ಮಹತ್ವಾಕಾಂಕ್ಷೆಯ ಉದ್ಯಮಿ ಸಿದ್ದಾರ್ಥ್ ಸ್ವಾಭಿಮಾನವೇ ಜೀವಕ್ಕೆ ಶತ್ರುವಾಯಿತೇ? ಉದ್ಯಮಿಗಳಿಗೆ ರಕ್ಷಣೆ ಇಲ್ಲವೇ?
ಅಂದಾಜು 52 ಸಾವಿರದಷ್ಟು ಮಂದಿಗೆ ಉದ್ಯೋಗ ನೀಡಿ ಪರೋಕ್ಷವಾಗಿ 2.5 ಲಕ್ಷ ಮಂದಿಗೆ ಆಶ್ರಯದಾತನಾಗಿದ್ದ ಕಾಫಿ ಡೇ ಉದ್ಯಮಿ ಸಿದ್ಧಾರ್ಥ ಅವರಿಗೆ ಇಲ್ಲಿನ ತೆರಿಗೆ ಪದ್ಧತಿ ಹಾಗೂ ಇಲಾಖೆಯ ಕಿರುಕುಳ, ಸಿಗದ ಸರ್ಕಾರದ ಬೆಂಬಲ ಹಾಗೂ ಎಲ್ಲಕ್ಕೂ ಮಿಗಿಲಾಗಿ ಸಿದ್ಧಾರ್ಥ್ ಅವರಿಗಿದ್ದ ಸ್ವಾಭಿಮಾನವೇ ಅವರನ್ನು ಬಲಿ ತೆಗೆದುಕೊಂಡಿದತೆ? ಎಂಬ ಚಿಂತೆ ಇದೀಗ ಯುವ ಉದ್ಯಮಿಗಳನ್ನು ಕಾಡತೊಡಗಿದೆ .
ಇತ್ತೀಚಿನ ಕೆಲ ಬೆಳವಣಿಗೆಗಳು ನಮ್ಮ ದೇಶದಲ್ಲಿ ಇಂತಹ ಉದ್ಯಮಿಗಳಿಗೆ ಸಹಕಾರ ಇಲ್ಲವೇ ಎಂಬ ಬಲವಾದ ಅನುಮಾನಗಳನ್ನು ಮೂಡಿಸುತ್ತಿವೆ. ದೇಶವೊಂದರ ಅಭಿವೃದ್ಧಿಗೆ ಕೃಷಿ ಮತ್ತು ಕೈಗಾರಿಕೆ ಇವೆರಡೂ ಅತ್ಯಗತ್ಯ. ಕೃಷಿ ಮತ್ತು ಕೈಗಾರಿಕೆಯು ಸಮೃದ್ಧವಾಗಿರುವ ದೇಶದಲ್ಲಿ ಮಾತ್ರ ನಾಗರಿಕರು ನೆಮ್ಮದಿಯಿಂದ ಬದುಕಬಹುದು.
ವಿಪರ್ಯಾಸವೆಂದರೆ, ಇಲ್ಲಿ ಕೈಗಾರಿಕೋದ್ಯಮಿಗಳಿಗೆ ಸೂಕ್ತ ರಕ್ಷಣೆಯೇ ಇಲ್ಲ. ಉದ್ದಿಮೆಗಳನ್ನು ಪ್ರಾರಂಭಿಸುವವರು ಸಹಜವಾಗಿಯೇ ವಿವಿಧ ಮೂಲಗಳಿಂದ ಸಾಲ ಮಾಡಿ ಬಂಡವಾಳ ಕ್ರೋಡೀಕರಿಸುತ್ತಾರೆ ಸಾಲವನ್ನು ಯಾರೂ ಮುಫತ್ತಾಗಿ ಕೊಡುವುದಿಲ್ಲ. ದುಬಾರಿ ಬಡ್ಡಿ ಹೇರುತ್ತಾರೆ. ಸಾಲದ ಹಣದ ದುಪ್ಪಟ್ಟು ಮೌಲ್ಯದ ಆಸ್ತಿಯನ್ನು ಆಧಾರವಾಗಿ ಇಟ್ಟುಕೊಂಡು ಹಣ ಬಿಡುಗಡೆ ಮಾಡುತ್ತಾರೆ. ಸಾಲ ಪಡೆಯುವ ಉದ್ಯಮಿಗಳು ಕಠಿಣವಾದ ನಿಯಮಾವಳಿಗಳನ್ನು ಪಾಲಿಸಬೇಕು. ಭ್ರಷ್ಟಾಚಾರದ ಒತ್ತಡಕ್ಕೆ ಮಣಿಯಬೇಕು .
