ಮುಂದಿನ ವಿಧಾನಸಭೆಗೆ ಸ್ಪರ್ಧೆ ಖಚಿತ; ರಜನಿಕಾಂತ್
ಚೆನ್ನೈ (ಏ.19) : ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ‘ರಜನಿ ಮಕ್ಕಳ್ ಮಂಡ್ರಮ್’ ಸ್ಪರ್ಧಿಸಲಿದೆ ಎಂದು ತಮಿಳುನಾಡಿನ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಖಚಿತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿರುವ ರಜಿನಿಕಾಂತ್ ” ನನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಲು ನನಗೆ ಇಷ್ಟವಿಲ್ಲ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಯಾವ ಸಂದರ್ಭದಲ್ಲಿ ಘೋಷಣೆಯಾದರೂ ಸಹ ತಮ್ಮ ಪಕ್ಷ ಎಲ್ಲಾ 234 ವಿಧಾನಸಭೆಗಳಲ್ಲೂ ಸ್ಪರ್ಧಿಸಲಿದೆ ” ಎಂದು ತಿಳಿಸಿದ್ದಾರೆ. ಆ ಮೂಲಕ ಅವರ ರಾಜಕೀಯ ಪ್ರವೇಶದ ಕುರಿತು ಮೂಡಿದ್ದ ಅಸ್ಪಷ್ಟತೆಗೊಂದು ತಾರ್ಕಿಕ ಅರ್ಥ ಕಲ್ಪಿಸಿದ್ದಾರೆ.
ರಜಿನಿಕಾಂತ್ 2017 ರಲ್ಲೇ ರಾಜಕೀಯ ಪ್ರವೇಶಿಸುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಒಂದು ವಾರಗಳ ಕಾಲ ತಮ್ಮ ಅಭಿಮಾನಿಗಳ ಜೊತೆಗೆ ಮಾತುಕತೆ ನಡೆಸಿ ಕೊನೆಗೂ ಅಧಿಕೃತವಾಗಿ ರಾಜಕೀಯ ಪ್ರವೇಶಿವುದಾಗಿ ತಿಳಿಸಿದ್ದರು ಹಾಗೂ ‘ ರಜಿನಿ ಮಕ್ಕಳ್ ಮಂಡ್ರಮ್ ‘ ಎಂದು ಪಕ್ಷದ ಹೆಸರನ್ನು ಘೋಷಿಸಿದ್ದರು.
: ‘ಸೂಪರ್ ಸ್ಟಾರ್ ‘ ರಜಿನಿ ವೃತ್ತಿಜೀವನದ ಕ್ಲೈಮಾಕ್ಸ್ ನಲ್ಲಿ ‘ ಪೆಟ್ಟು’ ನೀಡಲಿದೆಯಾ ಯಶಸ್ಸಿನ ಸಿಹಿ ?
ಆದರೆ, 2017 ರಲ್ಲೇ ಪಕ್ಷ ಸ್ಥಾಪನೆ ಮಾಡಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದರು ಸಹ, 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ನಮ್ಮ ಗುರಿ ಏನಿದ್ದರು ತಮಿಳುನಾಡು ವಿಧಾನಸಭೆ ಚುನಾವಣೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಹೀಗಾಗಿ ಅವರ ಅಭಿಮಾನಿಗಳಲ್ಲಿ ರಜನಿ ರಾಜಕೀಯ ಪ್ರವೇಶ ಎಂಬುದು ಈವರೆಗೆ ಅಡ್ದಗೋಡೆ ಮೇಲೆ ದೀಪವಿಟ್ಟಂತೆ ಅಸ್ಪಷ್ಟವಾಗಿಯೇ ಇತ್ತು. ಆದರೆ ಎಲ್ಲಾ ಅನುಮಾನಗಳಿಗೂ ರಜನಿ ಕೊನೆಗೂ ಇಂದು ತೆರೆ ಎಳೆದಿದ್ದಾರೆ.
ತಮಿಳುನಾಡಿನ ಮತ್ತೊಬ್ಬ ಖ್ಯಾತ ನಟ ಕಮಲ್ ಹಾಸನ್ ಈಗಾಗಲೆ ‘ಮಕ್ಕಳ್ ನೀಧಿ ಮಯ್ಯಂ ‘ಎಂಬ ಪಕ್ಷವನ್ನು ಸ್ಥಾಪಿಸಿದ್ದು ಸ್ವತಂತ್ರ್ಯವಾಗಿ ತಮಿಳುನಾಡಿನ ಎಲ್ಲಾ 37 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ರಜನಿ ಪ್ರವೇಶದಿಂದಾಗಿ ತಮಿಳುನಾಡಿನ ರಾಜಕೀಯ ಮತ್ತಷ್ಟು ರಂಗೇರಿದೆ.
ಲೋಕಸಭೆ ಚುನಾವಣೆಗಿಲ್ಲ ರಜನಿ ತಮಿಳುನಾಡಿನಲ್ಲಿ ಪ್ರಸ್ತುತ ಎಐಎಡಿಎಂಕೆ ಪಕ್ಷ ಅಧಿಕಾರದಲ್ಲಿದ್ದು ಮುಂದಿನ ವಿಧಾನಸಭಾ ಚುನಾವಣೆ 2021 ರಲ್ಲಿ ನಡೆಯಲಿದೆ. ಈ ನಡುವೆ ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್ ಸರ್ಕಾರವನ್ನು ಬೀಳಿಸಲು ಸಾಕಷ್ಟು ತಂತ್ರಗಳನ್ನು ಹೆಣೆಯುತ್ತಿದ್ದು, ತಮಿಳುನಾಡು ಸರ್ಕಾರ ಯಾವ ಸಂಧರ್ಭದಲ್ಲೂ ಮುರಿದು ಬೀಳುವ ಭೀತಿ ಎದುರಿಸುತ್ತಿದೆ.