ಮನೆಮದ್ದುಗಳ ಟಿಪ್ಸ್ ಅನುಸರಿಸಿದರೆ-ಸುಲಭವಾಗಿ ಮಧುಮೇಹ ನಿಯಂತ್ರಿಸಬಹುದು

ಡಯಾಬಿಟೀಸ್ ಮೆಲ್ಲಿಟಸ್ ಎಂಬ ರೋಗ ಈಗ ಮಧುಮೇಹ ಎಂಬ ಹೆಸರಿನಲ್ಲಿ ದೇಶದಾದ್ಯಂತ ತಾಂಡವವಾಡುತ್ತಿದೆ. ಮಧುಮೇಹ ವಂಶವಾಹಿನಿಯ ಮೂಲಕ ಬರುವ ಕಾಯಿಲೆಯಾಗಿದ್ದು ತಂದೆ ತಾಯಿ ತಾತ ಅಜ್ಜಿಯರಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮಕ್ಕಳಿಗೂ ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಂಶವಾಹಿನಿಯಲ್ಲಿ ಮಧುಮೇಹದ ಇತಿಹಾಸವಿರುವ ಮಕ್ಕಳು ತಮಗೆ ಯಾವಾಗ ಮಧುಮೇಹ ಆವರಿಸುತ್ತದೋ ಎಂಬ ಆತಂಕದಲ್ಲಿಯೇ ಇರುತ್ತಾರೆ.ಆದರೆ ಇಲ್ಲಿ ಒಂದು ಸಂಗತಿ ನೀವು ಗಮನಿಸಲೇ ಬೇಕು.ಮಧುಮೇಹ ಬಂದ ಬಳಿಕ ಇದನ್ನು ಸಂಪೂರ್ಣವಾಗಿ ನಿವಾರಿಸಲಂತೂ ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

ಮನೆ ಔಷಧ: ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

ಮಧುಮೇಹಿಗಳು ನಿಯಮಿತವಾಗಿ ತಮ್ಮ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇವಿಸುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಈ ನಾರು ಕರುಳುಗಳಲ್ಲಿ ಸಕ್ಕರೆಯನ್ನು ಅತಿ ನಿಧಾನವಾಗಿ ಹೀರಿಕೊಳ್ಳಲು ನೆರವಾಗುತ್ತದೆ, ತನ್ಮೂಲಕ ಊಟದ ಬಳಿಕ ರಕ್ತದಲ್ಲಿ ಸಕ್ಕರೆ ಥಟ್ಟನೇ ಏರದೇ ಇರಲು ನೆರವಾಗುತ್ತದೆ. ಇದು ಮಧುಮೇಹಿಗಳಿಗೆ ಪೂರಕವಾಗಿದೆ.

ಮಧುಮೇಹವನ್ನು ನಿಯಂತ್ರಿಸುವ ಪವರ್ ‘ನುಗ್ಗೆ ಸೊಪ್ಪಿನಲ್ಲಿದೆ’

ಮಧುಮೇಹದ ರೋಗಿಗಳಿಗೆ ರಕ್ತದ ಸಕ್ಕರೆಯ ಮಟ್ಟ ಏರುಪೇರಾಗುವುದು ಮಾತ್ರವೇ ತೊಂದರೆಯಲ್ಲ, ಬದಲಿಗೆ ಮಧುಮೇಹಿಗಳಿಗೆ ಇತರ ಅಂಗಗಳಿಗೆ ಘಾಸಿಯಾಗುವ ಸಂಭವವೂ ಇತರರಿಗಿಂತ ಹೆಚ್ಚೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಮಧುಮೇಹದ ಪರಿಣಾಮವಾಗಿ ಎದುರಾಗುವ ಉರಿಯೂತದ ಪರಿಣಾಮವಾಗಿ ಸೈಟೋಕೈನ್ಸ್ (cytokines) ಎಂಬ ಪ್ರೋಟೀನು. ನುಗ್ಗೆಸೊಪ್ಪಿನಲ್ಲಿರುವ ಫಿನೋಲಿಕ್ ಗ್ಲೈಕೋಸೈಡ್ ಎಂಬ ಪೋಷಕಾಂಶ ಉತ್ತಮ ಉರಿಯೂತ ನಿವಾರಕವಾಗಿದ್ದು ಮಧುಮೇಹದ ಪರಿಣಾಮಗಳು ದೇಹದ ಇತರ ಅಂಗಗಳ ಮೇಲಾಗದಂತೆ ರಕ್ಷಿಸುತ್ತದೆ.ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು.

ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಬೇವಿನ ಎಲೆಗಳು (ಕಹಿಬೇವು)

ಬೇವಿನ ಎಲೆಗಳು (ಕಹಿಬೇವು) ಕಹಿಬೇವಿನ ಎಲೆಗಳು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುಖ್ಯವಾಗಿ ಇನ್ಸುಲಿನ್ ಬಳಕೆಯನ್ನು ಗರಿಷ್ಟಗೊಳಿಸಲು ನೆರವಾಗುತ್ತದೆ. ಇದರಿಂದ ನಿಧಾನವಾಗಿ ಟೈಪ್ -2 ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ನರಗಳು ಸೆಳೆದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮವಾಗಲು ಸಹಕರಿಸುತ್ತದೆ. ಇನ್ನೂ ಮುಖ್ಯವಾಗಿ ದೇಹ ಮಧುಮೇಹದ ಕಾರಣದಿಂದಾಗಿ hypoglycaemic ಔಷಧಿಗಳ ಮೇಲಿನ ಅವಲಂಬನೆಯನ್ನು ಮುಕ್ತಗೊಳಿಸುತ್ತದೆ. ಉಪಯೋಗಿಸುವ ವಿಧಾನ ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು.

ಖಾಲಿಹೊಟ್ಟೆಗೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್!

ಖಾಲಿಹೊಟ್ಟೆಗೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್! ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ :-*ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. *ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ. *ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ. *ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ. *ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. *ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. *ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

ಕಿವಿಮಾತು:

ಮಧುಮೇಹ ನಿಯಂತ್ರಿಸಲು ನೀವು ಸೇವಿಸಲಿರುವ ಆಹಾರದ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿ ಮುಂದುವರೆಯುವುದು ಉತ್ತಮ. ಏಕೆಂದರೆ ಮಧುಮೇಹದ ಹೊರತಾಗಿ ನಮ್ಮಲ್ಲಿ ಇನ್ನೂ ಹಲವಾರು ಆರೋಗ್ಯ ಕುರಿತಾದ ತೊಂದರೆಗಳಿದ್ದು ವೈದ್ಯರ ಪರೀಕ್ಷೆಯ ಮೂಲಕವೇ ಇವು ಕಂಡುಬರುವ ಕಾರಣ ವೈದ್ಯರ ಸಲಹೆಯಿಲ್ಲದೇ ಯಾವುದೇ ಆಹಾರ ಅಥವಾ ಔಷಧಿಗಳನ್ನು ತೆಗೆದುಕೊಳ್ಳಲು ಹೋಗದಿರಿ.

Leave a Reply

Your email address will not be published. Required fields are marked *