ಕುಡಿಯಲು ನೀರು ಕೇಳಿದ ಬಾಲಕನಿಗೆ ಅಂದು ಹಾಲು ಕೊಟ್ಟಳು… ಆದರೆ

ಅದೊಂದು ಅಮೇರಿಕಾದ ಪುಟ್ಟ ಹಳ್ಳಿ. ಅಲ್ಲೊಬ್ಬ ಚಿಕ್ಕ ಬಾಲಕನಿದ್ದ. ತಂದೆ ತಾಯಿಯಿಂದ ದೂರಾಗಿದ್ದ ಬಾಲಕ, ತನ್ನ ಜೀವನ ನಿರ್ವಹಣೆಗೆ ಹಾಗೂ ಶಿಕ್ಷಣಕ್ಕೆ ತಾನೇ ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ಅವಕಾಶ ದೊರಕಿದಾಗಲೆಲ್ಲ ದುಡಿಯುತ್ತಿದ್ದ. ಕೆಲಸ ಮಾಡುವ ಉತ್ಸಾಹ ಇದ್ದ ಹುಡುಗನಿಗೆ ಇಂತಹದ್ದೇ ಕೆಲಸ… ಎಂದೇನೂ ಇರಲಿಲ್ಲ. ಪೇಪರ್, ದಿನಸಿ, ಹಾಲಿನಿಂದ ಹಿಡಿದು ಎಲ್ಲಾ ತರಹದ ವಸ್ತುಗಳನ್ನು ಮನೆ ಮನೆಗೆ ಕೊಂಡೊಯ್ಯುವ ಕೆಲಸ ಮಾಡಿ ತನ್ನ ಜೀವನವನ್ನು ನಡೆಸುತ್ತಿದ್ದ.

ಅದೊಂದು ಬೇಸಿಗೆಯ ಭಾನುವಾರ. ಭಾನುವಾರಗಳಂದು ಶಾಲೆಗೆ ರಜೆ ಇರುತ್ತಿದ್ದ ಕಾರಣ ಬಾಲಕ ಬೆಳಗ್ಗೆಯಿಂದ ಸಂಜೆಯವರೆಗೂ ಮನೆಯಿಂದ ಮನೆಗೆ ಈ ರೀತಿಯ ಸರಬರಾಜು ಮಾಡಿ ತನ್ನ ಕೈಲಾದಷ್ಟು ಹಣ ಗಳಿಸುತ್ತಿದ್ದ. ಎಂದಿನಂತೆ ಅಂದು ತನ್ನ ವ್ಯಾಪಾರ ಪ್ರಾರಂಭಿಸಿ, ಮನೆಮನೆಗೆ ವಸ್ತುಗಳೊಂದಿಗೆ ಸುತ್ತಲಾರಂಭಿಸಿದ. ಆದರೆ, ಅವನ ಎಣಿಕೆಯಂತೆ ಅಂದು ವ್ಯಾಪಾರ ನಡೆಯಲಿಲ್ಲ. ಅವನ ಕೈಯಲ್ಲಿ ಒಂದು ಡೈಮ್ (dime) ಮಾತ್ರ ಇತ್ತು. ಅದನ್ನು ಆಹಾರಕ್ಕಾಗಿ ಖರ್ಚು ಮಾಡಲು ಬಾಲಕನಿಗೆ ಮನಸ್ಸು ಬರಲಿಲ್ಲ. ಬೆಳಿಗ್ಗೆಯಿಂದ ಮನೆಮನೆ ಸುತ್ತಿದರೂ ವ್ಯಾಪಾರ ಆಗದ ನೋವು ನಿರಾಸೆ ಒಂದು ಕಡೆಯಲ್ಲಿ; ಪ್ರಖರವಾಗಿ ಉರಿಯುತ್ತಿದ್ದ ಸೂರ್ಯನ ಕಿರಣಗಳು ಇನ್ನೊಂದು ಕಡೆಯಲ್ಲಿ, ಬಾಲಕನನ್ನು ಹೈರಾಣುಗೊಳಿಸಿತು. ಮಧ್ಯಾಹ್ನ ಸಮೀಪಿಸುತ್ತಿದ್ದಂತೆಯೇ… ಮುಂದಿನ ಮನೆಯಲ್ಲಿ ಸ್ವಲ್ಪ ಊಟವನ್ನು ಕೇಳಬೇಕೆಂದು ಬಾಲಕ ನಿರ್ಧರಿಸಿದ.