ಇಷ್ಟೆಲ್ಲಾ ಕಷ್ಟಪಟ್ಟು ಬಂಡವಾಳ ಕ್ರೋಡೀಕರಿಸಿದ ವ್ಯಕ್ತಿಯು ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಹೆಜ್ಜೆಗೂ ಹಿಂಸೆ ಅನುಭವಿಸಬೇಕು. ಜಮೀನು ಮಂಜೂರಾತಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಅಗತ್ಯವಿರುವ ಲೈಸೆನ್ಸ್ ಗಳು ಯಾವುದೂ ಕೂಡ ಸುಲಭವಾಗಿ ಗೌರವಯುತವಾಗಿ ಸಿಕ್ಕುವುದಿಲ್ಲ .
ಸರ್ಕಾರಿ ಕಚೇರಿಗಳಿಗೆ ಲೆಕ್ಕವಿಲ್ಲದಷ್ಟು ಸಲ ಎಡತಾಕಬೇಕು. ಗೋಡೆ ಗೋಡೆಗೂ ಸಲಾಮು ಹೊಡೆಯಬೇಕು. ಉದ್ದಿಮೆ ಸ್ಥಾಪಿಸಹೊರಡುವ ಉತ್ಸಾಹಿಗಳನ್ನು ನಡೆಸಿಕೊಳ್ಳುವ ಪರಿ ಇದು. ಇಷ್ಟೆಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಹಿಂಸೆಗಳನ್ನು ಸಹಿಸಿಕೊಂಡು ಉದ್ಯಮ ಪ್ರಾರಂಭಿಸಬೇಕು .
ಹೀಗೆ ಪ್ರಾರಂಭವಾದ ಉದ್ಯಮಕ್ಕೆ ಸರ್ಕಾರವು ಸಕಲ ಸವಲತ್ತುಗಳನ್ನು ನೀಡಬೇಕು. ಕೈಗಾರಿಕೆಯು ಸಶಕ್ತವಾಗಿ ಬೆಳೆದರೆ ಅದರಿಂದ ಸರ್ವತೋಮುಖ ಪ್ರಗತಿಯಾಗುತ್ತದೆ .ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಸರ್ಕಾರಕ್ಕೆ ತೆರಿಗೆ ಹಣ ಸಂದಾಯವಾಗುತ್ತದೆ. ಕೈಗಾರಿಕೆಯು ನೆಲೆಗೊಂಡಿರುವ ಇಡೀ ಪ್ರದೇಶ ಅಭಿವೃದ್ಧಿಗೊಳ್ಳುತ್ತದೆ.
