ಹೊಳಲ್ಕೆರೆಯ ಬಯಲು ಗಣಪ

ದೇವರ ಆರಾಧನೆಯಲ್ಲಿ ಗಣಪತಿ ಯಾವಗಲೂ ಅಗ್ರ ಪೂಜೆ. ಯಾವುದೇ ಪೂಜೆ ಮಾಡುವ ಮುನ್ನ ಗಣಪತಿಯನ್ನ ಪೂಜಿಸುವ ವಾಡಿಕೆ ಇದೆ. ಪ್ರತಿ ವರ್ಷದ ಭಾದ್ರಪದ ಮಾಸದ ಚೌತಿಯಂದು ಸಿದ್ದಿವಿನಾಯಕನ ಪೂಜಿಸುವ ಪದ್ದತಿ ಇದ್ದು ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಗಣಪತಿ ದೇವಾಲಯದ ಪರಿಚಯ.

ರಾಜ್ಯದ ದೇವಾಲಯಗಳಲ್ಲಿ ಗಣಪತಿಗೆ ವಿಷೇಶ ಸ್ಥಾನವಿದೆ, ಸುಮಾರು 4 ನೇ ಶತಮನದಿಂದ ಕದಂಬರ ಕಾಲದಿಂದ ಪಾಳೇಗಾರರ ಕಾಲದವರೆಗೂ ಹಲವು ದೇವಾಲಯಗಳು ಗಣಪತಿಗೆ ನಿರ್ಮಾಣವಾಗಿದ್ದು ಇವುಗಳಲ್ಲಿ ಹಲವು ಬೃಹತ್ ಮೂರ್ತಿಗಳ ಕೆತ್ತೆನೆ ಕಾಣಬಹುದು. ಅಂತಹ ಬೃಹತ್ ಗಣಪತಿ ಶಿಲ್ಪಗಳಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಗಣಪತಿಯೂ ಒಂದು.

ಇತಿಹಾಸ ಪುಟದಲ್ಲಿ ಸುಮಾರು 12 ನೇ ಶತಮಾನದಲ್ಲಿಯೇ ಪ್ರಮುಖ ಪಟ್ಟಣವಾಗಿದ್ದು ಪಟ್ಟಣಸ್ವಾಮಿ ಎಂಭ ಅಧಿಕಾರಿ ಇಲ್ಲಿನ ಉಸ್ತುವಾರಿಯಲ್ಲಿದ್ದ ಬಗ್ಗೆ ಉಲ್ಲೇಖ ನೋಡಬಹುದು. ಇನ್ನು ಶಾಸನಗಳಲ್ಲಿ ಪೊಳಲಕೆರೆ ಎಂಬ ಉಲ್ಲೇಖವಿದ್ದು ಇನ್ನು 1111 ರ ಶಾಸನದಲ್ಲಿ ಶ್ರೀ ಪದ್ಮನಾರಾಯಣ ದೇವಾಲಯದ ಉಲ್ಲೇಖ ನೋಡಬಹುದು. ಇನ್ನು 1568 ರಲ್ಲಿ ಇಲ್ಲಿನ ರಂಗಮಂಟಪದಲ್ಲಿನ ಕಂಭದಲ್ಲಿನ ಶಾಸನ ಹಾಗು ಇಲ್ಲಿನ ತಾಮ್ರ ಶಾಸನದಲ್ಲಿ ಚಿತ್ರದುರ್ಗದ ಪಾಳೇಗಾರ ಮೆದಕರಿನಾಯಕನ ಮೈದುನ ಗುಲ್ಯಪ್ಪ ನಾಯಕ ಹಾಳಾಗಿದ್ದ ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿ ಮೂರ್ತಿಯನ್ನ ಪುನಹ ಪ್ರತಿಷ್ಟಾಪಿಸಿದ ಉಲ್ಲೇಖ ನೋಡಬಹುದು.

ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಗಣಪತಿ ರಾಜ್ಯದ ಗಣಪತಿ ಶಿಲ್ಪಗಳಲ್ಲಿ ಒಂದು. ಈ ಮೂರ್ತಿಯನ್ನ 1475ರಲ್ಲಿ ಮದಕರಿನಾಯಕನ ಮೈದುನನಾದ ಗುತ್ಯಪ್ಪ ನಾಯಕ ಬಯಲಿನಲ್ಲಿ ಈ ಗಣಪತಿಯ ಮೂರ್ತಿಯನ್ನ ಸ್ಥಾಪಿಸಿದ್ದರಿಂದ ಬಯಲು ಗಣಪತಿ ಎಂಬ ಹೆಸರು ಇದೆ. ಸುಮಾರು ೨೦ ಆಡಿ ಎತ್ತರದ ಈ ಶಿಲ್ಪವನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದೆ. ಇಲ್ಲಿನ ಇಲಿಯ ಗಾತ್ರವೇ ಸುಮಾರು ಎರಡು ಅಡಿ ಎತ್ತರ ಇರುವುದು ವಿಷೇಶ. ಚತುರ್ಭುಜನಾದ ಈ ಶಿಲ್ಪದ ಕೈಗಳಲ್ಲಿ ಅಂಕುಶ, ಪಾಶ, ಲೇಖನಿ ಹಾಗು ಮೋದಕ ಇದ್ದು ಹಿಂದೆ ಜಡೆ ಇರುವುದು ವಿಷೇಶ. ಇನ್ನು ಶಿಲ್ಪದ ಕಾಲಿನ ಕಡಗ, ಕೈಕಡಗ, ನಾಗಭಂಧ ಗಮನ ಸೆಳೆಯುತ್ತದೆ. ಇಲ್ಲಿನ ಕಡುಬಿನ ಹಾಗು ಬೆಣ್ಣೆಯ ಆಲಂಕಾರ ಪ್ರಸಿದ್ದಿಯಾಗಿದೆ.

ಶಿಲ್ಪ ಮೊದಲು ವಿಶಾಲವಾದ ಬಯಲಿನಲ್ಲಿ ಇದ್ದು ನಂತರ ಕಾಲದಲ್ಲಿ ನೂತನ ದೇವಾಲಯವನ್ನ ಸುಮಾರು 50 ವರ್ಷದ ಕೆಳಗೆ ನಿರ್ಮಾಣ ಮಾಡಿದ್ದು ಗಣಪತಿಯನ್ನು ಸ್ಥಾಪಿಸಲಾಗಿದೆ. ದೇವಾಲಯಕ್ಕೆ ದೊಡ್ಡದಾದ ಮಂಟಪ ಹಾಗು ರಾಜಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯಕ್ಕೆ ನಾಲ್ಕು ಹಂತದ ಸುಂದರ ರಾಜಗೋಪುರವಿದ್ದು ಇಲ್ಲಿ ಶಿವ ಪಾರ್ವತಿಯ ಜೊತೆಯಲ್ಲಿ ಗಣಪತಿ ಕೆತ್ತೆನೆ ಸುಂದರವಾಗಿದೆ. ರಾಜಗೋಪುರಕ್ಕೆ ಪಂಚಕಳಶಗಳು ಇದೆ. ಇನ್ನು ದೇವಾಲಯದ ಆವರಣದಲ್ಲಿ ಹೊಸದಾಗಿ ವೆಂಕಟೇಶ ಹಾಗು ಆಂಜನೇಯನ ಶಿಲ್ಪವನ್ನು ಸ್ಥಾಪಿಸಲಾಗಿದೆ. ಈ ದೇವಾಲಾಯದ ವಿಷೇಶವೆಂದರೆ ಇಲ್ಲಿ ಭಕ್ತರೇ ಗಣಪತಿಯನ್ನ ಮುಟ್ಟಿ ಪೂಜಿಸಬಹುದು.

ಇನ್ನು ಇಲ್ಲಿ ನಿತ್ಯ ಪೂಜೆ ನಡೆಯಲಿದ್ದು ಭಾದ್ರಪದ ಮಾಸದಲ್ಲಿ ಚೌತಿಯಂದು ವಿಷೇಶ ಪೂಜೆಗಳು ನಡೆಯಲಿದ್ದು ಸಂಕಷ್ಟಚತುರ್ಥಿ ಹಾಗು ಇತರೇ ವಿಷೇಶ ದಿನಗಳಲ್ಲಿ ಪೂಜೆಗಳು ನಡೆಯುತ್ತದೆ. ಬೆಣ್ಣೆ ಅಲಂಕಾರದಲ್ಲಿನ ಶಿಲ್ಪ ಸುಂದರವಾಗಿ ಕಾಣುತ್ತದೆ.

ತಲುಪುವ ಬಗ್ಗೆ : ಹೊಳಲ್ಕೆರೆ ಚಿತ್ರದುರ್ಗ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು ಚಿತ್ರದುರ್ಗದಿಂದ ಸುಮಾರು 34 ಕಿ ಮೀ ಹಾಗು ಶಿವಮೊಗ್ಗದಿಂದ 68 ಕಿ ಮೀ ದೂರದಲ್ಲಿದೆ. ಇಲ್ಲಿನ ವೇಣುಗೋಪಾಲ, ವೀರಭದ್ರ ದೇವಾಲಯ, ಶಂಕರಲಿಂಗೇಶ್ವರ ದೇವಾಲಯ ನೋಡಲೇಬೇಕಾದದ್ದು.

ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *