ಹೆಮ್ಮೆಯ ನನ್ನೂರಲ್ಲಿ ಹೀಗೊಬ್ಬ ಜನನಾಯಕ

ಅದೊಂದು ಚಿಕ್ಕ ಗ್ರಾಮ. ಚಿಕ್ಕದಾದರೂ ಚೊಕ್ಕ ಗ್ರಾಮ. ಅಲ್ಲಿ ಮನೆಗೊಬ್ಬರು ಪದವೀಧರರು, ಕನಿಷ್ಠ ಎರಡು ಮನೆಗೊಬ್ಬರು ಶಿಕ್ಷಕರು. ಬಿ.ಎಸ್ಸಿ (ಅಗ್ರಿ)ಓದಿ ವ್ಯವಸಾಯದಲ್ಲಿ ತೊಡಗಿಸಿಕೊಂಡವರು ಅಲ್ಲಿ ಅನೇಕರು.
ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲನ್ನೇ ಹತ್ತಿಲ್ಲ ಈ ಊರ ಗ್ರಾಮಸ್ಥರು. ಕೃಷಿಯಲ್ಲಂತೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಕ್ರಾಂತಿಯನ್ನೇ ಮಾಡಿದ ಗ್ರಾಮವಿದು. ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಜ್ಯಕ್ಕೆ ಮಾದರಿಯಾದ ಗ್ರಾಮವಿದು. ಈ ಊರಿನ ಜಾನಪದ ಕಲೆ ವೀರಗಾಸೆ ರಾಜ್ಯ ಪ್ರಸಿದ್ಧಿ.
ಈ ಊರಲ್ಲಿರುವ ಪ್ರೌಢಶಾಲೆಗೆ 1974 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿಯೇ ನಿನ್ನೆ ಮೊನ್ನೆಯನವರೆಗೂ ಅಧ್ಯಕ್ಷರಾಗಿದ್ದರು. 1964ರಿಂದ 2000 ದವರೆಗೆ ಈ ಊರ
ಗ್ರಾಮಸಭಾ ಅಧ್ಯಕ್ಷರೂ ಅವರೇ! ಮೇಲಿನದೆಲ್ಲಾ ಯಾವುದೋ ಸಿನಿಮಾ ಕಥೆ ಇರಬೇಕು ಅಥವಾ ಕಲ್ಪನೆಯೇ ಊರಿರಬೇಕು ಎಂದುಕೊಂಡಿದ್ದರೆ ಆಶ್ಚರ್ಯವೇನಿಲ್ಲ. ಆದರೆ ಇಂಥದ್ದೊಂದು ಗ್ರಾಮ ಇದೆ ಎನ್ನುವುದು ಸತ್ಯ. ಅದೇ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಹಿರೇನಲ್ಲೂರು ಹೋಬಳಿಯ ಗ್ರಾಮ ಗಿರಿಯಾಪುರ.
ಈ ಊರಿನ ಮೇಲ್ಕಾಣಿಸಿದ ಎಲ್ಲಾ ಸಾಧನೆಗಳಲ್ಲಿ ಊರುಗೋಲಾಗಿ ನಿಂತಿರುವ ಕೆಲವರ ಪೈಕಿ ಪ್ರಮುಖರು ಜಿ.ಹೆಚ್.ಕಾಶೀನಾಥ್.
ಹೌದು, ಗಿರಿಯಾಪುರದ ಹಾಲಪ್ಪ ಕಾಶೀನಾಥ್ ಅವರ ಹೆಸರನ್ನು ಚಿಕ್ಕಮಗಳೂರು ಜಿಲ್ಲೆಯ ಯಾರು ತಾನೇ ಕೇಳಿಲ್ಲ. ಕಾಶೀನಾಥ್ ಅವರಂಥ ವ್ಯಕ್ತಿತ್ವವುಳ್ಳ ನಿಜ
ಜನನಾಯಕನನ್ನು ಇಲ್ಲಿ ಪರಿಚಯಿಸಲು ನನಗೆ ಹೆಮ್ಮೆಯೆನಿಸುತ್ತಿದೆ.
ಗಿರಿಯಾಪುರದಲ್ಲಿ ಹಾಲಪ್ಪ ಹಾಗೂ ಅನ್ನಪೂರ್ಣಮ್ಮ ದಂಪತಿಗಳ ಪುತ್ರನಾಗಿ 11-11-1935 ರಂದು ಜನಿಸಿದ ಕಾಶೀನಾಥ್ ಸೀನಿಯರ್ ಇಂಟರ್ ಮೀಡಿಯಟ್‍ವರೆಗೆ ಓದಿದವರು. ಜಮೀನ್ದಾರರಾಗಿದ್ದ ಅವರು ರೈತರ ಕೂಡುವಳಿ ಸಂಘ ಸ್ಥಾಪಿಸಿ ರೈತರಿಗೆ ಉಪಯುಕ್ತ ನೆರವು ನೀಡಿದವರು. ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ರಾಸಾಯನಿಕ ಗೊಬ್ಬರವನ್ನು ಪರಿಚಯಿಸಿ ಹೆಚ್ಚಿನ ಇಳುವರಿ ಪಡೆಯಲು ನೆರವಾದವರು ಅವರು. ಅಂದು ಸ್ಥಳೀಯ ಹಸುಗಳಿಗೆ ಬದಲಾಗಿ ಹೆಚ್ಚು ಆದಾಯ ತರುವ ಅಮೃತ್ ಮಹಲ್ ಹಸುಗಳನ್ನು ಗ್ರಾಮಕ್ಕೆ ಪರಿಚಯಿಸಿ ನೂರಾರು ಕುಟುಂಬಗಳಿಗೆ ಆದಾಯದ ಮೂಲವನ್ನು ತೋರಿಸಿದವರು ಅವರು. ಸಹಕಾರಿ ಸಂಘದ ಮೂಲಕ ಸಾವಿರಾರು ಲೀಟರ್ ಹಾಲನ್ನು ಆ ದಿನಗಳಲ್ಲಿಯೇ ಖರೀದಿಸುವಂತೆ ಮಾಡಿ ಹೈನುಗಾರಿಕೆ ಹಾದಿ ತೋರಿದ್ದವರು. ಇವರು ಕೃಷಿಯಲ್ಲಿ
ಎಷ್ಟೊಂದು ಆಸಕ್ತಿ ತಾಳಿದ್ದರೆಂದರೆ ಇವರು ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಕುರಿತು 1958 ರಲ್ಲಿಯೇ ಆಕಾಶವಾಣಿ ಅನೇಕ ಬಾರಿ  ಕಾರ್ಯಕ್ರಮಗಳನ್ನು ನೀಡಿತ್ತು.
ಇಂದು ಅಲ್ಲಲ್ಲಿ ಸಾಮೂಹಿಕ ವಿವಾಹಗಳನ್ನು ನಾವು ನೋಡುತ್ತಿದ್ದೇವೆ ಹಾಗೂ ಅಲ್ಲಲ್ಲಿ ಅವು ನೆರವೇರುತ್ತಿರುವುದು ಕೇಳಿದ್ದೇವೆ. ಆದರೆ,
ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ (1960) ನವಜೀವನ ದರ್ಶನ ಮಂಟಪ ಎಂಬ ಹೆಸರಲ್ಲಿ ಸಾಮೂಹಿಕ ವಿವಾಹವನ್ನು ಗಿರಿಯಾಪುರ ಗ್ರಾಮದಲ್ಲಿ ನಡೆಸಿ, ಅದೇ ಸಾಮೂಹಿಕ ವಿವಾಹದಲ್ಲೇ ಸ್ವತಃ ತಾವೂ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಆದರ್ಶವಾದಿ ಜಿ.ಹೆಚ್. ಕಾಶೀನಾಥ್.

