ಅನ್ನ- ಸಾಂಬರ್ ಪ್ಯಾಕ್ ಮಾಡಿಕೊಳ್ಳುತ್ತಿದ್ದ ಆ ಮಹಿಳೆ ಮತ್ತು ಆತ್ಮೀಯ ಎಂದು ನಾನು ಭ್ರಮಿಸಿದ್ದ ಈತ….
ಆಕೆ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಒಂದಷ್ಟು ಅನ್ನ ಹಾಗೂ ಸಾಂಬರ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಳು. ಅದೇ ಸಂದರ್ಭದಲ್ಲಿ ಅದನ್ನು ಕಂಡ ನನ್ನ ಮಿತ್ರನೊಬ್ಬ ಆಕೆಯನ್ನು ಅನುಮಾನ ದೃಷ್ಟಿಯಿಂದ ನೋಡಿ “ಏಕೆ” ಎಂದು ಪ್ರಶ್ನಿಸುವವನಂತೆ ಮುಖಭಾವ ಹೊಂದಿದ್ದ. ಇನ್ನೇನು ಆತ ಈ ಮಹಿಳೆಯನ್ನು ಪ್ರಶ್ನಿಸುತ್ತಾನೆ ಎಂದು ತಕ್ಷಣ ಗಮನಿಸಿದ ನಾನು ಅತ್ತ ತೆರಳಿ ಆತನಿಗೆ ಏನೂ ಮಾತನಾಡದಂತೆ ಕಣ್ಸನ್ನೆ ಮಾಡಿದೆ.
ನನ್ನನ್ನು ಪಕ್ಕಕ್ಕೆ ಕರೆದು ಆತ, ಆಪಾದನೀಯ ಧ್ವನಿಯಲ್ಲಿ ಕೇಳಿದ “ಇಂತಹ ಜನರು ಇದಾರ?” ಎಂದು. ತುಂಬಾ ಕಾರ್ಯ ಒತ್ತಡ ಇದ್ದುದರಿಂದ ತಕ್ಷಣ ಆತನಿಗೆ ಎಲ್ಲವನ್ನೂ ಬಿಡಿಸಿ ಹೇಳಲಾಗಲಿಲ್ಲ.
ಹೌದು, ನಮ್ಮ ಮನೆಯ ಗೃಹ ಪ್ರವೇಶದ ಸಂದರ್ಭ ಅದು. ಆಗಲೇ ಅತಿಥಿಗಳು, ಬಂಧು- ಮಿತ್ರರು ಬರಲು ಆರಂಭಿಸಿದ್ದರು. ಅಡುಗೆ ಎಲ್ಲಾ ಸಿದ್ಧತೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಲು ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನಾನು ಹೋದಾಗ ಕಂಡು ಬಂದ ದೃಶ್ಯವಿದು.
ವಿಚಿತ್ರ ಎಂದರೆ ಅಂದು ಆ ಪ್ರಶ್ನೆ ಕೇಳಿದ ಗೆಳೆಯ ನಂತರ ಮತ್ತೆ ಮೇಲಿನ ಘಟನೆಯ ಬಗ್ಗೆ ಪ್ರಸ್ತಾಪಿಸಲಿಲ್ಲ. ಹೇಳುವ ಅವಕಾಶವೂ ನನಗೆ ದೊರೆತಿರಲಿಲ್ಲ. ಇಂದು ಏಕೋ ಆ ವಿಷಯ ನಿಮ್ಮ ಮುಂದೆ ಇಡಬೇಕು ಅನ್ನಿಸಿತು.
ನಮ್ಮ ಮನೆಯ ಗೃಹ ಪ್ರವೇಶದ ದಿನಾಂಕ ಜನಮಿಡಿತ ದ್ವಿದಶಮಾನೋತ್ಸವ ದಿನಾಂಕದಂತೆ ೨-೩ ಬಾರಿ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು (ಸುದೈವ ಎಂದರೆ ಆಹ್ವಾನ ಪತ್ರಿಕೆ ಮುದ್ರಣವಾಗಿರಲಿಲ್ಲ). ಆದರೆ ನಿಗದಿಯಾದ ಬಳಿಕ ಅದೇ ದಿನಾಂಕಗಳಂದು ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನೆಡೆದವು ಎಂಬುದು ಬೇರೆ ಮಾತು.
