ಸ್ಫೋಟಕ ಸಂಗತಿ ಬಾಯ್ಬಿಟ್ಟ ಬಂಧಿತ ಪಾಕ್ ಸ್ಪೈ ಮೊಹಮ್ಮದ್ ಪರ್ವೇಜ್
ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ )ಪರ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತನಾದ ಮೊಹಮ್ಮದ್ ಪರ್ವೇಜ್ ನನ್ನು ಜೈಪುರ ಕೋರ್ಟ್ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ .
ಈತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಪಾಕ್ ನ ಐಎಸ್ಐ ಪರ ಕಾರ್ಯನಿರ್ವಹಿಸುತ್ತಿದ್ದು, ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ತನಗೆ ವೀಸಾ ಮತ್ತಿತರ ಸೌಲಭ್ಯಗಳನ್ನು ನೀಡಿ ಬೇಹುಗಾರಿಕೆಗೆ ನೆರವು ನೀಡಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ.
ಭಾರತದಲ್ಲಿ ಐಎಸ್ಐ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಜೈಪುರದಲ್ಲಿ ದೆಹಲಿ ಮೂಲದ ಮೊಹಮ್ಮದ್ ಪರ್ವೇಜ್ ನನ್ನು ನಿನ್ನೆ ಬಂಧಿಸಲಾಗಿತ್ತು. ಮೊಹಮ್ಮದ್ ಪರ್ವೇಜ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದು ಈತ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ಕೂಡ ಇದೇ ಮೊಹಮ್ಮದ್ ಪರ್ವೇಜ್ನನ್ನು 2017ರಲ್ಲಿ ಎನ್ಐಎ ಅಧಿಕಾರಿಗಳು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿಸಿದ್ದರು ಎನ್ನಲಾಗಿದೆ.
ಇದೀಗ ಜೈಪುರಕ್ಕೆ ಈತನನ್ನು ವಿಚಾರಣೆಗೆ ಕರೆ ತಂದಿದ್ದು ಈ ವೇಳೆ ಈತ ತಾನು 17 ಕ್ಕೂ ಹೆಚ್ಚು ಬಾರಿ ನಾನು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದೇನೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾನೆ ಎಂದು ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ. ಅಂತೆಯೇ ಇದೇ ಮೊಹಮ್ಮದ್ ಪರ್ವೇಜ್ ಈ ಹಿಂದೆ ಸೈನಿಕರನ್ನು ಹನಿ ಟ್ರ್ಯಾಪ್ ಮಾಡಿ ರಹಸ್ಯ ಮಾಹಿತಿಗಳನ್ನು ಪಡೆದಿರುವ ಶಂಕೆ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗಿದೆ.
ಸೇನೆಯ ನಕಲಿ ಗುರುತಿನ ಚೀಟಿ ಮೂಲಕ ಸೇನೆಯ ರಹಸ್ಯ ದಾಖಲೆಗಳಲ್ಲಿ ಅಂಶಗಳನ್ನು ಕಲೆ ಹಾಕಿ ಅದನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಮತ್ತು ಈತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಆರ್ಥಿಕ ನೆರವು ನೀಡುತ್ತಿತ್ತು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ .