ನಾನೊಬ್ಬ ಉತ್ತಮ ಎನ್ನಬಹುದಾದ ಸಂಪಾದಕ ಆಗಿದ್ದೇನೆ ಹೊರತು ಒಬ್ಬ ಉತ್ತಮ ಆಡಳಿತಗಾರ ಆಗುವಲ್ಲಿ ಖಂಡಿತಾ ಎಡವಿದೆ…

ಪತ್ರಿಕೋದ್ಯಮದಲ್ಲಿ ಆರಂಭದಿಂದಲೂ ಆಸಕ್ತಿ ಹೊಂದಿದ್ದ ನಾನು “ಲಂಕೇಶ್" ಪತ್ರಿಕೆಯಿಂದ ಈ ವೃತ್ತಿಗೆ ಇಳಿದೆನು. ನಂತರ ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪನವರ ವಿಶ್ವವಾಣಿ, ಬೆಳಗಾವಿಯ “ಕನ್ನಡಮ್ಮ” ಪತ್ರಿಕೆಯ ಕರೆಯ ಮೇರೆಗೆ ಪಾಟೀಲ್ ಪುಟ್ಟಪ್ಪನವರ ಅನುಮತಿ ಪಡೆದು ಕನ್ನಡಮ್ಮ ದಲ್ಲಿ ಸಹಸಂಪಾದಕನಾಗಿ ಸೇವೆ ಸಲ್ಲಿಸಿದೆ. ನಂತರ ಬೀದರ್‍ನ “ಉತ್ತರ ಕರ್ನಾಟಕ" ದಿನಪತ್ರಿಕೆಯಲ್ಲಿ ಸಹಸಂಪಾದಕ ನಾಗಿ ಕೆಲ ವರ್ಷ ಸೇವೆ ಸಲ್ಲಿಸಿದೆ. ನಂತರ ವಿಜಯ ಪುರದ "ಸಿಕ್ಯಾಬ್ ಮಹಿಳಾ ಪ್ರಥಮ ದರ್ಜೆ ಕಾಲೇಜು” ಅವರ ಒತ್ತಾಯದ ಮೇರೆಗೆ ಅಲ್ಲಿ ಪತ್ರಿಕೋದ್ಯಮ ಗೌರವ ಉಪನ್ಯಾಸಕ ನಾಗಿ ಸೇವೆ ಸಲ್ಲಿಸಿದೆ. ಇದಾದ ಬಳಿಕ ಡಾ. ಗೊ.ರು.ಚ. ಅವರ ಮನವಿಗೆ ಒಪ್ಪಿ ದಾವಣಗೆರೆಯ ‘ಜನತಾವಾಣಿ’ಯಲ್ಲಿ ಏಳುವರ್ಷಗಳ ಕಾಲ ಸಹ ಸಂಪಾದಕನಾಗಿ ಕೆಲಸ ಮಾಡಿದೆ. ಇದೇ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಕನ್ನಡ ಚಿತ್ರರಂಗದ ಕುರಿತಾದ “ಬೆಳ್ಳಿತೆರೆ" ಎಂಬ ಪುಸ್ತಕವನ್ನು ನನ್ನ ಸಂಪಾದಕತ್ವದಲ್ಲಿ ಹೊರತರುವ ಉತ್ಸಾಹದಲ್ಲಿ ಪತ್ರಿಕೆಯ ಕೆಲಸವನ್ನು ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರಿಂದ ಭಿನ್ನಾಭಿಪ್ರಾಯ ಗಳು ಮೂಡಿ ನಾನೇ ಒಂದು ಪತ್ರಿಕೆಯನ್ನು (ಜನಮಿಡಿತ) ಆರಂಭಿಸಬೇಕಾಯಿತು. ಈ ಪುಸ್ತಕವನ್ನು ಸ್ವತಃ ಮೇರುನಟ ಡಾ. ರಾಜ್‍ಕುಮಾರ್ ಅವರೇ ದಾವಣಗೆರೆಗೆ ಬಂದು ಬಿಡುಗಡೆ ಮಾಡಿದರು. ಇದು ಹೆಮ್ಮೆಯ ವಿಷಯ. ಸ್ವಂತ ಪತ್ರಿಕೆ ಆದಾಗ ಬರವಣಿಗೆಯ ಕಡೆ ಹೆಚ್ಚು ಗಮನ ಕೊಡುವುದು ಅನಿವಾರ್ಯವಾಗಿತ್ತಾ ದರೂ ಸಿಬ್ಬಂದಿಯ ವೇತನ, ನ್ಯೂಸ್ ಪ್ರಿಂಟ್ ಖರೀದಿ, ಡಿಟಿಪಿ ಆಪರೇಟರ್‍ಗಳು, ವರದಿಗಾರರು, ಫೋಟೋ ಗ್ರಾಫರ್, ಪೇಜ್ ಪೇಸ್ಟರ್ ಇತ್ಯಾದಿ ನಿರ್ವಹಣೆಗೆ ಹೆಚ್ಚು ಸಮಯ ಹಿಡಿಯುತ್ತಿತ್ತು. ಎಲ್ಲಕ್ಕೂ ಮುಖ್ಯವಾಗಿ ಪತ್ರಿಕೆಯ ಸಕ್ರ್ಯೂಲೇಷನ್, ಊರೂರುಗಳಿಗೆ ಪತ್ರಿಕೆ ತಲುಪಿಸುವ ಜವಾಬ್ದಾರಿ ಎಲ್ಲವೂ ಒಂದರ್ಥ ದಲ್ಲಿ ಒನ್ ಮ್ಯಾನ್ ಶೋ ತರಹ ಆಗಿಬಿಟ್ಟಿತು. ಸಿಬ್ಬಂದಿ ಇದ್ದರಾದರೂ ನಾನು ಕೆಲಸ ಮಾಡಿದಷ್ಟು