ಸರಿಗಮವೆಂದುಲಿಯುವ ಬನ್ನಿ

|| ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ ||

“ತೊಟ್ಟಿಲಲ್ಲಾಡುವ ಮಗುವೇ ಆಗಿರಬಹುದು, ಯಾವುದೇ ಪ್ರಾಣಿಗಳಾಗಿರಬಹುದು, ಅಷ್ಟೇ ಏಕೆ ಕಿವಿಗಳೇ ಇಲ್ಲದ ಸರ್ಪಗಳೂ ಸಹ ಸಂಗೀತದ ಪರಿಭಾಷೆಯನ್ನರಿತು ಸಂತೋಷಿಸುತ್ತವೆ”

ಸಹೃದಯರ ಭಾಷೆಯಾಗಿಯೂ, ಪಂಡಿತರಿಂದ ಪಾಮರರವರೆಗೆ, ಆಬಾಲ ವೃದ್ಧರಾದಿಯಾಗಿ, ಸಮಸ್ತ ಜೀವರಾಶಿಗೂ ಸಂತೋಷವನ್ನು ನೀಡುವಂತಹ, ಅತ್ಯಪೂರ್ವ ವಿದ್ಯೆಯೇ ಸಂಗೀತ, ಗಾಂಧರ್ವ ವಿದ್ಯೆಯೆಂದೇ ಪ್ರಖ್ಯಾತಿಯನ್ನು ಹೊಂದಿರುವ ಸುಶ್ರಾವ್ಯವಾದ, ಮಾಧುರ್ಯ ಪೂರ್ಣವಾದ ಸಂಗೀತಕ್ಕೆ ಮನಸೋಲದವರಿಲ್ಲವೆಂಬುದು ನಿರ್ವಿವಾದ.

ನಮ್ಮ ಮುಂದಿರುವ ಬಹುಮುಖ್ಯ ಪ್ರಶ್ನೆಯೆಂದರೆ, “ನಾವಾಗಲೀ, ಅಥವಾ ನಮ್ಮ ಮಕ್ಕಳಾಗಲೀ, ಸಂಗೀತವನ್ನು ಏಕೆ ಕಲಿಯಬೇಕು, ಕಲಿಕೆಯ ಔಚಿತ್ಯವೇನು”.

ಈ ಒಂದು ಪ್ರಶ್ನೆಗೆ ಉತ್ತರವನ್ನು ಹುಡುಕಲಾರಂಭಿಸಿದರೆ ನಮಗೆ ದೊರೆಯುವ ಅತ್ಯಮೂಲ್ಯ ವಿಷಯ ಜ್ಞಾನವು ಅಪಾರ, ಸಂಗೀತದ ಕಲಿಕೆಯಿಂದ, ಮಾನಸಿಕ ಖಿನ್ನತೆಯು ದೂರವಾಗುತ್ತದೆ, ರಾಗಗಳ ಭಾವಕ್ಕನುಗುಣವಾಗಿ ಕಲಾವಿದನಿಗೆ ರಸ ಸಿದ್ಧಿಯಾಗಿ, ಅವ್ಯಕ್ತ ಆನಂದವನ್ನುಂಟುಮಾಡುವ ಮನೋಧರ್ಮವು “ಇಳೆಗೆ ತಂಪೆರೆವ ಮಳೆಯಂತೆ” ಕೇಳುಗರ ಮನಸ್ಸಿಗೆ ಶಾಂತತೆಯನ್ನುಂಟುಮಾಡುತ್ತದೆ, ಮಾನವನು ಸುಸಂಸ್ಕೃತನಾಗುತ್ತಾನೆ, ಮನದಲ್ಲಿ ಜನಿಸಬಹುದಾದ ಮೇಲುಕೀಳುಗಳ ಭಾವನೆಯು ನಾಶವಾಗುತ್ತದೆ, ವಿಶೇಷವಾಗಿ ಮಕ್ಕಳಲ್ಲಿ ಸೃಜನಶೀಲ ಗುಣಗಳು ತಾವಾಗಿಯೇ ಅಭಿವ್ಯಕ್ತಗೊಳ್ಳಲು ಆರಂಭಿಸುತ್ತವೆ, ಇದರಿಂದ ಅತ್ಯಲ್ಪ ಸಮಯದಲ್ಲಿ ಮಕ್ಕಳ ಮನಸ್ಸು ವಿಕಾಸದತ್ತ ಮುಖಮಾಡಿ ನಿಲ್ಲುತ್ತದೆ, ನವ್ಯ ಜ್ಞಾನ ವಿಜ್ಞಾನ ಪರಿಕಲ್ಪನೆಗಳು ಮಕ್ಕಳ ಮನಸ್ಸನ್ನು ಕುಶಾಗ್ರದಂತೆ ತೀಕ್ಷ್ಣವಾಗಿಸುವುದರ ಜೊತೆಯಲ್ಲಿ, ಯಾವುದೇ ವಿಷಯವನ್ನು ತತ್‌ಕ್ಷಣವೇ ಗ್ರಹಿಸುವ ಸಾಮರ್ಥ್ಯವನ್ನು ಮಕ್ಕಳಿಗೆ ತಂದುಕೊಡುತ್ತವೆ.