ಅಂದು ನಡೆದ ಈ ಸಾಮೂಹಿಕ ವಿವಾಹ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಾದ ಬಳಿಕ ನಾಡಿನ ವಿವಿಧೆಡೆ ಇಂತಹ ಕಾರ್ಯಕ್ರಮಗಳು
ಆರಂಭವಾದವು. 1961-62ರಲ್ಲಿ ರಾಜ್ಯಾದ್ಯಂತ ಕ್ಷಾಮ ತಲೆದೋರಿದಾಗ ವಿದ್ಯಾವಂತರ ಹಾಗೂ ಉಳ್ಳವರ ಸಹಾಯ ಪಡೆದು 55 ಹಳ್ಳಿಗಳ ಹಸಿದ ಜನರಿಗೆ ತಾವೇ ಆಹಾರ ಸಂಗ್ರಹಿಸಿ ನೀಡಿದ ಅಂತಃಕರಣಿ ಅವರು.
1962-63ರಲ್ಲಿ ಗ್ರಾಮದಲ್ಲಿ ಶ್ರೀ ಗುರುಕೃಪ ವಿದ್ಯಾಸಂಸ್ಥೆಯು ಸ್ಥಾಪನೆಯಾದಾಗ ಅದರ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. 1974ರಲ್ಲಿ ಈ ಸಂಸ್ಥೆಯ
ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇಂದಿನತನಕ ಅಂದರೆ ಕಳೆದ 38 ವರ್ಷಗಳಿಂದಲೂ ಅವರೇ
ಸಂಸ್ಥೆಯ ಅಧ್ಯಕ್ಷರು. ಅವರ ಪ್ರಾಮಾಣಿಕ ಶ್ರಮ ಹಾಗೂ ಕಳಕಳಿಯಿಂದಾಗಿ ಶ್ರೀ ಗುರುಕೃಪ ಪ್ರೌಢಶಾಲೆ
ರಾಜ್ಯದ ಗ್ರಾಮಾಂತರ ಪ್ರದೇಶಗಳ ಶಾಲೆಗಳಲ್ಲಿ ಆದರ್ಶಪ್ರಾಯವೆನಿಸಿದೆ.
1964 ರಿಂದ 2000 ದವರೆಗೆ ಗ್ರಾಮಸಭಾ ಅಧ್ಯಕ್ಷರಾಗಿ ಅವರು ಮಾಡಿದ ಗ್ರಾಮ ಸುಧಾರಣಾ ಸೇವೆ ರಾಜ್ಯಕ್ಕಷ್ಟೇ ಅಲ್ಲ, ರಾಷ್ಟ್ರಕ್ಕೆ ಮಾದರಿಯಾದುದು. ಅವರ ಅವಧಿಯಲ್ಲಿ ಗ್ರಾಮದ ಯಾವುದೇ ವಿವಾದಗಳು ನ್ಯಾಯಾಲಯಕ್ಕಾಗಲೀ ಅಥವಾ ಪೊಲೀಸರತ್ತಾಗಲೀ ಸುಳಿಯಲಿಲ್ಲ.
ಚುನಾವಣೆಗಳೇ ಇಲ್ಲದ ಮಾದರಿ ಗ್ರಾಮ ಅದಾಗಿತ್ತು.
ಜಿ.ಹೆಚ್. ಕಾಶೀನಾಥ್ ಅವರು ಕಡೂರು ಮತ್ತು ತರೀಕೆರೆ ತಾಲ್ಲೂಕಿನ ರೈತರ ಮತ್ತು ಕೃಷಿ ಯಂತ್ರ ಮಾಲೀಕರ ಸಂಘದ ಅಧ್ಯಕ್ಷರಾಗಿ ರೈತರ ಸಮಸ್ಯೆಗಳ ಬಗ್ಗೆ ಅನೇಕ
ಹೋರಾಟಗಳನ್ನು ನಡೆಸಿದವರು. ಕಡೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ, ಜಿಲ್ಲಾಮಟ್ಟದ ರಾಜ್ಯಪ್ರತಿನಿ ಧಿಯಾಗಿ, ರಾಜ್ಯಮಟ್ಟದ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಅವರದು. 1970 ರಲ್ಲಿ ಈ ಪುಟ್ಟ ಹಳ್ಳಿಯಲ್ಲಿ ಸಂತಾನಹರಣ ಚಿಕಿತ್ಸೆಗೆ ಜನರು ಹಿಂಜರಿಯುತ್ತಿದ್ದ ಕಾಲದಲ್ಲಿ 32 ಜನರನ್ನು ಹುರಿದುಂಬಿಸಿ ಅವರಿಗೆ ಇದರ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿ ಚಿಕಿತ್ಸೆಗೆ ಒಳಪಡಿಸಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದರು.
ಸದಾಶಿವ ಕುಮಾರ ಶಿವಯೋಗಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು, ಆರ್ಥಿಕವಾಗಿ ಸಾಮಾನ್ಯ ಜನರ ಮಕ್ಕಳಿಗೆ ಕೈಗೆಟುಕುವ
ಶಿಕ್ಷಣವನ್ನು ನೀಡಬೇಕು ಎಂಬ ಸದಾಶಯದೊಂದಿಗೆ ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ಪ್ರೌಢಶಾಲೆ ಹಾಗೂ ಹಾಸ್ಟೆಲ್‍ಗಳ ವಿಷಯದಲ್ಲಿ ಇವರ ಕಳಕಳಿ
ಎಂಥದ್ದೆಂಬುದಕ್ಕೆ ಸಣ್ಣ ಉದಾಹರಣೆಯೊಂದನ್ನು ನೀಡಲೇಬೇಕು.

