ಯುವ ಶಕ್ತಿಯೇ ದೇಶದ ಬೆನ್ನೆಲುಬು
ಚುಮು ಚುಮು ಚಳಿಯಲ್ಲಿ ಬಿಸಿ ಕಾಫಿಯ ಪರಿಮಳವನ್ನು ಹೀರುತ್ತಾ ಕೂತಿದ್ದವಳಿಗೆ, ಬೆಳಿಗ್ಗೆಯೇ ಎದ್ದ ಕೂಡಲೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆಯ ವರ್ಷ ವ್ಯಾಸಾಂಗ ಮಾಡುತ್ತಿದ್ದ ಆದರೆ ಈ ಕರೋನ ಸಮಯದಲ್ಲಿ ಆನ್ಲೈನ್ ಪಾಠಗಳು ನಡೆಯುತಿದ್ದ ಕಾರಣ ಸದಾ ಮೊಬೈಲ್ನಲ್ಲಿ ಮುಳುಗಿದ್ದ ತನ್ನ ಮೊಬೈಲ್ ಹಿಡಿದು ಗುಡ್ ಮಾರ್ನಿಂಗ್ ಹೇಳಿದಾಗ, ಲೋ ರಂಜನ್, ಬೆಳಿಗ್ಗೆ ಎದ್ದು ದೇವರಿಗೆ ನಮಸ್ಕಾರ ಮಾಡಿ ಮುಖ ತೊಳೆದು ಹಾಲು ಕುಡಿಯೋದು ಬಿಟ್ಟು ಇದೇನೂ, ಎಂದಾಗ ಅದೆಲ್ಲಾ ಹಿಂದಿನ ಕಾಲದ ಮಾತಮ್ಮ, ಈಗಿನ ಜನರೇಷನ್ ಬೇರೆ ಎಲ್ಲಾ ಹೈಫೈ ಲೈಫ್, ನೋಡು ಟೆಕ್ನಾಲಜಿ ಎಷ್ಟು ಮುಂದುವರಿದಿದೆ, ಎಲ್ಲಾ ಫಿಂಗರ್ ಟಿಪ್ಸ್ ಅಲ್ಲಿ ಸಿಗುತ್ತೆ ಅಂದಾಗ ಹೌದು ಹೌದು ಎಂದು ನಕ್ಕು ನುಡಿದು ಬಾ ತಿಂಡಿ ತಿನ್ನು ಎನ್ನಲು ಕಿವಿಯಲ್ಲಿ ಸಿಕ್ಕಿಸಿಕೊಂಡ ಇಯರ್ ಫೋನ್ನಿಂದ ಕೇಳುವ ಹಾಡನ್ನು ಗುನುಗುತ್ತಾ ಅಮ್ಮನ ಹಿಂದೆ ಹೊರಟ.
ಅಷ್ಟರಲ್ಲೇ ಪಕ್ಕದ ಮನೆಯ ಮುಂದೆ ಆಂಬುಲೆನ್ಸ್ ಬಂದು ನಿಂತಾಗ ಕೊಂಚ ಗಾಬರಿಯಾಯಿತು, ತಕ್ಷಣ ಹತ್ತಿರ ಹೋಗಿ ನೋಡಿದರೆ ಆ ಮನೆಯ ಯಜಮಾನನಿಗೆ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ನರಳುತ್ತಿರುವ ಆತನನ್ನು ಕಂಡು ಕರೋನದ ಲಕ್ಷಣವೇ ಎಂದು ತಿಳಿದು ಮನ ನೊಂದಿತು, ರಂಜನ್ ಬಾ ಇಲ್ಲಿ ಆಂಟಿ ಒಬ್ಬರೇ ಇದ್ದಾರೆ ನೀನು ಅವರಿಗೆ ಸಹಾಯ ಮಾಡು, ಮಕ್ಕಳಿಗೆ ವಿಚಾರ ತಿಳಿಸೋಣ ಅವರ ನಂಬರಿದ್ದರೆ ತೆಗೆದು ಕೊಂಡು ಬಾ ಎಂದಾಗ ಹೇ ಹೋಗಮ್ಮ ನಂಗೆ ಕೆಲಸ ಇದೆ ಎಂದೂ ಹೋಡಿ ಹೋದ ಮಗನ ನೋಡಿ ತನ್ನ ಮೇಲೆ ತನಗೆ ಕೋಪ ಬಂತು.
ಇಂತಹ ಒಂದು ಘಟನೆ ಇಂದಿನ ಯುವ ಪೀಳಿಗೆಯ ನಡಿಗೆ ಹಿಡಿದ ಕನ್ನಡಿ, ಇದಕ್ಕೆ ಕಾರಣ ಆಧುನಿಕ ತಂತ್ರಜ್ಞಾನ ಮತ್ತು ಅವರು ಬೆಳೆದು ಬಂದ ರೀತಿಯೋ,
ಮನೆಯ ಹಿರಿಯರು ತಮ್ಮ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಮತ್ತು ಇತರರಿಗೆ ಸಹಾಯ ಮಾಡುವುದನ್ನು ಹೇಳಿ ಕೊಡಬೇಕು, ಸುಮ್ಮನೆ ಸಾಮಾಜಿಕ ಜಾಲತಾಣಗಳಾದ , ಫೇಸ್ ಬುಕ್, ವಾಟ್ಸಪ್, ಟ್ವಿಟರ್ ಗಳಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯಯ ಮಾಡದೇ ಇಂತಹ ಸಂದರ್ಭದಲ್ಲಿ ತಾವೇ ಸ್ವಯಂ ಸೇವಕರಾಗಿ ನಿಂತು ಕರೋನ ಪೀಡಿತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಹಾಯ ಮಾಡುಲು ಮುಂದಾಗಬೇಕಿದೆ.
ಇಂತಹ ಯುವ ಶಕ್ತಿಯ ಅಗತ್ಯ ಇಂದಿನ ದಿನಗಳಲ್ಲಿ ಬೇಕಾಗಿದೆ, ತಾವೇ ಮುಂದಾಗಿ ಬಂದು ತಮ್ಮ ಸ್ನೇಹಿತರ ಮನವೋಲಿಸಿ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಇದಕ್ಕೆ ಮನೆಯವರ ಸಹಕಾರ ಅತ್ಯಗತ್ಯ.
ಯುವ ಸ್ನೇಹಿತರೇ ಒಮ್ಮೆ ಯೋಚಿಸಿ ಇಂತಹ ಕಾರ್ಯಗಳಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಿ ನಿಲ್ಲಿ.