ನೆರೆ ಸಂತ್ರಸ್ತರಿಗೆ ಶ್ರೀಶೈಲ ಪೀಠದಿಂದ 634 ಗ್ರಾಂ ಚಿನ್ನ ದೇಣಿಗೆ :ಒಟ್ಟು 100 ಮನೆ ನಿರ್ಮಿಸಿಕೊಡುವ ಯೋಜನೆ: ಜಗದ್ಗುರುಗಳ ಘೋಷಣೆ
ನೆರೆ ಹಾವಳಿಯಿಂದ ದಯನೀಯ ಪರಿಸ್ಥಿತಿಗೆ ಬಂದಿರುವ ಸಂತ್ರಸ್ತರ ಶಾಶ್ವತ ಪರಿಹಾರಕ್ಕೆ ಶ್ರೀಶೈಲ ಪೀಠದಿಂದ 634 ಗ್ರಾಂ ಬಂಗಾರವನ್ನು ನೀಡಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ದಾವಣಗೆರೆಯ ಶ್ರೀಶೈಲ ಪೀಠದ ಜಗದ್ಗುರು ಪಂಚಾಚಾರ್ಯ ಮಂದಿರ ಧರ್ಮ ಸಂಸ್ಥೆಯಲ್ಲಿ ಆಯೋಜಿಸಲಾದ ಲಿಂಗೈಕ್ಯ ಉಭಯ ಜಗದ್ಗುರುಗಳ ಸ್ಮರಣೋತ್ಸವ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಚಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ನೆರೆಯಿಂದ ಉಂಟಾದ ಭಯಾನಕ ಪರಿಸ್ಥಿತಿಯನ್ನು ಗಮನಿಸಿ ಮತ್ತು ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮಠಾಧೀಶರು ಮುಂದೆ ಬರಬೇಕೆಂದು ಮನವಿ ಮಾಡಿರುವುದರಿಂದ ಶ್ರೀಶೈಲ ಪೀಠ ಈ ಕೊಡುಗೆಗೆ ಮುಂದಾಗಿದೆ.
2010 ರಲ್ಲಿ ನಮ್ಮ ಪೀಠಾರೋಹಣದ ನಂತರ ಇಲ್ಲಿಯವರೆಗೆ ಅಲ್ಲಲ್ಲಿ ಸಮಾಜದ ಬೇರೆ ಬೇರೆ ಭಕ್ತರು ಭಕ್ತಿಯಿಂದ ನಮಗೆ ಚಿನ್ನವನ್ನು ಅರ್ಪಿಸಿದ್ದರು. ಅದನ್ನು ಸಂಗ್ರಹಿಸಿ ಶ್ರೀಶೈಲ ಪೀಠದಲ್ಲಿ ಜಗದ್ಗುರು ಪಂಡಿತಾರಾಧ್ಯ ಲಿಂಗೋದ್ಭವ ಮೂರ್ತಿ ಸುವರ್ಣ ಕವಚವನ್ನು ನಿರ್ಮಿಸಬಹುದು ಎಂದು ವಿಚಾರಿಸಿದ್ದೆವು. ಆದರೆ ಸಮಾಜಕ್ಕೆ ಆಪತ್ತು ಬಂದಿರುವ ಈ ಸಂದರ್ಭದಲ್ಲಿ ಸಮಾಜಕ್ಕೆ ನೀಡುವುದು ಹೆಚ್ಚು ಸೂಕ್ತ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಶ್ರೀಶೈಲ ಪೀಠದಿಂದ ಇತರ ಮಠಾಧೀಶರ ಹಾಗೂ ಸಮಾಜದ ಸದ್ಭಕ್ತರ ಸಹಯೋಗದೊಂದಿಗೆ 100 ಮನೆಗಳನ್ನು ನಿರ್ಮಿಸುವ ಯೋಜನೆ ಇದ್ದು ಈ 634 ಗ್ರಾಂ ಚಿನ್ನವನ್ನು ಮಾರಿ ಬಂದ ಹಣವನ್ನು ಇದಕ್ಕಾಗಿ ಉಪಯೋಗಿಸಲಾಗುವುದು. ಇದಲ್ಲದೆ ಹೊನ್ನಾಳಿ ಹಿರೇಕಲ್ಮಠದ ಶ್ರೀಗಳು, ಕುರುಗೋಡ ರಾಘವಾಂಕ ಮಠದ ಶ್ರೀಗಳು, ಸೊಲ್ಲಾಪುರ ಹೊಟಗಿ ಬೃಹನ್ಮಠ ಶ್ರೀಗಳು, ಬಸವನ ಬಾಗೇವಾಡಿ ತಾಲ್ಲೂಕಿನ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ್, ಬೆಂಗಳೂರು ನಿವಾಸಿಗಳಾದ ದೇವದುರ್ಗದ ಭೀಮನಗೌಡ ಪೊಲೀಸ್ ಪಾಟೀಲ್ ಮತ್ತು ಕಾರಟಗಿಯ ಚನ್ನ ಬಸಯ್ಯ, ಮುತ್ತಿನ ಪೆಂಡಿಮಠ ಇವರು ತಲಾ ಒಂದೊಂದು ಮನೆ ನಿರ್ಮಿಸಿಕೊಡಲು ವಾಗ್ದಾನ ನೀಡಿರುವುದಲ್ಲದೆ ಅನೇಕರು ತಮ್ಮ ತಮ್ಮ ಶಕ್ತಾನುಸಾರ ಸಹಕಾರ ನೀಡುವುದಾಗಿ ಒಪ್ಪಿಕೊಂಡಿರುತ್ತಾರೆ. ಒಂದು ಮನೆಗೆ ಅಂದಾಜು ಐದು ಲಕ್ಷ ರೂಗಳು ವೆಚ್ಚವಾಗುವುದು ಎಂದು ನಿರೀಕ್ಷಿಸಲಾಗಿದೆ. ಇದೊಂದು ಬೃಹತ್ ಗಾತ್ರದ ಸಂಯೋಜನೆ ಯಾಗಿರುವುದರಿಂದ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ನೀಡುವಲ್ಲಿ ಮುಂದೆ ಬರಬೇಕೆಂದು ಕರೆ ಕೊಟ್ಟರು.
ದಾವಣಗೆರೆಯಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಲಿಂl ವಾಗೀಶ ಪಂಡಿತಾರಾಧ್ಯ ಜಗದ್ಗುರುಗಳ ಮತ್ತು ಲಿಂl ಉಮಾಪತಿ ಪಂಡಿತಾರಾಧ್ಯ ಜಗದ್ಗುರುಗಳು ಅವರ ಸ್ಮರಣೋತ್ಸವ ಸಮಾರಂಭವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ಇದರಲ್ಲಿ ಉಳಿದ ಹಣವನ್ನೆಲ್ಲ ಸಂತ್ರಸ್ತರ ಪರಿಹಾರಕ್ಕೆ ಉಪಯೋಗಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಈಗಾಗಲೇ ತಾವು ವೈಯಕ್ತಿಕವಾಗಿ 25 ಲಕ್ಷ ರೂಗಳನ್ನು ಪರಿಹಾರ ನಿಧಿಗೆ ನೀಡಿದ್ದು, ಜಗದ್ಗುರುಗಳ ನೂರು ಮನೆ ಯೋಜನೆಯಲ್ಲಿ ತಾವು ಸಹ ಒಂದು ಮನೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ದಾವಣಗೆರೆ ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಎನ್. ಎ ಮುರುಗೇಶ್, ಅಜ್ಜಂಪುರ, ಮೃತ್ಯುಂಜಯ ವಿವಿಧ ಶಿವಾಚಾರ್ಯರು ಗಳು ಉಪಸ್ಥಿತರಿದ್ದರು .