ಆಗ ಶಾಲೆಯ ಗಂಡುಮಕ್ಕಳ ಹಾಸ್ಟೆಲ್ ಮಾತ್ರ ಇತ್ತು. ಹೇಗಾದರೂ ಮಾಡಿ ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್ಲೊಂದನ್ನು ಕಟ್ಟಲೇಬೇಕೆಂದು ಶ್ರಮವಹಿಸಿ ಅದನ್ನು
ಆರಂಭಿಸಿದರು. ಆರೋಗ್ಯ ಕೈ ಕೊಟ್ಟಿತು. ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಅವರಿದ್ದರು. ಪ್ರಜ್ಞೆ ಬಂದಾಗ ಅವರು ವೈದ್ಯರನ್ನು ಕೇಳಿದ ಪ್ರಶ್ನೆ ಏನು ಗೊತ್ತೇ? “ಲೇಡೀಸ್ ಹಾಸ್ಟೆಲ್‍ಗೆ ಇಟ್ಟಿಗೆಯ ಲೋಡ್ ಬಂತೇ?” ಎಂಬುದು. ಅವರ ಕರ್ತವ್ಯ ಪ್ರಜ್ಞೆ ಹಾಗೂ ತೊಡಗಿಸಿಕೊಳ್ಳುವಿಕೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?
ಹಾಗಾಗಿಯೇ ಅಲ್ಲವೇ ಅವರು ಕಳೆದ 38 ವರ್ಷಗಳಿಂದ ಈ ಸಂಸ್ಥೆಯ ಅಧ್ಯಕ್ಷರಾಗಿ ದುಡಿದು ಈಗ ವಯೋಸಹಜ ನಿವೃತ್ತಿ ಹೊಂದಿದರೂ ಕಳಕಳಿಯನ್ನು ಮಾತ್ರ ಮರೆತಿಲ್ಲ.
ಇದಲ್ಲದೇ ಮೂವತ್ತಾರು ವರ್ಷಗಳ ಕಾಲ ಊರಿನ ಗ್ರಾಮಸಭಾ ಅಧ್ಯಕ್ಷರಾಗಿ ಇದ್ದುದು.