ಮುಂದಿನ ಮನೆಯ ಬಾಗಿಲನ್ನು ತಟ್ಟುತ್ತಿದ್ದಂತೆಯೇ ಒಬ್ಬ ತರುಣಿ ಬಂದು ಬಾಗಿಲನ್ನು ತೆರೆದಳು. ಬಾಗಿಲು ತೆರೆದ ತರುಣಿಯನ್ನು ಕಂಡವನಿಗೆ ಅದೇಕೋ ಆಹಾರ ಹೇಳಲು ಸಂಕೋಚವೆನಿಸಿತು. ಆ ತರುಣಿಯಲ್ಲಿ “ದಯಮಾಡಿ ಒಂದು ಲೋಟ ನೀರು ಕೊಡಿ ತುಂಬಾ ಆಯಾಸವಾಗಿದೆ” ಎಂದು ಬಾಲಕ ಕೋರಿಕೊಂಡ. ಬಾಲಕನ ಮುಖ ಕಾಣುತ್ತಲೇ ತರುಣಿಗೆ ಬಾಲಕನ ಸ್ಥಿತಿ ಅರ್ಥವಾಯಿತು. ಹಸಿವಿನಿಂದ ಬಳಲುತ್ತಿರುವ ಈ ಬಾಲಕನಿಂದ ಇನ್ನೊಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ… ಎಂಬ ಅರಿವಾಯಿತು. ಜೊತೆಗೆ, ತನ್ನ ಬಳಿಯಲ್ಲಿ ಆಹಾರ ಕೇಳಲು ಸಂಕೋಚ ಪಡುತ್ತಿದ್ದಾನೆ ಎಂಬುದನ್ನೂ ತಿಳಿದುಕೊಂಡಳು ಆ ತರುಣಿ.

ಒಳಗೆ ತೆರಳಿದ ತರುಣಿ, ನೀರಿನ ಬದಲು ಬಾಲಕನಿಗೆ ಒಂದು ಲೋಟ ತಣ್ಣಗಿನ ಹಾಲನ್ನು ತಂದುಕೊಟ್ಟಳು. ತಣ್ಣನೆಯ ಹಾಲನ್ನು ಕುಡಿಯುತ್ತಲೇ ಬಾಲಕನಿಗೆ ಹೋಗುತ್ತಿರುವ ಜೀವ ಮರಳಿದಂತೆ ಅನಿಸಿತು. ಅದೇ ಸಮಾಧಾನದಲ್ಲಿ ಬಾಲಕ, ಆಕೆ ಕೊಟ್ಟ ಹಾಲಿನ ಬೆಲೆಯನ್ನು ಕೇಳಿದ. ಅದಕ್ಕೆ ತರುಣಿ “ನಿನ್ನ ಮುಖ ನೋಡಿದರೆ ನೀನು ತುಂಬಾ ಆಯಾಸಗೊಂಡಿರುವೆ ಎಂದು ತಿಳಿಯಿತು. ಅದಕ್ಕಾಗಿ ಹಾಲು ತಂದು ಕೊಟ್ಟೆ. ನನ್ನ ಅಮ್ಮ ಹೇಳಿದ್ದಾರೆ, ಯಾವುದೇ ಒಳ್ಳೆಯ ಕೆಲಸಕ್ಕೆ ಪ್ರತಿಫಲವನ್ನು ನಿರೀಕ್ಷಿಸಬೇಡ… ಎಂದು. ಹಾಗಾಗಿ ನನಗೆ ಹಣವನ್ನು ನೀನು ಕೊಡುವುದು ಬೇಡ. ನಿನ್ನ ಮುಖದಲ್ಲಿ ಈ ಕ್ಷಣ ನಾನು ಕಾಣುತ್ತಿರುವ ಸಂತೃಪ್ತಿಯಲ್ಲಿಯೇ ನನ್ನ ಹಣ ಅಡಗಿದೆ” ಎಂದಳು. ಅವಳ ಮಾತಿಗೆ ಬಾಲಕ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ತೆರಳಿದ. ಆಯಾಸದಿಂದ ಕಳೆದುಕೊಂಡಿದ್ದ ಉತ್ಸಾಹ ಈಗ ಮರಳಿತು. ಜೊತೆಗೆ ದೇವರ ಮೇಲಿದ್ದ ವಿಶ್ವಾಸವು ಇಮ್ಮಡಿಯಾಯಿತು

