ಶುಭ ಕೋರುತ್ತದೆ ಈ ಗಡಿಯಾರ

ಇದು ಕೇವಲ ಗಡಿಯಾರ ಮಾತ್ರವಲ್ಲ, ಇದು ಕ್ಯಾಮೆರಾವೂ ಹೌದು, ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ನಮಗೆ ಶುಭ ಕೋರುವ ಆತ್ಮೀಯ ಮಿತ್ರನೂ ಹೌದು. ಗಂಟೆಗೊಮ್ಮೆ ಸಮಯ ಎಷ್ಟಾಯಿತೆಂದು ಕೂಗಿ ಹೇಳಿ ಎಚ್ಚರಿಸುವ ವಾಚ್‍ಮನ್ ಕೂಡ.


ಹೌದು. ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದ ಪಕ್ಕದ ವೃತ್ತದಲ್ಲಿ ಪಾಶ್ಚಿಮಾತ್ಯ ಶೈಲಿಯ ಕ್ಲಾಕ್ ಟವರ್ ನಿರ್ಮಾಣವಾಗುತ್ತಿದ್ದು, ಇದು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.
ಹಳೇ ದಾವಣಗೆರೆಯಲ್ಲಿರುವ ಗಡಿಯಾರ ಕಂಬ ಗಂಟೆಗೊಮ್ಮೆ ಎಷ್ಟು ಗಂಟೆಯಾಗಿದೆಯೋ ಅಷ್ಟು ಸಾರಿ ಗಂಟೆ ಬಾರಿಸುವ ಮೂಲಕ ನಾಗರೀಕರನ್ನು ಜಾಗೃತಗೊಳಿಸುವುದರ ಜೊತೆಗೆ ಸಮಯ ಪ್ರಜ್ಞೆ ಮೂಡಿಸುತ್ತಿದೆ. ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಹೊಸ ತಂತ್ರಜ್ಞಾನ ಹೊಂದಿರುವ ಕ್ಲಾಕ್ ಟವರ್ ತಲೆ ಎತ್ತುತ್ತಿರುವುದು ಸ್ಮಾರ್ಟ್ ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯ ಮತ್ತೊಂದು ವಿಶೇಷವಾಗಿದೆ.


ನಗರದ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದ ಪಕ್ಕದಲ್ಲಿರುವ ವೃತ್ತಕ್ಕೆ ಪಿಬಿ ರಸ್ತೆ ಕಡೆಯಿಂದ 2, ಬಿಸಿಎಂ ಹಾಸ್ಟೆಲ್ ಕಡೆಯಿಂದ 2, ಸಮುದಾಯ ಭವನದ ಕಡೆಯಿಂದ 1, ಲಕ್ಷ್ಮೀ ಫ್ಲೋರ್ ಮಿಲ್ ಕಡೆಯಿಂದ 2 ಹಾಗೂ ಆಫೀಸರ್ಸ್ ಕ್ಲಬ್ ಕಡೆಯಿಂದ ಬರುವ 2 ರಸ್ತೆಗಳು ಸೇರಿ ಒಟ್ಟು 9 ರಸ್ತೆಗಳು ಸೇರಲಿವೆ. ಇದೇ ವೃತ್ತದಲ್ಲಿ ಈ ನವೀನ ಮಾದರಿಯ ಕ್ಲಾಕ್ ಟವರ್ ನಿರ್ಮಾಣ ಆಗುತ್ತಿರುವುದರಿಂದ ಈ ಸರ್ಕಲ್‍ನ ಆಕರ್ಷಣೆ ಹೆಚ್ಚಲಿದೆ.
ಈ ಗಡಿಯಾರ ಕಂಬಕ್ಕೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ 49 ಲಕ್ಷ ಅನುದಾನ ನೀಡಿದ್ದರೆ, ವೃತ್ತ ನಿರ್ಮಾಣಕ್ಕೆ ಮಹಾನಗರ ಪಾಲಿಕೆ 1.26 ಕೋಟಿ ರೂ. ಅನುದಾನ ನೀಡಿದ್ದು, ಒಟ್ಟು 1.74 ಕೋಟಿ ರೂ. ವೆಚ್ಚದಲ್ಲಿ ಈ ಕ್ಲಾಕ್ ಟವರ್‍ಗಳನ್ನು ಉತ್ತರ ಭಾರತದ ಓರಿಸ್ಸಾ, ಭುವನೇಶ್ವರ, ಕಾಟ್ರಾ ನಗರಗಳಲ್ಲಿ ಮಾತ್ರ ನೋಡಬಹುದಾಗಿದೆ. ಹೀಗಾಗಿ ಇದು ದಕ್ಷಿಣ ಭಾರತದ ಪ್ರಪ್ರಥಮ ಕ್ಲಾಕ್ ಟವರ್ ಆಗಿದೆ.