ಜಿ.ಹೆಚ್. ಕಾಶೀನಾಥ್ ಅವರೊಂದಿಗೆ ಗ್ರಾಮದ ಕಾರ್ಯದರ್ಶಿ ಜಿ.ಸಿ. ಗಂಗಾಧರಪ್ಪ ಅವರು ಊರ ಒಳಿತಿಗೆ ಶ್ರಮಿಸುತ್ತಿದ್ದಾರೆ. ಇವರಿಬ್ಬರೂ ಗಿರಿಯಾಪುರದ ಜೋಡೆತ್ತುಗಳೆಂದರೆ ತಪ್ಪಾಗಲಾರದು. (ತಿಂಗಳ ಕೆಳಗಷ್ಟೇ ಗಂಗಾಧರಪ್ಪನವರು ವಿಧಿವಶರಾದರು)
ಜಿ.ಹೆಚ್. ಕಾಶೀನಾಥ್ ಅವರದು ನೇರ ನುಡಿ. ಎಂದೂ ಹಿಂದೆ ಮಾತನಾಡಿದವರಲ್ಲ. ಅನ್ಯಾಯ ಸಹಿಸಿದವರಲ್ಲ, ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳುವ ಹಾಗೂ ಮತ್ತೊಮ್ಮೆ ಆ ತಪ್ಪು ಮಾಡದಿರುವ ಗುಣ ಅವರದು. ಹಾಗಾಗಿ ಕಾಶೀನಾಥ್ ಎಂದರೆ “ಕೆಂಡ” ಎಂಬ ಮಾತೂ ಊರವರದು. ಇಂದು ಗಿರಿಯಾಪುರದಂತಹ ಪುಟ್ಟ ಗ್ರಾಮದ ಬಗ್ಗೆ ಯಾರಾದರೂ ಹೇಳಿದಾಗ ಆ ಊರನ್ನೊಮ್ಮೆ ನೋಡಿ ಬರಲೇಬೇಕು ಎಂದು ಅಂದುಕೊಂಡರೆ ಆ ಅಂದುಕೊಳ್ಳುವಿಕೆಯ ಹಿಂದೆ ಇರುವ
ಪೂರ್ಣ ಶ್ರಮ ಜಿ.ಹೆಚ್. ಕಾಶೀನಾಥ್ ಅವರದು. ಯಾವುದೇ ಫಲಾಪೇಕ್ಷೆಯೂ ಇಲ್ಲದೆ ಕೇವಲ ಊರ ಒಳಿತಿಗಾಗಿ ದುಡಿಯುವ ನಾಯಕನೊಬ್ಬ ನಾನು ಕಂಡಂತೆ ಇದ್ದಾರೆ ಎಂದರೆ ಅದು ಕಾಶೀನಾಥ್ ಎಂದು ಘಂಟಾಘೋಷವಾಗಿ ಹೇಳಬಹುದು.
ಸೃಜನಶೀಲತೆಯ ಜೊತೆಗೆ ಸರಳ ಜೀವನ ಹಾಗೂ ಉನ್ನತ ಚಿಂತನೆಯನ್ನು ಅಳವಡಿಸಿಕೊಂಡಿರುವ ಅವರ ಮಾತುಗಳನ್ನು ಕೇಳುವುದೇ ಬೃಹತ್ ಗ್ರಂಥವೊಂದನ್ನು ಓದಿದ ಅನುಭವವಾಗುತ್ತದೆ.
ಗಿರಿಯಾಪುರ ಗ್ರಾಮದ ಪಂಚಾಯ್ತಿ ಎಂದರೆ ಸುತ್ತ ಹಳ್ಳಿಗಳವರೂ ಸಹ ತಮ್ಮಲ್ಲಿ ಬಗೆಹರಿಸಲಾರದ ಸಮಸ್ಯೆಗಳಿದ್ದರೆ “ಗಿರಿಯಾಪುರದಲ್ಲಿ ಪಂಚಾಯ್ತಿ ಮಾಡಿ
ಬಗೆಹರಿಸೋಣ ಬಿಡಿ” ಎಂಬಷ್ಟರ ಮಟ್ಟಿಗೆ ಇಲ್ಲಿನ ಪಂಚಾಯ್ತಿಯ ತೀರ್ಪುಗಳು ನ್ಯಾಯಸಮ್ಮತವಾಗಿರುತ್ತದೆ ಎಂದರೆ ನಿಮಗೆ ಆಶ್ಚರ್ಯವೆನಿಸಿದರೂ ಅಕ್ಷರಶಃ ಸತ್ಯ.
ನನಗೆ ಗಿರಿಯಾಪುರದ ಬಗ್ಗೆ ಇಷ್ಟೆಲ್ಲಾ ಹೇಗೆ ಗೊತ್ತು ಎಂದು ಕೇಳುವಿರಾ? ಹೇಗೆ ಎಂದರೆ ನಾನೂ ಕೂಡ ಇದೇ ಊರಿನವರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ.
ನಾನು ಓದಿದ ಇದೇ ಗುರುಕೃಪ ಪ್ರೌಢಶಾಲೆಯಲ್ಲಿ ನನ್ನ ತಮ್ಮ ಜಿ.ಎಂ. ಯತೀಶ್ ಈಗ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂಬುದೂ ಖುಷಿಯ ವಿಷಯ.