ಹಲವಾರು ವರ್ಷಗಳು ಉರುಳಿದವು. ಆ ತರುಣಿಯ ಪ್ರೌಢಾವಸ್ಥೆ ಮುಗಿದು ಮಹಿಳೆಯಾಗುತ್ತಿದ್ದಂತೆ… ಆರೋಗ್ಯದಲ್ಲಿ ಏರುಪೇರಾಗಿ ವಾಸಿಯಾಗದ ಖಾಯಿಲೆಗೆ ಗುರಿಯಾದಳು. ಸ್ಥಳೀಯ ವೈದ್ಯರಲ್ಲಿ ತೋರಿಸಿದಾಗ ಅವರಿಗೆ ಆ ಮಹಿಳೆಯ ಅನಾರೋಗ್ಯದ ಕಾರಣ ತಿಳಿಯಲಿಲ್ಲ! ಹಾಗಾಗಿ ಅವರು ಮಹಿಳೆಯನ್ನು ನಗರದ ದೊಡ್ಡ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಸ್ಥಳೀಯ ವೈದ್ಯರ ಶಿಫಾರಸಿನ ಮೇರೆಗೆ ಆಕೆಯನ್ನು ನಗರದ ಪ್ರಖ್ಯಾತ ವೈದ್ಯರಾದ ಡಾಕ್ಟರ್ ಜಾನ್ಸನ್ ರ ಬಳಿಯಲ್ಲಿ ತೋರಿಸಲು ಕರೆದೊಯ್ಯಲಾಯಿತು.

ಪ್ರಖ್ಯಾತ ಡಾಕ್ಟರ್ ಜಾನ್ಸನ್ ಆ ಮಹಿಳೆಯ ಆರೋಗ್ಯದ ಬಗ್ಗೆ ಎಲ್ಲ ಮಾಹಿತಿ ಪಡೆದರು. ಮಹಿಳೆ ಬಂದ ಊರಿನ ಹೆಸರು ಕೇಳುತ್ತಲೇ ಡಾಕ್ಟರ್ ಜಾನ್ಸನ್ ಅವಳನ್ನು ನೋಡುವ ಉತ್ಸುಕತೆಯಿಂದ ಅವಳಿದ್ದ ರೂಮಿನ ಕಡೆಗೆ ಧಾವಿಸಿದರು. ಕಣ್ಣು ಮುಚ್ಚಿ ಮಲಗಿದ್ದ ಮಹಿಳೆ ಅನಾರೋಗ್ಯದ ನಿಮಿತ್ತ ತುಂಬಾ ಬಡವಾಗಿದ್ದರೂ… ಡಾಕ್ಟರ್ ಆ ಮುಖವನ್ನು ಗುರುತು ಹಿಡಿದೇ ಬಿಟ್ಟರು! ಕೂಡಲೇ ಡಾಕ್ಟರ್ ಜಾನ್ಸನ್ ಕನ್ಸಲ್ಟೇಶನ್ ರೂಮಿನ ಕಡೆಗೆ ಧಾವಿಸಿದರು. ಸಹ ವೈದ್ಯರೊಂದಿಗೆ ಮಹಿಳೆಯ ಆರೋಗ್ಯದ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಸುಧೀರ್ಘ ತಪಾಸಣೆಯ ನಂತರ ಪ್ರಾಣ ಉಳಿಸಲು ಶಸ್ತ್ರಚಿಕಿತ್ಸೆ ಮಾಡಲೇಬೇಕೆಂದು ತೀರ್ಮಾನಿಸಲಾಯಿತು. ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆಯನ್ನು ಡಾಕ್ಟರ್ ಜಾನ್ಸನ್ ಜಾಗರೂಕತೆಯಿಂದ ಯಶಸ್ವಿಯಾಗಿ ಮಾಡಿ ಮುಗಿಸಿದರು. ಡಾಕ್ಟರ್ ಜಾನ್ಸನ್ ಇದಕ್ಕಾಗಿ ಸುದೀರ್ಘ ಅವಧಿಯನ್ನು ವ್ಯಯಿಸಿದರೂ… ಅವರ ಮನದಲ್ಲೊಂದು ಸಂತೃಪ್ತಿ ನೆಲೆಸಿತ್ತು.

