ರೈತನ ಉತ್ಪಾದನೆ ದ್ವಿಗುಣ

ಅಕ್ಷರವಿಲ್ಲದ ಬಾಳು ಭಾರಿ ಗೋಳು. ಹೊಸ ಜಗತ್ತಿನಲ್ಲಿ ಅಕ್ಷರ ಮಹತ್ವದ್ದಾಗಿದೆ. ಅಕ್ಷರ ಸ್ಪಟಿಸಿದಾಗಲೇ ಬಾಳು ಬೆಳಕಾಗುವುದು. ಅದೇತರ ಕೃಷಿಯಲ್ಲಿ ರೈತ ಹೊಸ ವಿಧಾನದಲ್ಲಿ ಹೆಚ್ಚು ಉತ್ಪಾದನೆ ಮಾಡಬೇಕಾದರೆ ನಮ್ಮ ರೈತರಿಗೆ ಕೃಷಿ ಶಿಕ್ಷಣ ಅತ್ಯವಶ್ಯವಿದೆ. ಆದ್ದರಿಂದ ಕೃಷಿ ಉತ್ಪಾದನೆ ಮಾಡಬೇಕಾದರೆ ನಮ್ಮ ರೈತನ ಕೃಷಿ ಉತ್ಪಾದನೆ ದ್ವಿಗುಣಗೊಳ್ಳಲು ಸಾಧ್ಯ. ಹಳೆಯ ವಿಧಿವಿಧಾನದಲ್ಲೇ ಹರಗುವುದು ಬಿತ್ತುವುದು ಭೂಮಿ ಹದ ಮಾಡುವದರಲ್ಲೇ ನಮ್ಮ ರೈತರು ಕಳೆ, ಕಂಟೆ, ಖರ್ಚುವೆಚ್ಚದಲ್ಲೇ ಆದಾಯವು ಸಮನಾಗಿಬಿಡುತ್ತದೆ. ಆದ್ದರಿಂದ ಹೊಸ ಹೊಸ ಕೃಷಿ ಮಾಡಿ ಹೆಚ್ಚು ಉತ್ಪಾದನೆ ಮಾಡಲು ರೈತರಿಗೆ ಕೃಷಿ ಶಿಕ್ಷಣ ನೀಡಬೇಕು. ಹಳ್ಳಿಗಳಲ್ಲಿ ಅನಕ್ಷರಸ್ಥ ರೈತರಿಗೆ ಗ್ರಾಮದ ಗುಡಿ, ದೇವಸ್ಥಾನ, ಸಾರ್ವಜನಿಕ ಪ್ರದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗುವ ಹಾಗೆ ಸಾರ್ವಜನಿಕವಾಗಿ ಕೃಷಿ ಶಿಕ್ಷಣಕ್ಕೆ ಮುಂದಾಗಬೇಕು. ಮಣ್ಣು ಪರೀಕ್ಷೆ , ಕಳೆನಾಶಕ, ನೇಗಿಲು ಹೊಡೆಯುವುದು. ತೋಟಗಾರಿಕೆ ಮಾಡುವದು, ಕಳೆ ನಿರ್ವಹಣೆ, ಬಿತ್ತನೆ ಗೊಬ್ಬರ, ಬೀಜೋಪಚಾರ, ಖರ್ಚು ಆದಾಯ, ಹೊಸ ಕೃಷಿ ಪದ್ಧತಿ, ಯಂತ್ರೋಪಕರಣದ ಬಳಕೆ, ಮಾರುಕಟ್ಟೆ, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ನಿಯಮ ಇತ್ಯಾದಿಯನ್ನು ಕೃಷಿ ಶಿಕ್ಷಣದಿಂದ ಗ್ರಾಮೀಣ ಪ್ರದೇಶದಲ್ಲೇ ನಮ್ಮ ರೈತರು ತಿಳಿದುಕೊಳ್ಳುವುದರಿಂದ ಪ್ರತಿ ವರ್ಷದಿಂದ ವರ್ಷಕ್ಕೆ ರೈತರು ಉತ್ತಮ ಕೃಷಿ ವಿಧಾನಗಳನ್ನು ಬಳಸುವ ಮೂಲಕ ಕೃಷಿ ಉತ್ಪನ್ನ ಹೆಚ್ಚಿಸಬಹುದು. ರೈತರು ತಮ್ಮಲ್ಲೇ ಸಮುದಾಯದ ಕೃಷಿ ಶಾಲೆಗಳನ್ನು ಗ್ರಾಮಗಳಲ್ಲಿ ತೆರೆದುಕೊಳ್ಳಬಹುದು. ಉತ್ತಮ ಫಸಲು ಪಡೆದಂತಹ ರೈತ ತಾನು ಅನುಸರಿಸಿದ ಕ್ರಮಗಳನ್ನು ಇತರೆ ರೈತರಿಗೆ ತಿಳಿಸಿ ಕೃಷಿ ಉತ್ಪಾದನೆ ಹೆಚ್ಚಳದ ಕಾರಣ ತಿಳಿಸಬಹುದು. ಹೀಗೆ ತಮ್ಮ ತಮ್ಮ ಅನುಭವ ಮತ್ತು ಕೃಷಿ ಕ್ರಮಗಳನ್ನು ತಮ್ಮಲ್ಲೇ ಹಂಚಿಕೊಳ್ಳುವುದರಿಂದ ಕೃಷಿ ಶಿಕ್ಷಣದ ಪ್ರಗತಿ ಹೆಚ್ಚುತ್ತದೆ. ಇದರ ಪರಿಣಾಮದಿಂದ ಇತರ ಹಿಂದುಳಿದ ರೈತರು ಹೆಚ್ಚು ಫಸಲು ಪಡೆಯಲು ಸಾಧ್ಯ.

                ಕೃಷಿ ವಲಯ ಇಂದು ಆಧುನಿಕರಣಗೊಳ್ಳುತ್ತಿದೆ. ಕೃಷಿ ರಂಗ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ಸಂಪ್ರಾದಾಯಿಕ ಪದ್ಧತಿಯೊಟ್ಟಿಗೆ ಆಧುನಿಕ ಪ್ರಯೋಗಗಳನ್ನು ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆಯಲ್ಲಿಂದು ರೈತರಿದ್ದಾರೆ. ಹೊಸ ಪದ್ಧತಿಗಳ ಕುರಿತು ರೈತರಿಗೆ ಮನದಟ್ಟು ಮಾಡಿಕೊಡುವುದು ಅತ್ಯವಶ್ಯಕವಾಗಿದ್ದು, ಈ ಆಶಯಕ್ಕೆ ಆದ್ಯತೆ ನೀಡಿ ಕೃಷಿ ಶಿಕ್ಷಣವನ್ನು ಗ್ರಾಮ ಮಟ್ಟದಲ್ಲಿ ವಿಸ್ತರಿಸಿದಲ್ಲಿ ಕೃಷಿ ವಲಯ ವಿಸ್ತಾರಗೊಂಡು ಉತ್ಪಾದನೆ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಬಹುದು.

                      ಸಹಾಯ ಕೃಷಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಕೃಷಿ ಪ್ರೇರಕರು ಇತ್ಯಾದಿ ಕೃಷಿಗೆ ಸಂಬಂಧಿಸಿದ ಕೃಷಿ ಅಧಿಕಾರಿಗಳನ್ನು ನಮ್ಮ ರೈತರು ಗ್ರಾಮಗಳಿಗೆ ಕರೆಸಿ ಕೃಷಿ ಶಿಕ್ಷಣವನ್ನು ಪಡೆದುಕೊಳ್ಳಬಹುದು. ಕೃಷಿಗೆ ಸಂಬಂಧಿಸಿದ ಜಾಹೀರಾತುಗಳು, ಪುಸ್ತಕಗಳು, ಪ್ರಕಟನೆಗಳು ಇತ್ಯಾದಿಯನ್ನು ರೈತರು ಪಡೆದುಕೊಂಡು ಕೃಷಿ ಉತ್ಪಾದನೆ ಕ್ರಮ ಪಡೆದುಕೊಂಡು ಕೃಷಿಯಲ್ಲಿ ದ್ವಿಗುಣ ಉತ್ಪಾದನೆ ಮಾಡಬಹುದು. ಮಾದರಿ ಕೃಷಿ ಪದ್ಧತಿಯ ಸಾಕ್ಷ್ಯಚಿತ್ರಗಳು, ಮಾದರಿಗಳು, ಪ್ರಯೋಗಿಕ ಕೃಷಿ ಕಾರ್ಯಕ್ರಮಗಳು ಇತ್ಯಾದಿಗಳನ್ನು ರೈತರಿಗೆ ತೋರ್ಪಡಿಸುವುದರಿಂದ ನಮ್ಮ ರೈತರನ್ನು ಹೆಚ್ಚು ಕೃಷಿ ಶಿಕ್ಷಣವಂತರನ್ನಾಗಿ ಮಾಡಬೇಕು. ಬೇಡಿಕೆಗಳನ್ನು ಅರಿತು ಅತ್ಯಧಿಕ ಉತ್ಪಾದನೆಗೆ ಚಾಲನೆ ಕೊಡಬಹುದು. ಆದ್ದರಿಂದ ರೈತರಿಗೆ ಕೃಷಿ ಶಿಕ್ಷಣ ಉಣಬಡಿಸಬೇಕು.