120 ಅಡಿ ವ್ಯಾಸ (ಡಯಾಮೀಟರ್) ಹೊಂದಿರುವ ವೃತ್ತದಲ್ಲಿ ಸುಮಾರು ಒಂದೂವರೆ ಟನ್ ತೂಕದ, 25 ಅಡಿ ಎತ್ತರ, 11 ಅಡಿ ಅಗಲ ಅಳತೆಯನ್ನು ಈ ಕ್ಲಾಕ್ ಟವರ್ ಹೊಂದಿದೆ. ತ್ರಿಕೋನಾಕೃತಿಯ ಪಿಲ್ಲರ್‍ಗಳ ಮಧ್ಯೆ ಬೃಹತ್ ಗಡಿಯಾರ ಕಾಣುತ್ತಿದೆ. ಸ್ವತಂತ್ರವಾಗಿ ಕನಸು ಕಾಣುವ ವ್ಯಕ್ತಿಯ ಸಂಕೇತವನ್ನು ಸೂಚಿಸುತ್ತದೆ. ಅಲ್ಲದೆ, ಎಷ್ಟು ಗಂಟೆಯಾಗಿದೆ ಎಂಬುದನ್ನು ಸೂಚಿಸಲು ಬೆಲ್ ಬಾರಿಸುವುದರ ಜೊತೆಗೆ, ಎಷ್ಟು ಗಂಟೆಯಾಗಿದೆ ಎಂಬುದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೂಗಿ ಹೇಳಲಿದೆ. ಅಲ್ಲದೆ, ಹ್ಯಾಪಿ ನ್ಯೂ ಇಯರ್, ಹ್ಯಾಪಿ ಸಂಕ್ರಾಂತಿ, ಹ್ಯಾಪಿ ಹೋಲಿ ಎಂಬುದು ಸೇರಿದಂತೆ ಆಯಾ ಹಬ್ಬ ಹಾಗೂ ಸಂಭ್ರಮಗಳ ಸಂದರ್ಭದಲ್ಲಿ ನಾಗರೀಕರಿಗೆ ಶುಭಾಶಯವನ್ನೂ ಸಹ ತಿಳಿಸಲಿದೆ.
ಈ ಕ್ಲಾಕ್ ಟವರ್ ನಿರ್ಮಾಣದ ಜವಾಬ್ದಾರಿನ್ನು ಒರಿಸ್ಸಾ ಮೂಲದ ಡಾ. ಜ್ಞಾನೇಶ್ ಮಿಶ್ರಾ ಎಂಬುವವರಿಗೆ ನೀಡಲಾಗಿದ್ದು, ಈಗಾಗಲೇ ಕ್ಲಾಕ್ ಟವರ್ ಅನ್ನು ಇನ್‍ಸ್ಟಾಲ್ ಮಾಡಲಾಗಿದೆ. ವೃತ್ತ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಲ್ಲದೆ, ವೃತ್ತದ ಸುತ್ತಲೂ ಹಚ್ಚ ಹಸಿರು ಲಾನ್ ಬೆಳೆಸಲಾಗುವುದು. ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಈ ಗಡಿಯಾರ ಗೋಪುರ ವೃತ್ತವನ್ನು ಲೋಕಾರ್ಪಣೆ ಮಾಡಲಾಗುವುದು ಎನ್ನುತ್ತಾರೆ ಈ ಭಾಗದ ಪಾಲಿಕೆಯ ಹಿರಿಯ ಸದಸ್ಯ ಶಿವನಳ್ಳಿ ರಮೇಶ್.

Leave a Reply

Your email address will not be published. Required fields are marked *