ಇನ್ನೇನು ಮಹಿಳೆ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ದಿನ ಹತ್ತಿರ ಬಂದೇಬಿಟ್ಟಿತು. ಡಾಕ್ಟರ್ ಜಾನ್ಸನರು ಆಸ್ಪತ್ರೆಯ ಕಛೇರಿಗೆ ತೆರಳಿ, ಮಹಿಳೆಯ ಖರ್ಚುವೆಚ್ಚಗಳನ್ನು ತಿಳಿಸಲು ಕೋರಿದರು. ಅಲ್ಲಿ ಅವರಿಗೆ ಆ ಮಹಿಳೆ ಆಸ್ಪತ್ರೆಯ ಖರ್ಚು ವೆಚ್ಚಗಳಿಗಾಗಿ 28,350 ಡಾಲರ್ ಹಣವನ್ನು ಕಟ್ಟಬೇಕೆಂದು ತಿಳಿಯಿತು. ಅದನ್ನು ಕೂಡಲೇ ಡಾಕ್ಟರ್ ಜಾನ್ಸನ್ ರು ಕಟ್ಟಿ, ಬಿಲ್ಲಿನೊಂದಿಗೆ ಚಿಕ್ಕದೊಂದು ಪತ್ರವನ್ನು ಇರಿಸಿ ಮಹಿಳೆಗೆ ಕಳುಹಿಸಿಕೊಟ್ಟರು.

ಇತ್ತ ಮಹಿಳೆಗೆ ಆರೋಗ್ಯ ಸುಧಾರಣೆಯಾದಂತೆಲ್ಲ ಚಿಂತೆ ಆವರಿಸಿತು. ಇಷ್ಟು ದುಬಾರಿ ಆಸ್ಪತ್ರೆಯಲ್ಲಿ ಕೊನೆಗೆ ಬರುವ ಬಿಲ್ಲನ್ನು ಕಟ್ಟಲು ತನ್ನ ಬಳಿ ಹಣ ಇಲ್ಲದ್ದನ್ನು ನೆನೆದು ಆತಂಕಗೊಳ್ಳುತ್ತಿದ್ದಳು. ಕೊನೆಗೂ ಆ ದಿನ ಬಂದೇಬಿಟ್ಟಿತು! ನಡುಗುವ ಕೈಗಳಿಂದ ಆ ಮಹಿಳೆ ಆಸ್ಪತ್ರೆಯವರು ನೀಡಿದ ಬಿಲ್ಲನ್ನು ಪಡೆದಳು. ಅತಿ ದೊಡ್ಡ ಮೊತ್ತದ ಮುಂದೆ “ಬಿಲ್ಲಲ್ಲಿ ನಮೂದಿಸಲಾದ ಹಣವನ್ನು ಕಟ್ಟಲಾಗಿದೆ” ಎಂದು ಬರೆದಿದ್ದನ್ನು ಕಂಡು ಮಹಿಳೆ ಆಶ್ಚರ್ಯಗೊಂಡಳು. ಅದರ ಜೊತೆಗಿದ್ದ ಪತ್ರದ ಒಕ್ಕಣೆಯನ್ನು ಓದತೊಡಗಿದಳು. ಇದ್ದ ಎರಡೇ ಸಾಲುಗಳಲ್ಲಿ “ನಿಮ್ಮ ಹಣ ಬಹಳ ವರ್ಷಗಳ ಹಿಂದೆ ಒಂದು ಲೋಟ ಹಾಲಿನ ರೂಪದಲ್ಲಿ ಸಂದಾಯವಾಗಿದೆ” ಎಂದು ಬರೆಯಲಾಗಿತ್ತು.