                 ಕೃಷಿ ಶಿಕ್ಷಣ ನೀಡುವದರಿಂದ ರೈತರು ಅತ್ಯಾಧುನಿಕ ಯಂತ್ರಗಳ ಬಳಕೆ ಮತ್ತು ನಿರ್ವಹಣೆ ಬಗ್ಗೆ ತಿಳಿಯುತ್ತದೆ. ಮಾರುಕಟ್ಟೆ ದರಗಳ ಏರಿಳಿತ ಬೇಡಿಕೆ ಮತ್ತು ಉತ್ಪಾದನೆ, ಕೃಷಿ ಉತ್ಪಾದನೆಯ ಸಂಸ್ಕರಣೆ ಮತ್ತು ಸಂಗ್ರಹ, ಭೂಮಿ ಮತ್ತು ನೀರಾವರಿ ಸಂರಕ್ಷಣೆ, ನಿರ್ವಹಣೆ, ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸ್ಥಳಾಂತರ, ಕೃಷಿಯಲ್ಲಿ ಯಂತ್ರೋಪಕರಣ ಮತ್ತು ಜಾನುವಾರುಗಳ ಬಳಕೆ, ಮಿಶ್ರ ಕೃಷಿ, ಸಾಂದ್ರ ಬೇಸಾಯ, ಅಂತರ ಬೆಳೆ, ಬೀಜಗಳ ಗುಣಮಟ್ಟ ಮತ್ತು ಬಳಕೆ ಗೊಬ್ಬರ ಮತ್ತು ರಾಸಾಯನಿಕ ಪರಿಣಾಮ ಮತ್ತು ಫಲ, ಆದಾಯ ಮತ್ತು ಖರ್ಚು, ಕೃಷಿ ಸಲಕರಣೆಗಳ ಉಪಯೋಗ ಮತ್ತು ಬಳಕೆ, ಕೃಷಿ ಉತ್ಪನ್ನಗಳ ಹೆಚ್ಚು ಉತ್ಪಾದನೆ ಹೀಗೆ ಅನೇಕ ವಿಷಯಗಳ ಬಗ್ಗೆ ನಮ್ಮ ಹಿಂದುಳಿದ ರೈತರು ಕೃಷಿ ಶಿಕ್ಷಣದಿಂದ ಪಡೆದುಕೊಂಡು ಕೃಷಿ ಅಭಿವೃದ್ಧಿಯಪಡಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಡಬಹುದು. ಆದ್ದರಿಂದ ರೈತರಿಗೆ ಕೃಷಿ ಶಿಕ್ಷಣ ನೀಡಬೇಕು. ಅಂದಾಗಲೇ ಕೃಷಿ ಉತ್ಪನ್ನ ದ್ವಿಗುಣಗೊಳ್ಳವುದು.

                    ಕೃಷಿ ಶಿಕ್ಷಣ ಹೆಚ್ಚಿದಂತೆ ರೈತರು ಹೆಚ್ಚು ಪ್ರಜ್ಞಾವಂತರಾಗುತ್ತಾರೆ. ಹವಾಮಾನ ಸಮೀಕ್ಷೆ, ಬೆಳೆ ಕಟಾವು, ಕೃಷಿ ಯಾಪ್ ಬಳಕೆ, ಜಿಪಿಎಸ್ ದಲ್ಲಿ ಬೆಳೆ ಸಮೀಕ್ಷೆ ಮಾಡುವದು, ಒಕ್ಕಲು ಮಾಡುವುದು ಮತ್ತು ಬೆಳೆ ನಿರ್ವಹಣೆ ಬಗ್ಗೆ ಸರಾಸರಿಯಾಗಿ ತಿಳಿದುಕೊಂಡು ರೈತರು ಮಳೆ ಪ್ರಕೃತಿ ವಿಕೋಪಗಳಿಂದ ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದು. ಆದ್ದರಿಂದ ಕೃಷಿ ಹೆಚ್ಚಾಗಲು ಮತ್ತು ಆಹಾರ ಭದ್ರತೆ ಹೆಚ್ಚಾಗಲು, ಸಮರ್ಥ ಪರಿಸರ ನಿರ್ಮಾಣವಾಗಲು, ಹೆಚ್ಚು ಆದಾಯ ಗಳಿಸಲು, ರೈತರಿಗೆ ಕೃಷಿ ಶಿಕ್ಷಣ ಅತ್ಯಗತ್ಯ ಆದ್ದರಿಂದ ನಮ್ಮ ರೈತರು ಪತ್ರಿಕೆ, ಟಿವಿ, ರೇಡಿಯೋ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಕೃಷಿ ಶಿಕ್ಷಣ ಪಡೆದುಕೊಳ್ಳಬಹುದು. ಕೃಷಿ ಶಿಕ್ಷಣ ಪಡೆದರೆ ದ್ವಿಗುಣ ಉತ್ಪಾದನೆ ಮಾಡಿ ತೋರಿಸಬಹುದು.

ಲೇಖಕರು : ಶರೀಫ ಗಂಗಪ್ಪ ಚಿಗಳ್ಳಿ (ಸಾಹಿತಿ)
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ

Leave a Reply

Your email address will not be published. Required fields are marked *