ಆದರೆ ಹೀಗೆ ನಮ್ಮ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು ಹಾಗೂ ಅದರ ಅನಿವಾರ್ಯತೆಯೂ ನಾನು ನನ್ನ ಆತ್ಮೀಯ ಎಂಬ ಭ್ರಮೆಯಲ್ಲಿದ್ದ ಆ ಸ್ನೇಹಿತನಿಗೂ ತಿಳಿದಿತ್ತು… ಆ ಹೆಣ್ಣು ಮಗಳು ಒಂದಷ್ಟು ಅನ್ನ ಸಾಂಬರ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾಗ ಈತ ಮಾಡಿದ ಅಡುಗೆಗೆ ಬಂದ ನೆಂಟನಂತೆ ಆಗ ತಾನೆ ಬಂದು ಅಡುಗೆ ಮನೆ ಹೊಕ್ಕು ಈ ದೃಶ್ಯ ಕಂಡು ಆಕಾಶವೇ ಮೈಮೇಲೆ ಬಿದ್ದವನಂತೆ ಆಡಿದ್ದು ಮಾತ್ರ ನನಗೆ ಸರಿ ಕಾಣಲಿಲ್ಲ. ಏಕೆಂದರೆ ಇದೇ ಮಿತ್ರ ನಮ್ಮ ಕಾರ್ಯಕ್ರಮಗಳು ಮುಂದೂಡಲ್ಪಟ್ಟಾಗ ವ್ಯಂಗ್ಯ ವಾಗಿ ನನ್ನ ಇತರ ಸ್ನೇಹಿತರುಗಳ ಬಳಿ, “ಗೃಹ ಪ್ರವೇಶ ಆಗಲೇ ಮುಗಿದುಹೋಯ್ತಾ?” ಎಂದು ಕೇಳಿದ್ದನಂತೆ. ಆ ವಿಷಯ ನನಗೆ ನಂತರ ತಿಳಿಯಿತು. ಆದರೆ ಪ್ರತೀ ಬಾರಿಯೂ ಕಾರ್ಯಕ್ರಮ ಮುಂದೂಡಲ್ಪಟ್ಟ ಅನಿವಾರ್ಯತೆ ತಿಳಿದೂ ಈತ ಹೀಗೆ ಪ್ರಶ್ನಿಸಿದ್ದು ನನಗೆ ತುಂಬಾ ನೋವುಂಟು ಮಾಡಿತ್ತು.
ಆ ಮಹಿಳೆ ನಮ್ಮ ಕಚೇರಿಯಲ್ಲಿ ಐದಾರು ವರ್ಷಗಳ ಕೆಳಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನಂತರ ಅಂಗನವಾಡಿಯಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ಸಣ ಪತ್ರಿಕೆಯಾದ್ದರಿಂದ ಹೆಚ್ಚು ವೇತನ ಕೊಡಲು ನನಗೆ ಸಾಧ್ಯವಾಗದಿದ್ದುದುರಿಂದ ಆಕೆ ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸಿ, ನನ್ನ ಅನುಮತಿ ಪಡೆದು, ಭಾವುಕಳಾಗಿಯೇ ‘ಜನಮಿಡಿತ’ದಲ್ಲಿ ಕೆಲಸ ಬಿಟ್ಟಿದ್ದರು.
