ಗಿಡಮೂಲಿಕೆ ಅರಳಿ (ಅಶ್ವತ್ಥ)

ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ, ಇದರ ಹೂ, ಎಲೆ ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ. ಕೃಷ್ಣ “ಮರಗಳಲ್ಲಿ ನಾನು ಅರಳಿ ಮರವಾಗಿದ್ದೇನೆ” ಎಂದಿದ್ದಾನೆ. ಸ್ಕಂದ ಪುರಾಣಗಳ ಪ್ರಕಾರ ಸರಸ್ವತಿ ನದಿ ಹುಟ್ಟಿದ್ದು ಅರಳಿ ಮರದಿಂದ (ಬ್ರಹ್ಮನ ವಾಸಸ್ಥಾನ ಅರಳಿಯ ಬೇರು. ಬ್ರಹ್ಮನಿಂದ ಹುಟ್ಟಿದ್ದು ಸರಸ್ವತಿ. ಆದ್ದರಿಂದ ಜ್ಞಾನಕ್ಕೆ ಅರಳಿಯ ಬೇರು ಕಾರಣ ಎಂದು ನಂಬಲಾಗಿದೆ). ಬುದ್ಧನಿಗೆ ಜ್ಞಾನೋದಯವಾಗಿದ್ದೂ , ಮೋಕ್ಷ ಸಿಕ್ಕಿದ್ದೂ ಅರಳಿ ಮರದ ಕೆಳಗೆನೇ. ವಿಷ್ಣು ಪುರಾಣದ ಪ್ರಕಾರ “ಪ್ರಳಯವಾದಾಗ ಜೀವ ರಾಶಿಯನ್ನು ಅರಳಿ ಬೀಜದಲ್ಲಿ ಸಂರಕ್ಷಿಸಿ ಇಡಲಾಗುತ್ತದೆ”. ಪಿಪ್ಪಲ ಮಹರ್ಷಿಯೇ ಅರಳಿ ಮರವೆಂದು ಪುರಾಣಗಳು ಹೇಳುತ್ತವೆ.

ಧಾರ್ಮಿಕ ನಂಬಿಕೆಗಳು ಏನೇ ಇರಲಿ, ನಮ್ಮ ಹಿರಿಯರು ಮರಗಳನ್ನು ರಕ್ಷಿಸಲು ಈ ರೀತಿ ದೇವ ದೇವತೆಗಳು ಇರುವರು ಎಂದು ಹೇಳಿರಬಹುದು. ಅವರಿಗೆ ಅರಳಿ ಮರದ ಪ್ರಾಮುಖ್ಯತೆ ಗೊತ್ತಿತ್ತು. ನಮ್ಮ ಹಿರಿಯರ ವೈದ್ಯಕೀಯ ಜ್ಞಾನವು ಅಪಾರ. ಆಮ್ಲಜನಕವನ್ನು ಜಾಸ್ತಿ ಉತ್ಪಾದಿಸುವ ಸಸ್ಯಗಳಲ್ಲಿ ಅರಳಿಗೆ ಅಗ್ರಸ್ಥಾನವೆಂದು ಅವರು ಅಂದೇ ಕಂಡುಕೊಂಡಿದ್ದರು. ಅದಕ್ಕೆ ಊರಿಗೊಂದು ಅರಳಿ ಕಟ್ಟೆ ಇದ್ದೇ ಇರುತಿತ್ತು. ಹೆಣ್ಣು ಮಕ್ಕಳು ಪೂಜೆಯ ನೆಪದಲ್ಲಿ, ಗಂಡಸರು ಪಂಚಾಯಿತಿ ನಡೆಸುವ ನೆಪದಲ್ಲಿ, ಮಕ್ಕಳು ಆಡುವ ನೆಪದಲ್ಲಿ ಅರಳಿಯ ಸುತ್ತಲೂ ಇದ್ದು ಅದರ ಗಾಳಿಯ ಪ್ರಯೋಜನ ಪಡೆಯುತ್ತಿದ್ದರು. ಹೀಗಾಗಿ ದೈಹಿಕ, ಮಾನಸಿಕ ಆರೋಗ್ಯ (ಅರಳಿಯ ಗಾಳಿ ಸೇವನೆಯಿಂದ ನಮ್ಮ ದೇಹದಲ್ಲಿ ಮನಸ್ಸನ್ನು ಉಲ್ಲಾಸವಾಗಿಡುವ ಸೆರಟೋನಿಯಂ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ) ಸಮತೋಲನದಲ್ಲಿರುತಿತ್ತು.

ಅನಾದಿ ಕಾಲದಿಂದಲೂ ಪಾರಂಪರಿಕ ವೈದ್ಯರು ಇದನ್ನು ದೇಶೀ ಪದ್ಧತಿಯ ವೈದ್ಯಕೀಯದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ನಾಟಿ ವೈದ್ಯರು ಅರಳಿ ಮರದ ಎಲ್ಲಾ ಭಾಗಗಳ ವೈದ್ಯಕೀಯ ಜ್ಞಾನ ಹೊಂದಿದ್ದು ಅರಳಿಯಿಂದ ಔಷಧಿ ಮಾಡುವ ಕಲೆ ಅವರಿಗೆ ಕರಗತವಾಗಿರುತ್ತದೆ.

ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಬಿಕ್ಕು(ತೊದಲುವಿಕೆ, ಉಗ್ಗು), ಆರ್ಥವ, ಪಿತ್ತಕೋಶದ ತೊಂದರೆ, ವಾಂತಿ, ಅಸ್ತಮಾ, ದುರ್ಬಲತೆ, ಮಲಬದ್ಧತೆ, ಮೂತ್ರಪಿಂಡ, ಉದರಶೂಲ, ವಿಷ, ದಾಹ, ಪ್ರಮೇಹ, ವಾಜೀಕರಣ, ಅತಿಸಾರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳಿಗೆ ಮರದ ಸರ್ವಾಂಗಗಳು ಪರಿಣಾಮಕಾರಿ ಔಷಧಿಯಾಗಿವೆ. ಇಷ್ಟೇ ಅಲ್ಲದೆ ಕಾಮಾಲೆ, ರಾತ್ರಿ ಕುರುಡುತನ, ಕೆಮ್ಮು, ಮಲೇರಿಯಾ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅರಳಿ ಮರದ ರೆಂಬೆ ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಅರಳಿ ಮರದಿಂದ ಮಾಡಿದ ಬ್ರಶ್ (ಕಡ್ಡಿ) ಹಲ್ಲುಗಳನ್ನು, ಒಸಡುಗಳನ್ನು ಬಲಪಡಿಸುತ್ತವೆ. ಈ ಕಡ್ಡಿಗಳಿಂದ ಪ್ರತಿದಿನ ಹಲ್ಲುಗಳನ್ನು ಸ್ವಚ್ಚಗೊಳಿಸುವ ಮೂಲಕ ಹಲ್ಲುನೋವು, ಹನುಗ್ರಹ( ಲಾಕ್ ಜಾ)ಸಮಸ್ಯೆಗೆ ಪರಿಹಾರ ಕಾಣಬಹುದು.

ಅರಳಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದರ ಮೃದುವಾದ ಎಲೆಗಳನ್ನು ನಿಯಮಿತವಾಗಿ ಅಗಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಇದರಲ್ಲಿ ಆಂಟಿ ಆಕ್ಸಿಡಂಟ್ ಗಳು ಹೇರಳವಾಗಿರುವುದರಿಂದ ಯೌವ್ವನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿಗುರು ಎಲೆಗಳಿಂದ ಪೌಷ್ಟಿಕವೂ, ಶಾಂತಿಯೂ, ಸ್ಮರಣವೃದ್ಧಿಯೂ ದೊರೆಯುತ್ತದೆ. ಮೆದುಳಿನ ದುರ್ಬಲತೆ, ಉನ್ಮಾದ, ಭ್ರಮೆ, ಬಂಜೆತನ, ಕುಷ್ಠ ನಿವಾರಿಸುತ್ತದೆ.

ಮಲಬದ್ಧತೆ ಅಥವಾ ಗ್ಯಾಸ್​ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.

ಆಯುರ್ವೇದದ ಪ್ರಕಾರ ವಾತ, ಪಿತ್ತ ಮತ್ತು ಕಫ ಈ ಮೂರು ದೋಷಗಳಿಂದ ಉಂಟಾಗುವ ವಿವಿಧ ರೋಗಗಳನ್ನು ಗುಣಪಡಿಸಲು ಅರಳಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಅರಳಿ ಎಲೆಗಳು ರಕ್ತವನ್ನು ಸ್ವಚ್ಛಗೊಳಿಸುವಲ್ಲಿ ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿ ಸಹ ಸಹಾಯಕವಾಗಿವೆ. ಅರಳಿ ಎಲೆಗಳ ರಸವು ದೇಹದಲ್ಲಿ ಸಂಗ್ರಹವಾಗಿರುವ ವಿಷ ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಹರ್ಪಿಸ್ ಅಥವಾ ತುರಿಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅರಳಿ ಎಲೆಗಳ ಕಷಾಯ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗೆಯೇ ಗಾಯವಾಗಿದ್ದರೆ, ಅರಳಿ ಎಲೆಗಳ ಬೆಚ್ಚಗಿನ ಪೇಸ್ಟ್ ಅನ್ನು ಹಾಕಬೇಕು. ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಅದೇ ರೀತಿ ಅರಳಿ ಮರದ ತೊಗಟೆ ಪುಡಿಯನ್ನು ಗಾಯಗಳಿಗೆ ಉದುರಿಸುವುದರಿಂದ ಕಿರಿಕಿರಿ ಕಡಿಮೆಯಾಗುವುದಲ್ಲದೆ, ತ್ವರಿತವಾಗಿ ಗಾಯ ಮಾಯುತ್ತದೆ.

ಅರಳಿ ಎಲೆಯನ್ನು ಚಿತ್ರಕಲೆಯಲ್ಲಿ ಬಳಸುತ್ತಾರೆ.
ಇಷ್ಟೊಂದು ಔಷಧೀಯ ಗುಣಗಳಿವೆ ಎನ್ನುವ ಕಾರಣಕ್ಕೆ ಅಶ್ವತ್ಥವನ್ನು ದೈವೀಕ ಮರ ಎಂದು ಹೇಳಬಹುದು. ಆದ್ದರಿಂದ ನಿಮ್ಮ ಸುತ್ತಮುತ್ತ ಏರಿಯಾದಲ್ಲಿ ಒಂದು ಅರಳಿ ಮರವಿರುವಂತೆ ನೋಡಿಕೊಳ್ಳಿ.

ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ,
ದಾವಣಗೆರೆ.

Leave a Reply

Your email address will not be published. Required fields are marked *