ಕೂಡಲೇ ಆ ಮಹಿಳೆಗೆ, ಅಂದು ಬಿಸಿಲಿನಲ್ಲಿ ಬಳಲಿ ಬಂದ ಹುಡುಗನಿಗೆ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ತಾನು ಹಾಲನ್ನು ನೀಡಿ ಉಪಚರಿಸಿದ್ದು ನೆನಪಾಯಿತು. ಅದೆಂದೋ ನೀಡಿದ ಚಿಕ್ಕ ಸಹಾಯಕ್ಕೆ ಇಂದು, ಇಷ್ಟು ದೊಡ್ಡ ಪ್ರತಿಫಲ ದೊರೆಯುವುದೆಂದು ಆ ಮಹಿಳೆ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ! ದೇವರು ವೈದ್ಯನ ರೂಪದಲ್ಲಿ ಬಂದು ತನಗೆ ಸಹಾಯ ಮಾಡಿದ್ದಾನೆಂದು ಸಂತೋಷಗೊಂಡಳು. ಆಕೆಗೆ ದೇವರ ಮೇಲಿನ ನಂಬಿಕೆ ಇನ್ನೂ ಬಲವಾಯಿತು.

ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ… “ಪ್ರತಿಫಲದ ಅಪೇಕ್ಷೆಯಿಲ್ಲದೆ ಕೆಲಸ ಮಾಡು. ಫಲವನ್ನು ದೇವರಿಗೆ ಬಿಟ್ಟು ನಿನ್ನ ಕರ್ತವ್ಯ ನಿಭಾಯಿಸಿ ನೋಡು. ಅದ್ಭುತವಾದ ಪ್ರತಿಫಲವೊಂದು ನಿನಗೆ ಮುಂದೆ ದೊರೆಯುತ್ತದೆ”. ಹೌದು, ಯಾವ ಕೆಲಸವನ್ನಾದರೂ ನಾವು ಫಲದ ಅಪೇಕ್ಷೆ ಇಟ್ಟುಕೊಳ್ಳದೆ ಮಾಡಿದಾಗ ಆತ್ಮ ಸಂತೃಪ್ತಿಯ ಜೊತೆಗೆ ಅದ್ಭುತವಾದ ಫಲಿತಾಂಶವೊಂದು ನಮಗೆ ಕಾದಿರುತ್ತದೆ!

One thought on “ಕುಡಿಯಲು ನೀರು ಕೇಳಿದ ಬಾಲಕನಿಗೆ ಅಂದು ಹಾಲು ಕೊಟ್ಟಳು… ಆದರೆ

  • May 5, 2021 at 4:06 pm
    Permalink

    ೧)ಹಾಲಿನ ಕಥೆ…
    ೨)ಎಲ್ಲದಕ್ಕೂ ದೇವರಿದ್ದಾನೆ
    ಈ ಎರಡೂ ತುಂಬಾ ವಿಚಾರ ಮಾಡ್ತೀವಿ ಸಂಗತಿಗಳು
    ದೇವರೆಂದರೆ ಗುಡಿಗುಂಡಾರ ಮಾತ್ರವಲ್ಲ..
    ಹಾಗೇ ಪ್ರಯತ್ನ ವೂ ಸಂಕಲ್ಪವೂ ಬೇಕು
    ಎಲ್ಲ ಮುಗಿದ ಮೇಲೆ.ದೇವರು: ಅದೇ ಆತ್ಮ ಸ್ಥೈರ್ಯ
    ನನಗನಿಸಿದ್ದು.
    ದೃಷ್ಟಾಂತ ರೋಚಕ ವಾಗಿದೆ ,🙏

    Reply

Leave a Reply

Your email address will not be published. Required fields are marked *