ನಮ್ಮ ಗೃಹ ಪ್ರವೇಶದ ವಿಷಯ ತಿಳಿದು ಅಂದು ತನ್ನ ಕೆಲಸಕ್ಕೆ ರಜೆ ಹಾಕಿ ಹಿಂದಿನ ದಿನವೇ ಬಂದು ರಾತ್ರಿ ಒಂದು ಗಂಟೆಯ ತನಕ ಅದು ಇದು ಕೆಲಸ ಮಾಡಿ, ಅಲ್ಲಿಯೇ ಮಲಗಿದ್ದರು. ಪುನಃ ಬೆಳಗ್ಗೆ ೪ ಗಂಟೆಗೆ ಎದ್ದು, ಅಡುಗೆಯ ಉಸ್ತುವಾರಿ ನೋಡಿಕೊಳ್ಳುತ್ತಾ ಅವರಿಗೆ ಸಹಕರಿಸುತ್ತಿದ್ದಳು. ಮನೆಯಲ್ಲಿ ಅನಾರೋಗ್ಯ ಪೀಡಿತ ಗಂಡ ಹಾಗೂ ೧೨ ವರ್ಷ ದ ಮಗುವನ್ನು ಬಿಟ್ಟು ಬಂದಿದ್ದಳು. ನಾನೆ ಆಕೆಗೆ ಅವರುಗಳಿಗೆ ಏನಾದರೂ ಊಟಕ್ಕೆ ಇಲ್ಲಿಂದ ಪ್ಯಾಕ್ ಮಾಡಿಕೋ ಎಂದು ಹೇಳಿದ್ದೆ. ಹಿಂದಿನ ದಿನದಿಂದಲೂ ಆಕೆ ಇಲ್ಲೇ ಇದ್ದುದರಿಂದ ಸ್ನಾನವೂ ಸಹ ಆಗಿರಲಿಲ್ಲ. ಹಾಗಾಗಿ ಗಂಡ ಮಗುವಿಗೆ ಏನಾದರೂ ಒಂದಿಷ್ಟು ಕೊಟ್ಟು, ತಾನು ರೆಡಿಯಾಗಿ ಬರಲು ಹೊರಟಿದ್ದಳು. ಅಷ್ಟರಲ್ಲೇ ನನ್ನ ಗೆಳೆಯ ಈಕೆಯನ್ನು ಆಪಾದಿತ ದೃಷ್ಟಿಯಿಂದ ನೋಡಿದ್ದು ನೆನಪಾಯಿತು. ಇದಕ್ಕೂ ಮೊದಲು ಆಕೆ ಮನೆಗೆ ಹೋಗಿ ಬರುವೆ ಎಂದಾಗ ನಾನು ಕೊಡಲು ಹೋದ ೫೦೦ ರೂ,ಗಳನ್ನು ಆಕೆ ಮುಟ್ಟಲಿಲ್ಲ. “ಅಣ್ಣಾ ನನ್ನ ಕಷ್ಟದ ದಿನಗಳಲ್ಲಿ ಅಷ್ಟು ವರ್ಷಗಳ ಕಾಲ ನೀವು ಕೆಲಸ ಕೊಟ್ಟಿದ್ದಿರಿ. ದಯಮಾಡಿ ಇದು ನನ್ನ ಸೇವೆ ಅಂದುಕೊಳ್ಳಿ” ಎಂದು ನಯವಾಗಿಯೇ ನಿರಾಕರಿಸಿದಳು.
ನಿಸ್ವಾರ್ಥದಿಂದ ಹಾಗೂ ಅಭಿಮಾನದಿಂದ ಹಗಲಿರುಳು ದುಡಿದ ಆಕೆಯ ಮುಖ ಒಂದು ಕಡೆ, ಹಿಂದೆಲ್ಲಾ ವ್ಯಂಗ್ಯವಾಡಿ ಊಟದ ಸಮಯಕ್ಕೆ ಸರಿಯಾಗಿ ಗೃಹಪ್ರವೇಶಕ್ಕೆ ಬಂದ ಈತನ ಮುಖ ಮತ್ತೊಂದು ಕಡೆ, ಇನ್ನೂ ನನ್ನ ಸ್ಮೃತಿ ಪಟದಲ್ಲಿ ಅಚ್ಚಳಿಯದೇ ಉಳಿದಿದೆ.
– ಜಿ .ಎಂ.ಆರ್.ಆರಾಧ್ಯ.