ಎಲ್ಲವೂ ಸರಿಯೇ, ಹಾಗಾದರೆ ಸಂಗೀತ ಕಲಿಕೆಯಿಂದ ಎಷ್ಟೆಲ್ಲಾ ಅಪಾರವಾದ ಪ್ರಯೋಜನಗಳು ಮನುಕುಲಕ್ಕೆ ಇದೆಯೆಂದಾದರೆ, ವಿಶ್ವದಾದ್ಯಂತ ಎಲ್ಲರೂ ಸಂಗೀತವನ್ನು ಕಲಿತು ಜ್ಞಾನಿಗಳೇ ಆಗಬಹುದಿತ್ತಲ್ಲ, ಎಂದಲ್ಲಿ, ಸಂಗೀತ ಕ್ಷೇತ್ರದಿಂದ ನಾವು ಅತ್ಯದ್ಭುತವಾದ ಜ್ಞಾನವನ್ನು ಹೊಂದಲು ಹಲವಾರು ಅಂಶಗಳಿದ್ದು, ಅವುಗಳಲ್ಲಿ ಮೂರು ವಿಷಯಗಳು ಬಹು ಮುಖ್ಯವಾಗಿವೆ, ಮೊದಲಿಗೆ ಪೋಷಕರು, ನಮ್ಮ ಮಗು, ಅಪೂರ್ವವಾದ, ಅಪಾರ ಸಾಧನೆಗೆ ಒಲಿಯುವ, ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪರಿಕಲ್ಪಿಸಿಕೊಡುವ, ಎಂದಿಗೂ ಸೋಲನ್ನೇ ಕಾಣದ, ವಿದ್ಯೆಯೊಂದನ್ನು ಅಭ್ಯಾಸ ಮಾಡುತ್ತಿದೆ, ಎಂಬ ಅಂಶಗಳನ್ನು ಮನಗಂಡು, ತಮ್ಮ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬಿ ಕಲಿಕೆಯ ಕಡೆಗೆ ಮಕ್ಕಳ ಮನಸ್ಸನ್ನು ಅನುವುಗೊಳಿಸಬೇಕು.