– ಜಿ.ಎಂ.ಆರ್. ಆರಾಧ್ಯ, ಸಂಪಾದಕ, ‘ಜನಮಿಡಿತ’,
ದಾವಣಗೆರೆ

One thought on “ಹೆಮ್ಮೆಯ ನನ್ನೂರಲ್ಲಿ ಹೀಗೊಬ್ಬ ಜನನಾಯಕ

  • October 26, 2021 at 2:41 am
    Permalink

    ” ಪುರದ ಪುಣ್ಯ ಗಿ.ಹಾ.ಕಾಶೀನಾಥ್ ”
    ಸಹೃದಯರಿಗೆ…ಆದರ್ಶ ವ್ಯಕ್ತಿಯ ಜೀವನ ದರ್ಶನ ಮಾಡಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು…
    ನಿಮ್ಮ ಲೇಖನದ ದೆಸೆಯಿಂದ… “ನಾಟಿ ಬೀಜ” ಚಿತ್ರವನ್ನು ನಿರ್ಮಾಣ ಮಾಡಲು, ನಮಗೆ ಬಹು ಮುಖ್ಯ ಪ್ರೇರಣೆ ಹಾಗೂ ಸ್ಪೂರ್ತಿಯಾಯಿತು…ಮುಂದಿನದು ಇತಿಹಾಸ…ನಿಮಗೆ ದೇವರು ಹರಸಲಿ…
    ಕೆ.ಎಸ್. ಮರಿಯಯ್ಯಸ್ವಾಮಿ
    ಕೊರಟೀಕೆರೆ

    Reply

Leave a Reply

Your email address will not be published. Required fields are marked *