ಸಾವಿನಲ್ಲೂ ಸಾರ್ಥಕತೆ
ಅವತ್ತು
ಬೆಳಂಬೆಳಗ್ಗೆ ಖಲೀಲ್ ಫೋನ್ ಮಾಡಿ ಹೇಳಿದ ಶಶಿಯವರ ತಂದೆ ತೀರಿಕೊಂಡಿದ್ದಾರೆ ಎಂದು. ಹೌದಾ…?!!, ಏನಾಗಿತ್ತು ಎಂದು ಮಾತಿಗೆ ಮಾತಿನ ವಿಚಾರಣೆಗಳೆಲ್ಲ ಮುಗಿದ ನಂತರ ಕಾಲೇಜು ಸ್ನೇಹಿತರ ಗುಂಪಿನಲ್ಲಿ ಈ ವಿಷಯವಾಗಿ ಸಂದೇಶ ರವಾನಿಸಿದೆ. ಯಾರ್ಯಾರು ಬರುವವರು ತಿಳಿಸಿ ಎನ್ನುವ ಮಾತಿನ ಉಲ್ಲೇಖವಿದ್ದರೂ ಕೆಲವರು ಕರೆ ಮಾಡಿ ವಿಚಾರಿಸಿದರು, ಮನೆ ಎಲ್ಲಿದೆ ಏನ್ ಕಥೆ ಎಂದು. ಸರಿ ನನಗೂ ಮನೆ ವಿಳಾಸ ಸರಿಯಾಗಿ ಗೊತ್ತಿಲ್ಲ, ಹಳೆ ಮನೆಗೆ ಹೋದದ್ದು ನೆನಪು ಹೊಸತು ಗೊತ್ತಿಲ್ಲ ವಿಚಾರಿಸಿ ಹೇಳುವೆ ಎಂದೆ. ಸಂದೇಶ ರವಾನಿಸಿ ಹೊರಟೆ.
ನಾನು
ಮತ್ತು ಸುಭಾಷ್, ನಾಗರಾಜ ಮೂವರೂ ಹೊರಟಾಗ ಮನೆಯ ವಿಳಾಸ ತಿಳಿದರೂ ಲ್ಯಾಂಡ್ ಮಾರ್ಕ್ ಹುಡುಕುವದು ಸ್ವಲ್ಪ ಕಷ್ಟ. ನನ್ನ ಹುಟ್ಟು ಇಲ್ಲೇ ಆದರೂ ಕೆಲವು ಬಡಾವಣೆಗಳು ಅಷ್ಟಾಗಿ ನೆನಪಿಗಿರದು. ಒಡನಾಟ ಮತ್ತು ಓಡಾಟ ಕಡಿಮೆ ಎನ್ನಬಹುದು. ಖಲೀಲ್ ಮೊದಲೇ ಹೋಗಿದ್ದ, ಅವನು ಸುಭಾಷ್ ಮತ್ತು ನಾಗರಾಜನಿಗೆ ತಿಳಿಸಿದ. ನಾವು ಆ ಸಮಯಕ್ಕೆ ಸರಿಯಾಗಿ ತಲುಪಿದೆವು, ತಂದ ಹಾರವನು ಹಾಕುತ ಎರಡು ನಿಮಿಷ ಮೌನ ಆಚರಿಸಿ ಹಿಂದೆ ಸರಿದೆವು. ಸಿಕ್ಕ ಸ್ನೇಹಿತರು ಸೇರಿ ಕುಶಲೋಪರಿ ವಿಚಾರಿಸುತ ಆದ ಸಾವಿನ ಬಗ್ಗೆ ಆಲೋಚನೆಗಳು ನಡೆದವು.
