ಹಸಿರೇ ಉಸಿರು, ಉಸಿರೇ ಹಸಿರು.
ನಾನು ಸಣ್ಣವಳಿದ್ದಾಗ ರೇಡಿಯೋ ಮತ್ತು ದೂರದರ್ಶನದಲ್ಲಿ ಬರುವ ಒಂದು ಹಾಡು ನನ್ನನ್ನು ಇಂದು ಬಹಳವಾಗಿ ಕಾಡುತ್ತಿದೆ, ಗಿಡ ನೆಡಿ ಗಿಡ ನೆಡಿ, ಗಿಡಾ ನೆಡಿ, ಮನೆಯ ಮುಂದೊಂದು ಗಿಡಾ ನೆಡಿ ಮನೆಯ ಹಿಂದೊಂದು ಗಿಡಾ ನೆಡಿ ಎಂದು ಹಾಡಿದ ಹಾಡು, ಎಂತಾ ಅದ್ಬುತವಾದ ಸಾಲುಗಳು ಮತ್ತು ಅಮೂಲ್ಯವಾದ ಸಲಹೆ ನೀಡುತ್ತಿದ್ದ ಪದಗಳು.
ನಿಜ ಗೆಳೆಯರೇ ಅಂದಿನ ಆ ಹಾಡಿನ ಸಾಲಿನಂತೆ ಪ್ರತಿಯೊಂದು ಮನೆಯ ಮುಂದೆಯೋ ಅಥವಾ ಮನೆಯ ಹಿಂದೆಯೋ ಗಿಡ ಮರಗಳನ್ನು ನೆಟ್ಟಿದ್ದಾರೆ ನಮ್ಮ ಜೀವ ಉಳಿಸುವ ಜೀವವಾಯು ಅಂದರೆ ಆಕ್ಸಿಜನ್ ಇಲ್ಲದೆ ನೂರಾರು ಮಂದಿ ತಮ್ಮ ಜೀವ ಬಿಡುತ್ತಿರಲಿಲ್ಲ, ಹಿಂದಿನ ಕಾಲದಲ್ಲಿ ಎಲ್ಲಾ ಮನೆಯಲ್ಲಿ ಹಿತ್ತಲು ಅಂತ ಒಂದು ಜಾಗವಿರುತ್ತಿತ್ತು, ಅಲ್ಲಿ ಬರೀ ಗಿಡಗಳಿಂದ ಕೂಡಿದ ಕಾಂಪೌಂಡ್ ಇರುತ್ತಿತ್ತು, ಬರೀ ಮನೆಯ ಮುಂದೆಯಷ್ಟೆ ಸಿಮೆಂಟಿ ಪುಟ್ಟದೊಂದು ಹೂ ತೋಟ, ಅಜ್ಜ ಅಕ್ಕರೆಯಿಂದ ನೆಟ್ಟಿದ್ದ ಮಾವಿನ ಮರ, ಸೀಬೆ, ತೆಂಗು ಸೊಂಪಾಗಿ ಬೆಳೆದು ನಿಂತಿರುತ್ತಿತ್ತು, ಊಟವಾದ ನಂತರ ಒಂದೆರಡು ಹೆಜ್ಜೆ ಅಲ್ಲಿ ನಡೆದಾಡಿ ಬಂದರೆ ಒಳ್ಳೆಯ ಗಂಡಗಾಳಿಯ ಸೇವನೆ ಸಿಗುತ್ತಿತ್ತು.
ಆದರೆ ಇಂದು ದಿನವೂ ನಾವು ನೀವು ಯಾವ ಚಾನಲ್ ಹಾಕಿದರೂ ಕಾಣುವುದು ಕೇಳುವುದು ಇದೇ ಪ್ರಾಣವಾಯು ಅಂದರೆ ಆಕ್ಸಿಜನ್ ಗಾಗಿ ಹಾಹಾಕಾರ ಹಾಗೂ ಪ್ರಾಣವಾಯು ಸಿಗದೆ ಸತ್ತವರ , ಅಂತಹವರ ಕುಟುಂಬದ ನರಳಾಟ, ಕಾರಣ ಒಂದು ಕರೋನ ಎಂಬ ಮಾರಣಾಂತಿಕ ವೈರಾಣು.
