ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳ ನಡಿಗೆ ದೇವರ ಕಡೆಗೆ
ನಡೆದಾಡುವ ದೇವೆರೆಂದೇ ಕರೆಯುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಇನ್ನಿಲ್ಲ ನಿಜ ನಮ್ಮನೆಲ್ಲ ಬಿಟ್ಟು (ಜನವರಿ 21)ದಂದು ಕೈಲಾಸವಾಸಿಯಾಗಿದ್ದಾರೆ. ಸಿದ್ದಗಂಗಾಶ್ರೀಗಳ ಬದುಕಿನ ಹಾದಿಯನ್ನು ಹಿಂತಿರುಗಿ ನೆನೆಯುವ ಪ್ರಯತ್ನ ಇಲ್ಲಿದೆ .
01.04.1907ರಲ್ಲಿ ವೀರಾಪುರ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆಯಲ್ಲಿ ಜನಿಸಿದ ಡಾ.ಶಿವಕುಮಾರ ಸ್ವಾಮೀಜಿ ಅವರು, ವಿರಕ್ತಾಶ್ರಮ ದೀಕ್ಷೆ ಪಡೆದು 1930ರಲ್ಲಿ ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು.
ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರು ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಾಗಡಿ ತಾಲ್ಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಎಂದೆಂದಿಗೂ ಪ್ರಾತಃ ಸ್ಮರಣೀಯರಾಗಿದ್ದಾರೆ.
ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಠಾಧಿಪತಿಗಳಾಗಿದ್ದು
ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರ ಕಡೆ ಉದ್ಧಾನ ಸ್ವಾಮಿಜಿಗಳ ದೃಷ್ಟಿ ಹರಿಯುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಎಲ್ಲರಂತೆ ಸಾಮಾನ್ಯರಾಗಿ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣನವರು ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ‘ಶ್ರೀ ಶಿವಕುಮಾರ ಸ್ವಾಮಿಜಿ’ಗಳಾಗಿ ಹಿಂದಿರುಗುತ್ತಾರೆ. ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ.
ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತಲೂ ಹಾಗು ಶಿಸ್ತುಬದ್ಧ ವಿದ್ಯಾರ್ಥಿಯಾಗಿಯೂ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.ವಿದ್ಯಾಭ್ಯಾಸ ಮುಗಿದು ಸ್ವಾಮಿಜಿಯವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿ, ಅಂದಿನಿಂದ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ಇದಾಗಿ ಮುಂದೆ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.
ಸಿದ್ದಗಂಗಾ ಶ್ರೀಗಳ ಶಿವಕುಮಾರ ಸ್ವಾಮೀಜಿಗಳು ನಿತ್ಯ ಕರ್ಮ ಹೀಗಿತ್ತು
ಪ್ರಾರ್ಥನೆ: ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ನಂತರ ಇಷ್ಟಲಿಂಗ ಪೂಜೆ.
ದಿನಚರಿಯಲ್ಲಿ ಭಕ್ತರ ಭೇಟಿಗೆ ಆದ್ಯತೆ:ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಾರೆ.
ಆಹಾರ :ನಂತರ ಆಹಾರ ಸೇವನೆ, ಮುಂಜಾನೆ ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆಯಾಗುತ್ತದೆ.
ವಿಶ್ರಾಂತಿ:ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದಾರೆ. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತದೆ. ಹನ್ನೊಂದು ಗಂಟೆಗೆ ಮಲಗುತ್ತಾರೆ. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತದೆ
ಸಿದ್ದಗಂಗಾ ಶ್ರೀಗಳಿಗೆ ರತ್ನ ನೀಡಬೇಕು ಎಂಬುದು ಭಕ್ತರ ಮನವಿ
* ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.ಪೂಜ್ಯ ಸ್ವಾಮೀಜಿಯವರ 100ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ದೇಶದ ಮಹೋನ್ನತ ನಾಗರೀಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಗೆ ಪರಮ ಪೂಜ್ಯ ಶ್ರೀಗಳ ಹೆಸರನ್ನು ಶಿಫಾರಸು ಮಾಡಿ ಕರ್ನಾಟಕ ಸರ್ಕಾರ 2006ರಿಂದ ಮನವಿ ಮಾಡುತ್ತಾ ಬಂದಿದೆ.