ಎರಡನೆಯದಾಗಿ, ಸಂಗೀತ ವಿದ್ಯಾರ್ಥಿಗಳು, ನಾವು ಸುಮಾರು ಎರಡು ತಲೆಮಾರು, ಅಥವಾ ನೂರೈವತ್ತು ವರ್ಷಗಳಷ್ಟು ಕಾಲ ಮುಂದಕ್ಕೆ, ಸಂಗೀತ ಪರಂಪರೆಯನ್ನು ಉಳಿಸಿ, ಕೊಂಡೊಯ್ಯುವ ಪ್ರಮುಖ ಕೊಂಡಿಯಾಗಿದ್ದೇವೆಂಬ ಹೆಮ್ಮೆಯನ್ನು ತಮ್ಮದಾಗಿಸಿಕೊಂಡು, ನಿರಂತರ ಸಾಧಕರಾಗಿ ತಮ್ಮನ್ನು ತಾವು ಅಜರಾಮರರೆಂದೇ ಖ್ಯಾತಿಯನ್ನು ಹೊಂದಿ ಚಿರ ಧ್ರುವತಾರೆಯಂತೆ ಸದಾ ಕಾಂತಿಯುತರಾಗಿರಬಹುದು.

ಮೂರನೆಯದಾಗಿ ಪರಿಪಕ್ವವಾದ ವಿಷಯ ಜ್ಞಾನವನ್ನು ಪಡೆದಿರುವ ಗುರುಗಳು, ರಸಸಿದ್ಧನಾದ ಕಲಾವಿದನೊಬ್ಬನನ್ನು ಸಿದ್ಧಗೊಳಿಸುವುದರಲ್ಲಿ ಗುರುಗಳ ಪಾತ್ರ ಬಹುಮುಖ್ಯ, “ಶಿಷ್ಯಾದಿಚ್ಛೇತ್ ಪರಾಜಯಂ” ಎಂಬ ಮಾತಿನಂತೆ ತನ್ನ ಶಿಷ್ಯನಿಂದಲೇ ಸೋಲನ್ನು ಬಯಸುವ ಮುಕ್ತ ಮನಸ್ಸಿನವನಾಗಿರಬೇಕು, ಕಲಿಯುವರ ಮನಸ್ಸಿನಲ್ಲಿ ಇರಬಹುದಾದ, ಹೆದರಿಕೆ, ಅನುಮಾನವೇ ಮೊದಲಾದ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಿ, ಆತ್ಮವಿಶ್ವಾಸವನ್ನು ತುಂಬಿ, ನಾವು ಎಲ್ಲವನ್ನೂ ಸಾಧಿಸಬಲ್ಲೆವೆಂಬ ಮನೋಧರ್ಮವನ್ನು ಬೆಳೆಸಿ, ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು, ಪ್ರತ್ಯೇಕವಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಧ್ವನಿಯನ್ನು ಆಧರಿಸಿ, ಅವರದೇ ಶ್ರುತಿಯಲ್ಲಿ, ಪ್ರತ್ಯೇಕವಾಗಿ, ಧೈರ್ಯವನ್ನು ತುಂಬಿ, ಪಾಠವನ್ನು ಹೇಳಿಕೊಡಬೇಕು, ವಿದ್ಯಾರ್ಥಿಗಳ ಸ್ವರಶುದ್ಧತೆ, ಸಾಹಿತ್ಯ ಶುದ್ಧತೆ ಮೊದಲಾದವುಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು, ತಾವು ಹಾಡುವ ಶ್ರುತಿಯ ಔಚಿತ್ಯ, ಮತ್ತು ಅದರ ಬಗೆಗಿನ ಸಮಗ್ರ ಅಂಶಗಳನ್ನು ತಿಳಿಸಿಕೊಡಬೇಕು, ಗುರುವಾದವನು, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿಗಳನ್ನು ಅರಿತು ಶಿಕ್ಷಣವನ್ನು ನೀಡುವುದರಲ್ಲಿ ಸಮರ್ಥನಾಗಿರಬೇಕು, ಪ್ರಮುಖವಾಗಿ ಎಲ್ಲರನ್ನೂ ತನ್ನೊಡನೆ ಕರೆದೊಯ್ಯುವ ದೃಢ ಮನಸ್ಕನಾಗಿರಬೇಕು, “ಗುರವಃ ಬಹವಃ ಸಂತಿ ಶಿಷ್ಯ ವಿತ್ತಾಪಹಾರಕಃ” ಎಂಬ ಮಾತಿನಂತೆ ವಿದ್ಯಾರ್ಥಿಗಳ ಸಂಪತ್ತನ್ನು ಅಪಹಾರ ಮಾಡದೇ, ಅವರ ಮನಸ್ಸನ್ನು ಅಪಹಾರ ಮಾಡುವವನಾಗಿರಬೇಕು. ನಿರ್ವ್ಯಾಜ ಮನೋಭಾವ, ತನ್ನ ಜ್ಞಾನದ ಸರ್ವಸ್ವವನ್ನೂ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆಂಬ ತುಡಿತ, ಶಿಷ್ಯಾಭ್ಯುದಯದಲ್ಲಿಯೇ ಸ್ಥಿರವಾಗಿರುವ ಮನಸ್ಕತೆ, ಸಾಧನೆಯಲ್ಲಿಯೇ ಜಾಗೃತವಾದ ದೃಷ್ಟಿ, ಸೃಜನಾತ್ಮಕತೆಯನ್ನು ಬೆಳೆಸುವ ಗುಣ, ಅಧ್ಯಯನ ಮತ್ತು ಅಧ್ಯಾಪನದಿಂದ ಪಕ್ವವಾದ ಜ್ಞಾನ, ಇವೇ ಮೊದಲಾದ ಗುಣೋಪೇತನಾದ ಗುರುವು ಎಂದಿಗೂ ನಾಶವಾಗದ ಅತ್ಯಮೂಲ್ಯ, ಲೋಕೋತ್ತರ ಸೌಂದರ್ಯದಿಂದ ಕೂಡಿದ ಶಿಷ್ಯರುಗಳೆಂಬ ಶಿಲ್ಪಗಳನ್ನೇ ಕಡೆದಿಡಬಲ್ಲನಷ್ಟೇ.