ಒಂದು ಸಣ್ಣ ವೈರಾಣು ಇಡೀ ಜಗತ್ತನ್ನು ಅಲೊಲ್ಲ ಕಲ್ಲೋಲ ಮಾಡುತ್ತಿರುವ ಪರಿ ಎಂತಹವರನ್ನೂ ಬೆಚ್ಚಿ ಬೀಳಿಸುತ್ತಿದೆ, ಇದೆಕ್ಕೆಲ್ಲಾ ಕಾರಣ ಮಾನವನ ಸಾರ್ಥಪರತೆ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಮಾರುಹೋಗಿರುವುದು, ಎಲ್ಲಿ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಕಾಂಕ್ರೀಟಿನ ಕಾಡುನಂತಿರುವ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳು , ನಮ್ಮದೇ ನಾಲ್ಕು ಗೋಡೆಗಳಲ್ಲಿ ,ಪಕ್ಕದ ಮನೆಯ ಗೋಡೆಗಳು ಅಂಟಿಕೊಂಡಿರುತ್ತದೆ, ಇಂತಹ ಜಾಗಗಳಲ್ಲಿ ಗಿಡ ನೆಡುವುದೆಲ್ಲಿ, ಫ್ಯಾಷನ್ ಗಾಗಿ ಯುಟಿಲಿಟಿಯಲ್ಲೀ ತೂಗು ಹಾಕಿದ ಹಾಕಿಂಗ್ ಪಾಟ್ ಗಳಲ್ಲಿ ನಲಿಯುವ ಹೂಗಿಡಗಳು , ಅದೇ ಅಪಾರ್ಟ್ಮೆಂಟ್ನವರು ಕಟ್ಟಿರುವ ಗಾರ್ಡನ್ ಗಳು, ಉದ್ಯಾನ ವನ ಅನ್ನುವುದಕ್ಕಿಂತ ವಾಕಿಂಗ್ ಪಾತ್ ಅನ್ನುವುದು ಸೂಕ್ತ, ವಾಯುವಿಹಾರಕ್ಕೆ ಬರುವುವ ವರಿಗೆ ಸರಿಯಾದ ವಾಯು ಸಿಗುತ್ತದಯೇ,ಇನ್ನೂ ಕೆಲವರು ಮನೆಯ ನಾಲ್ಕು ಕಡೆಯ ಒಂದಿಂಚು ಜಾಗ ಬಿಡದೆ ಮನೆಗಳನ್ನು ಕಟ್ಟಿಕೊಳ್ಳುವುದಲ್ಲದೇ, ಪಾಲಿಕೆಯವರು ನೆಟ್ಟ ಮರಗಳನ್ನು ಚಿಗುರುವ ಮುನ್ನವೇ ಚಿವುಟಿ ಹಾಕುತ್ತಾರೆ, ಕಾರಣ ಅದರ ಎಲೆಗಳನ್ನು ಗುಡಿಸುವವರಾರೆಂದು.
ಮನುಜನ ಸ್ವಾರ್ಥ ಮತ್ತು ಲಾಲಸೆ ಇಂದು ನಾವು ನಮ್ಮ ನಿಮ್ಮ ಜೀವ ಉಳಿಸುವ ಪ್ರಾಣವಾಯು ಗಾಗಿ ಹೊರಾಡುತ್ತಿದ್ದೆವೇ, ಉಸಿರು ನೀಡುವ ಮರಗಳನ್ನು ಕಡೆದು ಅವು ನೀಡುವ ಉಸಿರಿಗಾಗಿ ಇಂದು ಉಸಿರು ಬಿಡುತ್ತಿದ್ದೆವೇ, ಕಾರಣ ನಾವು ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸುತ್ತಿದ್ದೇವೆ, ಆಧುನಿಕ ತಂತ್ರಜ್ಞಾನಕ್ಕೆ ಮಾರುಹೋಗಿ ನಮ್ಮ ಜೀವನಕ್ಕೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೆವೆ, ಏನೇ ಆಗಲಿ ಇನ್ನಾದರೂ ನಾವು ನೀವು ಪ್ರಕೃತಿಗೆ ಹಾನಿ ಮಾಡದೆ ಅದರ ಜೊತೆ ಜೊತೆಗೆ ಜೀವನ ನಡೆಸೋಣ.
ಮುಂದಿನ ಪೀಳಿಗೆಗಾದರೂ ನಾವು ನೀವು ಗಿಡ ನೆಟ್ಟು ಅವರನ್ನು ಇಂದಿನ ಸ್ಥಿತಿಗೆ ಬಾರದಂತೆ ಎಚ್ಚರವಹಿಸೋಣ, ಹಸಿರೇ ಉಸಿರೆಂದು ತಿಳಿದು ಗಿಡ ನೆಟ್ಟು ಅದನ್ನು ಪೊಷಿಸೋಣ ಹಾಗೂ ಇತರರಿಗೆ ಮಾದರಿಯಾಗಿ ನಿಲ್ಲೋಣ.
ಜಯಶ್ರೀ ಕಿಶೋರ್
ಆಪ್ತ ಸಮಾಲೋಚಕಿ
ಬೆಂಗಳೂರು.