ತೃಪ್ತಿಕರವಾಗಿ ಅವರಿಂದ ನಿರೀಕ್ಷೆ ಮಾಡಲಾಗುತ್ತದೆಯೇ? ಇದೆಲ್ಲವನ್ನೂ ನಿಭಾಯಿಸುವಲ್ಲಿ (ವ್ಯವಹಾರಿಕವಾಗಿ) ಸೋತುಹೋದೆ. ಬೇರೆ ಪತ್ರಿಕೆಯಲ್ಲಿ ಸಂಬಳಕ್ಕಾಗಿ ದುಡಿಯುವಾಗ ಇದ್ದ ನೆಮ್ಮದಿ ಓರ್ವ ಸಂಪಾದಕನಾದ ಬಳಿಕ ದಿನೇ ದಿನೇ ಹಾಳಾಗುತ್ತಾ ಬಂತು. ನೇರ, ದಿಟ್ಟ ಪತ್ರಕರ್ತನೋರ್ವ ಎಂತೆಂತಹ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಅಂದಿನ ಜಿಲ್ಲಾಧಿಕಾರಿ ಶಿವರಾಂ ಎಂಬುವನನ್ನು ಎದುರಿಸ ಬೇಕಾಯಿತು. ಅವನ ಅಧಿಕಾರವನ್ನು ಬಳಸಿ ನನಗೆ ಒಂದು ತಿಂಗಳ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡವನ್ನು ಆತ ವಿಧಿಸಿದ. ಆದರೆ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ಆತನ ಈ ನಡೆಯನ್ನು ಪ್ರಶ್ನಿಸಿ, ಅವನ ಆದೇಶವನ್ನು ರದ್ದುಗೊಳಿಸಿ ಒಂದೇ ದಿನದಲ್ಲಿ ನ್ಯಾಯಾಲಯ ತೀರ್ಪು ನೀಡಿತು. ಈ ಬೆಳವಣಿಗೆಯಿಂದ ಅಂದು ಜಿ.ಎಂ.ಆರ್. ಆರಾಧ್ಯ ಎಂದರೆ ಯಾರು ಎಂಬುದು ತಿಳಿಯಿತು. ಪತ್ರಕರ್ತನೆಂದರೆ “ಹೀಗಿರಬೇಕು” ಎಂದು ನಗರದ ಜನತೆ ಮಾತನಾಡಿಕೊಳ್ಳತೊಡಗಿದರು.
ಇಷ್ಟೆಲ್ಲದರ ನಡುವೆ ಪತ್ರಿಕೆಗೆ ಉತ್ತಮ ಹೆಸರು ಬಂತು. ಪ್ರಸಾರ ಸಂಖ್ಯೆ ಸಹ ದಿನೇ ದಿನೇ ಹೆಚ್ಚತೊಡಗಿತ್ತು. ಎಲ್ಲವೂ ಸರಿಯಾಗು ತ್ತದೆ, “ಇಂದಲ್ಲ ನಾಳೆ ಪತ್ರಿಕೆಯಿಂದ ಲಾಭ ನಿರೀಕ್ಷಿಸಬಹುದು” ಎಂಬ ಆಸೆ ಚಿಗುರೊಡೆಯತೊಡಗಿತ್ತು. ಹೀಗೆ ದಿನಗಳು ಉರುಳುವಾಗ ರಾಜ್ಯ ಮಟ್ಟದ ಪತ್ರಿಕೆಯೆಂದು ಕರೆಸಿಕೊಳ್ಳುತ್ತಿದ್ದ ಪತ್ರಿಕೆಯೊಂದು ತನ್ನ ಮುಖಬೆಲೆಯನ್ನು ಕೇವಲ 1 ರೂ. ಎಂದು ಘೋಷಿಸಿ ಕೊಂಡಿತು. ಈ ಸಂಪಾದಕ, ಮಾಲೀಕ ಹಣವನ್ನು ಹೇಗೆ, ಯಾರಿಂದ ಕೊಳ್ಳೆ ಹೊಡೆದುತರುತ್ತಿದ್ದನೋ ತಿಳಿಯುತ್ತಿರಲಿಲ್ಲ. ಆಗ 1 ರೂ. ಪತ್ರಿಕೆ ಇತರೆ ಪತ್ರಿಕೆಗಳನ್ನು ಈ ಕ್ಷೇತ್ರದಿಂದ ಆಚೆ ದಬ್ಬಿತು.
ಈ ಪತ್ರಿಕೆಯಲ್ಲಿ ಏನಿರುತ್ತಿತ್ತು ಎಂಬುದು ಈ ಪತ್ರಿಕೆಯ ವಾಚಕರು ಗಮನಿಸುತ್ತಿದ್ದರೋ ಇಲ್ಲವೋ ತಿಳಿಯದು. ಆದರೆ 12 ಪುಟಗಳ ಪತ್ರಿಕೆಯೊಂದು ಕೇವಲ 1 ರೂಪಾಯಿಗೆ ಸಿಗುತ್ತದೆ ಎಂದು ದುಂಬಾಲು ಬಿದ್ದು ಖರೀದಿಸತೊಡಗಿದ್ದರು.
ಮುಂದುವರೆಯುತ್ತದೆ…

-ಜಿ.ಎಂ.ಆರ್. ಆರಾಧ್ಯ

Leave a Reply

Your email address will not be published. Required fields are marked *