ಸಾಲ ಸೋಲ ಮಾಡಿ ಪ್ರಾರಂಭಿಸಿದ ಎಲ್ಲ ಕೈಗಾರಿಕೆಗಳು ಯಶಸ್ವಿಯಾಗುವುದಿಲ್ಲ. ಹಲವಾರು ಕಾರಣಗಳಿಂದ ಕೆಲವು ಯೋಜನೆಗಳು ಮುಗ್ಗರಿಸುತ್ತಿವೆ .ಈ ಸಂದರ್ಭದಲ್ಲಿ ಅದರ ಪುನಶ್ಚೇತನಕ್ಕೆ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳು ನೆರವಾಗಬೇಕು. ಆಗ ಅದು ಚೇತರಿಸಿಕೊಳ್ಳುತ್ತದೆ ಆದರೆ ಸೋಲಿನಿಂದ ನಲುಗಿದ ಉದ್ಯಮಿಯನ್ನು ವಂಚಕನ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಹಣಕಾಸು ಸಂಸ್ಥೆಗಳು ಅವನ ಮೇಲೆ ಮುಗಿಬೀಳುತ್ತವೆ. ನನ್ನ ಆಸ್ತಿ ಮಾರಿ ಸಾಲದ ಹಣವನ್ನು ಮರುಪಾವತಿ ಮಾಡುತ್ತೇನೆ ಎಂದು ಗೋಗರೆದರೂ ಕೇಳುವುದಿಲ್ಲ. ಸಿದ್ಧಾರ್ಥ್ ಎಂಬ ಉದ್ಯಮಿಯ ದಾರುಣ ಘಟನಾವಳಿಗಳು ಹತ್ತು ಹಲವು ಕಟು ಸತ್ಯಗಳನ್ನು ಅನಾವರಣಗೊಳಿಸುತ್ತಿದೆ. ಸಿದ್ಧಾರ್ಥ ಅವರು ತಮ್ಮ ತಂದೆ ನೀಡಿದ ಹಣದಿಂದ ಉದ್ಯಮವನ್ನು ಪ್ರಾರಂಭಿಸಿದರು. ಪ್ರಗತಿಶೀಲ ಮನೋಭಾವ ಹೊಂದಿದ್ದ ಇವರು ತಮ್ಮ ಉದ್ಯಮವನ್ನು ವಿವರಿಸುತ್ತಾ ಹೋದರು.
ಕರ್ನಾಟಕದ ಕಾಫಿಗೆ ವಿಶ್ವಮಾನ್ಯತೆ ಸಿಕ್ಕುವ ಹಾಗೆ ಮಾಡಿದರೂ ಇವರ ಸಂಸ್ಥೆಗಳ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ಹಣ ಸಂದಾಯ ಆಗತೊಡಗಿತು. ಅತ್ಯಂತ ಮಹತ್ವಾಕಾಂಕ್ಷಿಯಾಗಿದ್ದ ಸಿದ್ಧಾರ್ಥ ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದರೂ ಅದಕ್ಕೆ ಅಗತ್ಯವಾದ ಬಂಡವಾಳವನ್ನು ವಿವಿಧ ಹಣಕಾಸು ಸಂಸ್ಥೆಗಳು ಬ್ಯಾಂಕ್ ಗಳಿಂದ ಸಾಲದ ರೂಪದಲ್ಲಿ ಪಡೆದರು. ಇವೆಲ್ಲವೂ ಕಾನೂನಿನ ಪರಿಧಿಯೊಳಗೆ ನಡೆದ ವಹಿವಾಟು. ಇವರ ಆಸ್ತಿಯ ಮೌಲ್ಯದ ಆಧಾರದ ಮೇಲೆ ಬ್ಯಾಂಕ್ಗಳು ಸಾಲ ನೀಡಿದವು ಸಿದ್ಧಾರ್ಥ ಅವರು ಗೌರವಾನ್ವಿತ ಉದ್ಯಮಿಯಾದರು. ಪ್ರಗತಿಪರ ರೈತನೂ ಆದರು. ತಮ್ಮ ಸಂಸ್ಥೆಗಳಲ್ಲಿ ಇವರು ಐವತ್ತು ಸಾವಿರ ಜನರಿಗೆ ನೇರ ಉದ್ಯೋಗ ಕಲ್ಪಿಸಿದರು .ಲಕ್ಷಾಂತರ ಜನರಿಗೆ ಪರೋಕ್ಷ ಉದ್ಯೋಗ ಸಿಕ್ಕಿತು. ಬ್ಯಾಂಕ್ಗಳಿಗೆ ಕೋಟಿಗಟ್ಟಲೆ ಬಡ್ಡಿ ಹಣ ಸರ್ಕಾರಕ್ಕೆ ತೆರಿಗೆ ಮೂಲಕ ಅಪರಿಮಿತ ಆದಾಯ ಬರತೊಡಗಿತು.