ಇಂದು ವಿಶ್ವ ಸಂಗೀತ ದಿನ, ಪ್ರತೀ ವರ್ಷ ಜೂನ್ ತಿಂಗಳ 21 ನೇ ದಿನಾಂಕದದಂದು ಆಚರಿಸಲ್ಪಡುವ ಸಂಗೀತ ದಿನಾಚರಣೆಯು, ಫ್ರಾನ್ಸ್ ದೇಶದ ಸಂಸ್ಕೃತಿ ಸಚಿವರಾಗಿದ್ದ, “ಜ್ಯಾಕ್ ಲಾಂಗ್” ಎಂಬುವವರಿಂದ, ಮತ್ತು “ಜೋಯೆಲ್ ಕೊಹೆನ್” ಎಂಬ ಅಮೆರಿಕದ ಗಿಟಾರ್ ಕಲಾವಿದನಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುವುದರ ಮೂಲಕ, “ವಿಶ್ವ ಸಂಗೀತ ದಿನ” ಎಂದು 1982ರಲ್ಲಿ ಮೊದಲಿಗೆ ಪ್ರಾರಂಭವಾಯಿತು, ನಂತರ ಕ್ರಮೇಣ ಪ್ರಪಂಚದ ಎಲ್ಲ ದೇಶಗಳೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾದವು,
ಇಂತಹ ಒಂದು ಸುದಿನದಿಂದ ಪ್ರತೀದಿನವೂ ತಪ್ಪದೇ ಅತ್ಯಲ್ಪ ಸಮಯವಾದರೂ ಆತ್ಮೋನ್ನತಿಗೆ ಕಾರಣೀಭೂತವಾದ, ಸಂಗೀತ ಸುಧೆಯನ್ನು ಸವಿಯೋಣವಲ್ಲವೇ.

ಶ್ರೀಮತಿ ಸವಿತಾ ಕೂಲಂಬಿ.
ಮಹತೀ ಸಂಗೀತ ವಿದ್ಯಾಲಯ,
ದಾವಣಗೆರೆ.

Leave a Reply

Your email address will not be published. Required fields are marked *