ಕೊನೆಗೆ
ಆಶ್ಚರ್ಯ!!! ಪೂಜೆ ಪುನಸ್ಕಾರಗಳು ವಿಧಿ ವಿಧಾನಗಳು ಎಲ್ಲವೂ ಅದೇ ಹವಾಮಾನ ನಿಯಂತ್ರಿತ ಪೆಟ್ಟಿಗೆಯೊಳಗೆ ಮುಗಿಸಿದರು. ಅದು ಕಾಡುವ ಪ್ರಶ್ನೆಯಾಗಿ ಕೊರೆಯತೊಡಗಿತು. ಇವರುಗಳು ಮಣ್ಣು ಮಾಡುವರೋ?!, ಇಲ್ಲ ಅಗ್ನಿ ಸ್ಪರ್ಶಿಸುವರೋ?!. ನಂತರ ತಿಳಿಯಿತು ಅವರು ತಮ್ಮ ದೇಹವನ್ನೇ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದರು ಎಂದು ತಿಳಿದು ಆಶ್ಚರ್ಯ. ಸಂಸ್ಕಾರ ವಿರೋಧಿ ಧೋರಣೆ ತಳೆಯಲು ಹೇಗೆ ಸಾಧ್ಯ?!, ಮೊದಲಿನಿಂದ ರಾಜಶೇಖರ್ ಅಂಕಲ್ ಬಸವ ತತ್ವ ಪಾಲನೆ ಮಾಡುತ್ತ ಬಂದಿದ್ದರು.
ತತ್ವಗಳು
ಒಮ್ಮೊಮ್ಮೆ ಮನುಷ್ಯನ ಆಳದೊಳಗೆ ಬೇರೂರಿ ಬದಲಾವಣೆಗೆ ಎಷ್ಟು ಪೂರಕವಾಗುವವು ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಕಾಣತೊಡಗಿದರು. ಶಶಿ ಯಾವಾಗಲೂ ಹೇಳುವಾಗ ಬಸವನ ತತ್ವ ಪಾಲಿಸುವರೆಂದು ಹೇಳಿದ್ದು ನೆನಪಿದೆಯಾದರೂ ಅಷ್ಟರ ಮಟ್ಟಿಗೆ ಎನ್ನುವುದು ಸೋಜಿಗವಾಯ್ತು. ಸುಭಾಷ್ ಈ ಮೊದಲೇ ಅವರ ವಿಚಾರವಾಗಿ ಕೆಲವು ಬಾರಿ ಮಾತುಕತೆಯಲ್ಲಿ ತಿಳಿಸಿದ್ದನಾದರೂ, ಒಮ್ಮೆಯೂ ಅವರನ್ನ ಮುಖತಃ ಭೇಟಿ ಮಾಡಿ ಮಾತಾಡಿರದ ಕಾರಣ ಹೆಚ್ಚು ತಿಳಿಯಲು ಆಗಿರಲಿಲ್ಲ. ಶಶಿಧರ್ ಮದುವೆಯಲ್ಲಿ ಕುಶಲೋಪರಿ ವಿಚಾರಿಸಿದ್ದೆ ಅವರೊಂದಿಗಿನ ನನ್ನ ಒಡನಾಟ.
ಅವರದ್ದು
ಒಂದೇ ಸಿದ್ದಾಂತ, ಸತ್ತ ಮೇಲೆ ನಮ್ಮನ್ನು ಯಾರು ಪೂಜಿಸುವರು, ಯಾರು ಅಳುವರು, ಹೇಗೆ ಮಣ್ಣು ಮಾಡುವರು ಎಂದು ನಮಗೆ ತಿಳಿಯದು. ಎಷ್ಟೆ ಕತ್ತರಿಸಿದರೂ, ಎತ್ತಿ ಹಾಕಿದರೂ ನಮಗೆ ನೋವಿನ ಅರಿವಾಗದು, ಅಂತಹದರಲ್ಲಿ ಮಣ್ಣು ಮಾಡುವುದರೆ ಏನು ಪ್ರಯೋಜನ?!. ಅದು ಅವರು ಮನಗಂಡ ಅರಿವು ಮತ್ತು ಮನದ ಮಾತಾಗಿತ್ತು, ಇದಿಷ್ಟೆ ಆಗಿದ್ದರೆ ಅದಕ್ಕೆ ಸಾರ್ಥಕ ರೂಪ ಬರುವಂತಿರಲಿಲ್ಲ ಅನಿಸಿದರೂ ಅವರ ಮುಂದಿನ ನಡೆ ಕೇಳಿ ಸಂತೋಷವಾಯಿತು. ಹೆಮ್ಮೆಯೂ ಕೂಡ.
