲ್ಲಿ, ಸುಟ್ಟ ಗಾಯಗಳನ್ನು ವಾಸಿ ಮಾಡಲು, ಹಲ್ಲುಗಳ ನೋವು ಹೋಗಲಾಡಿಸಲು, ಜಂತುಹುಳುಗಳ ನಿವಾರಣೆಗೆ, ರುಮಾಟಿಸಂನ ನಿವಾರಣೆಗೆ, ಮುಖದ ಮೇಲಿನ ಅನಗತ್ಯ ರೋಮ ನಿವಾರಣೆಗೆ, ಚರ್ಮದ ಕಾಂತಿ ಹೆಚ್ಚಿಸಲು, ಬೇಧಿಯಂತಹ ಸಮಸ್ಯೆಗಳ ಚಿಕಿತ್ಸೆಗಾಗಿಯೂ ಇದರ ಬಳಕೆಯಾಗುತ್ತದೆ.
ಚೇಳು, ನಾಯಿ, ಬೆಕ್ಕುಗಳ ಕಡಿತದ ಅಸಾಧ್ಯವಾದ ವಿಷ ಪ್ರಭಾವವನ್ನು ಕಡಿಮೆ ಮಾಡಬಹುದು. ಹಾಗೂ ಹಲವಾರು ಹಳೆಯ ಖಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು.
ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದರೆ ಹೃದಯ ಗಟ್ಟಿಯಾಗುತ್ತದೆ.
ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಿಹಿ ನೀರು ಸಿಗುತ್ತದೆಂಬ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಗಳು, ಪುರಾಣ ಕತೆಗಳು, ಔಷಧೀಯ ಗುಣಗಳು, ಮರದ ಉಪಯುಕ್ತತೆ ಎಷ್ಟೇ ಇರಲಿ, ಏನೇ ಇರಲಿ ಆದರೆ ಬನ್ನಿ ಮರಕ್ಕೆ ಸೀರೆ ಯಾಕೆ ಉಡಿಸುತ್ತಾರೆ ಎಂದು ನನಗೆ ಇನ್ನೂ ಅರ್ಥವಾಗಿಲ್ಲ. ಹೇಗೆ ಯೋಚಿಸಿದರೂ, ಯಾರನ್ನು ಕೇಳಿದರೂ ವೈಜ್ಞಾನಿಕ ಕಾರಣ ಗೊತ್ತಾಗುತ್ತಿಲ್ಲ.
ಇನ್ನು ಮುಂದಾದರೂ ನಾವು ಮೂಢನಂಬಿಕೆಗೆ ಬಲಿಯಾಗದೆ ಬನ್ನಿ ಮರದ ಉಪಯೋಗ ಪಡೆಯೋಣ. ಅದೇ ಸೀರೆಯನ್ನು ಯಾರಾದರೂ ಬಡವರಿಗೆ ನೀಡಿ. ಪುಣ್ಯ ಬರುತ್ತದೆ.
ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ,
ದಾವಣಗೆರೆ.