ಇಷ್ಟೆಲ್ಲ ಮಾಡಿದ ಸಿದ್ಧಾರ್ಥ ಅವರಿಗೆ ಸಿಕ್ಕಿದ್ದೇನು ?ಅವರ ಸಂಸ್ಥೆಯೊಂದು ನಷ್ಟ ಅನುಭವಿಸಿದೆ ಅನ್ನುತ್ತಾರೆ. ಅವರ ಆಸ್ತಿಗೆ ಹೋಲಿಸಿದರೆ ನಷ್ಟದ ಪ್ರಮಾಣ ನಗಣ್ಯ. ಆದರೆ ಇದೇ ದೊಡ್ಡ ವಿಷಯವಾಯಿತು. ಆದಾಯ ತೆರಿಗೆ ಇಲಾಖೆಯಿಂದ ಸತತ ಕಿರುಕುಳ ಪ್ರಾರಂಭವಾಯಿತು. ಹಣಕಾಸು ಸಂಸ್ಥೆಗಳು ಇವರನ್ನು ಸಂಶಯದ ದೃಷ್ಟಿಯಿಂದ ನೋಡತೊಡಗಿದೆವು. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಹೆಸರಾಂತ ಉದ್ಯಮಿಯೊಬ್ಬನನ್ನು ಈ ರೀತಿ ನಡೆಸಿಕೊಳ್ಳುವುದು ಸಾಧುವೇ? ಸರ್ಕಾರವು ಇವರ ರಕ್ಷಣೆಗೆ ಬರಲಿಲ್ಲವೇಕೆ ?ಉದ್ಯಮಿಯೊಬ್ಬರು ನಷ್ಟ ಅನುಭವಿಸಿದಾಕ್ಷಣ ಅವರು ವಂಚಕರಾಗಿ ಬಿಡುತ್ತಾರೆಯೇ? ಅವರ ಪ್ರಾಮಾಣಿಕತೆಯ ಹಿನ್ನೆಲೆಗೆ ಬೆಲೆಯೇ ಇಲ್ಲವೇ ?
ಇಂತಹ ವಾತಾವರಣದಲ್ಲಿ ಕೈಗಾರಿಕೆಯೂ ನಿರಾತಂಕವಾಗಿ ಸಶಕ್ತವಾಗಿ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ಅಸಾಧ್ಯ. ಕೃಷಿಯ ಹಾಗೆ ಕೈಗಾರಿಕೆಯ ಬೆಳವಣಿಗೆಗೆ ಸರ್ಕಾರ ಸಹಕಾರಿಯಾಗಬೇಕು. ಪ್ರಾಮಾಣಿಕ ಉದ್ಯಮಿಗಳಿಗೆ ರಕ್ಷಣೆ ಕೊಡಬೇಕು.
ಕೈಗಾರಿಕೆ ಪ್ರಾರಂಭಿಸಿ ಅದನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುವುದು ಅಪರಾಧವೇ? ಸಿದ್ಧಾರ್ಥ್ ಅವರು ಕ್ಷಮಿಸಲಾರದಂತಹ ತಪ್ಪು ಮಾಡಿದರೆ? ಅವರಿಗೆ ಕೊಟ್ಟ ಸಾಲದ ಹಣವನ್ನು ಇಂದಲ್ಲ ನಾಳೆ ವಾಪಸ್ ಪಡೆಯಬಹುದು, ಆದರೆ ಅವರ ಜೀವ ಮರಳಿ ಬರುತ್ತದೆಯೇ? ಇಂತಹ ಮೂಕ ವೇದನೆ ಅನುಭವಿಸುತ್ತಿರುವ ಎಷ್ಟೋ ಕೈಗಾರಿಕೋದ್ಯಮಿಗಳಿದ್ದಾರೆ. ಅವರನ್ನು ಹೆದರಿಸಿ ಬೆದರಿಸಿ ಕಾಡುವುದು ಸಲ್ಲದು. ಸಿದ್ಧಾರ್ಥ ಅವರಿಗೆ ಬಂದ ಗತಿ ಬೇರೆ ಯಾರಿಗೂ ಬರಬಾರದು .