ರಾಜಶೇಖರ ರುಮಾಲ್ದಾರ್
ಎಂದು ಅವರ ಪೂರ್ಣ ಹೆಸರು ಹೆಸರಿಸುವಂತಹ ಆಲೋಚನೆ ಅವರದ್ದಾಗಿತ್ತು ಎನ್ನುವುದು ತುಂಬಾ ಮನಕೆ ಮುಟ್ಟಿತು. ಅವರು ತಮ್ಮ ದೇಹದಾನ ಮಾಡುವುದಷ್ಟೇ ಅಲ್ಲದೇ ಅವರ ಧರ್ಮ ಪತ್ನಿಯವರ ದೇಹವನ್ನು ದಾನ ಮಾಡುವಂತೆ ಪ್ರೇರೆಪಿಸಿ ಮನವೊಲಿಸಿದ್ದಾರೆ. ಯಾರ ಮಾತಿಗೂ ಮಣಿಯುವ ಅವಶ್ಯಕತೆಯಿಲ್ಲ ಸತ್ತ ದೇಹ ಮಣ್ಣಾಗಿಸಿದರೆ ಏನು ಪ್ರಯೋಜನ, ನಾಲ್ಕು ಜನಕ್ಕಾದರೂ ಉಪಯೋಗವಾಗಬೇಕು, ಎನ್ನುವ ಮನವರಿಕೆ ಮಾಡಿಸಿ ಒಪ್ಪಿಸಿದ್ದರು. ಈ ಮಾತು ಕೇಳಿ ನನಗೆ ಒಂದು ರೀತಿ ಹೀಗೂ ತತ್ವ ಸಿದ್ಧಾಂತಗಳ ತೋರಿಕೆ ಮಾಡದೆ ಮನಃಪೂರಕವಾಗಿ ಪಾಲಿಸುವ ವ್ಯಕ್ತಿಗಳೂ ಇರುವರು ನಮ್ಮ ನಡುವೆ ಎಂದು ತಿಳಿದಂತಾಯಿತು.
ಇದಷ್ಟೆ
ಅಲ್ಲದೆ ತಮ್ಮ ಮಗನಿಗೂ ಸಹಿತ ನೋಡು ಯಾರು ಏನೇ ಹೇಳಲಿ ಅಕ್ಕ, ಭಾವ, ಅತ್ತೆ, ಮಡದಿ ಬಂಧುಗಳು ಇವೆಲ್ಲದಕ್ಕು ತೆಲೆ ಕೆಡಿಸಿಕೊಳ್ಳಬೇಡ. ನೀನೂ ಸಹಿತ ದೇಹದಾನ ಮಾಡಲೇಬೇಕು, ನೀನು ನನ್ನ ಮಗನಾಗಿ ನನಗಾಗಿ ಮಾಡಬೇಕಾದ ಕಾರ್ಯ ಇದೊಂದೇ ಎಂದರು!!!, ಎಂದು ಕೇಳಿ ರೋಮಾಂಚನವಾಯಿತು. ನಿಜವಾದ ಸಾರ್ಥಕ ರೂಪ ಸಾವಿನಲ್ಲಿ ಕಾಣುವ ಸುಂದರತೆ ಇದಕ್ಕಿಂತ ಹೆಚ್ಚಿನದ್ದೇನಿದೆ, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಬೇಡುವುದೊಂದೆ ; ಜೊತೆಗೆ ದೇಹದಾನದ ಅರಿವು ಮೂಡಿಸುವುದು. ಧನ್ಯವಾದಗಳು ಶುಭವಾಗಲಿ.
ಲಿಂಗೇಶ್ ಎಚ್ ಬಿದರಕುಂದಿ
ದಾವಣಗೆರೆ